ಗುರುವಾರ , ಜೂನ್ 30, 2022
22 °C

ಬೆರಗಿನ ಬೆಳಕು: ರಾಜನಾಗಲು ಜನರ ಕೋರಿಕೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದೂರದಿಂದ ತಂದೆ-ಮಕ್ಕಳು ಮಾತನಾಡುತ್ತಿರುವುದನ್ನು ಕಂಡಿದ್ದಳು ರಾಣಿ ಪುಸತಿದೇವಿ, ಇಬ್ಬರ ದುಃಖವೂ ಕಡಿಮೆಯಾಗಿದೆ ಎಂಬುದನ್ನು ತಿಳಿದು ಹತ್ತಿರಕ್ಕೆ ಬಂದಳು. ಆಕೆಯನ್ನು ಕಂಡು ವೆಸ್ಸಂತರ ಮತ್ತು ಮಾದ್ರಿಯರಿಗೆ ಅತ್ಯಂತ ಸಂತೋಷವಾಯಿತು, ಇಬ್ಬರೂ ಆಕೆಯ ಮುಂದೆ ಬಂದು, ‘ತಾಯಿ, ನಿಮ್ಮ ಪಾದಗಳಿಗೆ ಬಹಳ ವಂದನೆಗಳನ್ನು ಸಲ್ಲಿಸುತ್ತೇವೆ’ ಎಂದು ಇಬ್ಬರೂ ಸಾಷ್ಟಾಂಗ ನಮಸ್ಕಾರ ಮಾಡಿದರು.

ಹೀಗೆ ತಾಯಿಗೆ ನಮಸ್ಕಾರ ಮಾಡಿ ನಿಂತಾಗ ಅನೇಕ ಉಳಿದ ಮಕ್ಕಳೊಂದಿಗೆ ಜಾಲಿಕುಮಾರ ಮತ್ತು ಕೃಷ್ಣಾಜಿನರು ಅಲ್ಲಿಗೆ ನಡೆದು ಬಂದರು. ಮಾದ್ರಿ ಅವರ ದಾರಿಯನ್ನೇ ನೋಡುತ್ತಿದ್ದಳು. ಮಕ್ಕಳು ಕುಶಲರಾಗಿ ಬರುತ್ತಿರುವುದನ್ನು ಕಂಡು ಭಾವೋದ್ವೇಗಕ್ಕೆ ಒಳಗಾದ ಮಾದ್ರಿದೇವಿ ತನ್ನನ್ನು ತಾನು ಸಂತೈಸಿಕೊಳ್ಳಲಾರದಾದಳು. ಕರುಗಳನ್ನು ನೋಡಿದ ತಾಯಿ ಹಸು ಓಡಿಬರುವ ರೀತಿಯಲ್ಲಿ ಕಣ್ಣೀರು ಸುರಿಸುತ್ತ ಆಕೆ ಅವರೆಡೆಗೆ ಓಡಿದಳು. ಮಕ್ಕಳೂ ಅಳುತ್ತ ಆಕೆಯ ಕಡೆಗೆ ಬಂದರು. ಮಾದ್ರಿದೇವಿ ಇಷ್ಟು ದಿನ ಮಕ್ಕಳನ್ನು ಕಳೆದುಕೊಂಡಿದ್ದೆನಲ್ಲ ಎಂಬ ದುಃಖದಿಂದ ಮತ್ತು ಈಗ ಅವರು ಮತ್ತೆ ದೊರೆತರಲ್ಲ ಎಂಬ ಅತಿಯಾದ ಸಂತೋಷದಿಂದ ನಡುಗುತ್ತ ಅವರನ್ನು ಬಂದು ಬಿಗಿಯಾಗಿ ತಬ್ಬಿಕೊಂಡಳು.

ಆ ಉತ್ಕಟವಾದ ಹರ್ಷದಿಂದ ವಾರುಣಿಯಂತೆ ಅವಳ ಸ್ತನಗಳ ಧಾರೆ ಚಿಮ್ಮಿತು. ಅವರ ಮೇಲೆ ಧಾರೆಯ ಅಭಿಸಿಂಚನ ಮಾಡಿದಳು. ಆ ಸಮಯದಲ್ಲಿ ಪರ್ವತಗಳು ಅಲುಗಾಡಿದವು, ಭೂಮಿ ಸದ್ದು ಮಾಡಿತು, ಸಮುದ್ರದಲ್ಲಿ ಉಬ್ಬರವಿಳಿತಗಳಾದವು. ಗಿರಿರಾಜ ಸುಮೇರು ಪರ್ವತ ಬಾಗಿಬಿಟ್ಟಿತು. ಆರು ಕಾಮಾವಚರ ದೇವಲೋಕಗಳಲ್ಲಿ ಕೋಲಾಹಲವುಂಟಾಯಿತು.

ಆರು ಕ್ಷತ್ರಿಯ ಪರಿಷತ್ತುಗಳು ಮೂರ್ಛೆ ಹೋದವು. ಶಕ್ರ ದೇವರಾಜ ಕೂಡ ಪ್ರಜ್ಞೆ ಕಳೆದುಕೊಂಡ. ದೇವತೆಗಳಲ್ಲಿ ಮತ್ತೊಬ್ಬರ ದೇಹದ ಮೇಲೆ ನೀರು ಚಿಮಿಕಿಸುವಷ್ಟು ಎಚ್ಚರ ಯಾರಿಗೂ ಉಳಿಯಲಿಲ್ಲ. ಆರು ಕ್ಷತ್ರಿಯರ ಸ್ಥಾನದಲ್ಲಿ ಪುಷ್ಕರ ವರ್ಷವನ್ನು ಸುರಿಸಲಾಯಿತು. ಅದರ ನೆನೆಯಬಯಸಿದವರು ನೆನೆದರು. ಯಾರಿಗೆ ಇಷ್ಟವಿರಲಿಲ್ಲವೋ ಅವರ ಮೇಲೆ ಬಂದು ಹನಿಯೂ ಬೀಳುತ್ತಿರಲಿಲ್ಲ.

ಕಮಲದ ಎಲೆಗಳ ಮೇಲೆ ಬಿದ್ದಂತೆ ಅಂಟದೆ ಹನಿಗಳು ಉರುಳಿ ಹೋಗುತ್ತಿದ್ದವು. ಈ ಮಳೆಯನ್ನು ದೇವನೇ ಸುರಿಸಿದ್ದು ಎಂಬುದು ಎಲ್ಲರಿಗೂ ಅರಿವಾಯಿತು. ಈ ಸಂತೋಷದಲ್ಲಿ ರಾಜನೊಡನೆ ಬಂದಿದ್ದ ಜನಸಮೂಹವೆಲ್ಲ ಭಾಗಿಯಾಯಿತು. ಗಲಾಟೆಯ ಧ್ವನಿ ಪರ್ವತಗಳಲ್ಲಿ ಪ್ರತಿಧ್ವನಿತವಾಯಿತು. ಮಹಾರಾಜ ಸಂಜಯ, ಮಹಾರಾಣಿ ಪುಸತಿದೇವಿ, ಮಗ ರಾಜಕುಮಾರ ವೆಸ್ಸಂತರ ಬೋಧಿಸತ್ವ, ಅವನ ಧರ್ಮಪತ್ನಿ ಮಾದ್ರಿದೇವಿ ಮಕ್ಕಳು ಜಾಲಿಕುಮಾರ ಮತ್ತು ಕೃಷ್ಣಾಜಿನರು ಒಂದೆಡೆ ಸೇರಿದ್ದನ್ನು ನೋಡಿ ಎಲ್ಲರಿಗೂ ರೋಮಾಂಚನವಾಯಿತು.

ಮಹಾರಾಜನ ಜೊತೆಗೆ ಬಂದಿದ್ದ ಸಿವಿದೇಶದ ನಾಗರಿಕರೆಲ್ಲ ಕೈಜೋಡಿಸಿ ವೆಸ್ಸಂತರನ ಮುಂದೆ ನಿಂತು, ‘ರಾಜಕುಮಾರ, ನೀನೇ ನಮಗೆ ಒಡೆಯ ಮತ್ತು ರಾಜ. ನೀನು ಮರಳಿ ರಾಜ್ಯಕ್ಕೆ ಬಂದು ಮಹಾರಾಜನ ವೃದ್ಧ ಭುಜಗಳಿಂದ ರಾಜ್ಯಭಾರವನ್ನು ಇಳಿಸಿ ನಮ್ಮನ್ನು ಆಳಬೇಕು’ ಎಂದು ಬೇಡಿಕೊಂಡರು. ಬದುಕಿನ ಚಕ್ರ ಒಂದು ಸುತ್ತು ಪೂರ್ತಿ ತಿರುಗಿ ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು