ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಡೆ-ನುಡಿ ಸಮನ್ವಯ

Last Updated 1 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು ? |
ಕುಳಿ ಮೇಡು ದೂರ ಮತಿಮನಸುಗಳ ನಡುವೆ ||
ಒಳಗಿನಾಯೆಣ್ಣೆಬತ್ತಿಗಳೆರಡುಮೊಡವೆರೆಯೆ |
ಬೆಳಕು ಜೀವೋನ್ನತಿಗೆ – ಮಂಕುತಿಮ್ಮ || 554 ||

ಪದ-ಅರ್ಥ: ತಿಳಿವಿಗೊಳಿತೆನಿಸಿದುದು=ತಿಳಿವಿಗೆ+ಒಳಿತು+ಎನಿಸಿದುದು, ನಡೆಯೊಳೇತಕ್ಕರಿದು=ನಡೆಯೊಳು+ಏತಕ್ಕೆ+ಅರಿದು(ಸಾಧ್ಯವಾಗದು), ಕುಳಿ=ಹಳ್ಳ, ಮೇಡು=ಬೆಟ್ಟ, ಒಳಗಿನಾಯೆಣ್ಣೆಬತ್ತಿಗಳೆರಡುಮೊಡವೆರೆಯೆ=ಒಳಗಿನ+ಆ+ಎಣ್ಣೆ+ಬತ್ತಿಗಳೆರಡು+
ಒಡವೆರೆಯೆ(ಒಂದುಗೂಡಿದರೆ)

ವಾಚ್ಯಾರ್ಥ: ಬುದ್ಧಿಗೆ ಒಳಿತು ಎನ್ನಿಸಿದ್ದು ನಡೆಯಲ್ಲಿ ಏಕೆ ತೋರುವುದಿಲ್ಲ? ಬುದ್ಧಿ ಮತ್ತು ಮನಸ್ಸುಗಳ ನಡುವೆ ಗಿರಿ ಕಂದರಗಳ ದೂರ. ಆಂತರ್ಯದಲ್ಲಿದ್ದ ಬುದ್ಧಿ ಮತ್ತು ಮನಸ್ಸುಗಳು ಎಣ್ಣೆ ಬತ್ತಿಗಳ ಹಾಗೆ ಹೊಂದಾಣಿಕೆಯಾದರೆ ಜೀವದ ಉನ್ನತಿಗೆ ಬೆಳಗಾಗುತ್ತದೆ

ವಿವರಣೆ: ಬಸವಣ್ಣನವರು ಹೇಳಿದರು,
ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ
ಹಿಡಿದಿರ್ದ ಲಿಂಗವು ಘಟಸರ್ಪದಂತೆ
ದಿಟವ ನುಡಿವುದು, ನುಡಿದಂತೆ ನಡೆವುದು
ಹುಸಿಯ ನುಡಿದು ತಪ್ಪುವ ಪ್ರಪಂಚಿಯನೊಲ್ಲ
ಕೂಡಲಸಂಗಮದೇವ.

ನಡೆ-ನುಡಿಗಳಲ್ಲಿ ವ್ಯತ್ಯಾಸ ಕಂಡರೆ ಭಾವಶುದ್ಧಿಯೆಂಬುದು ನಾಟಕವಾಗುತ್ತದೆ. ಬಸವಣ್ಣ ಅಪೇಕ್ಷಿಸಿದ ಅಂತರಂಗ-ಬಹಿರಂಗ ಶುದ್ಧಿ ಸಾಧ್ಯವಾಗುವುದು ನಡೆ-ನುಡಿಗಳು ಒಂದಾದಾಗ. ಈ ಮಾತನ್ನು ಕಗ್ಗ ಕೇಳುತ್ತದೆ. ಬುದ್ಧಿಗೆ ಒಳಿತೆನ್ನುವುದು ನಡೆಯೊಳಗೇಕೆ ಕಾಣುವುದಿಲ್ಲ? ಮಾತು ಮತ್ತು ನಡೆಗಳ ನಡುವೆ ಗಿರಿ ಕಂದರಗಳ ಅಂತರ ಏಕೆ ಇರುತ್ತದೆ? ಇದಕ್ಕೆ ಮುಖ್ಯ ಕಾರಣ ಮನುಷ್ಯನ ಅಪೇಕ್ಷೆಗಳು ನೂರಾರು. ಅವು ಎಂಟು ದಿಕ್ಕಿಗೂ ಚಾಚಿಕೊಂಡಿವೆ. ನಮ್ಮ ಪ್ರೀತಿಗಳು ಯಾವುದನ್ನೂ ಬಿಡಲೊಪ್ಪುವುದಿಲ್ಲ. ಜನರ ಮುಂದೆ ಆದರ್ಶವ್ಯಕ್ತಿ ಎನ್ನಿಸಿಕೊಳ್ಳುವ ಆಸೆ ಆದರೆ ಪ್ರಪಂಚದ ಸಕಲ ಭೋಗಗಳನ್ನು ಪಡೆದುಕೊಳ್ಳುವ ಬಯಕೆ.

ನನಗೆ ಪರಿಚಯವಿದ್ದ ಆಚಾರ್ಯರೊಬ್ಬರು ತಮ್ಮ ವಿದ್ವತ್ತು, ಉಪನ್ಯಾಸದ ಶೈಲಿಗಳಿಗೆ ಬಹಳ ಪ್ರಖ್ಯಾತರಾಗಿದ್ದರು. ಅವರ ಮಾತೆಂದರೆ ಅಮೃತವೇ. ಅದಷ್ಟೇ ಅಲ್ಲ, ಅವರು ತುಂಬ ಕರ್ಮನಿಷ್ಠರು. ಪೂಜೆ, ಪುನಸ್ಕಾರಗಳು, ವೃತ, ಉಪವಾಸಗಳನ್ನು ತಪ್ಪದೆ ಮಾಡುವವರು. ಅವರು ಮಾತು ಮಾತಿಗೂ ನಾರಾಯಣ ನಾರಾಯಣ ಎನ್ನುವರು. ಏಕಾದಶೀ ವೃತವನ್ನುಂತೂ ಶ್ರದ್ಧೆಯಿಂದ, ಒಂದು ಹನಿ ನೀರನ್ನೂ ಸೇವಿಸದೆ ಮಾಡುತ್ತಾರೆಂಬುದು ಜನಜನಿತವಾಗಿತ್ತು. ಒಂದು ದಿನ ಒಬ್ಬ ವೃದ್ಧ ಮಹಿಳೆ ದೇವರ ತೀರ್ಥವನ್ನು ತೆಗೆದುಕೊಳ್ಳಬೇಕೆಂದು ಅವರ ಮನೆಗೆ ಹೋದಳು. ಸಾಮಾನ್ಯವಾಗಿ ಆಚಾರ್ಯರ ಹೆಂಡತಿ ಬಾಗಿಲಲ್ಲೇ ಕುಳಿತು ಯಾರನ್ನೂ ಆಚಾರ್ಯರನ್ನು ನೋಡಲು ಬಿಡುತ್ತಿರಲಿಲ್ಲ. ನಿರಾಹಾರ ಏಕಾದಶೀ ಉಪವಾಸ ಮಾಡುವವರಿಗೆ ವಿಶ್ರಾಂತಿ ಬೇಡವೆ? ಈ ಮಹಿಳೆ ಅಲ್ಲಿಗೆ ಹೋದಾಗ ಆಚಾರ್ಯರ ಹೆಂಡತಿ ಬಾಗಿಲಿನಲ್ಲಿರಲಿಲ್ಲ. ಈಕೆ ನೇರವಾಗಿ ಒಳಗೆ ಹೋದರೆ ಆಚಾರ್ಯರು ತಟ್ಟೆತುಂಬ ತಿಂಡಿ ಇಟ್ಟುಕೊಂಡು ತಮಗೆ ಪ್ರಿಯವಾದ(?) ಪೇಯವನ್ನು ಕುಡಿಯುತ್ತಿದ್ದರು! ಇಬ್ಬರಿಗೂ ಆಘಾತವಾಗಿತ್ತು. ಆಚಾರ್ಯರಿಗೆ ಒಂದು ಸುಂದರವಾದ, ಧಾರ್ಮಿಕ ಮುಖವಾಡವೂ ಬೇಕು, ತನ್ನ ಸುಖಕ್ಕೆ ಭೋಗಗಳೂ ಬೇಕು. ಈ ದ್ವಂದ್ವವೇ ನಡೆ-ನುಡಿಗಳ ನಡುವಿನ ವ್ಯತ್ಯಾಸಕ್ಕೆ ಕಾರಣ.

ಕಗ್ಗದ ಅಪೇಕ್ಷೆಯೆಂದರೆ ಎಣ್ಣೆಯಂತಿರುವ ಬುದ್ಧಿ, ಬತ್ತಿಯಂತಿರುವ ನಡತೆ ಎರಡೂ ಸರಿಯಾಗಿ ಮೇಳವಿಸಿದರೆ ಮನುಷ್ಯನ ಜೀವನದ ಉನ್ನತಿಗೆ ಬೆಳಕು ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT