ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತಾಳ್ಮೆಯೊಂದೇ ಪರಿಹಾರ

Last Updated 5 ಜೂನ್ 2022, 19:30 IST
ಅಕ್ಷರ ಗಾತ್ರ

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||
ಗೊಳ್ಕರೆದರೇನು ಫಲ ಗುದ್ದಾಡಲೇನು ಫಲ ? |
ಪಲ್ಕಿರಿದು ತಾಳಿಕೊಳೊ – ಮಂಕುತಿಮ್ಮ || 643 ||

ಪದ-ಅರ್ಥ: ಬಾಳ್ಕೆಯಲಿ= ಬಾಳಿನಲ್ಲಿ, ತಿಣಕು= ಆಯಾಸ, ಕೇಳ್ಕೆ ಮಾಣ್ಕೆಗಳಿಗವು= ಕೇಳ್ಕೆಮಾಣ್ಕೆಗಳಿಗೆ (ಒಪ್ಪುವುದು, ಒಪ್ಪದಿರುವುದು)+ ಅವು, ಜಗ್ಗವೊಂದಿನಿಸುಂ= ಜಗ್ಗವು (ಜಗ್ಗುವುದಿಲ್ಲ)+ ಒಂದು + ಇನಿಸುಂ (ಸ್ವಲ್ಪವೂ), ಗೋಳ್ಕೆರೆದರೇನು= ಗೋಳು+ ಕರೆದರೆ+ ಏನು, ಪಲ್ಕಿರಿದು= ಹಲ್ಲುಕಿರಿದು.

ವಾಚ್ಯಾರ್ಥ: ಬದುಕಿನ ಪ್ರಯಾಣದಲ್ಲಿ ಅನೇಕ ತೊಡಕುಗಳು, ಆಯಾಸಗಳಿವೆ. ನಾವು ಅದನ್ನು ಒಪ್ಪುತ್ತೇವೋ, ಬಿಡುತ್ತೇವೊ, ಆ ಕಷ್ಟಗಳು ಜಗ್ಗುವುದಿಲ್ಲ. ಸುಮ್ಮನೇ ಗೋಳು ಕರೆಯುತ್ತ, ಗುದ್ದಾಡಿದರೆ ಏನು ಪ್ರಯೋಜನ? ನಗುಮೊಗದಿಂದ ಅವುಗಳನ್ನು ತಾಳಿಕೊ.

ವಿವರಣೆ: ಹನ್ನೆರಡನೆಯ ಶತಮಾನದ ವಚನಕಾರ ಹೆಂಡದ ಮಾರಯ್ಯ ಒಂದು ವಚನದಲ್ಲಿ ಬದುಕಿನ ಕಷ್ಟಗಳನ್ನು ಕಟ್ಟಿಕೊಡುತ್ತಾನೆ.

ಮಣ್ಣು, ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ, ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ, ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ, ಕಷ್ಟದ ಮರವೆಯಲ್ಲಿ, ದೃಷ್ಟದ ಸುರಾಪಾನವ ಕೊಂಡು ಮತ್ತರಾಗುತ್ತ, ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ? ಧರ್ಮೇಶ್ವರಲಿಂಗವ ಮುಟ್ಟಿದೆ ಇತ್ತಲೆ ಉಳಿಯಿತ್ತು.

ಜೀವನದ ದಾರಿಯಲ್ಲಿ ಯಾವ ಯಾವ ಆಕರ್ಷಣೆಗಳು, ಯಾವ ಪ್ರಮಾಣದಲ್ಲಿ ನಮ್ಮನ್ನು ಸೆಳೆಯುತ್ತದೆ, ದಿಕ್ಕುತಪ್ಪಿಸುತ್ತದೆ ಎಂಬುದನ್ನು ವಚನ ತಿಳಿಸುತ್ತದೆ. ಯಾರ ಬದುಕು ಅತ್ಯಂತ ಸುಗಮ? ಇಂಗ್ಲೀಷಿನಲ್ಲಿ ಮಾತೊಂದಿದೆ, ‘Happiest are those that are dead and never born’ (ಸತ್ತು ಹೋದವರು ಮತ್ತು ಹುಟ್ಟದಿರುವವರು ಮಾತ್ರ ಪರಮಸುಖಿಗಳು). ನಮ್ಮ ಕಷ್ಟಗಳು ತಡೆಯಲಾರದಷ್ಟಿವೆ ಎಂದುಕೊಳ್ಳುತ್ತಲೇ ಬೇರೆಯವರು ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇವೆ. ಮತ್ತೊಬ್ಬರ ದುಃಖ ನಮಗೆ ಕಾಣುವುದಿಲ್ಲ. ಅವರ ಬದುಕನ್ನು ಹತ್ತಿರದಿಂದ ಕಂಡಾಗ ಮಾತ್ರ ಅವರ ತಲ್ಲಣಗಳು ಗೋಚರವಾಗುತ್ತವೆ. ಒರಿಸ್ಸಾದ ಹವ್ಯಾಸಿ ರಂಗಭೂಮಿಯಲ್ಲಿ ಒಬ್ಬ ನಟ ಶ್ರೀರಾಮನ ಪಾತ್ರ ಮಾಡುತ್ತಿದ್ದ. ಅವನು ನೋಡುವುದಕ್ಕೆ ಸುಂದರಾಂಗ. ರಾಮನ ವೇಷ ಹಾಕಿಕೊಂಡು ರಂಗಭೂಮಿಯ ಮೇಲೆ ಬಂದರೆ ಜನ ಕುಳಿತಲ್ಲೇ ನಮಸ್ಕಾರ ಮಾಡುತ್ತಿದ್ದರು. ಅವನ ಮಾತು, ನಡೆ, ಅವನನ್ನು ನಿಜವಾಗಿಯೂ ಶ್ರೀರಾಮನನ್ನಾಗಿಯೇ ಮಾಡಿತ್ತು. ನಾಟಕ ಮುಗಿದ ಮೇಲೆ ಜನ ಸಾಲುಸಾಲಾಗಿ ಬಂದು ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಹುಡುಗಿಯರಂತೂ ಅವನೇ ತಮ್ಮ ಗಂಡನಾಗಬೇಕೆಂದು ಬೇಡಿಕೊಳ್ಳುತ್ತಿದ್ದರು. ಒಂದು ದಿನ ನಾಟಕ ಮುಗಿದು ಹೊರಬಂದ ನಟ ನೆಲಕ್ಕೆ ಬಿದ್ದ. ಆಸ್ಪತ್ರೆಗೆ ಹಾಕಿದರೆ, ವೈದ್ಯರು ಹೇಳಿದರು, ‘ಅವನಿಗೆ ಔಷಧಿ ಬೇಡ, ಹೊಟ್ಟೆಗೆ ಆಹಾರ ಬೇಕು. ಆತ ಮೂರು ದಿನದಿಂದ ಏನೂ ತಿಂದಿಲ್ಲ’. ರಂಗಭೂಮಿಯ ಮೇಲೆ ಶ್ರೀರಾಮ, ನಿಜಜೀವನದಲ್ಲಿ ಉಪವಾಸಿ.

ಕಗ್ಗ ಹೇಳುತ್ತದೆ ಬದುಕಿನಲ್ಲಿ ಕಗ್ಗಂಟುಗಳು ಅನೇಕ. ಏನು ಮಾಡಿದರೂ ಅವುಗಳನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. What cannot be cured should be endured ಎನ್ನುವ ಇಂಗ್ಲಿಷಿನ ಮಾತಿನಂತೆ, ಕಷ್ಟಗಳನ್ನು ಎದುರಿಸುತ್ತಲೇ, ನಗುತ್ತಲೇ ಅವುಗಳನ್ನು ಸಹಿಸಿಕೊಳ್ಳಬೇಕು. ಸಹನೆಗಿಂತ ದೊಡ್ಡ ಔಷಧಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT