ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತದ ಮೂಲ

Last Updated 28 ಜನವರಿ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಹಂದಿಯ ಗರ್ಭದಲ್ಲಿ ಸೇರಿಕೊಂಡ. ದಿನ ತುಂಬಿದ ಮೇಲೆ ಆ ಹಂದಿ ಎರಡು ಮರಿಗಳನ್ನು ಹಾಕಿತು. ಒಂದು ದಿನ ತಾಯಿ ಹಂದಿ ಮರಿಗಳೊಂದಿಗೆ ಕೆಸರಿನ ಗುಂಡಿಯಲ್ಲಿ ಮಲಗಿತ್ತು. ಆಗ ಮುದುಕಿಯೊಬ್ಬಳು ತನ್ನ ಕೋಲನ್ನು ಟಪ್, ಟಪ್ ಎಂದು ಊರುತ್ತ ಆ ಕಡೆಗೆ ಬಂದಳು. ಆಕೆಯ ತಲೆಯ ಮೇಲೆ ಹತ್ತಿ ತುಂಬಿದ ಬಿದಿರಿನ ಬುಟ್ಟಿ ಇತ್ತು. ಆಕೆಯ ಕೋಲಿನ ಸಪ್ಪಳಕ್ಕೆ ಬೆದರಿ ತಾಯಿ ಹಂದಿ ಮರಿಗಳನ್ನು ಬಿಟ್ಟು ಓಡಿಹೋಗಿ ಬಿಟ್ಟಿತು. ಎರಡೇ ಹಂದಿಯ ಮರಿಗಳನ್ನು ಕಂಡು ಆ ಮುದುಕಿ ಕರುಣೆಯಿಂದ ಅವುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಮನೆಗೆ ತಂದಳು. ಅವುಗಳನ್ನು ಮಕ್ಕಳಂತೆಯೇ ಬೆಳೆಸಿದಳು. ದೊಡ್ಡ ಮರಿಗೆ ಮಹಾತುಂಡಿಲ ಮತ್ತು ಚಿಕ್ಕಮರಿಗೆ ಚುಲ್ಲತುಂಡಿಲ ಎಂಬ ಹೆಸರುಗಳನ್ನು ಕೊಟ್ಟಳು.

ದಿನಕಳೆದಂತೆ ಹಂದಿ ಮರಿಗಳು ಚೆನ್ನಾಗಿ ಮೈತುಂಬಿಕೊಂಡು ಬೆಳೆದವು. ಬಹಳಷ್ಟು ಜನ ಆ ಹಂದಿಗಳನ್ನು ಕೊಳ್ಳಲು ಬಯಸಿದರೂ ಮುದುಕಿ ಅವುಗಳನ್ನು ಮಾರಲು ಒಪ್ಪಲಿಲ್ಲ. ಒಂದು ಬಾರಿ ನಗರದಲ್ಲಿ ಉತ್ಸವ ನಡೆಯುತ್ತಿದ್ದಾಗ ಹಲವರು ತರುಣರು ಹೆಂಡ ಕುಡಿಯುವಾಗ ತಿನ್ನುತ್ತಿದ್ದ ಮಾಂಸ ಮುಗಿದುಹೋಯಿತು. ಅವರಿಗೆ ತಿನ್ನದೇ ಇರುವುದು ಸಾಧ್ಯವೇ ಆಗಲಿಲ್ಲ. ಮುದುಕಿಯ ಬಳಿ ಕೊಬ್ಬಿದ ಎರಡು ಹಂದಿಗಳಿವೆ ಎಂಬುದನ್ನು ತಿಳಿದು ಅವರು ಆಕೆಯ ಬಳಿಗೆ ಬಂದು, ‘ಎಷ್ಟು ಬೇಕಾದರೂ ಹಣ ಕೊಡುತ್ತೇವೆ, ಹಂದಿಗಳನ್ನು ಕೊಡು’ ಎಂದು ಕೇಳಿದರು. ಮುದುಕಿ ಒಪ್ಪಲಿಲ್ಲ. ಆಗ ಅವರು ಮುದುಕಿಗೂ ಕಂಠಪೂರ್ತಿ ಹೆಂಡ ಕುಡಿಸಿ, ‘ಅಜ್ಜೀ, ನಿನಗೆ ಉಳಿದವರು ಕೊಡುವುದಕ್ಕಿಂತ ಎರಡುಪಟ್ಟು ಹಣ ಕೊಡುತ್ತೇವೆ, ಹಂದಿಗಳನ್ನು ಕೊಟ್ಟುಬಿಡು’ ಎಂದು ಬೇಡಿದರು. ಆಕೆ, ‘ಎರಡೂ ಹಂದಿಗಳನ್ನು ಕೊಡಲಾರೆ. ಅದರಲ್ಲೂ ಮಹಾತುಂಡಿಲ ನನಗೆ ಬಹಳ ಪ್ರಿಯ. ಬೇಕಾದರೆ ಚುಲ್ಲತುಂಡಿಲನನ್ನು ತೆಗೆದುಕೊಂಡು ಹೋಗಿ’ ಎಂದಳು. ಅವರಿಗೆ ಚುಲ್ಲತುಂಡಿಲ ಎಲ್ಲಿಯೂ ಕಾಣಲಿಲ್ಲ. ಅದನ್ನು ಆಕರ್ಷಿಸಲು ಹಂದಿಯ ಊಟದ ದೋಣಿಯಲ್ಲಿ ಆಹಾರ ತುಂಬಿ ಅದರ ಹೆಸರು ಹಿಡಿದು ಕೂಗಿ, ಕೂಗಿ ಕರೆದಳು ಅಜ್ಜಿ. ಮಹಾತುಂಡಿಲನಿಗೆ ಆಶ್ಚರ್ಯವಾಯಿತು. ಯಾವಾಗಲೂ ಅಜ್ಜಿ ತನ್ನನ್ನೇ ಕರೆಯುವವಳು, ಆದರೆ ಇಂದು ತಮ್ಮನನ್ನೇಕೆ ಕರೆಯುತ್ತಿದ್ದಾಳೆ ಎಂದು ಚಿಂತಿಸಿ ತಮ್ಮನಿಗೆ ಹೋಗಲು ಹೇಳಿತು.

ನಿಧಾನವಾಗಿ ಹೊರಗೆ ಬಂದ ಚುಲ್ಲತುಂಡಿಲ ದೋಣಿಯ ತುಂಬ ಆಹಾರವನ್ನು ಮತ್ತು ದೂರದಲ್ಲಿ ಬಲೆ ಹಿಡಿದುಕೊಂಡು ನಿಂತಿದ್ದ ಜನರನ್ನು ಕಂಡು ಮರಳಿ ಓಡಿ ಬಂದಿತು. ‘ಅಣ್ಣಾ, ಇದೇಕೋ ಮೋಸದ ವ್ಯವಹಾರವೆಂದು ಭಾಸವಾಗುತ್ತಿದೆ. ಬಹುಶಃ ನನ್ನ ಆಯುಷ್ಯ ಮುಗಿಯಿತು ಎಂದು ತೋರುತ್ತದೆ. ನನಗೆ ಅಪ್ಪಣೆ ಕೊಡು ಅಣ್ಣ’ ಎಂದಿತು ಚುಲ್ಲತುಂಡಿಲ.

ಆಗ ಮಹಾತುಂಡಿಲ ದೀರ್ಘವಾದ ಧ್ವನಿಯಲ್ಲಿ, ‘ತಮ್ಮಾ, ಯಾವ ಕಾರಣಕ್ಕೋಸ್ಕರ ನಿನ್ನ ದೇಹ ಬಂದಿತೋ ಅದನ್ನು ಪೂರೈಸುವ ಸಮಯ ಬಂದಿದೆ. ಇದರಿಂದ ಪಾರಾಗಬೇಕಾದರೆ ನೀನು ಈಗ ಕೆಸರಿಲ್ಲದ ಕೆರೆಯಲ್ಲಿ ಇಳಿ, ಬೆವರಿನ ರೂಪದ ಮಲವನ್ನು ತೊಳೆದುಕೋ ಮತ್ತು ಎಂದಿಗೂ ಮುಗಿಯದ ಸುಗಂಧವನ್ನು ಲೇಪಿಸಿಕೋ’ ಎಂದು ಉಪದೇಶ ಮಾಡತೊಡಗಿತು. ಅದು ಬುದ್ಧನ ಧ್ವನಿ. ಅದು ಹನ್ನೆರಡು ಯೋಜನಗಳವರೆಗೆ ಹರಡಿತು. ರಾಜ, ರಾಣಿಯರು, ನಗರದ ಜನರೆಲ್ಲ ಓಡಿ ಬಂದು ನೆರೆದರು. ಮಹಾತುಂಡಿಲ ಹೇಳಿತು, ‘ಧರ್ಮವೇ ಕೆಸರಿಲ್ಲದ ಕೆರೆ, ಪಾಪವೇ ಬೆವರಿನ ರೂಪದ ಮಲ ಮತ್ತು ಶೀಲವೇ ಸದಾ ಪರಿಮಳ ಬೀರುವ ಲೇಪ. ಈ ದಾರಿಯಲ್ಲೇ ಎಲ್ಲರು ಬದುಕಿ, ಬಾಳಿ’. ರಾಜ ಸಂತೋಷಪಟ್ಟ, ಮುದುಕಿಯ ಮತ್ತು ಇಳಿಯಿತು. ರಾಜ ಎರಡೂ ಹಂದಿಗಳನ್ನು ತನ್ನ ಅರಮನೆಯಲ್ಲಿ ವಿಶೇಷ ಸ್ಥಾನ ನೀಡಿ ಇರಿಸಿಕೊಂಡ.

ಧರ್ಮದ ನಡೆ, ಪಾಪಮುಕ್ತ ಚಿಂತನೆ ಹಾಗೂ ಶೀಲವಂತ ಬದುಕು ಮನುಷ್ಯರಿಗೆ ಶಾಶ್ವತವನ್ನು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT