ಸೋಮವಾರ, ಜನವರಿ 20, 2020
27 °C
437 ರಾಜಧರ್ಮ

ರಾಜಧರ್ಮ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಇದೊಂದು ಪುಟ್ಟ ಕಥೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಸಮಾಜದ ಮೌಲ್ಯಗಳನ್ನು ತಿಳಿಸುವ ಕಥೆ ಇದು.

ಒಂದಾನೊಂದು ಕಾಲದಲ್ಲಿ ಬೋಧಿಸತ್ವ ಕಾಶಿಯ ರಾಜನಾಗಿದ್ದ. ಅವನು ಅತ್ಯಂತ ಸತ್ಯಸಂಧನೂ, ಜನರ ಒಳಿತನ್ನೇ ಗುರಿಮಾಡಿಕೊಂಡಿದ್ದವನು. ಅವನ ತಂದೆಯ ಕಾಲದಿಂದಲೇ ಅಮಾತ್ಯನಾಗಿದ್ದವನು ಸರ್ವಾರ್ಥಸಾಧಕ. ಆತ ಕೋಪಿಷ್ಟ, ಸ್ವಾರ್ಥಿ ಹಾಗೂ ದುಷ್ಟನಾಗಿದ್ದವನು. ಹಿರಿಯನೆಂದೋ, ಅನುಭವಿಯೆಂದೋ ಬೋಧಿಸತ್ವ ಅವನನ್ನು ಅಮಾತ್ಯನನ್ನಾಗಿಯೇ ಉಳಿಸಿಕೊಂಡಿದ್ದ.

ಆ ದುಷ್ಟ ಮಂತ್ರಿ ಏನೇನೋ ಯೋಜನೆಗಳನ್ನು ಹಾಕುತ್ತಲೇ ಇರುತ್ತಿದ್ದ. ಒಂದು ಬಾರಿ ರಾಜನ ಒಳ್ಳೆಯತನವನ್ನು ಬಳಸಿಕೊಂಡು ಅವನಗರಿವಿಲ್ಲದಂತೆ, ಕೋಸಲದೇಶದ ರಾಜನೊಡನೆ ಒಳ ಒಪ್ಪಂದ ಮಾಡಿಕೊಂಡ. ಅವನು ದಾಳಿ ಮಾಡಿದಾಗ ತಾನೇ ಸೈನಿಕರಿಗೆ ಯುದ್ಧಮಾಡದಂತೆ ಆಜ್ಞೆ ನೀಡಿ, ಕೋಟೆಯ ಬಾಗಿಲುಗಳನ್ನು ತೆಗೆಯಿಸಿ ಬಿಟ್ಟ. ಕೋಸಲರಾಜ ಕಾಶಿಯ ರಾಜ ಬೋಧಿಸತ್ವನನ್ನು ಸೆರೆಹಿಡಿದು ಕಾರಾಗೃಹದಲ್ಲಿ ಕೂಡಿಟ್ಟ. ಆದರೆ ಬೋಧಿಸತ್ವ ರಾಜನಾಗಿದ್ದರೂ ಬಹುದೊಡ್ಡ ಸಾಧಕನಾಗಿದ್ದ. ತನ್ನ ತಪಃಶಕ್ತಿಯಿಂದ ಧ್ಯಾನ ಮಾಡತೊಡಗಿದ. ಆ ಧ್ಯಾನದ ಬಲದಿಂದ ನೆಲದಿಂದ ಮೇಲಕ್ಕೇರಿ ಆಕಾಶದಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತುಕೊಂಡು ಬಿಟ್ಟ. ಅವನ ಮೈಸುತ್ತಲೂ ಜ್ಞಾನದ ಬೆಳಕು ಹರಡಿತ್ತು. ತಪಸ್ಸಿನ ಶಕ್ತಿಯಿಂದಾಗಿ ದೇಶವನ್ನು ಕಬಳಿಸಿದ ಕೋಸಲ ರಾಜನ ಮೈ ಧಗಧಗನೆ ಉರಿಯತೊಡಗಿತು. ಆತ ಅದನ್ನು ತಡೆಯಲಾರದೆ ಹೊರಗೆ ಬಂದು ಆಕಾಶದಲ್ಲಿ ಶಾಂತವಾಗಿ ಕುಳಿತಿದ್ದ ಬೋಧಿಸತ್ವನನ್ನು ನೋಡಿ ಕೇಳಿದ, ‘ರಾಜಾ, ನೀನು ನಿನ್ನ ರಾಜ್ಯವನ್ನು, ಕೋಶವನ್ನು, ರಥವನ್ನು, ಐಶ್ವರ್ಯವನ್ನು, ಪುತ್ರರನ್ನು, ಭೋಗಗಳನ್ನು ಕಳೆದುಕೊಂಡಿದ್ದರೂ ಯಾವ ದುಃಖವೂ ಕಾಣದಂತೆ ಶಾಂತವಾಗಿ ಕುಳಿತಿದ್ದೀಯಾ. ಇದಕ್ಕೆ ಏನು ಕಾರಣ?’. ಅದಕ್ಕೆ ಬೋಧಿಸತ್ವ ಹೇಳಿದ, ‘ಗೆಳೆಯಾ, ಯಾರು ಭೋಗಗಳಿಗೇ ಅಂಟಿಕೊಂಡಿರುತ್ತಾರೋ ಅವರಿಗೆ ಮಾತ್ರ ಅವುಗಳನ್ನು ಕಳೆದುಕೊಂಡಾಗ ದುಃಖವಾಗುತ್ತದೆ. ನನಗೆ ಭೋಗಗಳಲ್ಲಿ ಯಾವ ಆಸಕ್ತಿಯೂ ಇಲ್ಲ’. ಕೋಸಲರಾಜ ಮತ್ತೆ ಕೇಳಿದ, ‘ರಾಜಾ, ನನ್ನ ಮೈ ಉರಿಯುತ್ತಿದೆ. ನಿನ್ನ ಮಾತು ಕೇಳಿದರೆ ಹಾಯೆನಿಸುತ್ತದೆ. ದಯವಿಟ್ಟು ನನಗೆ ಬದುಕುವ ದಾರಿಯನ್ನು ಹೇಳಿಕೊಡು’.

ಅದಕ್ಕೆ ಉತ್ತರವಾಗಿ ಬೋಧಿಸತ್ವ, ‘ಗೃಹಸ್ಥನಾದವನು ಅತಿಕಾಮಿಯಾಗಬಾರದು, ಸೋಮಾರಿಯಾಗಬಾರದು. ಸಂಯಮವಿಲ್ಲದ ಸನ್ಯಾಸಕ್ಕೆ ಅರ್ಥವಿಲ್ಲ. ರಾಜನಾದವನು ಆಳವಾದ ಚಿಂತನೆಯಿಲ್ಲದೆ ಯಾವ ಕೆಲಸವನ್ನು ಮಾಡಬಾರದು. ಮಂತ್ರಿಯಾದವನು ತನ್ನ ಸ್ವಂತ ಸುಖಕ್ಕಿಂತ ಮೊದಲು ದೇಶದ, ರಾಜನ ಹಿತವನ್ನು ನೋಡಬೇಕು. ಪಂಡಿತನಾದವನು ಮೊದಲು ಕೋಪವನ್ನು ಬಿಡಬೇಕು. ರಾಜಾ, ಇನ್ನೊಂದು ಮುಖ್ಯ ವಿಷಯವನ್ನು ನಿನಗೆ ಹೇಳಬೇಕು. ನೀನು ಅಧರ್ಮಿಯಾದರೆ ಶಿಕ್ಷೆ ನಿನಗೊಬ್ಬನಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಪಾಪ ತಟ್ಟುತ್ತದೆ. ನೀನು ಸದಾಕಾಲ ನ್ಯಾಯಮಾರ್ಗದಲ್ಲೇ, ದೇಶದ ಪ್ರಜೆಗಳ ಹಿತವನ್ನು ಕಾಪಾಡುತ್ತಿದ್ದರೆ ಆ ಧರ್ಮ ನಿನ್ನನ್ನು, ಪರಿವಾರದವರನ್ನು, ದೇಶವನ್ನು ರಕ್ಷಿಸುತ್ತದೆ. ಇದನ್ನು ಮರೆಯಬೇಡ’ ಎಂದ. ಕೋಸಲರಾಜನ ಮೈ ತಂಪಗಾಯಿತು. ಆತ ಕಾಶಿ ರಾಜ್ಯವನ್ನು ಬೋಧಿಸತ್ವನಿಗೆ ಒಪ್ಪಿಸಿ, ನಮಸ್ಕಾರ ಮಾಡಿ, ತನ್ನ ದೇಶಕ್ಕೆ ಹೊರಟು ಹೋದ.

ನಾಯಕರ ರಾಜಧರ್ಮ ಪರಿಪಾಲನೆ ರಾಜರಿಗೆ ಮಾತ್ರವಲ್ಲ, ಪ್ರಜೆಗಳಿಗೂ ಸುಖ-ಶಾಂತಿಯನ್ನು ತರುತ್ತದೆ.

ಪ್ರತಿಕ್ರಿಯಿಸಿ (+)