ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಿಸಬೇಕಾದ ಪರಸತ್ವ

Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನಯದಿಂದ ಸೋಕು, ನೀಂ ದಯೆಯಿಂದ ನೋಡದನು |

ಭಯದಿನೋಲಗಿಸು, ನೀಂ ಪೂಜೆಗೈಯದನು ||
ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ |
ಪ್ರಿಯತಮವೊ ಸೃಷ್ಟಿಯಲಿ - ಮಂಕುತಿಮ್ಮ

ಪದ-ಅರ್ಥ: ಸೋಕು=ಮುಟ್ಟು, ಭಯದಿನೋಲಗಿಸು=ಭಯದಿ(ಭಯದಿಂದ)+ಓಲಗಿಸು=ಸೇವೆ ಮಾಡು, ಸ್ವಯಮಂಕುರಿತ=ಸ್ವಯಮ್+
ಅಂಕುರಿತ=ತನ್ನಷ್ಟಕ್ಕೆ ತಾನೇ ಚಿಗುರಿದ

ವಾಚ್ಯಾರ್ಥ: ಜೀವ ಎನ್ನುವುದು ಸೃಷ್ಟಿಯಲ್ಲಿ ಅತ್ಯಂತ ಪ್ರಿಯವಾದದ್ದು. ಅದು ತನ್ನಷ್ಟಕ್ಕೇ ತಾನೇ ಮೊಳೆತ ವಿಶ್ವಸತ್ವ. ಅದನ್ನು ನಯವಾಗಿ ಮುಟ್ಟು, ದಯೆಯಿಂದ ನೋಡು, ಭಯದಿಂದ ಸೇವೆಮಾಡು ಹಾಗೂ ಅದರ ಪೂಜೆ ಮಾಡು.

ವಿವರಣೆ: ಪರಸತ್ವ ತನ್ನ ಲೀಲೆಗಾಗಿ ಕೋಟಿ ಕೋಟಿ ರೂಪಗಳನ್ನು ಪಡೆಯಿತು. ಪ್ರತಿಯೊಂದು ಜೀವವೂ ಪರಸತ್ವದ ಅಂಶವೇ. ಆ ಸತ್ವ ದೇಹಭಾವ ತಳೆದು ಬಂದದ್ದರಿಂದ ಅದಕ್ಕೊಂದು ಆಕಾರ, ಲಿಂಗ ಮತ್ತು ಸ್ವಭಾವ ಸಿದ್ಧವಾಯಿತು. ಅದಕ್ಕೆ ಒಂದು ಹೆಸರೂ ಬಂದಿತು. ವಿಶ್ವಲೀಲೆಗೆ ಅನುಗುಣವಾಗಿ ಅದಕ್ಕೆ ಕಷ್ಟವೋ, ಸುಖವೋ, ಶ್ರೀಮಂತಿಕೆಯೋ, ಬಡತನವೋ ನಿಯಮಿತವಾಯಿತು. ನಾವು ಪ್ರಪಂಚದಲ್ಲಿ ಜನರನ್ನು ನೋಡುವಾಗ ಅವರ ದೃಷ್ಟ ಪರಿಸ್ಥಿತಿಯನ್ನು ಗಮನಿಸುತ್ತೇವೆ ಆದರೆ ಅದೃಷ್ಟವಾದ ಚೈತನ್ಯವನ್ನು ಕಾಣುವುದಿಲ್ಲ. ಉಪನಿಷತ್ತುಗಳು ಈ ವಿಷಯವನ್ನು ಒತ್ತಿ ಹೇಳುತ್ತವೆ
ದೇಹೋ ದೇವಾಲಯ;
ಪ್ರೋಕ್ತೋ ಜೀವೋ ದೇವ: ಸದಾಶಿವ: |
ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋ,
ಹಂ ಭಾವೇನ ಪೂಜಯೇತ್ ||

ಮೈತ್ರೋಪನಿಷತ್ – 3-1

‘ದೇಹವೇ ದೇಗುಲ, ಜೀವಾತ್ಮನೇ ದೇವನಾಗಿ ಸದಾಶಿವನು ನೆಲೆಸಿದ್ದಾನೆ. ಆದ್ದರಿಂದ ದೇಹವೇ ನಾನು ಎಂಬ ಅಜ್ಞಾನದ ನಿರ್ಮಾಲ್ಯವನ್ನು ತೆಗೆದು ನಾನೇ ಅವನು ಎಂಬ ಭಾವನೆಯಿಂದ ಪೂಜಿಸಬೇಕು’.

ಈ ಮಾತನ್ನೇ ಬಸವಣ್ಣನವರು ಮತ್ತು ಇತರ ವಚನಕಾರರು, ‘ದೇಹವೇ ದೇಗುಲ’ ವೆಂದು ಹೇಳಿದರು. ಕಣ್ಣಿಗೆ ಕಾಣುವ ದೇಹ ದೇಗುಲವಾದರೆ ಅದರೊಳಗೆ ಅಂತಸ್ಥವಾದದ್ದು ಪರಸತ್ವ. ಆದ್ದರಿಂದ ಪ್ರಪಂಚದ ಪ್ರತಿಯೊಂದು ವ್ಯಕ್ತಿ, ‘ಸ್ವಯಂ ಅಂಕುರಿತ’ವಾದ ಎಂದರೆ ತನ್ನಷ್ಟಕ್ಕೆ ತಾನೇ ಮೊಳೆತ ಪರಸತ್ವ. ಅದು ದೇಹದ ಆವರಣದಲ್ಲಿದ್ದರೂ ಅದನ್ನು ಕೀಳಾಗಿ ನೋಡತಕ್ಕದ್ದಲ್ಲ, ಅದು ಸೃಷ್ಟಿಯಲ್ಲಿ ಅತ್ಯಂತ ಪ್ರಿಯತಮವಾದದ್ದು.

ಅದಕ್ಕೆ ಈ ಕಗ್ಗ ನಮಗೆ ಎಚ್ಚರಿಕೆಯನ್ನು ನೀಡುತ್ತದೆ, ಯಾವ ಜೀವಿಯನ್ನೂ ಅವಹೇಳನ ಮಾಡುವುದು ಬೇಡ. ಅದನ್ನು ಪ್ರೀತಿಯಿಂದ ಮುಟ್ಟು, ದಯೆಯಿಂದ ಕಾಣು, ಭಯದಿಂದ, ಗೌರವದಿಂದ ಸೇವೆ ಮಾಡು, ಅಷ್ಟೇ ಅಲ್ಲ ಅದನ್ನು ಪೂಜಿಸು. ಯಾಕೆಂದರೆ ನಾವು ಪೂಜಿಸುವುದು ಹೊರಗೆ ಕಾಣುವ ದೇಹವನ್ನಲ್ಲ, ಅದರಲ್ಲಿ ಪ್ರತಿಷ್ಠಾಪಿತವಾಗಿರುವ, ಅಂತೆಯೇ ಎಲ್ಲರಲ್ಲೂ ಸ್ಥಾಪಿತ
ವಾಗಿರುವ ಪರಸತ್ವವನ್ನೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT