ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಾಕ್ಷಿಪ್ರಜ್ಞೆ

Last Updated 19 ಅಕ್ಟೋಬರ್ 2022, 18:55 IST
ಅಕ್ಷರ ಗಾತ್ರ

ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ಪ |
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು – ಮಂಕುತಿಮ್ಮ || 739 ||

ಪದ-ಅರ್ಥ: ಮನದಾಟಗಳ=ಮನದ+ಆಟಗಳ,
ತಾನಿರ್ವರಾದವೊಲು=ತಾನು+ಇರ್ವರಾದವೊಲು=ಇಬ್ಬರಾದಂತೆ, ಬಾಳ್ಪ=ಬಾಳುವ, ಚಿನ್ಮಾತ್ರ=ಆದಿಯಿಲ್ಲದ, ಜ್ಞಾನಸ್ವರೂಪವಾದ
ಪರಬ್ರಹ್ಮವಸ್ತು, ಜಾನಿಪ=ಧ್ಯಾನಿಸುವ,

ವಾಚ್ಯಾರ್ಥ: ತನ್ನ ಮನಸ್ಸಿನ ಆಟಗಳನ್ನು ತಾನೇ ನೋಡುತ್ತನಗುತ್ತಾನೆ, ತನ್ನೊಳಗೆ ತಾನು ಇಬ್ಬರಾದಂತೆ ಬಾಳುತ್ತಾನೆ,ಪರಬ್ರಹ್ಮವಸ್ತುವನ್ನು ಸಾಕ್ಷಿಪ್ರಜ್ಞೆಯಿಂದ ನೋಡಿ ಧ್ಯಾನಿಸುವ ಚತುರ, ಧನ್ಯತೆಯನ್ನು ಕಂಡವನು.

ವಿವರಣೆ: ನನಗೆ ತಿಳಿದ ಅವಧೂತರೊಬ್ಬರಿದ್ದಾರೆ. ಅವರುಯಾವಾಗ, ಎಲ್ಲಿಗೆ ಹೋಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ.ಒಮ್ಮೊಮ್ಮೆ ನೀವು ನೆನೆಸಿದಾಗ ಅಲ್ಲಿಗೇ ಬಂದುಬಿಡಬಹುದು. ಅವರು ತಮ್ಮ ಸುತ್ತಮುತ್ತ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ
ಭಾಗವಹಿಸುತ್ತಾರೆ, ಸಂತೋಷಪಡುತ್ತಾರೆ. ಮತ್ತೊಬ್ಬರ ದುಃಖಕ್ಕೆ ಸ್ಪಂದಿಸುತ್ತಾರೆ. ಮರುಕ್ಷಣವೇ ಅದರಿಂದ ಬಿಡುಗಡೆ ಹೊಂದಿ ನಡೆದುಬಿಡುತ್ತಾರೆ. ಅವರಿಗೆ ಸಂಸಾರವಿದೆ, ಆದರೆ ನೆಲೆಯಿಲ್ಲ, ಆ ಕ್ಷಣದಲ್ಲಿ ಇದ್ದದ್ದೇ ನೆಲೆ. ಒಂದೆರಡು ವರ್ಷಗಳ ಹಿಂದೆ ಅವರನ್ನು ಬೆಟ್ಟಿಯಾಗಲು ಅವರ ಮಗ ಬಂದ. ಅವನಿಗೂ ಸುಮಾರು 45-50 ವರ್ಷ ವಯಸ್ಸು ಮಾತನಾಡಿ ಹೊರಟ. ದಾರಿಯಲ್ಲಿ ಅಪಘಾತವಾಗಿ ತೀರಿಹೋದ.

ತಂದೆಯಾದ ಇವರಿಗೆ ತುಂಬ ಅಘಾತವಾಗಿರಬೇಕೆಂದು ಮಾತನಾಡಲು ಹೋದವರಿಗೆ ಆಶ್ಚರ್ಯ. ಅವರು ಬೇರೆ
ಯಾವುದೋ ವಿಷಯದ ಬಗ್ಗೆ ಮಾತನಾಡುತ್ತ, ನಗುನಗುತ್ತ ಕುಳಿತಿದ್ದಾರೆ! ಬಂದವರು ಮುಖದ ತುಂಬ ದುಃಖದ ಛಾಯೆಯನ್ನು ಹೊದ್ದು ಸಂತಾಪ ಸೂಚಿಸಿದರು. ಅದಕ್ಕವರು ನಗುತ್ತಲೇ, “ಆಯ್ತು ಬಿಡಿ. ಅವನ ಸ್ಟೇಶನ್ಬಂತು, ಇಳಿದು ಹೋದ. ಅದಕ್ಕೇನು ಮಾಡುವುದು? ಪ್ರಯಾಣ ನಡೆಯುತ್ತಲೇ ಇದೆ” ಎಂದರು. ಅಂದರೆ ಅವರಿಗೆ ಮಗನ ಸಾವಿನ ದುಃಖ ಇಲ್ಲವೆ? ಇದೆ. ಆದರೆ ಅದೊಂದು ಪ್ರಪಂಚದ ಅನಿವಾರ್ಯ ಆಟ ಎನ್ನುವುದು ತಿಳಿದಿದೆ.

ಇದನ್ನೇ ಕಗ್ಗ, ಒಬ್ಬರಿದ್ದದ್ದು ಇಬ್ಬರಾಗುವುದು ಎನ್ನುವುದು. ನಮಗೆ ದೇಹ, ಮನಸ್ಸು, ಬುದ್ಧಿಗಳಿವೆ, ಪಂಚೇಂದ್ರಿಯಗಳು ತಂದು ತಂದು ಸುರಿಯುವ ಅನುಭವಗಳ ಆಟ ಕೊನೆಯ ಕ್ಷಣದವರೆಗೂ ಇದ್ದದ್ದೇ. ಅದರಲ್ಲಿ ತನ್ಮಯತೆಯಿಂದ ಭಾಗಿಯಾದರೆ ದುಃಖ, ಸಂತೋಷ. ಆದರೆ ಅವುಗಳನ್ನೇ ಸಾಕ್ಷಿಯಂತೆ ದೂರನಿಂತು ನೋಡಿದಾಗ, ಇಬ್ಬರಾದದ್ದು ತಿಳಿಯುತ್ತದೆ. ಮನಸ್ಸು ತೋರಿದ ಆಟಗಳನ್ನುಆಡುವವನೊಬ್ಬ, ಅದನ್ನು ನೋಡುವವನು ಇನ್ನೊಬ್ಬ. ಇದೇ ಸಾಕ್ಷಿಪ್ರಜ್ಞೆ.

ಅದನ್ನು ತಿಳಿದವರು ಬುದ್ಧಿಶಾಲಿಗಳು. ಲೋಕದ ವ್ಯವಹಾರದಲ್ಲಿ ಸದಾಕಾಲ ಪಾಲುಗೊಳ್ಳುತ್ತಲೇ, ತಾನು ನಿಜವಾಗಿಯೂ ಅದಲ್ಲ, ತಾನೊಂದು ಆದಿ, ಅಂತ್ಯಗಳಿಲ್ಲದ, ವಿಕಾರಗೊಳ್ಳದ ಪರಬ್ರಹ್ಮವಸ್ತುವಿನ ಒಂದಂಶ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುವವನು, ಅದನ್ನೇ ಧ್ಯಾನಿಸುವವನನ್ನು, ಕಗ್ಗ ಧನ್ಯತೆಯನ್ನು ಕಂಡವನು ಎನ್ನುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT