ಬದಲಾಗುವ ವಸ್ತುಗಳ ಬೆಲೆ

7

ಬದಲಾಗುವ ವಸ್ತುಗಳ ಬೆಲೆ

ಗುರುರಾಜ ಕರಜಗಿ
Published:
Updated:

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ |
ಮಣ್ಣೆನುವನ್, ಅವನ ವರ ಮಣ್ಣೆನುವೆ ನೀನು ||
ಭಿನ್ನಮಿಂತಿರೆ ವಸ್ತುಮೌಲ್ಯಗಳ ಗಣನೆಯೀ |
ಪಣ್ಯಕ್ಕೆ ಗತಿಯೆಂತೊ? – ಮಂಕುತಿಮ್ಮ ||21||

ಮಣ್ಣೆನುವನ್ = ಮಣ್ಣು + ಎನ್ನುವನು, ಭಿನ್ನಮಿಂತಿರೆ = ಭಿನ್ನ (ವ್ಯತ್ಯಾಸ) + ಇಂತಿರೆ, ಮೌಲ್ಯ = ಬೆಲೆ, ಪಣ್ಯ = ವ್ಯಾಪಾರ

ವಾಚ್ಯಾರ್ಥ: ಯಾವುದನ್ನು ಜಗತ್ತಿನಲ್ಲಿ ಚಿನ್ನ ಎಂದು ನೀನು ಭಾವಿಸುತ್ತೀಯೋ ಅದನ್ನು ವಿಧಿ ಮಣ್ಣು ಎನ್ನುತ್ತಾನೆ. ಅವನು ನೀಡಿದ ವರವನ್ನು ನೀನು ಮಣ್ಣು ಎಂದು ತಿಳಿಯುತ್ತೀ. ಹೀಗೆ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸವಿದ್ದರೆ ಜಗತ್ತಿನ ವ್ಯಾಪಾರ ಹೇಗೆ ನಡೆದೀತು?
ವಿವರಣೆ: ಗ್ರೀಕ್ ಪುರಾಣ ಕಥೆಗಳಲ್ಲಿ ಬರುವ ರಾಜರಲ್ಲಿ ಮಿಡಾಸ್ ಎಂಬುವನ ಕಥೆ ರೋಚಕವಾದದ್ದು. ಅವನು ಬೇಡಿ ಪಡೆದದ್ದು ಒಂದು ವರ, ತಾನು ಮುಟ್ಟಿದ್ದೆಲ್ಲ ಬಂಗಾರವಾಗಲಿ ಎಂದು. ಬೇಡಿದ್ದು ಸತ್ಯವಾಗಿದೆಯೇ ಎಂದು ಪರೀಕ್ಷಿಸಲು ಹತ್ತಿರದ ಬಟ್ಟಲನ್ನು ಮುಟ್ಟಿದ, ಅದು ಬಂಗಾರದ್ದಾಯಿತು. ಕುಳಿತ ಮಂಚ ಬಂಗಾರವಾಯಿತು. ಸಂತೋಷದಿಂದ ಜಿಗಿದೆದ್ದ ಮಿಡಾಸ ಸುತ್ತಮುತ್ತಲಿನ ವಸ್ತುಗಳನ್ನು ಮುಟ್ಟುತ್ತ ಹೋದ. ಮರ, ಬಳ್ಳಿ, ಹೂಗಳು ಸುವರ್ಣದ್ದಾದವು. ಮಿಡಾಸನಿಗೆ ಅವನ ಅತ್ಯಂತ ಪ್ರೀತಿಯ ಮಗಳು ಓಡಿ ಬಂದು ತಬ್ಬಿಕೊಂಡಾಗ ಆದದ್ದು ಆಘಾತ. ಮಗಳು ಈಗ ಬಂಗಾರದ ವಿಗ್ರಹ. ಕಂಗಾಲಾದ ರಾಜ ದಾಹದಿಂದ ನೀರು ಕುಡಿಯಲು ಹೋದರೆ ಅದೂ ಬಂಗಾರ, ಆಹಾರವೂ ಬಂಗಾರ. ಕೊನೆಗೆ ಆತ ಹಸಿವಿನಿಂದ ಸತ್ತು ಹೋದ.

ಯಾವುದನ್ನು ಆತ ವರವೆಂದು ಭಾವಿಸಿದ್ದನೋ ಅದು ಮಹಾಶಾಪವಾಗಿತ್ತು. ನಮ್ಮ ಪುರಾಣಗಳಲ್ಲೂ ಮಹಾಮಹಾ ನಾಯಕರಾದ ಭಸ್ಮಾಸುರ, ಹಿರಣ್ಯಕಶಿಪು, ರಾವಣ ಇವರೆಲ್ಲ ಪಡೆದ ವರಗಳೇ ಅವರಿಗೆ ಮರಣಶಾಸನಗಳಾಗಲಿಲ್ಲವೇ?

ತಂದೆ ತೀರಿಕೊಳ್ಳುವ ಮೊದಲು ಉಯಿಲು ಮಾಡಿದರು. ದೊಡ್ಡ ಮಗನಿಗೆ ಊರಿನಿಂದ ದೂರವಾದ ಹಳ್ಳಿಯಲ್ಲಿ ಹತ್ತು ಎಕರೆ ಜಮೀನು, ಕಿರಿಯ ಮಗನಿಗೆ ಪಟ್ಟಣದಲ್ಲಿದ್ದ ಮನೆಯನ್ನು ಬರೆದರು. ಪಟ್ಟಣದ ಮನೆಗೆ ಬಲು ಹೆಚ್ಚಿನ ಬೆಲೆ, ಹಳ್ಳಿಯ ಜಮೀನು ಯಾರು ಕೇಳುತ್ತಾರೆ ಎಂದು ಬೇಜಾರುಪಟ್ಟುಕೊಂಡು, ತಂದೆಯನ್ನು ಶಪಿಸಿ ಆ ಜಮೀನನ್ನು ಕೈಗೆ ಬಂದ ದರದಲ್ಲಿ ತಮ್ಮನಿಗೇ ಮಾರಿ ಅದೇ ಪಟ್ಟಣದಲ್ಲಿ ಪುಟ್ಟ ಮನೆಯೊಂದನ್ನು ಕೊಂಡ ಅಣ್ಣ. ಹತ್ತು ವರ್ಷಗಳು ಉರುಳಿದಾಗ ದೂರದ ಹಳ್ಳಿಯ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಿದ್ಧವಾಗುತ್ತಿತ್ತು. ಸರ್ಕಾರ ಅಲ್ಲಿ ಜಮೀನನ್ನು ಎಕರೆಗೆ ಹತ್ತು ಕೋಟಿ ರೂಪಾಯಿಗಳಂತೆ ಕೊಂಡಾಗ ತಮ್ಮನಿಗೆ ನೂರು ಕೋಟಿ ರೂಪಾಯಿ ಬಂದಿತ್ತು. ಅಣ್ಣ ಯಾವುದನ್ನೂ ಮಣ್ಣೆಂದು ಮಾರಿದ್ದನೋ ಅದು ಹೊನ್ನಾಗಿತ್ತು. ಅಪ್ಪ ಕೊಟ್ಟ ವರವನ್ನು ಮಣ್ಣೆಂದು ತಿಳಿದು ತಿರಸ್ಕರಿಸಿದ್ದ ಅಣ್ಣ.

ಶತಶತಮಾನಗಳಿಂದ ಅನೇಕರಿಗೆ ಆದದ್ದೇ ಹೀಗೆ. ನನಗೆ ತುಂಬ ಒಳ್ಳೆಯದು ಎಂದು ಭಾವಿಸಿ ಪಡೆದದ್ದು ವಿಧಿಯ ಆಟದಲ್ಲಿ ಅಪ್ರಯೋಜಕವಾಗಿದೆ. ಭಗವಂತ ಕೃಪೆಯಿಂದ ಕೊಟ್ಟದನ್ನು ಮನುಷ್ಯ ತಿರಸ್ಕರಿಸಿ ಒದ್ದಾಡಿದ ನೂರು ಘಟನೆಗಳಿವೆ. ಹಾಗಾದರೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ತಿಳಿಯದೇ ಹೋದಾಗ ಈ ಜಗತ್ತಿನ ವ್ಯಾಪಾರದಲ್ಲಿ ಬದುಕುವುದು ಹೇಗೆ? ನಮಗೆ ದೊರೆತ ವಸ್ತುವಿನ ಬೆಲೆಯನ್ನು ಅರಿಯುವುದು ಹೇಗೆ? ಅದಕ್ಕೊಂದು ಸುಲಭ ಸೂತ್ರ. ಪರಿಶ್ರಮಪಡಬೇಕು, ವಿಧಿ ಅಥವಾ ಭಗವಂತ ನೀಡಿದ್ದನ್ನು ಪ್ರಸಾದವೆಂದು ಸ್ವೀಕರಿಸಬೇಕು. ಆ ವರ ಬೇಕು, ಈ ವರ ಬೇಕು ಎಂಬ ತಳಮಳ ಬೇಡ. ಯಾಕೆಂದರೆ ಯಾವುದು ವರ, ಯಾವುದು ಶಾಪ ಎಂಬುದರ ಅರಿವು ನಮಗಿಲ್ಲ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !