ಶುಕ್ರವಾರ, ಏಪ್ರಿಲ್ 23, 2021
28 °C

ಬೆರಗಿನ ಬೆಳಕು | ತಪದಿಂದ ಮನದ ಶುದ್ಧತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮಗನಾಗಿ ಜನಿಸಿದ್ದ. ಅವನ ಹೆಸರು ಮಹಾಕಂಚನಕುಮಾರ. ಅವನಿಗೆ ಆರು ಜನ ತಮ್ಮಂದಿರು ಮತ್ತು ಒಬ್ಬ ತಂಗಿ ಜನಿಸಿದರು. ಎಲ್ಲ ಮಕ್ಕಳೂ ಸಕಲ ವಿದ್ಯೆಗಳನ್ನು ಪಡೆದರು. ಹಿರಿಯ ಮಗ ಮಹಾಕಂಚನಕುಮಾರನಿಗೆ ತಂದೆ-ತಾಯಿಯರು ಮದುವೆ ಮಾಡಬೇಕೆಂದು ಯೋಚಿಸಿದಾಗ ಆತ ಸ್ಪಷ್ಟವಾಗಿ ಹೇಳಿದ. ‘ನನಗೆ ಬದುಕಿನ ಯಾವ ಭೋಗದಲ್ಲೂ ಆಸಕ್ತಿ ಇಲ್ಲ. ನಾನು ಸನ್ಯಾಸವನ್ನು ತೆಗೆದುಕೊಳ್ಳುತ್ತೇನೆ’ ಎಂದ. ಇವನಂತೆಯೆ ಉಳಿದ ತಮ್ಮಂದಿರು ಹಾಗೂ ತಂಗಿ ಕೂಡ ಮದುವೆಯಾಗಲು ಒಪ್ಪಲಿಲ್ಲ. ಮುಂದೆ ತಂದೆ-ತಾಯಿಯರ ದೇಹಾಂತವಾದ ನಂತರ ಮಹಾಕಂಚನಕುಮಾರ ತಮ್ಮ ಎಲ್ಲ ಆಸ್ತಿಯನ್ನು ದಾನಮಾಡಿ, ತನ್ನ ಸೋದರರು, ಸೋದರಿ, ಒಬ್ಬ ಸೇವಕ, ಒಬ್ಬ ಸೇವಕಿ ಮತ್ತು ಒಬ್ಬ ಮಿತ್ರನನ್ನು ಕರೆದುಕೊಂಡು ಮಹಾಭಿನಿಷ್ಕ್ರಮಣ ಮಾಡಿ ಹಿಮಾಲಯದ ನಾಲ್ಕನೆ ಪರ್ವತಕ್ಕೆ ಬಂದು, ಸರೋವರದ ಪಕ್ಕ ಆಶ್ರಮ ಕಟ್ಟಿಕೊಂಡು ನೆಲೆಸಿದ.

ಮೊದಮೊದಲು ಕಾಡಿಗೆ, ಹಣ್ಣು ಹಂಪಲಗಳನ್ನು ತರಲು ಎಲ್ಲರೂ ಒಟ್ಟಾಗಿ ಹೋಗುತ್ತಿದ್ದರು. ಆಗ ಮಾತುಕತೆ, ಹರಟೆ ಬರುತ್ತಿತ್ತು. ಅದನ್ನು ಗಮನಿಸಿ ಮಹಾಕಂಚನ ತಪಸ್ವಿ ಹೇಳಿದ, ‘ನಾವೆಲ್ಲರೂ ಜೊತೆಯಾಗಿ ಹೋದಾಗ ಪ್ರಾಪಂಚಿಕ ಮಾತುಗಳು ಬರುತ್ತವೆ. ಆದ್ದರಿಂದ ನಾನೊಬ್ಬನೇ ಹೋಗಿ ಎಲ್ಲರಿಗೂ ಆಹಾರ ತರುತ್ತೇನೆ. ನೀವೆಲ್ಲ ನಿಮ್ಮ ನಿಮ್ಮ ಪರ್ಣಕುಟಿಗಳಲ್ಲಿ ಧ್ಯಾನ ಮಾಡಿ’. ಸಹೋದರರು ಹೇಳಿದರು, ‘ಆಚಾರ್ಯ, ನೀನು ನಮಗೆ ಮಾರ್ಗದರ್ಶಿ. ನೀನು ಮತ್ತು ಸಹೋದರಿ ಹಾಗೂ ಸೇವಕಿ ಆಶ್ರಮದಲ್ಲಿರಿ. ನಾವು ಹೋಗಿ ಎಲ್ಲರಿಗೂ ಆಹಾರ ತಂದು ಅವರವರ ಗುಡಿಸಲುಗಳ ಮುಂದೆ ಗಂಟೆ ಬಾರಿಸಿ ಇಟ್ಟು ಹೋಗುತ್ತೇವೆ. ಆಗ ಅನವಶ್ಯಕವಾದ ಮಾತುಗಳಿರುವುದಿಲ್ಲ’. ಇದನ್ನು ಎಲ್ಲರೂ ಒಪ್ಪಿದರು.

ಮರುದಿನದಿಂದ ಸಂಗ್ರಹವಾದ ಆಹಾರವನ್ನು ಸರಿಯಾದ ಭಾಗಗಳಲ್ಲಿ ಹಂಚಿ ಅವರವರ ಗುಡಿಸಲುಗಳ ಮುಂದೆ ಇಡುತ್ತಿದ್ದರು. ಇವರ ನಿಷ್ಠೆಯನ್ನು ಮತ್ತು ಅಪರಿಗ್ರಹ ಬುದ್ಧಿಯನ್ನು ಕಂಡು ಪರೀಕ್ಷೆ ಮಾಡಲು ಶಕ್ರ ಈ ಆಶ್ರಮಕ್ಕೆ ಬಂದು ಮಹಾಕಂಚನ ತಪಸ್ವಿಯ ಗುಡಿಸಲಿನ ಮುಂದೆ ಇಟ್ಟಿದ್ದ ಕಮಲದ ದಂಟುಗಳನ್ನು ತಿಂದುಬಿಟ್ಟ. ಗಂಟೆಯಾದ ಮೇಲೆ ತಪಸ್ವಿ ಹೊರಗೆ ಬಂದು ನೋಡಿದರೆ ಅವನ ಪಾಲಿನ ಆಹಾರವಿರಲಿಲ್ಲ. ಆತ ಮಾತನಾಡದೆ ಹಾಗೆಯೇ ಹೋದ. ಮರುದಿನ ಮತ್ತು ಅದರ ಮರುದಿನ ಕೂಡ ಹಾಗೆಯೇ ಆಯಿತು. ಅಂದು ಸಂಜೆ ತಪಸ್ವಿ ಗಂಟೆ ಬಾರಿಸಿದಾಗ ಎಲ್ಲರೂ ಸೇರಿದರು. ಆಗ ತಪಸ್ವಿ ಕೇಳಿದ, ‘ಕಳೆದ ಮೂರು ದಿನಗಳಿಂದ ನನ್ನ ಆಹಾರವನ್ನು ಇಡುವುದನ್ನು ಮರೆತಿರಾ?’ ಅವರೆಲ್ಲ, ‘ಇಲ್ಲ, ನಿತ್ಯವೂ, ಕಮಲದ ದಂಟುಗಳನ್ನು ಇಟ್ಟುಹೋಗಿದ್ದೇವೆ’ ಎಂದರು. ತಪಸ್ವಿ, ‘ಆದರೆ ನನಗೆ ಸಿಗಲಿಲ್ಲ. ಯಾರೋ ಅವುಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಏನು ಮಾಡಬೇಕು?’ ಎಂದು ಕೇಳಿದ. ಅಗ ಒಬ್ಬೊಬ್ಬರಾಗಿ ವಿವರಣೆ ನೀಡಿದರು.

ಪ್ರತಿಯೊಬ್ಬರೂ ಕದ್ದವನನ್ನು ತೆಗಳದೆ ಅವನಿಗೆ ಅತ್ಯಂತ ಒಳ್ಳೆಯದಾಗಲಿ, ಅವನಿಗೆ ಶ್ರೇಷ್ಠ ಸ್ಥಾನ ದೊರಕಲಿ, ಅವನಿಗೆ ಎಲ್ಲ ಸಂತೋಷ, ಸಮೃದ್ಧಿ ದೊರಕಲಿ ಎಂದೇ ಹಾರೈಸಿದರು. ಶಕ್ರ ಆಶ್ಚರ್ಯದಿಂದ ಪ್ರತ್ಯಕ್ಷನಾಗಿ, ‘ಕಮಲದ ದಂಟುಗಳನ್ನು ತಿಂದವನು ತಾನೇ, ಆದರೆ ನೀವು ಶಾಪ ಕೊಡುವುದರ ಬದಲು ಒಳ್ಳೆಯದನ್ನೇ ಬಯಸಲು ಕಾರಣವೇನು?’ ಎಂದು ಕೇಳಿದ. ಆಗ ತಪಸ್ವಿ ಹೇಳಿದ, ‘ತಪಸ್ಸಿನ ಉದ್ದೇಶವೇ ಮನಸ್ಸಿನ ಶುದ್ಧೀಕರಣ. ನಮ್ಮ ಬಾಯಿಯಿಂದ ಕೆಟ್ಟ ಪದಗಳು, ಶಾಪ ಬಂದರೆ ನಮ್ಮ ತಪಸ್ಸು ವ್ಯರ್ಥವಾದಂತೆ’. ಶಕ್ರ ಮೆಚ್ಚಿ, ಅವರನ್ನು ಹರಸಿ ಹೋದ.

ತಪಸ್ಸಿನ ಫಲ ಮೋಕ್ಷವಲ್ಲ, ಮನಸ್ಸಿನ ಶುದ್ಧತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು