ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದ ದಾರಿಯಲ್ಲಿಯ ತಡೆಗಳು

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮಗನಾಗಿ ಹುಟ್ಟಿದ್ದ. ಹದಿನಾರು ವರ್ಷಗಳಾಗುವುದರಲ್ಲಿ ಸಕಲಕಲೆಗಳಲ್ಲಿ ಪಾರಂಗತನಾದ. ತಂದೆಯ ನಿಧನದ ನಂತರ ತಾನೇ ಶ್ರೇಷ್ಠಿಯಾಗಿ ನಗರದಲ್ಲೆಲ್ಲ ಧರ್ಮಶಾಲೆಗಳನ್ನು ತೆರೆದು ಶೀಲವನ್ನು ಪಾಲಿಸುತ್ತ. ಸದಾಕಾಲ ದಾನಧರ್ಮಗಳನ್ನು ಮಾಡುತ್ತಿದ್ದ.

ಒಂದು ದಿನ ಬೆಳಿಗ್ಗೆ ಸೇವಕರು ಬೋಧಿಸತ್ವನಿಗಾಗಿ ಷಡ್ರಸಗಳ ರುಚಿಕರವಾದ ಭೋಜನವನ್ನು ತರುತ್ತಿದ್ದಾಗ, ಅದೇ ಸಮಯದಲ್ಲಿ ಒಂದು ವಾರದಿಂದ ಧ್ಯಾನದಲ್ಲಿದ್ದ ಮಹಾಸಾಧಕ ಬುದ್ಧನೊಬ್ಬ ಎಚ್ಚರಗೊಂಡು, ಇದು ಭಿಕ್ಷೆಯ ಸಮಯವೆಂದುಕೊಂಡು ಆಕಾಶ ಮಾರ್ಗದಿಂದ ಬೋಧಿಸತ್ವನ ಮನೆಯ ಮುಂದೆ ಬಂದು ನಿಂತ. ಬೋಧಿಸತ್ವ ಅವನನ್ನು ನೋಡುತ್ತಲೇ ಗೌರವದಿಂದ ಮೇಲೆದ್ದು ಸತ್ಕಾರ ಮಾಡಲೆಂದು ತೀರ್ಮಾನಿಸಿ ಸೇವಕನಿಗೆ ಹೇಳಿದ, ‘ಮನೆಯ ಮುಂದೆ ಬಂದಿರುವ ಮಹಾತ್ಮರ ಕೈಯಲ್ಲಿರುವ ಪಾತ್ರೆಯನ್ನು ತೆಗೆದುಕೊಂಡು ಬಾ’. ಅದೇ ಕ್ಷಣದಲ್ಲಿ ಪಾಪಿ ಮಾರ (ಬೌದ್ಧ ಪರಂಪರೆಯಲ್ಲಿ ಆತ ಒಬ್ಬ ಸೈತಾನ ಅಥವಾ ತಪ್ಪುದಾರಿಗೆ ಎಳೆಯುವವ) ಎದ್ದು ಬಂದ.

ಈ ಬುದ್ಧ ಏಳು ದಿನಗಳಿಂದ ಏನನ್ನೂ ತಿಂದಿಲ್ಲ. ಇವತ್ತು ಒಂದು ದಿನ ಊಟ ದೊರೆಯದಿದ್ದರೆ ಇವನು ಸತ್ತು ಹೋಗುತ್ತಾನೆ. ಶ್ರೇಷ್ಠಿ ದಾನ ಕೊಡದಂತೆ ವ್ಯವಸ್ಥೆ ಮಾಡಿ ಇವನನ್ನು ನಾಶಮಾಡುತ್ತೇನೆ, ಎಂದುಕೊಂಡು ಶ್ರೇಷ್ಠಿಯ ಮನೆಯ ಹೊಸ್ತಿಲ ಹೊರಗೆ ಎಂಬತ್ತು ಕೈ ಆಳದ ಬೆಂಕಿಯ ಹೊಂಡವನ್ನು ನಿರ್ಮಿಸಿದ. ಅದರಿಂದ ಮೇಲೆ ಚಿಮ್ಮುವ ಬೆಂಕಿ ಯಾರಿಗಾದರೂ ಹೆದರಿಕೆ ತರಿಸುವಂತಿತ್ತು. ಆಕಸ್ಮಿಕವಾದ ಈ ಬೆಂಕಿಯನ್ನು ಕಂಡ ಸೇವಕ ಗಾಬರಿಯಾಗಿ ಮರಳಿ ಓಡಿ ಬಂದ. ಉಳಿದ ಸೇವಕರು ಓಡಿ ಹೋದರು. ಸೇವಕ ಬಂದು ತನ್ನ ಗಾಬರಿಯ ಕಾರಣವನ್ನು ತಿಳಿಸಿದ.

ಪಾಪಿ ಮಾರ ಬುದ್ಧನಿಗೆ ತೊಂದರೆ ಕೊಡಲು ಹೀಗೆ ಮಾಡಿದ್ದಾನೆಂದು ಅರಿತು, ತನ್ನ ದಾನವನ್ನು ಬಿಡದಂತೆ ನಡೆಯುವ ಛಲದಿಂದ ಧರ್ಮವನ್ನು ನೆನೆದು ತನಗಾಗಿ ಬಡಿಸಿದ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಬೆಂಕಿಯಲ್ಲಿ ಕಾಲಿಟ್ಟು ನಡೆದ. ಕೂಡಲೇ ಆ ಎಂಬತ್ತು ಕೈ ಆಳದ ಬೆಂಕಿಯಿಂದ ಒಂದಾದ ಮೇಲೊಂದರಂತೆ ಆರು ಕಮಲಗಳು ಮೇಲೆದ್ದು ಅವನ ಪಾದಗಳು ಬೆಂಕಿಯಿಂದ ಸುಡದಂತೆ ಮಾಡಿದವು. ಏಳನೆಯ ಮಹಾ ಕಮಲ ಹೊರಬಂದು ಬೋಧಿಸತ್ವನ ಪಾದವನ್ನು ಮುಟ್ಟಿದಾಗ ಕಮಲದಿಂದ ಒಂದು ಕಮಂಡಲಿನಷ್ಟು ರೇಣು ಹೊರಬಂದು ಬೋಧಿಸತ್ವನ ತಲೆಯ ಮೇಲೆ ಸುರಿದಾಗ ಅವನ ದೇಹವೆಲ್ಲ ಬಂಗಾರಮಯವಾಗಿ ಹೊಳೆಯಿತು. ಅವನು ಆ ಪದ್ಮದ ಮೇಲೆ ನಿಂತುಕೊಂಡೇ ಮಹಾಸಾಧಕ ಬುದ್ಧನಿಗೆ ಭೋಜನವನ್ನು ನೀಡಿದ.

ಅದನ್ನು ತೃಪ್ತಿಯಿಂದ ಸ್ವೀಕರಿಸಿ ಮಹಾಸಾಧಕ ಬುದ್ಧ ತನ್ನ ಭಿಕ್ಷಾಪಾತ್ರೆಯನ್ನು ಆಕಾಶಕ್ಕೆ ಎಸೆದು ಜನರು ನೋಡುತ್ತಿರುವಂತೆ ತಾನೂ ಮೇಲಕ್ಕೆ ಚಿಮ್ಮಿ ಮೋಡಗಳನ್ನು ಸೀಳುತ್ತ ಹಿಮಾಲಯದೆಡೆಗೆ ಹಾರಿಹೋದ. ಮಾರ, ಪರಾಜಿತನಾಗಿ ದುಃಖದಿಂದ ತನ್ನ ಸ್ಥಾನಕ್ಕೆ ಮರಳಿದ. ಬೋಧಿಸತ್ವ ಕಮಲದಲ್ಲಿ ನಿಂತೇ ಜನರಿಗೆ ದಾನದ, ಧರ್ಮದ ಮಹತ್ವದ ಬಗ್ಗೆ ಬೋಧನೆ ಮಾಡಿದ. ಅವನು ಹೇಳಿದ ರೀತಿ ಜನರಲ್ಲಿ ಶ್ರದ್ಧೆಯನ್ನು ಕುದುರಿಸಿತು.

ಇದು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನ ಕಥೆ ಎಂಬುದು ನೆನಪಿನಲ್ಲಿರಬೇಕು. ಅಂದರೆ ಅಂದೂ ಕೂಡ ದಾನಧರ್ಮಗಳಿಗೆ ಅಡ್ಡಿ ಮಾಡುವವರು ಇದ್ದರು, ಇಂದೂ ಇದ್ದಾರೆ. ಅವರು ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿಯೇ ಇರುವಂತೆ ತೋರುತ್ತದೆ. ನಮಗಿಂದು ಬೋಧಿಸತ್ವನಂತೆ ಧರ್ಮದಲ್ಲಿ, ಶೀಲದಲ್ಲಿ ದೃಢತೆಯುಳ್ಳ ಕೆಲವಾದರೂ ನಾಯಕರ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT