ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಕಾಮನೆಗಳ ತ್ಯಾಗ

Last Updated 26 ಜೂನ್ 2020, 1:37 IST
ಅಕ್ಷರ ಗಾತ್ರ

ವಾರಾಣಸಿಯ ರಾಜ ಬ್ರಹ್ಮದತ್ತನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆತನ ಮರಣಾನಂತರ ಹಿರಿಯ ಮಗನಿಗೆ ಪಟ್ಟಾಭಿಷೇಕ ಮಾಡಲು ಮಂತ್ರಿಗಳು ಸೂಚಿಸಿದಾಗ ಆತ ತನಗೆ ರಾಜ್ಯ ಬೇಡವೆಂದು ಅರಮನೆ ತೊರೆದು ಹೊರಟುಬಿಟ್ಟ. ಆಗ ತಮ್ಮನನ್ನು ರಾಜನನ್ನಾಗಿ ಮಾಡಿದರು. ಅಣ್ಣ ಅಲ್ಲಿಂದ ಹೊರಟು ಗಡಿಪ್ರಾಂತ್ಯಕ್ಕೆ ಬಂದು ಒಬ್ಬ ಶ್ರೇಷ್ಠಿಯ ಮನೆಯಲ್ಲಿ ಕೆಲಸಕ್ಕೆ ನಿಂತ. ಕೆಲವು ತಿಂಗಳುಗಳ ನಂತರ ಆತ ರಾಜಕುಮಾರ ಎಂಬುದು ಜನರಿಗೆ ತಿಳಿಯತು. ಆಗ ಶ್ರೇಷ್ಠಿ ಹಾಗೂ ಸುತ್ತಲಿನ ಜನ ಅವನಿಗೆ ಬಹಳ ಮರ್ಯಾದೆಯನ್ನು ತೋರಿಸಿ ಹೊಗಳತೊಡಗಿದರು. ಒಮ್ಮೆ ಶ್ರೇಷ್ಠಿ, ‘ರಾಜಕುಮಾರರೆ, ನಾವು ತಮಗಾಗಿ ಏನೆಲ್ಲವನ್ನೂ ಮಾಡುತ್ತಿದ್ದೇವೆ. ತಾವು ದಯವಿಟ್ಟು ತಮ್ಮ ತಮ್ಮಂದಿರಾದ ರಾಜರಿಗೆ ಹೇಳಿ ತೆರಿಗೆ ವಿನಾಯತಿಯನ್ನು ಕೊಡಿಸಿ ಕೊಡಿ’ ಎಂದು ಬೇಡಿದ. ಅಣ್ಣ, ತಮ್ಮನಿಗೆ ಒಂದು ಪತ್ರ ಬರೆದು ವಿನಾಯತಿಯನ್ನು ಕೇಳಿದ. ಅಣ್ಣ ಹೇಳಿದ್ದಾನೆಂದುಕೊಂಡು ರಾಜ ಅವರಿಗೆ ವಿನಾಯತಿಯನ್ನು ನೀಡಿದ.

ಈಗ ಜನ ಅಣ್ಣನಿಗೆ ತೆರಿಗೆ ನೀಡತೊಡಗಿದರು. ಅವನಿಗೆ ಹಣದ, ಅಧಿಕಾರದ ಆಸೆ ಚಿಗುರತೊಡಗಿತು. ನಿಧಾನವಾಗಿ ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನರು ಇವನನ್ನೇ ರಾಜ ಎಂದು ಕರೆಯುತ್ತ ಹಣ ನೀಡತೊಡಗಿದರು. ನಿಜವಾಗಿಯೂ ಅಣ್ಣನಿಗೆ ಈಗ ಅಧಿಕಾರದ ಹುಚ್ಚು ಹತ್ತಿತು. ನೂರಾರು ಜನರನ್ನು ಕರೆದುಕೊಂಡು ವಾರಾಣಸಿಗೆ ಹೋಗಿ, ಊರ ಹೊರಗೆ ನಿಂತು, ‘ನೀನು ರಾಜ್ಯದ ಅರ್ಧವನ್ನು ನನಗೆ ಕೊಡುತ್ತೀಯೋ ಅಥವಾ ಯುದ್ಧ ಮಾಡುತ್ತೀಯೋ’ ಎಂದು ಸಂದೇಶ ಕಳುಹಿಸಿದ. ತಾನೇ ರಾಜ್ಯ ಬೇಡೆಂದು ಹೋದವನು ಈಗ ಯುದ್ಧಕ್ಕೆ ಬಂದಿದ್ದಾನಲ್ಲ, ನನಗೆ ರಾಜ್ಯವೇ ಬೇಡ ಅವನೇ ರಾಜನಾಗಲಿ ಎಂದು ಅಣ್ಣನಿಗೇ ರಾಜ್ಯವನ್ನು ವಹಿಸಿಕೊಟ್ಟುಬಿಟ್ಟ.

ಅಂದಿನಿಂದ ಅಣ್ಣನ ಅಧಿಕಾರ ಲಾಲಸೆ ತುಂಬ ಹೆಚ್ಚಾಗಿ ಬೇರೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡತೊಡಗಿದ. ರಾಜ್ಯದ ಎಲ್ಲ ಧರ್ಮಕಾರ್ಯಗಳನ್ನು ನಿಲ್ಲಿಸಿಬಿಟ್ಟ. ದೇಶ ಅನಾಯಕ ಮತ್ತು ಅಧಾರ್ಮಿಕವಾಗತೊಡಗಿತು. ಇದನ್ನು ಸ್ವರ್ಗಲೋಕದಲ್ಲಿದ್ದ ಶಕ್ರ ಗಮನಿಸಿದ. ಇವನಿಗೆ ಬುದ್ಧಿ ಕಲಿಸಬೇಕೆಂದು ಭೂಮಿಗೆ ಬಂದ. ಒಬ್ಬ ಬ್ರಹ್ಮಚಾರಿಯ ವೇಷದಲ್ಲಿ ರಾಜನ ಕಡೆಗೆ ಬಂದು ಹೇಳಿದ, ‘ರಾಜ, ನಿನಗೆ ರಾಜ್ಯ ವಿಸ್ತಾರವಾಗಬೇಕು, ಅಧಿಕ ಹಣ ಬೇಕು ತಾನೇ? ನನಗೆ ಮೂರು ರಾಜ್ಯಗಳು ಗೊತ್ತು. ಅವುಗಳಷ್ಟು ಶ್ರೀಮಂತವಾದ ರಾಜ್ಯಗಳಿಲ್ಲ. ನಿನಗೆ ಮನಸ್ಸಿದ್ದರೆ ನಾನು ಅವುಗಳನ್ನು ನಿನಗೆ ಕೊಡಿಸಿಬಿಡುತ್ತೇನೆ’ ರಾಜನ ಬಾಯಿಯಲ್ಲಿ ನೀರೂರಿತು. ತಕ್ಷಣವೇ ಆತ ಸಿದ್ಧನಾದ. ನಾಳೆ ಬರುತ್ತೇನೆಂದು ಹೋದ ಬ್ರಹ್ಮಚಾರಿ ಬರಲೇ ಇಲ್ಲ.

ರಾಜನಿಗೆ ಸಂಕಟ ಶುರುವಾಯಿತು. ಅತಿಯಾದ ಆಸೆ ಅವನ ಆರೋಗ್ಯವನ್ನು ಹದಗೆಡಿಸಿತು. ವೈದ್ಯರು ಹತಾಶರಾದರು. ಇನ್ನು ಆತ ಬದುಕಲಾರ ಎಂಬ ತೀರ್ಮಾನಕ್ಕೆ ಬಂದರು. ಆಗ ಬೋಧಿಸತ್ವ ಅಲ್ಲಿಗೆ ಬಂದು ರಾಜನನ್ನು ಕಂಡು ಮಾತನಾಡಿಸಿದ, ‘ರಾಜ, ನೀನು ಚಿಂತಿಸಿದರೆ ಆ ರಾಜ್ಯಗಳು ದೊರೆಯಲು ಸಾಧ್ಯವೇ? ಇಲ್ಲ. ನೀನು ಒಂದರ ಮೇಲೊಂದರಂತೆ ಮೂರು ಬಟ್ಟೆಗಳನ್ನು ಹಾಕಿಕೊಳ್ಳುತ್ತೀಯಾ? ಇಲ್ಲ. ನೀನು ಎಷ್ಟು ಗಳಿಸಿದರೂ ನಿನ್ನ ಅವಶ್ಯಕತೆಗಳಿಗಿಂತ ಹೆಚ್ಚಾಗಿ ಬಳಸಲಾರೆ. ತೃಷ್ಣೆ ಬಲಿತಾಗ ಬದುಕೇ ನರಕವಾಗುತ್ತದೆ. ಸಮಸ್ತ ಸುಖ ಬೇಕಾದರೆ ಸಮಸ್ತ ಕಾಮನೆಗಳನ್ನು ತ್ಯಜಿಸಬೇಕು. ಕಾಮಾಪೇಕ್ಷೆಯಿಂದ ಕಾಮ ಹೆಚ್ಚುತ್ತದೆ’. ಹೀಗೆ ನಿಧಾನವಾಗಿ ಬೋಧಿಸುತ್ತ ಅವನನ್ನು ಧರ್ಮಮಾರ್ಗಿಯನ್ನಾಗಿಸಿದ.

ಕಾಮದಿಂದ ಕಾಮಾಪೇಕ್ಷೆಯನ್ನು ಗೆಲ್ಲುವುದು ಬೆಂಕಿಗೆ ತುಪ್ಪ ಸುರಿದು ನಂದಿಸಲು ಪ್ರಯತ್ನಿಸಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT