ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನ ಕಥೆಯ ನೆರಳು

Last Updated 3 ಜುಲೈ 2018, 20:16 IST
ಅಕ್ಷರ ಗಾತ್ರ

ವಾರಾಣಸಿಯ ರಾಜನಾದ ಬ್ರಹ್ಮದತ್ತ ಒಮ್ಮೆ ಬೇಟೆಗೆಂದು ಕಾಡಿಗೆ ಹೋದ. ಆಗ ಅಲ್ಲಿ ಮಧುರವಾಗಿ ಹಾಡುತ್ತ ಒಣಕಟ್ಟಿಗೆಗಳನ್ನು ಆರಿಸುತ್ತಿದ್ದ ಸುಂದರ ಯುವತಿಯನ್ನು ಕಂಡ. ಅವಳಲ್ಲಿ ಅನುರಕ್ತನಾಗಿ ಅಲ್ಲಿಯೇ ಉಳಿದುಬಿಟ್ಟ.

ಸ್ವಲ್ಪ ದಿನಗಳಲ್ಲಿ ಆಕೆ ಗರ್ಭಿಣಿ ಎಂದು ಆತನಿಗೆ ತಿಳಿಯಿತು. ರಾಜ ಬ್ರಹ್ಮದತ್ತ ಆ ಸ್ತ್ರೀಗೆ ತನ್ನ ಉಂಗುರವನ್ನು ಕೊಟ್ಟು ಹೇಳಿದ, “ನಿನಗೆ ಹೆಣ್ಣು ಮಗುವಾದರೆ ಈ ಉಂಗುರವನ್ನು ಬಿಸಾಕಿಬಿಡು. ನಿನ್ನ ಮಗಳನ್ನು ನೀನೇ ಕಾಪಾಡು. ಅದಕ್ಕೆ ಬೇಕಾದ ಸಹಾಯವನ್ನು ಅರಮನೆಯಿಂದ ಪಡೆದುಕೋ. ಗಂಡುಮಗುವಾದರೆ ಅವನನ್ನು ಕರೆದುಕೊಂಡು ಅರಮನೆಗೆ ಬಾ, ಗುರುತಿನ ಈ ಉಂಗುರವನ್ನು ಮರೆಯದೆ ತಾ” ಎಂದು ರಾಜ ವಾರಾಣಸಿಗೆ ಮರಳಿ ಬಂದ.

ಕೆಲತಿಂಗಳುಗಳ ನಂತರ ಆಕೆ ಸುಂದರವಾದ ಗಂಡುಮಗುವಿಗೆ ಜನ್ಮವಿತ್ತಳು. ಅವನ ಲಾಲನೆ ಪೋಷಣೆಯಲ್ಲಿ ರಾಜನ ಅರಮನೆಗೆ ಹೋಗುವುದನ್ನೇ ಮರೆತಳು. ಬಾಲಕ ಬೋಧಿಸತ್ವ ಸ್ನೇಹಿತರೊಡನೆ ಆಟವಾಡುವಾಗ ಉಳಿದ ಮಕ್ಕಳು ತಮ್ಮ ತಂದೆಯ ಬಗ್ಗೆ ಹೇಳಿಕೊಳ್ಳುವುದನ್ನು, ತನ್ನನ್ನು ತಂದೆ ಇಲ್ಲದವನೆಂದು ಹೀಯಾಳಿಸುವುದನ್ನು ತಾಳಲಾರದೆ ಬಂದು ತಾಯಿಯನ್ನು ಕೇಳಿದ, “ಅಮ್ಮ ನನ್ನ ತಂದೆ ಯಾರು ? ಎಲ್ಲಿದ್ದಾರೆ”. ಆಕೆ, “ಮಗೂ, ನೀನು ಸಾಮಾನ್ಯನಲ್ಲ, ನಿನ್ನ ತಂದೆ ವಾರಾಣಸಿಯ ರಾಜ” ಎಂದಳು.

“ಅಮ್ಮ, ಅದಕ್ಕೇನಾದರೂ ಸಾಕ್ಷಿ ಇದೆಯಾ?”

“ಮಗು ರಾಜರು ನನಗೆ ಹೇಳಿದ್ದರು. ಗಂಡುಮಗುವಾದರೆ ಉಂಗುರದ ಜೊತೆಗೆ ಅವನನ್ನು ಕರೆದುಕೊಂಡು ಬಾ ಎಂದು ಹೇಳಿದ್ದರು. ಆದರೆ ನಾನೇ ಇದುವರೆಗೂ ಅದನ್ನು ಮರೆತುಬಿಟ್ಟಿದ್ದೆ” ಎಂದು ರಾಜ ಕೊಟ್ಟ ಉಂಗುರವನ್ನು ತೋರಿಸಿದಳು. ತಂದೆಯ ಬಳಿ ಹೋಗೋಣ ನಡೆ ಎಂದು ಬೋಧಿಸತ್ವ ಒತ್ತಾಯಪಡಿಸಿದ.

ಮರುದಿನ ತಾಯಿ ಮಗನನ್ನು ಕರೆದುಕೊಂಡು ವಾರಾಣಸಿಗೆ ಬಂದು ಅರಮನೆಯನ್ನು ಸೇರಿದಳು. ರಾಜದ್ವಾರದಲ್ಲಿ ಸೇವಕರಿಗೆ ತನ್ನ ಪರಿಚಯ ಹೇಳಿಕೊಂಡು ಉಂಗುರವನ್ನು ತೋರಿಸಿದಳು. ರಾಜ ಮಹಿಳೆ ಮತ್ತು ಮಗುವನ್ನು ದರ್ಬಾರಿಗೆ ಕರೆಸಿದ. ಆಕೆ ರಾಜನಿಗೆ ನಮಸ್ಕಾರ ಮಾಡಿ, “ಪ್ರಭೂ, ಈತ ತಮ್ಮ ಮಗ” ಎಂದಳು.

ರಾಜ ಆಕೆಯನ್ನು ಗುರುತಿಸಿದರೂ, ಕಾಡುಸ್ತ್ರೀಯೊಂದಿಗೆ ಸಹವಾಸ ಮಾಡಿದ್ದಕ್ಕೆ ಸಭಿಕರು ಏನೆಂದುಕೊಂಡಾರು ಎಂಬ ಭಯದಿಂದ, “ನೀನು ಯಾರೊ ಗೊತ್ತಿಲ್ಲ, ಇವನು ನನ್ನ ಪುತ್ರನಲ್ಲ” ಎಂದುಬಿಟ್ಟ. ಆಕೆ, ಪ್ರಭೂ, ಇದು ನೀವು ಕೊಟ್ಟ ಪರಿಚಯದ ಉಂಗುರ. ಇದನ್ನು ಗುರುತಿಸುತ್ತೀರಾ?” ಎಂದು ಕೇಳಿದಳು. ಆತ ಸಂದಿಗ್ಧತೆಯಿಂದ ಪಾರಾಗಲು, “ಈ ಉಂಗುರವೂ ನನ್ನದಲ್ಲ” ಎಂದ.

ಆಕೆ ದು:ಖಿತಳಾಗಿ, “ಮಹಾರಾಜಾ, ನನಗಿನ್ನು ಪುಣ್ಯಪ್ರಮಾಣದ ವಿನ: ಬೇರೆ ಯಾವ ಸಾಕ್ಷಿಯೂ ಇಲ್ಲ. ಈತ ನಿಮ್ಮ ಮಗನೇ ಆಗಿದ್ದಲ್ಲಿ ಆಕಾಶದಲ್ಲಿ ನಿಲ್ಲಲಿ, ಇಲ್ಲದಿದ್ದರೆ ಕೆಳಗೆ ಬಿದ್ದು ಸತ್ತು ಹೋಗಲಿ” ಎಂದು ಮಗುವಿನ ಕಾಲು ಹಿಡಿದು ಗರಗರನೆ ತಿರುವಿ ಆಕಾಶಕ್ಕೆ ಎಸೆದು ಬಿಟ್ಟಳು. ಆ ಬಾಲಕ ಪದ್ಮಾಸನ ಹಾಕಿಕೊಂಡು ಗಾಳಿಯಲ್ಲಿ ತೇಲುತ್ತ, “ರಾಜಾ, ನೀನು ಸಕಲಪ್ರಜೆಗಳಿಗೂ ತಂದೆಯಾಗಿದ್ದವನು, ಮಗನಿಗೆ ತಂದೆಯಾಗಲು ಯಾಕೆ ನಾಚುತ್ತೀ?” ಎಂದ.

ರಾಜನಿಗೆ ಅರಿವು ಬಂದು, “ಬಾ ಮಗೂ, ನೀನೇ ನನ್ನ ಪುತ್ರ” ಎಂದು ಅವನನ್ನು ಹಿಡಿದುಕೊಂಡು ಕೆಳಗಿಳಿಸಿ ನಂತರ ಯುವರಾಜನನ್ನಾಗಿ ಮಾಡಿದ, ಮಹಿಳೆಯನ್ನು ರಾಣಿಯನ್ನಾಗಿ ಸ್ವೀಕರಿಸಿದ.

ಈ ಕಥೆಯಲ್ಲಿ ಶಕುಂತಲೆಯ ಕಥೆಯ ನೆರಳು ಕಾಣುವುದಿಲ್ಲವೇ. ಅಲ್ಲಿ ದುಷ್ಯಂತ ಮರೆತಿದ್ದರೆ, ಇಲ್ಲಿ ನಾಟಕವಾಡಿದ್ದ. ಎರಡೂ ಕಡೆಗೂ ರಾಜನಿಗೆ ಹೆಂಡತಿಯಿಂದ, ಮಗನಿಂದ ಜ್ಞಾನೋದಯವಾಗಿತ್ತು. ಜ್ಞಾನದ ಮೂಲ ಯಾವುದೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT