ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕರಗುವ ಮೆರಗುಗಳು

Last Updated 1 ಜೂನ್ 2020, 19:45 IST
ಅಕ್ಷರ ಗಾತ್ರ

ಹಿಂದೆ ಸುರಂಧನ ನಗರದ ರಾಜನಿಗೆ ಮಕ್ಕಳಿರಲಿಲ್ಲ. ದಂಪತಿಗಳು ಅನೇಕ ವೃತಗಳನ್ನು, ಸೇವೆಯನ್ನು ಮಾಡಿ ನಿರಾಶರಾಗಿದ್ದರು. ಒಂದು ಬಾರಿ ಒಬ್ಬ ಮಹಾತ್ಮರ ಮಾರ್ಗದರ್ಶನದಂತೆ ಇಬ್ಬರೂ ಬ್ರಹ್ಮನ ಪೂಜೆ ಮಾಡಿದರು. ಬ್ರಹ್ಮನ ಕೃಪೆಯಿಂದ, ಬ್ರಹ್ಮಲೋಕದಿಂದ ಬೋಧಿಸತ್ವ ಕೆಳಗಿಳಿದು ಬಂದು ರಾಣಿಯ ಗರ್ಭವನ್ನು ಸೇರಿಕೊಂಡ. ಅವನು ಹುಟ್ಟಿದಾಗ ಇಡೀ ರಾಜ್ಯಕ್ಕೆ ಸಂತೋಷವಾಯಿತು.

ಅವನಿಗೆ ಉದಯ-ಭದ್ರ ಎಂದು ಹೆಸರಿಟ್ಟರು. ಉದಯ-ಭದ್ರನಿಗೆ ನಾಲ್ಕು ವರ್ಷವಾಗಿದ್ದಾಗ ಬ್ರಹ್ಮಲೋಕದ ಮತ್ತೊಂದು ಜೀವ, ರಾಜನ ಮತ್ತೊಬ್ಬ ರಾಣಿಯ ಗರ್ಭದಲ್ಲಿ ಇಳಿಯಿತು. ಆಗ ಹುಟ್ಟಿದ ಹೆಣ್ಣು ಮಗುವಿಗೆ ಉದಯ-ಭದ್ರೆ ಎಂದು ಹೆಸರಿಟ್ಟರು. ಉದಯ–ಭದ್ರ ಹುಟ್ಟಿನಿಂದಲೇ ಮುಕ್ತನಾದಂತಿದ್ದ. ಅವರ ಬಳಿ ಕಾಮದ ವಿಚಾರಗಳು ಸುಳಿಯುತ್ತಲೂ ಇರಲಿಲ್ಲ. ಆತ ತನಗೆ ಮದುವೆ ಬೇಡ, ಅಧಿಕಾರ ಬೇಡ ಎನ್ನುತ್ತಿದ್ದ. ಇದು ಒಂದು ದೊಡ್ಡ ಸಮಸ್ಯೆಯಾಯಿತು ರಾಜನಿಗೆ. ಎಲ್ಲ ಹಿರಿಯರೂ ಮದುವೆಗೆಂದು ತುಂಬ ಕಾಡಿದಾಗ ಉದಯ-ಭದ್ರ ಒಂದು ಅತ್ಯಂತ ಸುಂದರವಾದ ಚಿನ್ನದ ಸ್ತ್ರೀ ಮೂರ್ತಿಯನ್ನು ಮಾಡಿ, ಇಂತಹ ತರುಣಿ ಸಿಕ್ಕರೆ ಮದುವೆಯಾಗುತ್ತೇನೆ ಎಂದ. ಇಡೀ ಜಂಬೂದ್ವೀಪದಲ್ಲಿ ಅಂತಹ ಹುಡುಗಿ ದೊರೆಯಲಿಲ್ಲ. ಅರಮನೆಯ ಹೆಂಗಸರು ಉದಯ-ಭದ್ರೆಗೆ ಚೆನ್ನಾಗಿ ಅಲಂಕಾರ ಮಾಡಿ ಚಿನ್ನದ ವಿಗ್ರಹದ ಬಳಿ ತಂದಾಗ ಆಕೆಯೇ ವಿಗ್ರಹಕ್ಕಿಂತ ಸುಂದರವಾಗಿದ್ದಾಳೆ ಎಂದು ತೀರ್ಮಾನಿಸಿದರು. ಆಕೆ ಕೂಡ ಜನ್ಮತಃ ಸನ್ಯಾಸಿನಿಯಂತೆಯೇ ಇದ್ದವಳು. ಹಿರಿಯರೆಲ್ಲ ಒತ್ತಾಯ ಮಾಡಿ, ಉದಯ-ಭದ್ರನನ್ನು ರಾಜನನ್ನಾಗಿ ಮಾಡಿ, ಉದಯ ಭದ್ರೆಯನ್ನು ಪಟ್ಟ ಮಹಿಷಿಯನ್ನಾಗಿ ನೇಮಿಸಿದರು.

ಇಬ್ಬರೂ ಚೆನ್ನಾಗಿ ರಾಜ್ಯಭಾರ ಮಾಡಿದರು. ಒಂದೇ ಮನೆಯಲ್ಲಿ ಇದ್ದರೂ ಇಂದ್ರಿಯಗಳನ್ನು ಚಂಚಲಗೊಳಿಸಿಕೊಳ್ಳಲಿಲ್ಲ. ಸನ್ಯಾಸಿಗಳಂತೆಯೇ ಬದುಕಿದರು. ತಮ್ಮಿಬ್ಬರಲ್ಲಿ ಯಾರು ಮೊದಲು ಸಾಯುತ್ತಾರೋ ಅವರು ಮುಂದೆ ತಾವು ಏನಾಗಿ ಹುಟ್ಟುತ್ತಾರೆಂಬುದನ್ನು ಇನ್ನೊಬ್ಬರಿಗೆ ಬಂದು ತಿಳಿಸಬೇಕು ಎಂದು ಒಪ್ಪಂದ ಮಾಡಿಕೊಂಡರು. ಏಳು ವರ್ಷಗಳ ನಂತರ ಉದಯ-ಭದ್ರ ಮರಣ ಹೊಂದಿದ. ತಾನು ಮಾಡಿದ ಉತ್ತಮ ಕರ್ಮಗಳ ಫಲವಾಗಿ ತೃಯೋತ್ರಿಂಶ ಭವನದಲ್ಲಿ ಶಕ್ರನಾದ. ದೇವತೆಗಳ ಲೆಕ್ಕದಲ್ಲಿ ಕೆಲದಿನಗಳನ್ನು ಕಳೆದು, ಒಪ್ಪಂದದಂತೆ ತನ್ನ ಸ್ಥಾನವನ್ನು ಉದಯ-ಭದ್ರೆಗೆ ತಿಳಿಸಲು ಭೂಮಿಗೆ ಬಂದು ಅರಮನೆ ಸೇರಿದ. ಏಳು ಅಂತಸ್ತಿನ ಅರಮನೆಯಲ್ಲಿ, ಸುತ್ತಲೂ ಜಾಗೃತರಾದ ಕಾವಲುಗಾರರಿದ್ದಾಗ ಮಾಯದಿಂದ ಉದಯ-ಭದ್ರೆಯ ಕೋಣೆಯನ್ನು ಸೇರಿದ.

ಆಕೆ ಸ್ಥಿರಮನಸ್ಸಿನಿಂದ ಶೀಲವನ್ನೇ ಚಿಂತಿಸುತ್ತಿದ್ದಳು. ಈತ, ‘ಹೇ ಸುಂದರಿ, ಇಷ್ಟು ಸುಂದರಳಾದ ನೀನು ತಾರುಣ್ಯವನ್ನು ವ್ಯರ್ಥಗೊಳಿಸುತ್ತಿರುವೆ. ಇದೋ, ನಿನಗೆ ಬೇಕಾದ ಎಲ್ಲ ಭೋಗ ಭಾಗ್ಯಗಳನ್ನು ಕೊಡಲು ನಾನು ಯಕ್ಷಲೋಕದಿಂದ ಬಂದಿದ್ದೇನೆ. ಕೇಳಿಕೋ’ ಎಂದ. ಆಕೆ, ‘ಯಕ್ಷ, ನನಗೆ ಯಾವ ಭೋಗ–ಭಾಗ್ಯಗಳೂ ಬೇಕಿಲ್ಲ. ಈ ಅರಮನೆ, ಅಧಿಕಾರ ಯಾವುದೂ ಬೇಡ. ಶೀಲವೊಂದೇ ಪರಮ ವಸ್ತು, ಅದನ್ನು ಚಿಂತಿಸುತ್ತೇನೆ. ನೀನು ಹೊರಡು’ ಎಂದಳು. ಆಗ ಶಕ್ರ ತನ್ನ ನಿಜರೂಪದಲ್ಲಿ ನಿಂತು, ಒಪ್ಪಂದದಂತೆ ತಾನು ಶಕ್ರನಾದದ್ದನ್ನು ತಿಳಿಸಿ. ‘ಎಂದಿಗೂ ಧರ್ಮವನ್ನು ಬಿಡಬೇಡ. ಉಳಿದ ಯೌವನ, ಅಧಿಕಾರ, ಹಣ ಯಾವುದೂ ಸ್ಥಿರವಲ್ಲ’ ಎಂದು ಹೇಳಿ ಮಾಯವಾದ. ಆಕೆ ಅದೇ ಪಥವನ್ನು ಅನುಸರಿಸಿದಳು. ಧರ್ಮ ಸದಾಕಾಲ ಕಾಪಾಡುತ್ತದೆ, ಉಳಿದ ಮೆರಗುಗಳು ಬೇಗ ಕರಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT