ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸೇವಕನ ಕರ್ತವ್ಯ

Last Updated 29 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮರಣಶಯ್ಯೆಯದೆಂದು ತಿಳಿದೊಡಂ
ರೋಗಿಯನು|
ಹರಣಮಿರುವನ್ನೆಗಂ ಪರಿಚರಿಸುವಂತೆ ||
ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ |
ಚರಿಸು ನೀನಾಳಾಗಿ – ಮಂಕುತಿಮ್ಮ || 401 ||

ಪದ-ಅರ್ಥ: ಮರಣಶಯ್ಯೆಯದೆಂದು= ಮರಣಶಯ್ಯೆ+ ಅದು+ ಎಂದು, ಹರಣಮಿರುವನ್ನೆಗಂ= ಹರಣ (ಪ್ರಾಣ)+ ಇರುವ+ಅನ್ನೆಗಂ (ಅಲ್ಲಿಯವರೆಗೆ), ಪರಿಚರಿಸು= ಉಪಚಾರಮಾಡು, ಲೋಕವಾದೊಡಮದುಳ್ಳನಕ= ಲೋಕ+ ಆದೊಡೆ+ ಅದು+ ಉಳ್ಳನಕ (ಇರುವವರೆಗೆ), ಚರಿಸು= ತೊಡಗಿಕೊ, ನಡೆಸು.

ವಾಚ್ಯಾರ್ಥ: ರೋಗಿ ಮೃತ್ಯುಮುಖದಲ್ಲಿರುವನೆಂಬುದನ್ನು ತಿಳಿದರೂ, ಪ್ರಾಣ ಇರುವವರೆಗೆ ಅವನನ್ನು ಉಪಚರಿಸುವಂತೆ, ಈ ಲೋಕ ಸ್ಥಿರವಲ್ಲವಾದರೂ, ಅದು ಇರುವತನಕ ಅದರ ಆಳಾಗಿ ನೀನು ತೊಡಗಿಕೊ.

ವಿವರಣೆ: ಅವರೊಬ್ಬ ನೇತಾರರು, ಅತ್ಯಂತ ಜನಪ್ರಿಯ ನೇತಾರರು. ಅವರಿಗೆ ಅನಾರೋಗ್ಯವಾಯಿತು. ಅವರನ್ನು ಅತ್ಯಂತ ಪ್ರತಿಷ್ಠಿತವಾದ ಆಸ್ಪತ್ರೆಗೆ ಸೇರಿದರು. ತೀವ್ರನಿಗಾ ಘಟಕದಲ್ಲಿ ಅವರ ಚಿಕಿತ್ಸೆ ನಡೆಯಿತು. ಆದರೂ ಆರೋಗ್ಯ ಸುಧಾರಿಸಿದಂತೆ ಕಾಣಲಿಲ್ಲ. ಭಾರತದ ಮೂಲೆ ಮೂಲೆಗಳಿಂದ ಅತ್ಯಂತ ಪರಿಣಿತರಾದ ವೈದ್ಯರು ಬಂದರು, ದೊರೆಯಬಹುದಾದ ಸರ್ವಪ್ರಯತ್ನಗಳನ್ನು ಮಾಡಿದರು. ಎರಡು ತಿಂಗಳುಗಳವರೆಗೆ ಆ ನೇತಾರರಿಗೆ ಎಚ್ಚರ ಬರಲೇ ಇಲ್ಲ. ಅವರು ಉಸಿರಾಡುತ್ತಿದ್ದುದು ಯಂತ್ರಗಳ ಮೂಲಕವೇ. ಆದರೂ ಅವರನ್ನು ಉಳಿಸಿಕೊಳ್ಳುವ ಯತ್ನ ನಡೆದೇ ಇತ್ತು. ವಿಧಿಯಪಾಶ ಯಂತ್ರಗಳ ಶಕ್ತಿಯನ್ನು ಮೀರಿದಾಗ ಬಾಹ್ಯ ಪ್ರಯತ್ನ ನಿಂತಿತು. ಆದರೆ ಕೊನೆಯ ಕ್ಷಣದವರೆಗೆ ಅವರನ್ನು ಬದುಕಿಸಿಕೊಳ್ಳುವ ಉಜ್ಜುಗ ನಿಲ್ಲಲಿಲ್ಲ. ಇದು ಬರೀ ನೇತಾರರಿಗೆ ಮಾತ್ರವಲ್ಲ. ಅಂತ:ಕರಣವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅವರ ಪ್ರೀತಿಪಾತ್ರರು ಮಾಡುವ ಪ್ರಯತ್ನ.

ಜೀವವಿರುವವರೆಗೆ ಅದನ್ನು ಉಳಿಸಿಕೊಳ್ಳಲು ಹೆಣಗುವುದೇ ಸರಿಯಾದ ದಾರಿ. ಮನುಷ್ಯ ದೇಹದಂತೆಯೇ ಈ ಲೋಕವೂ ಸ್ಥಿರವಲ್ಲ.
ಅದು ಸದಾಕಾಲದ ವಿಕಾರಕ್ಕೆ, ನಾಶಕ್ಕೆಒಳಪಡುವಂತಹದು. ಒಂದು ದೇಹವನ್ನೇ ಉಳಿಸಿಕೊಳ್ಳಲು ಸಕಲ ಪ್ರಯತ್ನಮಾಡುವ ನಾವು ಈ ಅಸ್ಥಿರವಾದ ಲೋಕದಲ್ಲಿ ಹೇಗಿರಬೇಕು, ಏನು ಮಾಡಬೇಕು? ನಾವು ಇರುವವರೆಗೆ ಈ ಲೋಕ ಇದ್ದೇ ಇದೆ. ಆದ್ದರಿಂದ ಲೋಕ ನಶ್ವರವೆಂದು ತಿಳಿದವರು ಹೇಳಿದರೂ, ನನ್ನ ಮಟ್ಟಿಗೆ, ನಾನಿರುವ ಕ್ಷಣದವರೆಗೆ ಅದು ಸತ್ಯವೇ. ಈ ಪ್ರಪಂಚದಲ್ಲಿ ಕೊಳಕಿದೆ, ಕೆಡಕಿದೆ. ಅದೆಲ್ಲ ಸರಿ. ಆದರೆ ನಮಗಿರುವುದು ಇದೊಂದೇ ತಾನೇ? ಅದನ್ನು ಬಿಟ್ಟು ಬೇರೆ ಪ್ರಪಂಚವಿಲ್ಲ. ಆದ್ದರಿಂದ ನಾವು ಪ್ರಪಂಚದ ಒಬ್ಬ ಪ್ರಾಮಾಣಿಕ ಸೇವಕ ಎಂದುಕೊಂಡು, ನಮ್ಮ ಸಮಸ್ತ ಶಕ್ತಿ, ಜ್ಞಾನ, ಯುಕ್ತಿಗಳನ್ನು ಹಾಕಿ ಅದರ ಏಳ್ಗೆಗೆ ಶ್ರಮಿಸುವುದೇ ನಮಗೆ ಸರಿಯಾದ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT