ಗುರುವಾರ , ಜನವರಿ 28, 2021
27 °C

ಬೆರಗಿನ ಬೆಳಕು: ನಮಗಿಲ್ಲದ ಅಧಿಕಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ |
ಎದೆಯುಬ್ಬೆಗವನೊಂದಿ ಕುದಿಯುತ್ತಿಹುದೇಕೋ? ||
ಅಧಿಕಾರಪಟ್ಟವನು ನಿನಗಾರು ಕಟ್ಟಿಹರು ? |
ವಿಧಿಯ ಮೇಸ್ತ್ರಿಯೆ ನೀನು ? – ಮಂಕುತಿಮ್ಮ ||358 ||

ಪದ-ಅರ್ಥ: ನಡೆಯಲಿಲ್ಲವದು=ನಡೆಯಲಿಲ್ಲ+ಅದು, ಎದೆಯುಬ್ಬೆಗವನೊಂದಿ=ಎದೆ+ಉಬ್ಬೆಗವನು (ಉದ್ವೇಗವನ್ನು)+ಹೊಂದಿ, ಕುದಿಯುತಿಹುದೇಕೋ=ಕುದಿಯುತ+ಇಹುದು+ಏಕೋ

ವಾಚ್ಯಾರ್ಥ: ಇದು ನಡೆಯಲಿಲ್ಲ, ಅದು ನಿಂತು ಹೋಯಿತು ಎನ್ನುತ್ತ ಎದೆಗೆ ಉಬ್ಬಸವನ್ನು ತಂದುಕೊಂಡು, ಕುದಿಯುವುದು ಏಕೆ? ಎಲ್ಲ ಕೆಲಸಗಳನ್ನು ನಿರ್ವಹಿಸುವ ಆಧಿಕಾರವನ್ನು ನಿನಗೆ ಯಾರು ಕೊಟ್ಟವರು? ನೀನು ವಿಧಿ ನಿಯಮಿಸಿದ ಮೇಸ್ತ್ರಿಯೇ?

ವಿವರಣೆ: ಪ್ರಪಂಚದಲ್ಲಿ ಲೋಕ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ನಮಗೆ ಕೆಲವು ಬೇಕಾದವುಗಳು, ಮತ್ತೆ ಕೆಲವು ನಮಗಿಷ್ಟವಿಲ್ಲದವು. ಅವು ನಡೆಯುತ್ತವೆ ಎಂಬುದನ್ನು ನೋಡಬಹುದೇ ವಿನಃ ಅವುಗಳನ್ನು ತಪ್ಪಿಸುವ, ಬದಲಾಯಿಸುವ ಶಕ್ತಿ ನಮಗಿಲ್ಲ.

1588 ರಲ್ಲಿ ಡಚ್ ಸರ್ಕಾರ ಒಂದು ತಾಮ್ರದ ಸ್ಮರಣಿಕೆಯನ್ನು ಹೊರತಂದರು. ಅದು ಇಂಗ್ಲೆಂಡಿನಲ್ಲಿ ಪ್ರೊಟೆಸ್ಟಂಟ್‌ರು ಕ್ಯಾಥೋಲಿಕ್‌ನವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ತಂದದ್ದು. ಆ ಸ್ಮರಣಿಕೆಯ ಮೇಲೆ, ‍‘ಮ್ಯಾನ್ ಪ್ರೊಪೋನಿತ್, ಡ್ಯೂಸ್ ಡಿಸ್ಪೊನಿತ್’ ಎಂದು ಬರೆಯಲಾಗಿದೆ. ಅದರರ್ಥ ಮನುಷ್ಯ ಅಪೇಕ್ಷಿಸಿದ್ದನ್ನು ದೇವರು ಕರುಣಿಸಲಿಕ್ಕಿಲ್ಲ ಎಂದು.

ಕನ್ನಡದಲ್ಲೇ ಗಾದೆ ಇದೆಯಲ್ಲ, ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ. ಹೀಗೆಂದರೆ, ಮನುಷ್ಯನ ಮನಸ್ಸು ಏನೆಲ್ಲವನ್ನು ಬಯಸುತ್ತದೆ, ಹಾಗಾಗಲಿ ಎಂದು ಒದ್ದಾಡುತ್ತದೆ, ಹಾಗೆ ಆಗದೆ ಹೋದಾಗ ದುಃಖಪಡುತ್ತದೆ. ರಾಮನನ್ನು ಕಾಡಿಗೆ ಕಳುಹಿಸಿದರೆ ತನ್ನ ಮಗ ಭರತ ಚಕ್ರವರ್ತಿಯಾಗಿ, ಸುಖವಾಗಿರುತ್ತಾನೆ ಎಂದು ಕೈಕೇಯಿ ಎಷ್ಟೊಂದು ಯೋಜನೆ ಮಾಡಿದಳು! ತಾನು ಅತ್ಯಂತ ಪ್ರೀತಿ ಮಾಡುತ್ತಿದ್ದ ರಾಮನಿಗೆ ಕಠಿಣ ಮಾತನಾಡಿ ಕಳುಹಿಸಿದಳು. ತನ್ನನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ ಗಂಡನ ಎದೆಗೆ ವಜ್ರಾಘಾತವನ್ನು ಮಾಡಿ, ತನ್ನ ಎದೆಯನ್ನು ಕಲ್ಲು ಮಾಡಿಕೊಂಡಳು. ಆದರೆ ಆದದ್ದೇ ಬೇರೆ.

ದೊರೆತದ್ದು ಮಗನಿಂದ ತಿರಸ್ಕಾರ, ವೈಧವ್ಯ. ಪಾಂಡವರನ್ನು ಅರಗಿನ ಮನೆಗೆ ಕಳುಹಿಸಿ ಸುಡಿಸಿ ಬಿಟ್ಟರೆ ತನ್ನ ದಾರಿ ನಿರ್ವಿಘ್ನವೆಂದುಕೊಂಡು ದುಷ್ಟ ಚತುಷ್ಟಯ ಸಂಭ್ರಮಪಟ್ಟಿತ್ತು. ಆದರೆ ಪಾಂಡವರು ಪಾರಾಗಿ ಮತ್ತಷ್ಟು ಬಲಿಷ್ಠರಾಗಿ ಮರಳಿದ್ದು ಅದೃಷ್ಟ. ಇವು ಋಣಾತ್ಮಕ ಘಟನೆಗಳು. ಮತ್ತೊಬ್ಬರಿಗೆ ತೊಂದರೆ ಮಾಡಲು ಹೋಗಿ ತಾವೇ ಕಷ್ಟಕ್ಕೆ ಈಡಾಗಿದ್ದ ಪ್ರಸಂಗಗಳು. ಆದರೆ ಬಹಳಷ್ಟು ಬಾರಿ ಒಳ್ಳೆಯದನ್ನು ಮಾಡಲು ಹೊರಟರೂ ಯಶ ದಕ್ಕುವುದಿಲ್ಲ. ಅದಕ್ಕೆ ಕಾರಣಗಳೂ ದೊರೆಯುವುದಿಲ್ಲ.

ಟೈಟಾನಿಕ್ ಹಡಗು ಸಿದ್ಧವಾದಾಗ ಅದೊಂದು ಅತ್ಯಂತ ವಿಲಾಸೀ ಮತ್ತು ಎಂದೆಂದಿಗೂ ಮುಳುಗಲಾರದ ಹಡಗು ಎಂದೇ ಹೆಸರಾಗಿತ್ತು. ಆದರೆ ಅದ್ಭುತವಾದ ಈ ಹಡಗು ತನ್ನ ಮೊದಲ ಪ್ರಯಾಣದಲ್ಲೇ, ಏಪ್ರಿಲ್ 15, 1912 ರಂದು, ಬೆಳಿಗ್ಗೆ ಎರಡು ಗಂಟೆ ಇಪ್ಪತ್ತು ನಿಮಿಷಕ್ಕೆ ಮಂಜುಗಡ್ಡೆಗೆ ಹೊಡೆದು, ಅದರಲ್ಲಿದ್ದ 2200 ಜನರಲ್ಲಿ 1500 ಜನ ಸತ್ತು, ಹಡಗು ಅಟ್ಲಾಂಟಿಕ್ ಸಮುದ್ರದ ತಳ ಸೇರಿತು. ಅದೊಂದು ನಂಬಲಸಾಧ್ಯವಾದ ಸುದ್ದಿಯಾಗಿತ್ತು.

ಕಗ್ಗ ಹೇಳುತ್ತದೆ, ಪ್ರಪಂಚದಲ್ಲಿ ನಡೆಯುವ ಘಟನೆಗಳಿಗೆ ಎದೆಗೆ ಉಬ್ಬಸ ತಂದುಕೊಂಡು ಕುದಿಯಬೇಡ. ಈ ಪ್ರಸಂಗಗಳಿಗೆ ನಾವು ಅಧಿಕಾರಿಯೂ ಅಲ್ಲ, ಕಾರ್ಯಕರ್ತರೂ ಅಲ್ಲ. ನಾವು ವಿಧಿಯ ಕೈಯಲ್ಲಿಯ ಮೇಸ್ತ್ರಿಗಳೂ ಅಲ್ಲ. ಆದ್ದರಿಂದ ಕಂಡದ್ದನ್ನು ನೋಡಿ ಒಪ್ಪಿಕೋ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು