ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಟೀಕಿಸುವ ಗುಣ

Last Updated 27 ಮೇ 2020, 19:30 IST
ಅಕ್ಷರ ಗಾತ್ರ

ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ |

ಕಪ್ಪು ಕಂಡು ಕನಲ್ಪ ಕೆಂಡ ಗುಲಗಂಜಿ ||
ಉಪ್ಪೊ ಸಪ್ಪೆಯೊ ನಿನ್ನ ಮೈಬೆಮರು ನೆಕ್ಕಿ ತಿಳಿ |
ಒಪ್ಪಿಹೆಯ ನೀನಜನ? – ಮಂಕುತಿಮ್ಮ || 295 ||

ಪದ-ಅರ್ಥ: ತಪ್ಪನಿನಿತುಂ=ತಪ್ಪನು+ಇನಿತುಂ(ಕೊಂಚವೂ), ಸೈಸದಪ್ಪಟದ=ಸೈಸದ(ಸಹಿ
ಸದ)+ಅಪ್ಪಟದ(ಚೊಕ್ಕವಾದ), ಕನಲ್ಪ=ಕೋಪಗೊಳ್ಳುವ, ನೀನಜನ=ನೀನು+ಅಜನ(ಬ್ರಹ್ಮನ).

ವಾಚ್ಯಾರ್ಥ: ಒಂದು ಚೂರು ತಪ್ಪನ್ನು ಸಹಿಸದ ಅಪ್ಪಟ ಗುಣಶಾಲಿ, ಕಪ್ಪು ಬಣ್ಣವನ್ನು ನೋಡಿ ಕೋಪದಿಂದ ಕನಲುವ ಗುಲಗಂಜಿ. ನೀನು ಉಪ್ಪೊ, ಸಪ್ಪೆಯೋ ಎಂಬುದನ್ನು ಮೈ ಬೆವರನ್ನು ನೆಕ್ಕಿ ತಿಳಿದುಕೊ. ನೀನು ಪರ ಬ್ರಹ್ಮಸೃಷ್ಟಿಯನ್ನು ಒಪ್ಪಿದೀಯಾ?

ವಿವರಣೆ: ಕೆಲವರಿರುತ್ತಾರೆ, ಅವರಿಗೆ ಮತ್ತೊಬ್ಬರ ಕೆಲಸದಲ್ಲಿ ಕೊಂಚ ತಪ್ಪಾದರೂ ಸಹಿಸಲಾರರು. ಚಾಟಿಯ ಏಟಿನಂತೆ ಮಾತು ಬಂದೇ ಬಿಡುತ್ತದೆ. ಆದರೆ ಅವರು ತಪ್ಪೇ ಮಾಡಲಿಲ್ಲವೆ? ತಮ್ಮ ತಲೆಯ ಮೇಲೆ ಗೂಬೆ ಕೂತಿದೆ ಅದರೆ ಅವರು ಪಕ್ಕದಲ್ಲಿ ಕುಳಿತವರ ಮೈಮೇಲಿನ ನೊಣ ಹಾರಿಸುವುದರಲ್ಲಿ ತೊಡಗಿದ್ದಾರೆ. ಪರರ ತಪ್ಪಿನ ಬಗ್ಗೆ ಹಗುರವಾಗಿ ಮಾತನಾಡುವುದು ಒಂದು ರೋಗ ಮತ್ತು ಪಾಪ.

ಭಾಗವತದಲ್ಲಿ ಒಂದು ಪುಟ್ಟ ಕಥೆ ಬರುತ್ತದೆ. ರಾಜನೊಬ್ಬ ತನ್ನ ನಗರದ ಎಲ್ಲರಿಗೆ ಊಟ ಹಾಕಿಸುತ್ತಿದ್ದ. ತಾನೇ ಸ್ವತಃ ಬಡಿಸುತ್ತಿದ್ದ. ಆಗ ಆಕಾಶದಲ್ಲಿ ಒಂದು ಗರುಡ ನಾಗರಹಾವನ್ನು ಬಾಯಿಯಲ್ಲಿ ಕಚ್ಚಿಕೊಂಡು ಹಾರುತಿತ್ತು. ಹಾವಿನ ಬಾಯಿಯಲ್ಲಿಯ ವಿಷದ ಒಂದೆರಡು ಹನಿಗಳು ಒಬ್ಬ ಬ್ರಾಹ್ಮಣನ ತಟ್ಟೆಯಲ್ಲಿ ಬಿದ್ದವು. ತಿಂದು ಆತ ಸತ್ತು ಹೋದ. ಯಮಲೋಕದಲ್ಲಿ ಚಿಂತೆ ಪ್ರಾರಂಭವಾಯಿತು. ತಪ್ಪು ಯಾರದು? ಅದು ಗರುಡನದಲ್ಲ. ಯಾಕೆಂದರೆ ಹಾವು ಅದರ ಆಹಾರ. ಹಾವಿನದಂತೂ ಅಲ್ಲವೇ ಅಲ್ಲ, ಯಾಕೆಂದರೆ ಅದು ಬದುಕಿಗಾಗಿ ಒದ್ದಾಡುತ್ತಿದೆ. ತಪ್ಪು ರಾಜನದೂ ಅಲ್ಲ. ಪಾಪ! ಅವನಿಗೆ ವಿಷ ಬಿದ್ದದ್ದು ಗೊತ್ತೇ ಇಲ್ಲ. ಚಿತ್ರಗುಪ್ತ ತಲೆ ಕೆಡಿಸಿಕೊಂಡು ಭೂಲೋಕಕ್ಕೆ ಬ್ರಾಹ್ಮಣ ವೇಷದಲ್ಲಿ ಬಂದು ರಾಜನ ಅರಮನೆಗೆ ಹೊರಟ. ದಾರಿಬದಿಯಲ್ಲಿ ಕುಳಿತಿದ್ದ ಮುದುಕಿಗೆ ಅರಮನೆಯ ದಾರಿ ಕೇಳಿದ. ಆಕೆ ದಾರಿಯನ್ನು ತೋರಿಸಿ, ‘ನೀನು ಅಲ್ಲಿಗೆ ಹೋಗಬೇಡ. ರಾಜ ಬ್ರಾಹ್ಮಣರನ್ನು ವಿಷ ಹಾಕಿ ಕೊಂದುಬಿಡುತ್ತಾನೆ’ ಎಂದಳು. ತಕ್ಷಣವೇ ಚಿತ್ರಗುಪ್ತ, ಬ್ರಾಹ್ಮಣ ಸತ್ತ ತಪ್ಪಿನ ಕರ್ಮವನ್ನು ಮುದುಕಿಗೆ ಹಾಕಿ ಬಿಟ್ಟ. ಅದಕ್ಕೇ, ‘ಮಾಡಿದವರ ಪಾಪ, ಆಡಿದವರ ಬಾಯಲ್ಲಿ’ ಎಂಬ ಗಾದೆ ಬಂದದ್ದು.

ಹೀಗೆ ಮತ್ತೊಬ್ಬರಲ್ಲಿ ತಪ್ಪು ಕಂಡು ಹಿಡಿಯುವ ಪ್ರವೃತ್ತಿಯ ಬಗ್ಗೆ ಕಗ್ಗ ಹೇಳುತ್ತದೆ. ಗುಲಗಂಜಿಯ ದೇಹದ ಮೇಲೆಯೇ ಕಪ್ಪಿದೆ. ಆದರೆ ಅದಕ್ಕೆ ಬೇರೆ ಕಡೆಗೆ ಕಪ್ಪು ಕಂಡರೆ ಕೋಪವಂತೆ. ಮತ್ತೊಬ್ಬರನ್ನು ಟೀಕಿಸುವ ಮೊದಲು ನಮ್ಮ ಆತ್ಮಪರೀಕ್ಷೆ ಮಾಡಿಕೊಳ್ಳೋಣ. ಅದನ್ನು ಕಾವ್ಯಮಯವಾಗಿ ಕಗ್ಗ, ‘ನಾನು ಸಪ್ಪೆಯೋ, ಉಪ್ಪೋ ಎಂಬುದನ್ನು ಬೆವರನ್ನು ನೆಕ್ಕಿ ತಿಳಿಯಬೇಕು’ ಎನ್ನುತ್ತದೆ. ಮತ್ತೆ, ನಾನು ಬ್ರಹ್ಮನನ್ನು ಒಪ್ಪುವುದಾದರೆ ಬ್ರಹ್ಮಸೃಷ್ಟಿಯನ್ನು ಒಪ್ಪಬೇಕು. ಅದರಲ್ಲಿ ಅನೇಕ ಸರಿ, ತಪ್ಪುಗಳು, ಹೆಚ್ಚು ಕಡಿಮೆಗಳು ಇವೆ. ಅವು ಪ್ರಪಂಚಕ್ಕೆ ಸಹಜವಾದವು. ಆದ್ದರಿಂದ ಅವುಗಳ ಬಗ್ಗೆ ಟೀಕೆ, ಕಹಿ ಮಾತು ಬೇಡ. ಅವು ಹೇಗಿವೆಯೋ ಹಾಗೆಯೇ ಒಪ್ಪಿಕೊಳ್ಳುವುದು ನಮ್ಮ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT