ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮೂರು ಸೂತ್ರಗಳು

Last Updated 12 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ |
ಆಯತದ ಲೋಕಧರ್ಮಗಳ ಪಾಲಿಪುದು ||
ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು |
ಧ್ಯೇಯವೀ ಸೂತ್ರಗಳು – ಮಂಕುತಿಮ್ಮ || 713 ||

ಪದ-ಅರ್ಥ: ಚರಿಪುದಾತ್ಮ=ಚರಿಪುದು(ನಡೆಸುವುದು)+ಆತ್ಮ, ಜುಗುಪ್ಸೆಗೆಡೆಗುಡದೆ=ಜಿಗುಪ್ಸೆಗೆ+ಎಡೆಗುಡದೆ(ಅವಕಾಶ ಕೊಡದೆ), ಆಯತದ=ವಿಸ್ತಾರದ, ಆಯತಿಗೆ=ಮುಂದಾಗಬೇಕಾದ್ದಕ್ಕೆ, ಬಾಯ್ಬಿಡದೆ=ಆಸೆ ಪಡದೆ, ಗತವ=ಹಿಂದಾದದ್ದನ್ನು

ವಾಚ್ಯಾರ್ಥ: ಜಿಗುಪ್ಸೆ ಪಡದೆ ಪ್ರಪಂಚದ ಕಾರ್ಯಗಳನ್ನು ಮಾಡುವುದು. ಆತ್ಮವಿಸ್ತಾರಕ್ಕೆ ಬೇಕಾದ ಲೋಕದ ಧರ್ಮಗಳನ್ನು ಪಾಲಿಸುವುದು. ಮುಂದಾಗುವುದಕ್ಕೆ ಅತಿಯಾಸೆಯಿಂದ ಬಾಯಿ ಬಿಡದೆ, ಹಿಂದಾಗಿ ಹೋದದ್ದರ ಬಗ್ಗೆ ಚಿಂತಿಸದಿರುವುದು. ಇದೇ ಮೂಲಸೂತ್ರಗಳು

ವಿವರಣೆ: ಈ ಚೌಪದಿ ಸುಂದರ ಬದುಕಿನ ಮೂರು ಪ್ರಮುಖ ಸೂತ್ರಗಳನ್ನು ತಿಳಿಸುತ್ತದೆ. ಬದುಕು ನಿಜವಾಗಿ ನೋಡಿದರೆ ತುಂಬ ಸುಂದರ ಹಾಗೂ ಸುಲಭ. ಆದರೆ ನಾವು ಅದನ್ನು ನಮ್ಮ ಪೂರ್ವಾಗ್ರಹಗಳಿಂದಾಗಿ, ಸ್ವಯಂಕೃತ ಅಪರಾಧಗಳಿಂದಾಗಿ ತುಂಬ ಕಷ್ಟವನ್ನಾಗಿ ಮಾಡಿಕೊಳ್ಳುತ್ತೇವೆ. ಕಗ್ಗದಲ್ಲಿ ತಿಳಿಸಿರುವ ಮೂರು ಸೂತ್ರಗಳನ್ನು ಪಾಲಿಸಿದರೆ ಬದುಕು, ಸಂತೋಷವನ್ನು, ನೆಮ್ಮದಿಯನ್ನು ಪಡೆಯಬಹುದು. ಮೊದಲನೆಯ ಸೂತ್ರ, ನಮಗೆ ದೊರಕಿದ ಅವಕಾಶಗಳಲ್ಲಿ, ನಮಗಿರುವ ಶಕ್ತಿಯಲ್ಲಿ, ಒದಗಿದ ಕರ್ತವ್ಯಗಳನ್ನು ಆತ್ಮಕ್ಕೆ ಜಿಗುಪ್ಸೆಯಾಗದಂತೆ ಮಾಡಬೇಕು. ಯಾವ ಕೆಲಸವೂ ಕೀಳಲ್ಲ, ನಾವು ಅದು ಕೀಳು ಎಂದು ಭಾವಿಸುವವರೆಗೆ, ನಾವು ಮಾಡುವ ಕೆಲಸದ ಬಗ್ಗೆ ನಮಗೇ ಜಿಗುಪ್ಸೆ ಇದ್ದರೆ ನಾವು ಎಂದಿಗೂ ಶ್ರೇಷ್ಠ ಕೆಲಸವನ್ನು ಮಾಡುವುದು ಸಾಧ್ಯವಿಲ್ಲ. ಕಾರ್ಯದ ಬಗೆಗಿನ ಕೀಳರಿಮೆ ಸದಾಕಾಲ ಕೆಳಗೆ ಎಳೆಯುತ್ತಲೇ ಇರುತ್ತದೆ. ವಚನಕಾರರು ಹೇಳಿದಂತೆ, “ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು” ಯಾಕೆಂದರೆ “ಕಾಯಕವೇ ಕೈಲಾಸ” ವಲ್ಲವೆ? ಮಾಡುವ ಕೆಲಸದಲ್ಲಿ ಕೀಳರಿಮೆಯಿಲ್ಲದ ಪ್ರೀತಿ ಒಂದನೇ ಸೂತ್ರ. ಎರಡನೆಯದು, ಆಯತದ ಧರ್ಮಗಳನ್ನು ಪಾಲಿಸುವುದು. ಯಾವವು ಆಯತದ ಲೋಕಧರ್ಮಗಳು? ಅವು ನಮ್ಮ ಆತ್ಮವಿಸ್ತರಣಕ್ಕೆ ಸಾಧನವಾಗುವ ಕ್ರಿಯೆಗಳು. ಬಯಕೆಯು ಪ್ರಧಾನವಾದಾಗ ಆತ್ಮದ ಪರಿಜ್ಞಾನ ಅತೀ ಕಡಿಮೆಯಾಗುತ್ತದೆ. ಬಯಕೆಗಳನ್ನು ಪೂರ್ತಿ ಬಿಡುವುದು ಸಾಧ್ಯವಿಲ್ಲವೆಂದಾದರೂ ಬಯಕೆಯ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ನಮ್ಮ ಅಪೇಕ್ಷೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದರೆ, ಚೈತನ್ಯವೃದ್ಧಿಯಾಗುತ್ತದೆ, ಅರಿವು ಮೂಡುತ್ತದೆ. ಮೂರನೆಯ ಸೂತ್ರ, ಆಗಿ ಹೋದದ್ದಕ್ಕೆ ಚಿಂತಿಸದೆ ಮುಂದೆ ಆಗುವುದಕ್ಕೆ ಅತಿಯಾದ ಅಪೇಕ್ಷೆ ಪಡದಿರುವುದು.

ಗತೇ ಶೋಕೋ ನಕರ್ತವ್ಯೋ ಭವಿಷ್ಯಂ ನೈವ
ಚಿಂತಯೇತ್ |
ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಾ ||

“ಕಳೆದುಹೋದದ್ದಕ್ಕೆ ಶೋಕಿಸುವ ಅಗತ್ಯವಿಲ್ಲ. ಭವಿಷ್ಯದ ಬಗ್ಗೆ ಚಿಂತೆ ಬೇಡ. ವಿವೇಕಿಗಳು ವರ್ತಮಾನದಲ್ಲೇ ಬದುಕುತ್ತಾರೆ”. ಬದುಕಿನ ಸುಖ ವರ್ತಮಾನದಲ್ಲಿ. ಈ ಮೂರು ಸೂತ್ರಗಳನ್ನು ನಾವು ಪಾಲಿಸುವುದು ಸಾಧ್ಯವಾದಲ್ಲಿ ಬದುಕು ಹಗುರಾದೀತು, ನೆಮ್ಮದಿಯ ಗೂಡಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT