ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನೆಮ್ಮದಿಗೆ ಮೂರು ಗುಣಗಳು

Last Updated 26 ಸೆಪ್ಟೆಂಬರ್ 2022, 18:47 IST
ಅಕ್ಷರ ಗಾತ್ರ

ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ |

ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ||
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು |
ಸ್ವಸ್ತಿಗಾವಶ್ಯಕವೊ – ಮಂಕುತಿಮ್ಮ || 723 ||

ಪದ-ಅರ್ಥ: ಸ್ವಸ್ಥತೆ=ನೆಮ್ಮದಿ, ಜಗದಾಸ್ಥೆಯೊಂದು=ಜಗದ+ಆಸ್ಥೆ(ಉತ್ಸಾಹ)+ಒಂದು, ತಾಟಸ್ಥ್ಯವೊಂದು =ತಾಟಸ್ಥ್ಯ(ತಟಸ್ಥಭಾವ)+
ಒಂದು, ಸ್ವಸ್ತಿಗಾವಶ್ಯಕವೊ=ಸ್ವಸ್ತಿಗೆ
(ಕ್ಷೇಮಕ್ಕೆ)+ಅವಶ್ಯಕವೊ.

ವಾಚ್ಯಾರ್ಥ: ನಮ್ಮ ನೆಮ್ಮದಿಯನ್ನು ಕೆಡಿಸದ, ಜಗದ ವ್ಯವಹಾರದಲ್ಲಿ ಉತ್ಸಾಹ ಒಂದು ಗುಣ, ಉತ್ಸಾಹವನ್ನು ಕುಂದಿಸದ ಅಲಿಪ್ತ ಮನಸ್ಸು, ನಷ್ಟವೋ, ಲಾಭವೊ, ಅದನ್ನು ಹಗುರಾದ ಹಾಸ್ಯದಿಂದ ಸ್ವೀಕರಿಸುವ ಗುಣ, ಇವು ನಮ್ಮ ಕ್ಷೇಮಕ್ಕೆ ಅವಶ್ಯವಾದವುಗಳು.
ವಿವರಣೆ: ರಾಮಣ್ಣನವರಿಗೆ ಸದಾ ಆತಂಕ. ಸಮಾಜದಲ್ಲಿ ಏನಾಗಿಬಿಡುತ್ತದೋ, ಎಂದು ಕಾಳಜಿಯಿಂದ ಕೈಗೆ ಸಿಕ್ಕ ಪೇಪರುಗಳನ್ನೆಲ್ಲ ಓದುತ್ತ, ಇಪ್ಪತ್ನಾಲ್ಕು ಗಂಟೆ ಏನಾದರೂ ಅನಾಹುತವನ್ನು ಹೇಳುತ್ತಲೇ ಇರುವ ವಾರ್ತಾವಾಹಿನಿಗಳನ್ನು ನೋಡುತ್ತ ರಕ್ತದ ಒತ್ತಡ ಹೆಚ್ಚಿಸಿಕೊಂಡಿದ್ದಾರೆ: ಅಯ್ಯೋ, ಯುಕ್ರೇನ್‌ನಲ್ಲಿ ಬಾಂಬ್ ಬಿತ್ತಂತೆ, ಪಾಕಿಸ್ತಾನದಲ್ಲಿ ಮಲೇರಿಯಾ ಹುಚ್ಚೆದ್ದು ಕುಣಿಯುತ್ತಿದೆಯಂತೆ, ಶ್ರೀಲಂಕಾದಲ್ಲಿ ಹಣಕಾಸಿನ ಪರಿಸ್ಥಿತಿ ಪೂರ್ತಿ ಬಿಗಡಾಯಿಸಿದೆ, ಎಲ್ಲಿ ಅಮೇರಿಕಾ ಮತ್ತು ಚೀನಾಗಳ
ನಡುವೆ ಯುದ್ಧವಾಗಿಬಿಡುತ್ತದೋ ಎಂಬ ಚಿಂತೆ ಅವರದು. ಅವರ ಹೆಂಡತಿ ತರಕಾರಿ ತರಲು ಹೇಳಿದ್ದು ಮರೆತೇ ಹೋಗಿದೆ ಅವರಿಗೆ. ಜಗದ ವ್ಯವಹಾರಗಳಲ್ಲಿ ಆಸಕ್ತಿ ಇರಲಿ ಆದರೆ ಅದು ನಮ್ಮ ಸಮಾಧಾನವನ್ನು ಕಿತ್ತುಕೊಳ್ಳಬಾರದು.

ಸೋಮಣ್ಣನವರು ಇನ್ನೊಂದು ತರಹ. ಅವರಿಗೆ ಯಾವುದರಲ್ಲಿಯೂ ಆಸಕ್ತಿ ಇಲ್ಲ. ಯಾರು ಯಾರ ಮೇಲೆ ಬಾಂಬ್ ಹಾಕಿದರೇನು? ನಮ್ಮ ಮನೆಯ ಮೇಲಂತೂ ಅಲ್ಲವಲ್ಲ. ಜಗತ್ತಿನಲ್ಲಿ, ದೇಶದಲ್ಲಿ ಕೋಲಾಹಲ ಇದ್ದೇ ಇರುತ್ತದೆ, ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಾಗುತ್ತದೆಯೇ? ಅವರದು ಸದಾಕಾಲದ ನಿರ್ಲಿಪ್ತತೆ. ನಿರ್ಲಿಪ್ತತೆ ಕೆಲವು ಸಂದರ್ಭಗಳಲ್ಲಿ ಒಳ್ಳೆಯದು ಆದರೆ ಅದು ಬದುಕಿನಲ್ಲಿ ಜಗತ್ತಿನ ಜೀವನದಲ್ಲಿ ಆಸಕ್ತಿಯನ್ನು ಕುಂದಿಸಬಾರದು.

ಭೀಮಣ್ಣ ತುಂಬ ವ್ಯವಹಾರಸ್ಥ. ವ್ಯವಹಾರವನ್ನು ತುಂಬ ಅಚ್ಚುಕಟ್ಟಾಗಿ, ಬಿಗಿಯಾಗಿ ನಡೆಸುವವರು. ಅವರು ತುಂಬ ಖಿನ್ನರಾಗಿದ್ದನ್ನು ಕಂಡು ಸ್ನೇಹಿತರು ಕೇಳಿದರು, “ಯಾಕೆ ಸ್ವಾಮಿ, ವ್ಯವಹಾರದಲ್ಲಿ ನಷ್ಟವಾಯಿತೋ?”, ಭೀಮಣ್ಣ ಹುಬ್ಬು ಗಂಟಕ್ಕಿಕೊಂಡೇ ಹೇಳಿದರು, “ನಷ್ಟವೇನೂ ಆಗಿಲ್ಲ, ಆದರೆ ಕೊರೊನಾ ಬರುವುದಕ್ಕೆ ಹಿಂದಿನ ವರ್ಷ ಆದಷ್ಟು ಲಾಭವಾಗಿಲ್ಲ. ಅದೇ ನಷ್ಟ ನನಗೆ”. ಹೆಚ್ಚು ಲಾಭ ಬರಲಿಲ್ಲವೆಂಬ ಕೊರಗು ಅವರಿಗೆ. ಆದರೆ ಗುಂಡಣ್ಣ ಮಾತ್ರ ಸದಾ ಹಸನ್ಮುಖಿ. “ಯಾಕೆ ಗುಂಡಣ್ಣ, ವ್ಯಾಪಾರದಲ್ಲಿ ಲಾಟರಿ ಹೊಡೆದ ಹಾಗಿದೆ?” ಎಂದು ಸ್ನೇಹಿತರು ಕೇಳಿದರೆ, “ಒಂದು ವ್ಯಾಪಾರದಲ್ಲಿ ನಷ್ಟವಾಯಿತು. ಮತ್ತೊಂದರಲ್ಲಿ ಕೊಂಚ ಲಾಭ. ಪರವಾಗಿಲ್ಲ ಬಿಡಿ. ನಾನು ಬದುಕಿದ್ದು ಸಂತೋಷವಾಗಿರುವುದಕ್ಕೆ. ಈ ಲಾಭ ನಷ್ಟಗಳ ಬಗ್ಗೆ ತುಂಬ ತಲೆ ಕೆಡಿಸಿಕೊಂಡರೆ, ಸದಾ ಕೊರಗಿದರೆ ಬದುಕಿಗೇನು ಅರ್ಥ? ಒಮ್ಮೆ ಲಾಭ, ಒಮ್ಮೆ ನಷ್ಟ. ಬದುಕು ಇದೇ ತಾನೇ?” ಎಂದು ಜೋರಾಗಿ ನಕ್ಕರು. ಜಗದ ಪ್ರೀತಿ ಮನದ ನೆಮ್ಮದಿಯನ್ನು ಕೆಡಿಸದಿರಲಿ. ನಮ್ಮ ಅತಿಯಾದ ನಿರ್ಲಪ್ತತೆ ಬದುಕಿನ ಆಸಕ್ತಿಯನ್ನು ಕಡಿಮೆ ಮಾಡದಿರಲಿ, ಮತ್ತು ಜೀವನ ಏರು-ಇಳಿವುಗಳಲ್ಲಿ ಅವುಗಳನ್ನು ಹಗುರಾಗಿ ತೆಗೆದುಕೊಳ್ಳುವ ಹಾಸ್ಯಗುಣ ಇರಲಿ. ಈ ಮೂರು ಗುಣಗಳು ಬದುಕಿನ ನೆಮ್ಮದಿಗೆ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT