ಸೋಮವಾರ, ಆಗಸ್ಟ್ 8, 2022
21 °C

ಗುರಿಯೆಡೆಗೆ ಪ್ರಯಾಣವೇ ಲಾಭ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ |
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು ? |
ಆಟದೋಟವೆ ಲಾಭ – ಮಂಕುತಿಮ್ಮ || 330 ||

ಪದ-ಅರ್ಥ: ಕೌತುಕದ=ಕುತೂಹಲದ, ಚೀಟಿ=ಇಸ್ಪೀಟಿನ ಎಲೆ, ಬೀಳೆನೆನಲ್=ಬೀಳೆನು+ಎನಲ್(ಎನ್ನಲು), ಏಟಾಯ್ತೆ=ಏಟು+ಆಯ್ತೆ, ಆಟದೋಟವೆ=ಆಟದ+ಓಟವೆ.

ವಾಚ್ಯಾರ್ಥ: ಆಟದ ಫಲ ಏನು? ಆಟದ ಕುತೂಹಲದ ರುಚಿಯೆ ಅದರ ಫಲ. ಹಾಕಿದ ಎಲೆ ತಾನು ಬೀಳೆನು ಎಂದರೆ ಆಟ ಸಾಗುವುದೆ? ಈ ಆಟದಲ್ಲಿ ಪೆಟ್ಟೆಯ್ತೆ, ಗೆಲುವಾಯ್ತೆ ಎಂದು ಕೇಳುವುದೇಕೆ? ಆಟದ ಓಟವೇ ಲಾಭ.

ವಿವರಣೆ: ಬದುಕೇ ಒಂದು ಆಟ. ಅದು ಜನ್ಮಜನ್ಮಾಂತರದ ಆಟ. ಪ್ರತಿಯೊಂದು ಆಟಕ್ಕೆ ಒಂದು ಫಲಿತಾಂಶವಿರಬೇಕಲ್ಲವೆ? ಹಾಗಾದರೆ ಈ ಬದುಕಿನ ಆಟದ ಫಲವೇನು? ಅಟವನ್ನು ಆಡುವುದರಿಂದ ಆಗುವ ಲಾಭವೇನು? ಸ್ಮೃತಿ ಪ್ರವರ್ತಕರಾದ ಆಪಸ್ತಂಬ ಮಹರ್ಷಿಗಳು ಹೇಳುತ್ತಾರೆ,

ಆತ್ಮಲಾಭಾನ್ನ ಪರಂ ವಿದ್ಯತೇ ||

‘ಆತ್ಮಜ್ಞಾನಕ್ಕಿಂತ ಹೆಚ್ಚಿನ ಲಾಭವಾವುದೂ ಇರದು’ ಎಂದು ಸಿದ್ಧಾಂತವನ್ನು ನೀಡುತ್ತಾರೆ. ಸತ್ಯಗಳಲ್ಲೆಲ್ಲ ಪರಮಸತ್ಯವಾದ್ದು ಆತ್ಮವಸ್ತು. ಅದು ಸರ್ವಕಾಲಗಳಲ್ಲಿ, ಸರ್ವಅವಸ್ಥೆಗಳಲ್ಲಿ ಅಬಾಧಿತವಾಗಿ, ಅನಂತವಾಗಿರುವಂಥದ್ದು. ಅದನ್ನು ಅರಿಯುವ ಕುತೂಹಲದ ರುಚಿಯೇ ಬದುಕಿನ ಫಲ. ಆ ಆತ್ಮವಸ್ತುವನ್ನು ಅರಿಯಲು ಮಾಡುವ ಸರ್ವಪ್ರಯತ್ನವೂ ಆಟವೆ. ಈ ಆಟದಲ್ಲಿ ಕೆಲವೊಮ್ಮೆ ಪೆಟ್ಟಾಗಬಹುದು. ಆತ್ಮಜ್ಞಾನವನ್ನು ಪಡೆಯುವ ಮಾರ್ಗದಲ್ಲಿ ಸೋಲುಂಟಾಗಬಹುದು. ಆಗ ನಿರಾಸೆಯಾಗಬಹುದು, ವೈಫಲ್ಯತೆ ಕಾಡಬಹುದು. ಋಷಿ ವಿಶ್ವಾಮಿತ್ರರಿಗೆ ಆದದ್ದು ಅದೇ. ಸಾಧನೆಯ ಮಾರ್ಗದಲ್ಲಿ ಮೇನಕೆಗೆ ಮನಸೋತದ್ದುಂಟು, ತ್ರಿಶಂಕುವಿಗೆ ಹಟದಿಂದ ಪ್ರತಿ ಸ್ವರ್ಗವನ್ನು ನಿರ್ಮಿಸುವಲ್ಲಿ ತಮ್ಮ ಸಾಕಷ್ಟು ತಪಃಶಕ್ತಿಯನ್ನು ಕಳೆದುಕೊಂಡಿದ್ದಿರಬಹುದು. ಅಂತೆಯೇ ಹರಿಶ್ಚಂದ್ರನ ಸತ್ಯಾಪರೀಕ್ಷೆಯಲ್ಲೂ ಘನತೆಗೆ ಕೊಂಚ ಹಾನಿಯಾಗಿದ್ದಿರಬಹುದು.

ಆದರೆ ಅವರು ಪ್ರಯತ್ನವನ್ನು ಬಿಡಲಿಲ್ಲ. ಪ್ರಯತ್ನದಲ್ಲಿ ಸೋತಿರಬಹುದು, ಆದರೆ ಬದುಕಿನಲ್ಲಿ ಅಲ್ಲ. ಸೋತಾಗ ಪ್ರತಿ ಬಾರಿಯೂ ಪುಟಿದೆದ್ದು ಬಹುದೊಡ್ಡ ಆತ್ಮಜ್ಞಾನಿಯಾದರು. ಎಲ್ಲಿ ಸೋತುಬಿಡುತ್ತೇನೋ ಎಂದು ಪ್ರಯತ್ನವನ್ನೇ ಮಾಡದಿದ್ದರೆ ಸಾಧನೆಯ ಮಾರ್ಗ ತೆರೆಯುವುದೆಂತು? ಅದನ್ನೇ ಕಗ್ಗ, ‘ಚೀಟಿ ತಾಂ ಬೀಳದಿರೆ ಆಟ ಸಾಗುವುದೆ’ ಎಂದು ಕೇಳುತ್ತದೆ. ಇಸ್ಪೀಟು ಆಟದಲ್ಲಿ ಸೋಲಬಹುದು ಎಂದು ಎಲೆಯನ್ನೇ ಹಾಕದಿದ್ದರೆ ಆಟ ಮುಂದುವರಿಯುವುದು ಹೇಗೆ?

ಆತ್ಮಜ್ಞಾನವನ್ನು ಪಡೆಯುವ ಜೀವನದ ಪ್ರಯತ್ನದಲ್ಲಿ ಗೆಲುವು ಎಂದರೇನು? ಅದೇನು ಯುದ್ಧವೇ? ದೊರೆಯುವ ಆತ್ಮಜ್ಞಾನವೇ, ಆಥವಾ ಅದನ್ನು ಪಡೆಯುವ ದಾರಿಯಲ್ಲಿ ದೊರೆತ ವಿಶೇಷ ಅನುಭೂತಿಗಳೇ ಗೆಲುವು. ಇದು ಒಂದೇ ಜನ್ಮದಲ್ಲಿ ಆಗಲಿಕ್ಕಿಲ್ಲ. ತೊಂದರೆ ಇಲ್ಲ. ನಮ್ಮ ನಂಬಿಕೆಯಲ್ಲಿ ಒಂದೇ ಜನ್ಮವೆಂಬುದು ಇಲ್ಲ. ಅದು ಹಾಗೆಯೇ ಮುಂದುವರೆಯುತ್ತದೆ. ನಮ್ಮ ಗುರಿ ಸ್ಪಷ್ಟವಿದೆ. ಅದನ್ನೊಂದು ಆಟವೆಂದು ಭಾವಿಸಿ ಗುರಿ ತಲುಪಲು ಹೊರಡೋಣ. ಇಂದೇ, ನಾಳೆಯೇ ಆದೀತೆಂಬ ಅವಸರ ಬೇಡ. ಯಾಕೆಂದರೆ ಗುರಿಯನ್ನು ತಲುಪುವ ಮಾರ್ಗದಲ್ಲಿ ಸಾಗುವುದೂ ಒಂದು ಸುಂದರವಾದ ಲಾಭ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು