ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಜನರನ್ನು ದೂರವಿಡುವ ಬಗೆ

Last Updated 18 ಜೂನ್ 2019, 20:20 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಅತ್ಯಂತ ಶ್ರೀಮಂತ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಅವನಿಗೊಬ್ಬ ತಮ್ಮನಿದ್ದ. ಇವರು ಬೆಳೆದು ದೊಡ್ಡವರಾಗುವುದರೊಳಗೆ ಅವರ ತಂದೆ-ತಾಯಂದಿರು ಕಾಲವಾದರು. ಇಬ್ಬರೂ ತರುಣರಿಗೆ ವೈರಾಗ್ಯ ಮೂಡಿ ಪಬ್ಬಜಿತರಾಗಿ ಗಂಗಾನದಿಯ ಬದಿಯಲ್ಲಿ ತಮ್ಮ ಆಶ್ರಮಗಳನ್ನು ಕಟ್ಟಿಕೊಂಡರು. ಅಣ್ಣನ ಆಶ್ರಮ ಮೇಲ್ಗಡೆ ಇದ್ದರೆ ತಮ್ಮನದು ಸ್ವಲ್ಪ ಕೆಳಗಡೆ ಇತ್ತು.

ಒಂದು ದಿನ ಮಣಿಕಂಠನೆಂಬ ಹೆಸರಿನ ದೊಡ್ಡ ನಾಗ ನದೀತೀರದಲ್ಲಿ ಸುಳಿದಾಡುತ್ತ ತಮ್ಮನ ಆಶ್ರಮವನ್ನು ಕಂಡು ತನ್ನ ರೂಪವನ್ನು ಮರೆಸಿ ಒಬ್ಬ ಬ್ರಹ್ಮಚಾರಿಯ ವೇಷದಲ್ಲಿ ಆಶ್ರಮದ ಒಳಗೆ ಬಂದಿತು. ಅಪರೂಪದ ಬ್ರಹ್ಮಚಾರಿಯನ್ನು ಕಂಡು ತಪಸ್ವಿಗೆ ಸಂತೋಷವಾಯಿತು. ಬ್ರಹ್ಮಚಾರಿ ದಿನವೂ ಬರತೊಡಗಿದ. ಅವನಿಗೆ ತಪಸ್ವಿಯ ಜೊತೆಗೆ ತುಂಬ ಸಲುಗೆಯಾಯಿತು. ಒಂದು ದಿನ ಸಲುಗೆಯಲ್ಲಿ ತನ್ನ ಕ್ರತ್ರಿಮ ರೂಪವನ್ನು ಬಿಟ್ಟು ಮೂಲ ಸರ್ಪರೂಪದಲ್ಲೇ ತಪಸ್ವಿಯನ್ನು ಸುತ್ತಿ ಅವನ ತಲೆಯ ಮೇಲೆ ವಿಶಾಲವಾದ ಹೆಡೆಯನ್ನು ಹರಡಿ ಹತ್ತು ನಿಮಿಷ ಸಂತೋಷಪಟ್ಟ, ನಂತರ ಸರಿದು ನದೀತೀರಕ್ಕೆ ಹೋದ. ತಪಸ್ವಿ ಗಾಬರಿಯಾದ. ದಿನದಿನವೂ ಇದೇ ಆಟವಾಯಿತು ಮಣಿಕಂಠನಿಗೆ. ಹೆದರಿಕೆಯಿಂದ ತಪಸ್ವಿಗೆ ಊಟ, ನಿದ್ರೆ, ತಪಸ್ಸು ಎಲ್ಲದರಿಂದ ಮನಸ್ಸು ಹಾರಿತು. ಆತ ಸೊರಗಿ, ಬಿಳಿಚಿಕೊಂಡ.

ಇವನಣ್ಣ, ಹಿರಿಯ ತಪಸ್ವಿ ಒಂದು ಬಾರಿ ಇಲ್ಲಿಗೆ ಬಂದು ತಮ್ಮನನ್ನು ನೋಡಿ ಗಾಬರಿಯಾದ. ಈ ಪರಿಸ್ಥಿತಿಗೆ ಕಾರಣವೇನು ಎಂದು ಕೇಳಿದ. ತಮ್ಮ ತನ್ನೊಂದಿಗೆ ಸ್ನೇಹ ಬೆಳೆಸಿದ ಸರ್ಪ ಮಣಿಕಂಠನ ಬಗ್ಗೆ ಹೇಳಿ ಅದರಿಂದ ಪಾರಾಗುವ ಬಗೆ ತಿಳಿಯದೆ ಒದ್ದಾಡುತ್ತಿದ್ದುದನ್ನು ವರ್ಣಿಸಿದ.

‘ಸರ್ಪ ಬರುವಾಗ ಯಾವುದಾದರೂ ಆಭರಣವನ್ನು ತರುತ್ತದೆಯೋ?’ ಅಣ್ಣ ಕೇಳಿದ. ‘ಹೌದು, ಅದರ ತಲೆಯ ಮೇಲೆ ಒಂದು ಮಣಿ ಇರುತ್ತದೆ’ ‘ಹಾಗಾದರೆ ನಾಳೆ ಸರ್ಪ ಬಂದಾಗ, ಅದು ನಿನ್ನ ಪರ್ಣಕುಟಿಯಲ್ಲಿ ಬರುವ ಮೊದಲೇ, ನನಗೆ ಆ ಮಣಿಯನ್ನು ಕೊಡು ಎಂದು ಕೇಳು. ಇದರಂತೆ ಪ್ರತಿದಿನವೂ ಅದು ಒಳಗೆ ಬರುತ್ತಿದ್ದಂತೆಯೇ ಮಣಿಯನ್ನು ಕೇಳು. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ’ ಅಣ್ಣ ಸಲಹೆ ನೀಡಿದ.

ಮರುದಿನ ಮಣಿಕಂಠ ಪರ್ಣಕುಟಿಯಲ್ಲಿ ಬರುತ್ತಿದ್ದಂತೆ, ‘ಸ್ನೇಹಿತ, ನಿನ್ನ ತಲೆಯ ಮೇಲಿರುವ ಮಣಿ ತುಂಬ ಆಕರ್ಷಕವಾಗಿದೆ. ಅದನ್ನು ನನಗೆ ಕೊಡು’ ಎಂದು ತಪಸ್ವಿ ಕೇಳಿದ. ಅದನ್ನು ಕೇಳಿದಾಕ್ಷಣ ಮಣಿಕಂಠ ಅಲ್ಲಿಯೇ ನಿಂತ. ಸ್ವಲ್ಪ ಹೊತ್ತು ನಿಂತಿದ್ದು ಹೊರಟುಹೋದ. ಮರುದಿನ ಮತ್ತೆ ಬಂದಾಗ ತಪಸ್ವಿ ಅದನ್ನೇ ಒತ್ತಿ, ಒತ್ತಿ ಕೇಳಿದ. ನಾಲ್ಕು ದಿನ ಹೀಗೆ ಕೇಳಿದಾಗ ಹೊರಗಿನಿಂದ ಹೊರಗೇ ಹೋದ ಮಣಿಕಂಠ ಮರಳಿ ಎಂದೂ ಆಶ್ರಮಕ್ಕೆ ಬರಲೇ ಇಲ್ಲ.

ಮತ್ತೊಮ್ಮೆ ಅಣ್ಣ ಬಂದಾಗ, ‘ಇದು ಹೇಗಾಯಿತು?’ ಎಂದು ತಮ್ಮ ಕೇಳಿದ. ಅಣ್ಣ ಹೇಳಿದ, ‘ಇದೇ ಜನರ ಸ್ವಭಾವ. ಎಲ್ಲಿಯವರೆಗೂ ನೀನು ನೀಡುತ್ತೀಯೋ ಅಲ್ಲಿಯವರೆಗೂ ಜನ ನಿನ್ನನ್ನು ಮುತ್ತಿಕೊಳ್ಳುತ್ತಾರೆ, ಸತತವಾಗಿ ಜೊತೆಗಿರಲು ಬಯಸುತ್ತಾರೆ. ಒಂದು ಬಾರಿ ನೀನು ಕೇಳಲು ಪ್ರಾರಂಭಿಸಿದರೆ ಜನ ದೂರ ಓಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ನೀನು ಸಜ್ಜನರಿಂದ ಏನನ್ನೂ ಬೇಡಬೇಡ. ದುರ್ಜನರನ್ನು ಸದಾಕಾಲ ಏನಾದರೂ ಕೇಳಿ ಹತ್ತಿರಬರದಂತೆ ನೋಡಿಕೋ’.

ಇದು ಬಹುಶ: ಇಂದಿಗೂ ಸರಿಯಾದ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT