ಯಾವುದು ಸತ್ಯ

7

ಯಾವುದು ಸತ್ಯ

ಗುರುರಾಜ ಕರಜಗಿ
Published:
Updated:

ಕೃತ್ರಿಮವೊ ಜಗವೆಲ್ಲ, ಸತ್ಯತೆಯದೆಲ್ಲಿಹುದೊ ?|

ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||

ಚತ್ರವೀ ಜಗವಿದರೊಳಾರ ಗುಣವೆಂತಹುದೊ! |

ಯಾತ್ರಿಕನೆ, ಜಾಗರಿರೊ – ಮಂಕುತಿಮ್ಮ ||22||

ಕೃತ್ತಿಮ – ಕೃತಕ, ಅಸಹಜ, ಸತ್ಯತೆಯದೆಲ್ಲಿಹುದೊ = ಸತ್ಯತೆಯು + ಅದೆಲ್ಲಿಹುದೊ, ಕರ್ತೃ = ಸೃಷ್ಟಿ ಮಾಡಿದವನು, ಚತ್ರ = ಛತ್ರ, ವಸತಿಗೃಹ, ಜಗವಿದರೊಳಾರ = ಜಗ +ಇದರೊಳು +ಯಾರ, ಜಾಗರಿರೊ – ಎಚ್ಚರವಾಗಿರು.

ವಾಚ್ಯಾರ್ಥ: ಈ ಜಗತ್ತೆಲ್ಲ ಕೃತ್ತಿಮವಾದದ್ದು, ಸತ್ಯತೆ ಎನ್ನುವುದು ಎಲ್ಲಿದೆಯೊ? ಇದನ್ನು ಸೃಷ್ಟಿ ಮಾಡಿದವನೆ ಕಣ್ಣಿಗೆ ಕಾಣದೆ ಗುಪ್ತವಾಗಿದ್ದಾನೆ. ಈ ಜಗತ್ತು ಒಂದು ವಸತಿಗೃಹ. ಇಲ್ಲಿ ಯಾರ ಗುಣ ಹೇಗೋ ತಿಳಿಯದು. ಯಾತ್ರಿಕನಾದ ನೀನು ಎಚ್ಚರವಾಗಿರು.

ವಿವರಣೆ: ಇದೊಂದು ಅದ್ಭುತವಾದ ಚೌಪದಿ. ಇದನ್ನು ಎರಡು ನೆಲೆಗಳಿಂದ ನೋಡಿದಾಗ ಪ್ರಯೋಜನವುಂಟು. ಮೇಲಿನ ಅರ್ಥ ನೋಡುವುದಾದರೆ, ಈ ಪ್ರಪಂಚವನ್ನು ನಂಬುವುದು ಕಷ್ಟ. ಇಲ್ಲಿ ಎಲ್ಲವೂ ಕೃತ್ತಿಮವೇ.

ಸತ್ಯತೆಯನ್ನು ಹುಡುಕಬೇಕಾಗಿದೆ. ಇದರ ಸೃಷ್ಟಿಕರ್ತನನ್ನು ಹಿಡಿದು ಕೇಳೋಣವೆಂದರೆ ಅವನ ಪತ್ತೆಯೇ ಇಲ್ಲ. ನಾವು ಯಾತ್ರಿಕರ ಹಾಗೆ ಜಗತ್ತಿಗೆ ಬಂದಿದ್ದೇವೆ, ಛತ್ರದಲ್ಲಿ ಉಳಿದಿದ್ದೇವೆ. ಇಲ್ಲಿ ಯಾರು ಹೇಗೋ, ಅವರ ಗುಣಗಳೇನೋ ತಿಳಿಯದು. ಆದ್ದರಿಂದ ನಾವು ನಮ್ಮ ಎಚ್ಚರದಲ್ಲಿ ಇರುವುದು ವಾಸಿ.

ಮತ್ತೊಂದು ಅರ್ಥ ಅಧ್ಯಾತ್ಮದ ಸಾರ. ಭಗವಂತನ ಸ್ವರೂಪವನ್ನು ಕುರಿತು ಶ್ವೇತಾಶ್ವತರ ಉಪನಿಷತ್ತು ಹೀಗೆ ಹೇಳುತ್ತದೆ.

ಏಕೋ ದೇವ: ಸರ್ವಭೂತೇಷು ಗೂಢ:

ಸರ್ವವ್ಯಾಪೀ ಸರ್ವಭೂತಾಂತರಾತ್ಮಾ |

ಕರ್ಮಾಧ್ಯಕ್ಷ: ಸರ್ವಭೂತಾದಿವಾಸ:

ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ ||

ಒಬ್ಬನೇ ದೇವರು ಎಲ್ಲ ವಸ್ತುಗಳಲ್ಲಿ ಅಡಗಿಕೊಂಡಿದ್ದಾನೆ. ಎಲ್ಲ ಪ್ರಾಣಿಗಳ ಒಳಗೂ ತುಂಬಿಕೊಂಡಿದ್ದಾನೆ. ಜೀವಿಗಳು ಮಾಡುವ ಎಲ್ಲ ಕೆಲಸಗಳಿಗೂ ಅವನದೇ ಮೇಲ್ವಿಚಾರಣೆ. ಅವನೇ ಮನೋಬುದ್ಧಿಗಳನ್ನು ಪ್ರೇರೇಪಿಸುವ ಶಕ್ತಿ. ಸ್ವತ: ನಿರ್ಗುಣನೂ, ಯಾವುದಕ್ಕೂ ಅಂಟದೇ ಇರುವವನೂ ಹೌದು.

ಇದನ್ನು ನೋಡಿದರೆ ನಾವು ಯಾರು? ನಾನು ಕೆಲವೇ ದಿನ ಬದುಕುವ ಒಂದು ಹೆಸರಿನ ಪಾತ್ರೆ. ಅದರಲ್ಲಿ ಇರುವುದು ಶಾಶ್ವತವಾದ ಆತ್ಮವಸ್ತು. ಅಂದರೆ ಕಣ್ಣಿಗೆ ಕಾಣದ ಆತ್ಮವು ಕಣ್ಣಿಗೆ ಕಾಣುವ ಶರೀರವನ್ನು, ಅದರ ಬುದ್ಧಿಯನ್ನು ನಡೆಸುತ್ತದೆ.

ಈ ಜಗತ್ತಿನಲ್ಲಿ ಸತ್ಯ ಹುಡುಕುವುದೇ ವೇದಾಂತದ ಪರಮ ಉದ್ದೇಶ. ಜಗತ್ತಿನ ಎಲ್ಲ ವಸ್ತುಗಳೂ ಆಕಾರ, ಬಣ್ಣ, ರುಚಿ, ವಾಸನೆ ಮೊದಲಾದ ಗುಣಗಳಿಂದ ಉಂಟಾದವುಗಳು. ಆದರೆ ಈ ಗುಣ ಜೀವದ್ದು ಮಾತ್ರ. ಆತ್ಮಕ್ಕೆ ಯಾವ ಗುಣವೂ ಇಲ್ಲ. ತನ್ನ ಇಚ್ಛೆಯಂತೆ ಯಾವ ಗುಣವನ್ನಾದರೂ ತೋರಬಲ್ಲದು. ಅದಕ್ಕೇ ಕಗ್ಗ ಹೇಳುತ್ತದೆ, “ಯಾತ್ರಿಕನಾದ ಜೀವವೇ ಹುಷಾರಾಗಿರು, ಸತ್ಯವಾದ ಆತ್ಮದ ಕಡೆಗೆ ಮನ ಇರಲಿ, ಕೃತ್ರಿಮವಾದ, ಮನಸೆಳೆಯುವ ಪ್ರಪಂಚದೆಡೆಯಿಂದ ಮನಸ್ಸನ್ನು ತಿರುಗಿಸು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !