ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ವಿರಕ್ತ

Last Updated 31 ಜನವರಿ 2021, 19:30 IST
ಅಕ್ಷರ ಗಾತ್ರ

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? |
ಸೌಂದರ್ಯಯಕ್ಷಿಣಿಯೆ ನಿನ್ನ ತೊರೆದಿಹಳೋ ?||
ಅಂಧನೆ ವಿರಕ್ತನ್, ಅಪ್ಸರೆಯ ಕಾಣದನೆ ಯತಿ |
ಕಂಡು ಕೆರಳದನಾರೊ! – ಮಂಕುತಿಮ್ಮ || 382 ||

ಪದ-ಅರ್ಥ: ಮಂದವೊ=ಅಶಕ್ತವೊ, ನಿನ್ನಕ್ಷಿ=ನಿನ್ನ+ಅಕ್ಷಿ(ಕಣ್ಣು), ವಿರಕ್ತನ್ =ಸನ್ಯಾಸಿ, ಕಾಣದನೆ=ಕಾಣದವನೆ, ಕೆರಳದನಾರೊ=
ಕೆರಳದವನು ಯಾರೋ.

ವಾಚ್ಯಾರ್ಥ: ನೀನು ಇಂದ್ರಿಯವನ್ನು ಜಯಿಸಿದ್ದೀಯೋ? ನಿನ್ನ ಕಣ್ಣ ದೃಷ್ಟಿ ಅಶಕ್ತವೊ? ಅಥವಾ ಸೌಂದರ್ಯವೆಂಬ ಯಕ್ಷಿಣಿ ನಿನ್ನನ್ನು ಬಿಟ್ಟೇ ಹೋಗಿದ್ದಾಳೋ? ಕಣ್ಣು ಕಾಣದವನೆ ವಿರಕ್ತ, ಅಪ್ಸರೆಯನ್ನು ನೋಡದವನೆ ಯತಿ. ಅವುಗಳನ್ನೆಲ್ಲ ಕಂಡು ಕೆರಳದವನು ಯಾವನೊ?

ವಿವರಣೆ: ಈ ಜಗತ್ತೆಂಬ ಮಾಯಾಜಾಲದಲ್ಲಿ ಕೋಟ್ಯಾಂತರ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಆಕರ್ಷಣೆಗಳು ಕಿಕ್ಕಿರಿದು ನೆರೆದಿವೆ. ನಮ್ಮನ್ನು ಸೆಳೆಯಲು ಸನ್ನದ್ಧವಾಗಿ ಕುಳಿತಿವೆ. ಕೆಲವು ನಮ್ಮ ಕಣ್ಣುಗಳನ್ನು ಸೆಳೆಯುತ್ತವೆ. ಅವು ಅತ್ಯಂತ ಮನಮೋಹಕವಾಗಿ ಕಾಣುತ್ತವೆ. ಮತ್ತೆ ಕೆಲವು ನಮ್ಮ ಕಿವಿಗಳಿಗೆ ಮಧುರವಾಗಿವೆ. ಅವುಗಳ ರಾಗ, ತಾಳ, ಮಾಧುರ್ಯ ನಮ್ಮನ್ನು ಎಳೆಯುತ್ತವೆ. ಕೆಲವು ಸ್ಪರ್ಶಗಳು ನಮ್ಮ ಪ್ರಜ್ಞೆಯನ್ನು ತಪ್ಪಿಸುವಂತೆ ಮಾಡುತ್ತವೆ. ಸ್ಪರ್ಶಸುಖಕ್ಕಾಗಿ ದಿಕ್ಕು ದಿಕ್ಕು ಅಲೆಸುತ್ತವೆ, ನೆಲೆ ತಪ್ಪಿಸುತ್ತವೆ. ಹಲವು ರುಚಿಗಳು ನಮ್ಮ ನಾಲಿಗೆಯನ್ನು ಪ್ರಚೋದಿಸಿ, ಕೆಣಕಿ, ಆರೋಗ್ಯವನ್ನು ಕೆಡಿಸುತ್ತವೆ. ಅಂತೆಯೆ ಕೆಲವು ವಾಸನೆಗಳು ನಮ್ಮ ಮನಸ್ಸನ್ನು ಆಕರ್ಷಿಸಿ, ಸೋಲಿಸುತ್ತವೆ. ಹೀಗೆ ಹೊರಗಡೆ ನಮ್ಮನ್ನು ಎಳೆಯಲು ಕೋಟಿ ಕೋಟಿ ಆಕರ್ಷಣೆಗಳಿದ್ದರೆ, ನಮ್ಮ ಮನಸ್ಸಿನ ಭದ್ರ ಕೋಟೆಯನ್ನು ಒಡೆದು ಬಾಗಿಲುಗಳನ್ನು ತೆರೆದಿಡುವ ಐದು ಇಂದ್ರಿಯಗಳಿವೆ. ತೆರೆದ ಕೋಟೆಯ ಬಾಗಿಲುಗಳ ಮೂಲಕ ವಿಷಯ ವಸ್ತುಗಳು ಒಳಗೆ ನುಗ್ಗಿ ಬರುತ್ತವೆ.

ಹೀಗಿರುವಾಗ ಯಾರಾದರೂ ಇಂದ್ರಿಯಗಳನ್ನು ಜಯಿಸಿದ್ದೇನೆ ಎಂದು ಹೇಳಿಕೊಂಡರೆ ನಂಬಬಹುದೆ? ಅವನ ಕಣ್ಣೇ ಮಂದವಾಗಿರಬಹುದೆ? ಅದಕ್ಕೇ ಯಾವುದೂ ಅವನನ್ನು ಸೆಳೆಯುತ್ತಿಲ್ಲ! ಅಥವಾ ಸೌಂದರ್ಯವನ್ನು ಆರಾಧಿಸುವ, ಮೆಚ್ಚುವ ಅವನ ಶಕ್ತಿಯೇ ಕುಂಠಿತವಾಗಿ ಹೋಗಿರಬೇಕು. ಅಂಧನಾದವನು ತಾನು ವಿರಕ್ತನಾಗಿದ್ದೇನೆ ಎಂದು ಹೇಳುವುದು ಹೇಗೆ ಸೂಕ್ತ? ಆತ ವಿಷಯ ವಸ್ತುಗಳನ್ನು ಕಂಡಿದ್ದರೆ ತಾನೇ ಅವುಗಳ ಸೆಳೆತಕ್ಕೆ ಬೀಳುವುದು? ಕಾಣದಿದ್ದುದರಿಂದ ಆತ ಕ್ಷೇಮವಾಗಿದ್ದಾನೆ. ಅಂತೆಯೇ ಅಪ್ಸರೆಯನ್ನು ಕಾಣುವ ತನಕ ಮನುಷ್ಯ ಸನ್ಯಾಸಿಯೇ. ದೀರ್ಘ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನ ಸನ್ಯಾಸ ಕರಗಿದ್ದು ಮೇನಕೆಯ ದರ್ಶನದಿಂದ. ಅಲ್ಲಿಯವರೆಗೂ ಆತನ ತಪಸ್ಸು ಗಟ್ಟಿಯಾಗಿತ್ತು. ವಿಭಾಂಡಕ ಮಹರ್ಷಿ, ಊರ್ವಶಿಯಿಂದ ಪಡೆದ ಮಗ ಋಷ್ಯಶೃಂಗ. ವನದಲ್ಲೇ ಬೆಳೆದವನಿಗೆ, ತಂದೆಯನ್ನು ಬಿಟ್ಟು ಮತ್ತೊಂದು ಮನುಷ್ಯ ಶರೀರವನ್ನೇ ಕಾಣದವನಿಗೆ, ಹೆಣ್ಣೆಂಬುದೂ ಈ ಪ್ರಪಂಚದಲ್ಲಿದೆ ಎಂಬುದು ತಿಳಿದಿರಲಿಲ್ಲ. ಕಗ್ಗಾಡಿನ ಗಿಡಮರಗಳು, ಪ್ರಾಣಿ-ಪಕ್ಷಿಗಳು, ಕಂದಮೂಲಗಳು, ತನ್ನ ತಪಶ್ಚರ್ಯೆ ಇವುಗಳನ್ನು ಬಿಟ್ಟು ಪ್ರಪಂಚವಿದೆಯೆಂಬುದನ್ನು ತಿಳಿಯದ ಮುಗ್ಧ, ವಿರಕ್ತ, ಅಪ್ರತಿಮ ಸುಂದರಿಯೊಬ್ಬಳು ಎದುರು ಬಂದಾಗ ಕರಗಿ ಹೋಗುತ್ತಾನೆ.

ಕಗ್ಗ ಹೇಳುವುದು ಅದೇ ಮಾತನ್ನು. ಆಕರ್ಷಣೆಗಳು ಎಳೆಯುವವರೆಗೆ ನಾವು ವಿರಕ್ತರು. ಅವುಗಳ ಬಲೆಗೆ ಸಿಕ್ಕಮೇಲೆ ಪಾರಾಗುವವನು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT