ಗುರುವಾರ , ಡಿಸೆಂಬರ್ 1, 2022
20 °C

ಬೆರಗಿನ ಬೆಳಕು: ಯೋಗಿಯ ಎದೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಚೆಲುವುನಗುವುಗಳ ಕಂಡವನ ಕಣ್ಣರಳುವುದು |

ಅಳುವುನೋವುಗಳ ಕಂಡೊದ್ದೆಯಾಗುವುದು ||
ಇಳೆಯ ದನಿಗವನೆದೆಯೊಳೊಪ್ಪು‌

ಮರು ದನಿಯಹುದು |

ಶಿಲೆಯಲ್ಲ ಯೋಗಿಯೆದೆ – ಮಂಕುತಿಮ್ಮ || 722 ||

ಪದ-ಅರ್ಥ: ಕಂಡವನ=ಕಂಡು+ಅವನ, ಕಣ್ಣರಳುವುದು=ಕಣ್ಣು+ಅರಳುವುದು, ಕಂಡೊದ್ದೆಯಾಗುವುದು=ಕಂಡು+ಒದ್ದೆಯಾಗುವುದು, ಇಳೆಯ=ಜಗತ್ತಿನ,ದನಿಗವನೆದೆಯೊಳೊಪ್ಪು=ದನಿಗೆ+ಅವನ+ಎದೆಯೊಳು+ಒಪ್ಪು, ಯೋಗಿಯೆದೆ=ಯೋಗಿಯ+ಎದೆ.
ವಾಚ್ಯಾರ್ಥ: ಯೋಗಿಯಾದವನ ಎದೆ ಕಲ್ಲಲ್ಲ. ಜಗತ್ತಿನ ಚೆಲುವು ನಗುವುಗಳು ಅವನಲ್ಲಿ ಸಂತೋಷವನ್ನು ತರುತ್ತವೆ.
ಅಳುವು, ನೋವುಗಳು ಅವನ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ. ಪ್ರಪಂಚದ ಧ್ವನಿಗೆ ಅವನ
ಹೃದಯದಲ್ಲಿ ಮರುದನಿ ಇದೆ.

ವಿವರಣೆ: ಸ್ವಾಮಿ ವಿವೇಕಾನಂದ! ಹೆಸರೇ ಅದ್ಭುತ ಪರಿಣಾಮವನ್ನುಂಟು ಮಾಡುತ್ತದೆ. ಭಾರತದಲ್ಲೆಲ್ಲ ಬಿಡಿ ಸನ್ಯಾಸಿಯಾಗಿ ಸಂಚರಿಸಿ, ದೇಶದ ನಾಡಿಯ ಮೇಲೆ ಬೆರಳಿಟ್ಟು ಅದರ ಹಿರಿಮೆ, ಕೊರತೆಗಳನ್ನು ಕಂಡಿದ್ದ ವಿವೇಕಾನಂದರು ಕನ್ಯಾಕುಮಾರಿಗೆ ಬಂದರು. ಸಮುದ್ರದ ಮಧ್ಯದಲ್ಲಿ ಸೆಟೆದು ನಿಂತಿದ್ದ ಬಂಡೆಯನ್ನೇರಿ ಕುಳಿತು ಧ್ಯಾನಮಗ್ನರಾದರು. ಅವರು ಯಾವ ದೇವರನ್ನು ಧ್ಯಾನಿಸಿದರು? ಯಾವ ಲಾಭಕ್ಕಾಗಿ ಧ್ಯಾನ? ಮನದಲ್ಲಿ ಮುಕ್ತಿಯ ವಿಚಾರವಿಲ್ಲ.

ದೇಶದ ದೀನ ದುಃಖಿತರ ಸೊರಗಿಹೋದ ಮುಖಗಳೇ ಕಣ್ಣಮುಂದೆ ಕುಣಿದವು. ದೇವಾಲಯಗಳು ಒಂದೆಡೆಯಾದರೆ, ಪಕ್ಕದಲ್ಲೇ ಕೊಳೆತು ನಾರುವ ಕಸದ ರಾಶಿಗಳು! ವೇದ ಮಂತ್ರಗಳ ಧ್ವನಿಗಳೊಂದಿಗೇ ದಲಿತರ, ದೀನರ ನರಳುವ, ಗೋಳಾಡುವ ಧ್ವನಿ. ಒಂದು ಕಾಲದಲ್ಲಿ ಸಂಪದ್ಭರಿತವಾಗಿದ್ದ ನನ್ನ ದೇಶ ಏಕೆ ಈ ಮಟ್ಟಕ್ಕೆ ಇಳಿಯಿತು? ನೂರಾರು ಋಷಿಮುನಿಗಳು ತಪಸ್ಸು ಮಾಡಿದ ಈ ನೆಲದಲ್ಲಿ ಏಕೆ ಅಧರ್ಮದ ತಾಂಡವ? ಈ ಬಡತನ, ಈ ದೈನ್ಯವನ್ನು ನಿವಾರಿಸುವುದು ಹೇಗೆ? ಜಗತ್ತಿಗೆ ವಿಶ್ವಗುರುವಾಗಿದ್ದ ಭಾರತ ಈ ಜಾತಿ ಮತಗಳ ತಾರತಮ್ಯವನ್ನು ಸಹಿಸಿದ್ದು ಹೇಗೆ? ಇವೇ ವಿವೇಕಾನಂದರ ಧ್ಯಾನದ ವಸ್ತುಗಳಾಗಿದ್ದವು. ದೇಶದ ಸ್ಥಿತಿಯನ್ನು ನೆನೆದು ಅವರ ಕಣ್ಣುಗಳಿಂದ ನೀರು ದಳದಳನೆ ಸುರಿದವು. ಮತ್ತೊಮ್ಮೆ, ಎಲ್ಲಿಯೋ ಭೂಕಂಪವಾಗಿ ಸಾವಿರಾರು ಜನ ಸತ್ತರೆಂದು ಸುದ್ದಿ ಕೇಳಿದಾಗ ಬಿಕ್ಕಿ ಬಿಕ್ಕಿ ಅತ್ತರು. ನೀವು ಸನ್ಯಾಸಿಗಳು, ಹೀಗೆ ದು:ಖ ಪಡುವುದು ಸರಿಯಲ್ಲ ಎಂದು ಮತ್ತೊಬ್ಬರು ಹೇಳಿದಾಗ, “ಸನ್ಯಾಸಿ ಒಂದು ಕಲ್ಲೇ? ಅವನು ಪ್ರಪಂಚದ ಆಗುಹೋಗುಗಳಿಗೆ ಸ್ಪಂದಿಸದಿದ್ದರೆ ಅವನೆಂತಹ ಸನ್ಯಾಸಿ?” ಎಂದು ಕೇಳಿದರು.

ಇದೇ ಕಗ್ಗದ ಮತಿತಾರ್ಥ. ಯೋಗಿಯೊಂದು ಕಲ್ಲಲ್ಲ. ಅವನೂ ಸಂತೋಷವನ್ನು ಕಂಡು ಅರಳುತ್ತಾನೆ. ಜನರ ನೋವು, ದುಃಖ ಕಂಡು ಅಳುತ್ತಾನೆ. ಪ್ರಪಂಚದ ಪ್ರತಿಯೊಂದು ಧ್ವನಿಗೂ ಅವನ ಹೃದಯದಲ್ಲಿ ಮರುದನಿ ಇದೆ. ಆದರೆ ಆತ ಪಡುವ ಸಂತಸ, ದುಃಖಗಳು ಅವನಿಗಾಗಿಯಲ್ಲ, ಪರರಿಗಾಗಿ. ಅವನಿಗೆ ಲೋಕದ ಅಂಟಿಲ್ಲ. ಆದರೆ ಆತ ಲೋಕವನ್ನು ಬಿಟ್ಟಿಲ್ಲ. ಇದೇ ಸನ್ಯಾಸ ಸಫಲವಾದ ಲಕ್ಷಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು