ಸೋಮವಾರ, ನವೆಂಬರ್ 18, 2019
26 °C

ಅಧಿಕಾರದ ಮುಂದೆ ತಲೆಬಾಗದ ಶಕ್ತಿ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಅವನಿಗೆ ಬಹಳ ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ದಾನ, ತಪಗಳ ನಂತರ ಅವನ ಪಟ್ಟಮಹಿಷಿಗೆ ಒಬ್ಬ ಮಗ ಹುಟ್ಟಿದ. ರಾಜನಿಗೆ ಅತ್ಯಂತ ಸಂತೋಷವಾಯಿತು. ಅದೇ ದಿನ, ಅದೇ ಸಮಯಕ್ಕೆ ರಾಜ್ಯದಲ್ಲಿ ಮತ್ತಾವುದಾದರೂ ಮಗು ಹುಟ್ಟಿದೆಯೇ ಎಂದು ಕಂಡುಹಿಡಿಯಲು ಮಂತ್ರಿಗಳಿಗೆ ಆದೇಶ ನೀಡಿದ. ಮಂತ್ರಿಗಳು ಬಂದು ಪುರೋಹಿತನ ಹೆಂಡತಿಯೂ ಅದೇ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದ್ದನ್ನು ತಿಳಿಸಿದರು. ಆತನೇ ಬೋಧಿಸತ್ವ. ರಾಜ, ಪುರೋಹಿತನನ್ನು ಕರೆಸಿ ಉಡುಗೊರೆಗಳನ್ನು ಕೊಟ್ಟು ಮಗುವನ್ನು ಅರಮನೆಯಲ್ಲೇ ಬಿಡಲು ಕೋರಿದ.

ರಾಜ, ತನ್ನ ಮಗ ಹಾಗೂ ಪುರೋಹಿತನ ಮಗನನ್ನು ದಾದಿಯರ ರಕ್ಷಣೆಯಲ್ಲಿ ಬಿಟ್ಟು ಅರಮನೆಯಲ್ಲೇ ಉಳಿಸಿಕೊಂಡು ಇಬ್ಬರಿಗೂ ಒಂದೇ ತರಹದ ಬಟ್ಟೆಗಳು, ಒಂದೇ ತರಹದ ಆಹಾರ, ಒಂದೇ ಬಗೆಯ ಶಿಕ್ಷಣ ಕೊಡಿಸಿದ, ದೊಡ್ಡವರಾದ ಮೇಲೆ ಇಬ್ಬರೂ ಜೊತೆಗೇ ತಕ್ಕಶಿಲೆಗೆ ಹೋಗಿ ಒಂದೇ ಗುರುವಿನ ಕಡೆಗೆ ಅಧ್ಯಾತ್ಮ ಶಿಕ್ಷಣ ಪಡೆದು ಬಂದರು. ಮರಳಿ ಬಂದ ಮೇಲೂ ಇಬ್ಬರೂ ಜೊತೆಯಲ್ಲೇ ಇರುತ್ತಿದ್ದರು.

ಆದರೆ ಪರಿಸ್ಥಿತಿ ಬದಲಾದದ್ದು ರಾಜ ತೀರಿಕೊಂಡ ಮೇಲೆ. ರಾಜಕುಮಾರ ರಾಜನಾಗಿ ಅಧಿಕಾರ ವಹಿಸಿಕೊಂಡ. ಪುರೋಹಿತನ ಮಗನನ್ನು ರಾಜನನ್ನಾಗಿ ಮಾಡಲಾಗುತ್ತದೆಯೇ? ಅಲ್ಲಿ ಪುರೋಹಿತನ ಮಗನಿಗೆ ಅರ್ಥವಾಯಿತು. ಸ್ನೇಹ ಮತ್ತು ಸಮಾನತೆ ಒಂದು ಹಂತದವರೆಗೆ ಮಾತ್ರ. ಅಧಿಕಾರ ಬಂದೊಡನೆ ಸಮಾನತೆ ಕರಗಿ ಹೋಗುತ್ತದೆ. ಹೊಸ ರಾಜ ತನ್ನ ಆತ್ಮೀಯ ಸ್ನೇಹಿತನನ್ನು ಕರೆದು ಮಾತನಾಡಲಿಲ್ಲ, ಅವನಿಗೆ ಪುರೋಹಿತನ ಅಥವಾ ಮತ್ತಾವುದೋ ಮುಖ್ಯಸ್ಥಾನವನ್ನು ಕೊಡಲಿಲ್ಲ. ಆಗ ಬೋಧಿಸತ್ವನಿಗೆ ಒಂದು ರೀತಿಯ ವೈರಾಗ್ಯ ಮೂಡಿತು. ತನ್ನ ತಂದೆ-ತಾಯಿಯರಿಗೆ ಹೇಳಿ ಹಿಮಾಲಯಕ್ಕೆ ಹೋದ. ಅಲ್ಲಿ ಋಷಿ-ಪ್ರವ್ರಜ್ಯವನ್ನು ಸ್ವೀಕರಿಸಿ ತನ್ನದೇ ಒಂದು ಆಶ್ರಮವನ್ನು ಕಟ್ಟಿಕೊಂಡು ನೆಲೆಸಿದ.

ಕೆಲ ದಿನಗಳ ನಂತರ ರಾಜನಿಗೆ ಆಡಳಿತದಲ್ಲಿ ತೊಂದರೆಗಳು ಬರತೊಡಗಿದವು. ಅವನಿಗೆ ಹೇಗೆ ನಿಭಾಯಿಸಬೇಕೆಂಬುದು ತಿಳಿಯಲಿಲ್ಲ. ಇವನ ದೌರ್ಬಲ್ಯವನ್ನು ಜನ ದುರುಪಯೋಗ ಮಾಡಿಕೊಳ್ಳತೊಡಗಿದರು. ರಾಜ ಚಿಂತೆಗೆ ಒಳಗಾದ. ತನ್ನ ಆಪ್ತಮಿತ್ರ ಎಲ್ಲಿದ್ದಾನೆ ಹುಡುಕಿಸಿ ಎಂದು ಆಜ್ಞೆ ಮಾಡಿದ. ಅವನು ಹಿಮಾಲಯದಲ್ಲಿ ಉಳಿದಿದ್ದಾನೆ ಎಂದು ತಿಳಿದಾಗ ಅವನನ್ನು ಕರೆದುಕೊಂಡು ಬರಲು ತನ್ನ ಮಂತ್ರಿಯನ್ನು ಕಳುಹಿಸಿದ. ಮಂತ್ರಿ ಬಂದು ಬೋಧಿಸತ್ವನಿಗೆ ರಾಜನ ಆಶಯವನ್ನು ತಿಳಿಸಿ ಮರಳಿ ರಾಜ್ಯಕ್ಕೆ ಬರಲು ಕೋರಿದ. ಬೋಧಿಸತ್ವ ಮಂತ್ರಿಗೆ ಹೇಳಿದ, ‘ಅಯ್ಯಾ, ನಾನು ಇದುವರೆಗೂ ಯುವರಾಜರೊಂದಿಗೆ ಸಕಲ ಭೋಗಭಾಗ್ಯಗಳನ್ನು ಪಡೆದಿದ್ದೇನೆ. ಅವನ್ನು ನಾನೀಗ ತ್ಯಜಿಸಿದ ಮೇಲೆ ಮತ್ತೆ ಅವುಗಳ ಕಡೆಗೆ ಮನಸ್ಸು ಮಾಡಲಾರೆ. ಇನ್ನೊಂದು ವಿಷಯ. ನಾಲಿಗೆಗೂ, ಕೈಗೂ ಹತ್ತಿರದ ಸಂಬಂಧವಿದೆ. ನಮ್ಮ ಆಸೆಗೆ ಅಧಿಕಾರದ ಮುಂದೆ ಕೈ ಚಾಚಿದರೆ ನಾಲಿಗೆ ಬಿದ್ದು ಹೋಗುತ್ತದೆ. ಆಗ ವಿಮರ್ಶೆ ಮಾಡುವ, ಟೀಕಿಸುವ ಶಕ್ತಿ ಉಡುಗಿ ಹೋಗುತ್ತದೆ. ಅದು ನನಗೆ ಬೇಡ’ ಅವರನ್ನು ಮರಳಿ ಕಳುಹಿಸಿಬಿಟ್ಟ.

ನಮ್ಮ ಇಂದಿನ ಸಮಾಜದಲ್ಲೂ ಹಾಗೆಯೇ ಇದೆ. ತಿಳಿವಳಿಕೆ ಉಳ್ಳವರು ಅಧಿಕಾರದ ಮುಂದೆ ಕೈ ಚಾಚಿದರೆ ಸಾಕು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ, ನಿರ್ವೀರ್ಯರಾಗುತ್ತಾರೆ. ಯಾರು ಹಾಗೆ ಕೈ ಚಾಚದೆ ಗೌರವದಿಂದ ಇರುತ್ತಾರೋ ಅವರು ಯಾವ ಅಧಿಕಾರಕ್ಕೂ ತಲೆಬಾಗುವ ಕಾರಣವಿಲ್ಲ. 

ಪ್ರತಿಕ್ರಿಯಿಸಿ (+)