ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನವಾಗಿ ಕೊಲ್ಲುವ ಮೋಹಿನಿ

Last Updated 4 ಸೆಪ್ಟೆಂಬರ್ 2019, 20:21 IST
ಅಕ್ಷರ ಗಾತ್ರ

ಮೃತ್ಯು ತಾಂ ಬಂದು ಮೋಹಿನಿಯರೂಪದಿ ನಿನ್ನ|
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು||
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ|
ಹತ್ಯೆಯಲಿ ಹರುಷಿಪಳೊ–ಮಂಕುತಿಮ್ಮ ||180||

ಪದ-ಅರ್ಥ: ನಿನ್ನಸುವ=ನಿನ್ನ+ಅಸುವ (ಪ್ರಾಣವ), ಲವಲವ=ಸ್ವಲ್ಪ ಸ್ವಲ್ಪವಾಗಿ, ಪೀರುತಲಿ=ಹೀರುತ್ತ, ದೀರ್ಘಹತ್ಯೆ=ನಿಧಾನವಾದ ಕೊಲೆ, ಹರುಷಿಪಳೊ=ಸಂತೋಷಪಡುವಳು.

ವಾಚ್ಯಾರ್ಥ: ಮೃತ್ಯು ದೇವತೆ ಅತ್ಯಂತ ಮೋಹಕವಾದ ರೂಪದಲ್ಲಿ ಬಂದು, ನಿನ್ನ ಮನಸ್ಸನ್ನು ಸೆರೆಹಿಡಿದು, ರಕ್ತವನ್ನೂ ಸೋರಿಸಿ, ಪ್ರತಿನಿತ್ಯವೂ ನಿನ್ನ ಪ್ರಾಣವನ್ನು ಹನಿಹನಿಯಾಗಿ ಹೀರುತ್ತ ನಿಧಾನವಾಗಿ ಕೊಲೆ ಮಾಡಿ ಸಂತೋಷಪಡುತ್ತಾಳೆ
ವಿವರಣೆ: ನಮ್ಮಲ್ಲಿ ಒಂದು ಪೂರ್ವಿಕರ ಮಾತಿದೆ. ಭಗವಂತನನ್ನು ಅದು ಕೊಡು, ಇದು ಕೊಡು ಎಂದು ಬೇಡಬಾರದು. ಹಾಗೆ ಅರ್ಜಿ ಹಾಕುವುದಕ್ಕೆ ದೇವರೇನು ತಹಶೀಲ್ದಾರನೇ? ಅವನಿಗೆ ಏನು ಕೊಡಬೇಕು, ಯಾವಾಗ ಕೊಡಬೇಕು ಎಂಬುದು ಗೊತ್ತಿದೆ. ಗೊತ್ತಿಲ್ಲದಿದ್ದರೆ ದೇವರು ಹೇಗಾಗುತ್ತಾನೆ? ಭಗವಂತನನ್ನು ಕೇಳಿದರೆ, ಎರಡೇ ವರಗಳನ್ನು ಬೇಡಬೇಕಂತೆ.

“ವಿನಾ ದೈನ್ಯೇನ ಜೀವನಂ, ಅನಾಯಾಸ ಮರಣಂ”.

ಅಂದರೆ ಭಗವಂತಾ, ನಾನು ಯಾರ ಮುಂದೂ ಕೈ ಚಾಚದೆ, ದೈನ್ಯದಿಂದ ನಿಲ್ಲದೆ ಇರುವಂತೆ ಮಾಡು. ಮತ್ತೆ, ಅನಾಯಾಸ ಮರಣವನ್ನು ಕೊಡು. ಯಾರಿಗೂ ಭಾರವಾಗದಂತೆ, ಒದ್ದಾಡದೆ, ನರಳಿ ನರಳಿ ಹೋಗದಂತೆ, ನಿದ್ರೆಯಂತೆ ಸಾವು ಕೊಡು ಎಂದು ಬೇಡಬೇಕು. ಆ ನಿದ್ರೆಯಂತೆ ಸಾವ ಪಡೆವ ಭಾಗ್ಯ ಎಲ್ಲರಿಗೂ ದೊರೆಯಲಾರದು. ಪ್ರಪಂಚದಲ್ಲಿ ಬಹಳಷ್ಟು ಜನ ಸಂತೋಷದ ನಿರೀಕ್ಷೆಯಲ್ಲಿ, ಅದನ್ನು ಪಡೆಯುವುದಕ್ಕೆ ಇಡೀ ಜೀವನವನ್ನೇ ಒದ್ದಾಟದಲ್ಲಿ ಸವೆಸಿಬಿಡುತ್ತಾರೆ. ಆಕರ್ಷಣೆಯ ರೂಪದಲ್ಲಿ ಮೃತ್ಯು ಬಂದು ನಿಧಾನವಾಗಿ ಕೊಲ್ಲುತ್ತದೆ.

ನನಗೆ ತಿಳಿದವರೊಬ್ಬರ ಕಥೆ. ಆತ ಬಡತನದಿಂದ ಮೇಲೆದ್ದು ಬಂದವರು. ಬಡತನದ ಬಗ್ಗೆ ದ್ವೇಷ, ಅಸಹ್ಯ. ಹೇಗಾದರೂ ಮಾಡಿ ಅತ್ಯಂತ ಶ್ರೀಮಂತನಾಗಬೇಕೆಂಬ ಆಸೆ. ಆ ಅಪೇಕ್ಷೆ ಅವರನ್ನು ಅನೇಕ ದಾರಿಗಳಲ್ಲಿ ಸೆಳೆಯಿತು. ಸರ್ಕಾರಿ ಅಧಿಕಾರಿಗಳಿಗೆ ದಳ್ಳಾಳಿಯಾಗಿ ಅವರಿಗೆ ಲಂಚ ಕೊಡಿಸಿ, ತಾನಿಷ್ಟು ಪಡೆದು ಬದುಕು ಸಾಗಿತು. ಅದರಿಂದ ತೃಪ್ತಿ ದೊರೆಯದೆ ಒಬ್ಬಿಬ್ಬರು ಪ್ರಭಾವಿ ರಾಜಕಾರಣಿಗಳ ಹಿಂಬಾಲಕನಾಗಿ ಹೆಚ್ಚು ಹಣದ ದಳ್ಳಾಳಿಯ ಕೆಲಸ. ಅಲ್ಲಿ ಸುಳ್ಳು ಹೇಳಿ, ಇಲ್ಲಿ ಮೋಸ ಮಾಡಿ ಹಣ ಶೇಖರಣೆ ಮಾಡಿದರು. ಇದರಲ್ಲಿ ಕೆಲವು ವಿಷಯದಲ್ಲಿ ಸಿಕ್ಕು ಹಾಕಿಕೊಂಡು ಜೈಲು ದರ್ಶನವೂ ಆಯಿತು. ಹೊರಬಂದು ಯಾರ ಜೊತೆಗೋ ಸೇರಿ ನದೀತೀರದಲ್ಲಿದ್ದ ತನ್ನ ಹೊಲದಲ್ಲೇ ಬಂದು ಉದ್ಯಮವನ್ನು ಪ್ರಾರಂಭಿಸಿದ್ದು ಆಯಿತು. ಅದಕ್ಕಾಗಿ ದೊಡ್ಡ ಮಟ್ಟದ ಸಾಲ ಮಾಡಿದರು. ಅದರ ಕಂತು ಕಟ್ಟಲು ಮತ್ತಷ್ಟು ಮೋಸದ ವ್ಯವಹಾರ. ದುಡ್ಡು ಹೆಚ್ಚು ಬಂದಂತೆ ದಾಹ ಹೆಚ್ಚುತ್ತ ಬಂದಿತು. ಬೆಳೆದು ನಿಂತ ಉದ್ಯಮದಿಂದ ಹಣ ಕೈತುಂಬ ಬರುವ ಹೊತ್ತಿಗೆ ಅವರಿಗೆ ಎಪ್ಪತ್ತೆಂಟು ವರ್ಷವಾಗಿತ್ತು. ಇನ್ನು ಎಲ್ಲ ವ್ಯವಹಾರಗಳನ್ನು ಬಿಟ್ಟು ಅತ್ಯಂತ ಸಂತೋಷವಾಗಿದ್ದುಕೊಂಡು ಬಿಡಬೇಕೆಂದು ತೀರ್ಮಾನಿಸಿ ಅರಮನೆಯಂಥ ಮನೆಯನ್ನು ಕಟ್ಟಿಸಿದರು. ಅದರ ಗೃಹಪ್ರವೇಶಕ್ಕೆ ಒಂದು ವಾರ ಮೊದಲು ಹೃದಯಾಘಾತದಿಂದ ತೀರಿಹೋದರು.

ಬದುಕಿನುದ್ದಕ್ಕೂ ಸುಖದ ಆಸೆಗೆ ಒದ್ದಾಟ, ಸಂತೋಷಕ್ಕಾಗಿ ಸಂಕಟ. ಇದನ್ನೇ ಕಗ್ಗ ಮೋಹಿನಿಯ ರೂಪ ಎನ್ನುತ್ತದೆ. ಮೋಹಕವಾದ ಆಕರ್ಷಣೆಯ ಬಲೆಗೆ ಸಿಲುಕಿದ ಮನುಷ್ಯ ಅದನ್ನು ಪಡೆಯುವುದಕ್ಕಾಗಿ ಬದುಕಿನ ಕ್ಷಣ, ಅನುಕ್ಷಣ ಸವೆದು ಹೋಗುತ್ತಾನೆ. ಇದೇ ದೀರ್ಘವಾದ ಹತ್ಯೆ, ನಿಧಾನವಾಗಿ, ಹನಿ, ಹನಿಯಾಗಿ ರಕ್ತವನ್ನು ಬಸಿಯುವ, ಹೀರುವ ಮೃತ್ಯು.

ಆಕರ್ಷಣೆಗಳು ನಮ್ಮನ್ನು ವ್ಯವಸ್ಥಿತವಾಗಿ ಕೊಲ್ಲುವಂತೆ ವೈರಿಗಳೂ ಕೊಲ್ಲಲಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT