ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಡಬಲ್ ಆಗುವುದು ಯಾವಾಗ?

Last Updated 24 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ನೀವು ಹೂಡಿಕೆ ಮಾಡಿದ ಹಣ ಎಷ್ಟು ವರ್ಷಗಳಲ್ಲಿ ಡಬಲ್ ಆಗುತ್ತದೆ? ಉಳಿತಾಯದ ಮೊತ್ತ, ಬೆಲೆ ಏರಿಕೆಯಿಂದಾಗಿ ಎಷ್ಟು ಪ್ರಮಾಣದಲ್ಲಿ ಮೌಲ್ಯ ಕಳೆದುಕೊಳ್ಳುತ್ತದೆ? ನಿವೃತ್ತಿ ಸಮಯದಲ್ಲಿ ಉಳಿತಾಯದ ಎಷ್ಟು ಹಣ ಖರ್ಚು ಮಾಡಬೇಕು? ತೆರಿಗೆ ನಂತರದಲ್ಲಿ ಸಾಧ್ಯವಾಗುವ ಉಳಿತಾಯವೆಷ್ಟು? ಹೀಗೆ ಅನೇಕ ಪ್ರಶ್ನೆಗಳು ಪ್ರತಿ ಹೂಡಿಕೆದಾರನ ಮನದಲ್ಲೂ ಇರುತ್ತವೆ. ಈ ಪ್ರಶ್ನೆಗಳು ಎಲ್ಲರಿಗೂ ಒಂದಿಷ್ಟು ಗೊಂದಲವನ್ನೂ ಮೂಡಿಸುತ್ತವೆ. ಆದರೆ ಇವೆಲ್ಲ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳಲು ಕೆಲವು ಸೂತ್ರಗಳಿವೆ.

1. ರೂಲ್ ಆಫ್ 72: ನಿಮ್ಮ ಹಣ ಎಷ್ಟು ವರ್ಷಗಳಲ್ಲಿ ಎರಡು ಪಟ್ಟು ಆಗುತ್ತದೆ ಎನ್ನುವುದಕ್ಕೆ ಉತ್ತರ ಕೊಡುವ ಸೂತ್ರ ‘ರೂಲ್ ಆಫ್ 72’. ಹೂಡಿಕೆ ಮೊತ್ತದ ಮೇಲೆ ಪ್ರತಿ ವರ್ಷ ಪಡೆಯುವ ಬಡ್ಡಿ ಲಾಭವನ್ನು 72ರಿಂದ ಭಾಗಿಸಿದಾಗ ನಿಮ್ಮ ಹೂಡಿಕೆ ಎಷ್ಟು ವರ್ಷಗಳಲ್ಲಿ ಎರಡು ಪಟ್ಟು ಆಗುತ್ತದೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ. ವಾರ್ಷಿಕ ಶೇ 10ರಷ್ಟು ಬಡ್ಡಿ ಸಿಕ್ಕರೆ ನಿಮ್ಮ ಹೂಡಿಕೆ ಮೊತ್ತ ದ್ವಿಗುಣಗೊಳ್ಳಲು 7 ವರ್ಷ 2 ತಿಂಗಳು ಬೇಕು. ವಾರ್ಷಿಕ ಶೇ 5ರಷ್ಟು ಬಡ್ಡಿ ಲಾಭ ದಕ್ಕಿದರೆ ಹೂಡಿಕೆ ಹಣ ಎರಡು ಪಟ್ಟು ಆಗಲು ಸುಮಾರು 14 ವರ್ಷಗಳು ಬೇಕಾಗುತ್ತವೆ. ಒಂದೊಮ್ಮೆ ವಾರ್ಷಿಕ ಶೇ 20ರಷ್ಟು ಬಡ್ಡಿ ಲಾಭ ದೊರಕಿದರೆ ನಿಮ್ಮ ಹಣ ಮೂರೂವರೆ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

2. ರೂಲ್ ಆಫ್ 70: ಬೆಲೆ ಏರಿಕೆ (ಹಣದುಬ್ಬರ) ಕಾರಣದಿಂದಾಗಿ ಎಷ್ಟು ವರ್ಷಗಳಿಗೊಮ್ಮೆ ನಿಮ್ಮ ಹಣದ ಮೌಲ್ಯ ಕುಸಿತ ಕಾಣಲಿದೆ ಎನ್ನುವುದನ್ನು ‘ರೂಲ್ ಆಫ್ 70’ ತಿಳಿಸುತ್ತದೆ. 70ರಿಂದ ಪ್ರಸ್ತುತ ಬೆಲೆ ಏರಿಕೆ ದರವನ್ನು ಭಾಗಿಸಿದಾಗ (70/ಹಣದುಬ್ಬರ) ನಿಮ್ಮ ದುಡ್ಡಿನ ಮೌಲ್ಯ ಎಷ್ಟು ವರ್ಷಗಳಿಗೊಮ್ಮೆ ಅರ್ಧಕ್ಕೆ ಇಳಿಯಲಿದೆ ಎನ್ನುವುದು ಗೊತ್ತಾಗುತ್ತದೆ.

ಉದಾಹರಣೆಗೆ, ಈಗ ಹಣದುಬ್ಬರ ದರ ಶೇ 6.95ರಷ್ಟಿದೆ ಅಂದುಕೊಳ್ಳೋಣ. 70ರಿಂದ 6.95ನ್ನು ಭಾಗಿಸಿ. ಸರಿಸುಮಾರು 10 ವರ್ಷಗಳಿಗೆ ನಿಮ್ಮ ದುಡ್ಡು ಅರ್ಧದಷ್ಟು ಮೌಲ್ಯ ಕಳೆದುಕೊಳ್ಳುತ್ತದೆ ಎಂಬುದು ತಿಳಿಯುತ್ತದೆ. ಅಂದರೆ ಇವತ್ತು ನಿಮ್ಮ ಬಳಿ ಇರುವ ನೂರು ರೂಪಾಯಿ 10 ವರ್ಷಗಳ ಬಳಿಕ ₹ 50ರಷ್ಟು ಮೌಲ್ಯವನ್ನು ಮಾತ್ರ ಹೊಂದಿರಲಿದೆ. ಹೀಗಾಗಿಯೇ, ನಾವು ಮಾಡುವ ಹೂಡಿಕೆಗಳಿಗೆ ಬೆಲೆ ಏರಿಕೆ ಪ್ರಮಾಣವನ್ನು ಮೀರಿ ಲಾಭ ತಂದುಕೊಡುವ ಸಾಮರ್ಥ್ಯ ಇರಬೇಕು ಎಂದು ಸಲಹೆ ನೀಡುವುದು.

3. 4 ಶೇಕಡ ಹಿಂಪಡೆಯುವುದು: ನಿವೃತ್ತಿಯ ಸಮಯಕ್ಕೆಂದು ಹೂಡಿಕೆ ಮಾಡಿದ ಹಣವನ್ನು ನಿವೃತ್ತಿ ವೇಳೆ ಯಾವ ಪ್ರಮಾಣದಲ್ಲಿ ಹಿಂಪಡೆಯುತ್ತಾ ಹೋಗಬೇಕು ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ನಿಯಮ ‘4 ಶೇಕಡ ಹಿಂಪಡೆಯುವುದು’ (4 percent withdrawal). ನಿವೃತ್ತಿಯ ನಂತರದ ಮೊದಲನೇ ವರ್ಷ ನೀವು ಮಾಡಬೇಕಾಗುವ ವೆಚ್ಚದ ಅಂದಾಜು ತೆಗೆದುಕೊಂಡು ಅದನ್ನು 25ರೊಂದಿಗೆ ಗುಣಿಸಿದಾಗ ಎಷ್ಟು ಮೊತ್ತ ಬರುವುದೋ ಅದರಲ್ಲಿ ಪ್ರತಿ ವರ್ಷ ಶೇ 4ರಷ್ಟನ್ನು ಹಿಂದಕ್ಕೆ ಪಡೆಯಬಹುದು ಎನ್ನುವುದನ್ನು ಈ ನಿಯಮ ಹೇಳುತ್ತದೆ.

ಉದಾಹರಣೆಗೆ ನಾನು 50ನೇ ವರ್ಷ ವಯಸ್ಸಿಗೆ ನಿವೃತ್ತಿ ತೆಗೆದುಕೊಳ್ಳುತ್ತಿದ್ದು ನಿವೃತ್ತಿ ಜೀವನದ ಮೊದಲ ವರ್ಷದ ವೆಚ್ಚ ₹ 5 ಲಕ್ಷ ಎಂದಿಟ್ಟುಕೊಳ್ಳಿ. ಇದರಂತೆ ಲೆಕ್ಕಾಚಾರ ಮಾಡಿದಾಗ ನಿವೃತ್ತಿ ಜೀವನಕ್ಕಾಗಿ ₹ 1.25 ಕೋಟಿ
( 5,00,000 * 25 = 1.25 ಕೋಟಿ) ಬೇಕಾಗುತ್ತದೆ. ಈ ಮೊತ್ತದಲ್ಲಿ ನಾನು ಪ್ರತಿ ವರ್ಷ ಶೇ 4ರಷ್ಟು ಅಂದರೆ ₹ 5 ಲಕ್ಷ ಹಿಂಪಡೆಯಬಹುದು. ನಿವೃತ್ತಿ ಜೀವನದ ಖರ್ಚು–ವೆಚ್ಚಗಳನ್ನು ನಿಭಾಯಿಸಲು ಈ ಹಣ ಅಗತ್ಯವಾಗಿ ಬೇಕಾಗುತ್ತದೆ.

4. 10–5–3 ರೂಲ್: ಈ ನಿಯಮ ತೆರಿಗೆ ಪಾವತಿಸಿದ ನಂತರದಲ್ಲಿ ನಿಮ್ಮ ಹೂಡಿಕೆ ಎಷ್ಟು ಲಾಭ ನೀಡಬಹುದು ಎನ್ನುವುದನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ ಷೇರು ಮಾರುಕಟ್ಟೆ ಹೂಡಿಕೆ ನಿಮಗೆ ತೆರಿಗೆ ನಂತರದಲ್ಲಿ ವಾರ್ಷಿಕ ಶೇ 10ರಷ್ಟು ಲಾಭಾಂಶ ಕೊಡುತ್ತದೆ ಎಂದಿಟ್ಟುಕೊಳ್ಳಿ. ನಿಶ್ಚಿತ ಠೇವಣಿ (ಎಫ್.ಡಿ) ತೆರಿಗೆ ನಂತರದಲ್ಲಿ ವಾರ್ಷಿಕ ಶೇ 5ರಷ್ಟು ಲಾಭಾಂಶ ಕೊಡುತ್ತದೆ. ಇನ್ನು, ಉಳಿತಾಯ ಖಾತೆಯಲ್ಲಿ ಶೇ 3ರಷ್ಟು ಲಾಭ ದಕ್ಕುತ್ತದೆ. ಈಕ್ವಿಟಿ, ನಿಶ್ಚಿತ ಠೇವಣಿಗಳು ಹಾಗೂ ಉಳಿತಾಯ ಖಾತೆಯಲ್ಲಿನ ಹೂಡಿಕೆಗಳಿಂದ ಸಿಗುವ ಲಾಭವನ್ನು ಈ ನಿಯಮ ಬಳಸಿ ಲೆಕ್ಕಹಾಕಿ, ನೀವು ನಿರ್ದಿಷ್ಟ ಅವಧಿಯ ನಂತರ ಎಷ್ಟು ಹಣ ಸಿಗಬಹುದು ಎಂಬ ಅಂದಾಜು ಮಾಡಬಹುದು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT