ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಸಿಗುತ್ತಾ ಆರೋಗ್ಯ ವಿಮೆ?

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರ ಮಧ್ಯೆ, ಈ ಸೋಂಕಿಗೆ ತುತ್ತಾದವರ ಚಿಕಿತ್ಸೆಗೆ ವಿಮೆ ಕವರೇಜ್ ಸಿಗುವುದೇ? ಇನ್ಶುರೆನ್ಸ್ ಕಂಪನಿಗಳು ಕ್ಲೇಮ್ ನೀಡುತ್ತವೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಆರೋಗ್ಯ ವಿಮೆ ಹೊಂದಿರುವ ಗ್ರಾಹಕರಲ್ಲಿರುವ ಈ ಗೊಂದಲ ಬಗೆಹರಿಸಲು ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ಸುತ್ತೋಲೆ ಹೊರಡಿಸಿದೆ.

ಈ ಸುತ್ತೋಲೆಯಲ್ಲಿ ಇರುವುದೇನು ಮತ್ತು ಅಸಲಿಗೆ ವಿಮಾ ಕಂಪನಿಗಳು ಕೋವಿಡ್-19 ಸೋಂಕಿಗೆ ಚಿಕಿತ್ಸೆಗಾಗಿ ಯಾವ ರೀತಿಯ ವಿಮೆ ಕ್ಲೇಮ್ ನೀಡುತ್ತವೆ ಎನ್ನುವ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಯಾವಾಗ ಇನ್ಶುರೆನ್ಸ್ ಅನ್ವಯ
ಆರೋಗ್ಯ ವಿಮೆ ಹೊಂದಿರುವ ಯಾವುದೇ ವ್ಯಕ್ತಿ ಈ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಗಳ ಅವಧಿಗಿಂತ ಹೆಚ್ಚು ಸಮಯ ಚಿಕಿತ್ಸೆ ಪಡೆದರೆ, ಆ ತೊಂದರೆಗೆ ಒಳಗಾಗಿರುವ ನಿರ್ದಿಷ್ಟ ವ್ಯಕ್ತಿಗೆ ವಿಮಾ ಕ್ಲೇಮ್ ಸಿಗುತ್ತದೆ. ಸಾಮಾನ್ಯ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಾಗ ಯಾವ ರೀತಿ ವಿಮೆ ಕ್ಲೇಮ್ ಪ್ರಕ್ರಿಯೆ ಜಾರಿಯಾಗುತ್ತದೋ ಅದೇ ರೀತಿ ಈ ಸೋಂಕಿಗೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಕ್ಲೇಮ್ ಲಭ್ಯವಾಗುತ್ತದೆ.

ಈ ಬಗ್ಗೆ ಐಆರ್‌ಡಿಎಐ ಇನ್ಶೂರೆನ್ಸ್ ಕಂಪನಿಗಳಿಗೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿರುವ ಕೆಲ ನಿಬಂಧನೆಗಳಿಗೆ ಒಳಪಟ್ಟು ಕ್ಲೇಮ್ ನೀಡಲಾಗುತ್ತದೆ.

ಯಾರಿಗೆ ಈ ಕವರೇಜ್, ಕ್ಲೇಮ್ ಲಭ್ಯ?
ಆರೋಗ್ಯ ವಿಮೆ ಕೊಳ್ಳುವಾಗ ಯಾರು ಆಸ್ಪತ್ರೆ ವೆಚ್ಚಗಳನ್ನು ಪರಿಗಣಿಸುವ ಪಾಲಿಸಿ ಖರೀದಿ ಮಾಡಿರುವರೋ ಅವರಿಗೆಲ್ಲಾ ಈ ಸೋಕಿಂನಿಂದಾಗಿ ಬರುವ ಆಸ್ಪತ್ರೆ ವೆಚ್ಚಗಳಿಗೆ ವಿಮೆಯಲ್ಲಿ ಕವರೇಜ್ ಸೌಲಭ್ಯವಿರುತ್ತದೆ.

ಚಿಕಿತ್ಸೆಯ ಸಮಯದಲ್ಲಿ ಪರಿಗಣಿಸಲ್ಪಡುವ (ಸ್ವೀಕಾರಾರ್ಹ) ವೈದ್ಯಕೀಯ ವೆಚ್ಚಗಳನ್ನು ಇನ್ಶೂರೆನ್ಸ್ ಕಂಪನಿಗಳು ಪಾಲಿಸಿಯ ನಿಬಂಧನೆಗಳು ಮತ್ತು ಒಪ್ಪಂದಕ್ಕೆ ಅನುಗುಣವಾಗಿ ನೀಡಲಿವೆ.

ಕೋವಿಡ್-19 ರ ಅಡಿಯಲ್ಲಿ ಸಲ್ಲಿಸಿರುವ ಕ್ಲೇಮ್‌ಗಳನ್ನು ನಿರಾಕರಿಸುವ ಮೊದಲು ಸಂಬಂಧಪಟ್ಟ ಸಮಿತಿಯು ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.

ಸದ್ಯದ ಸ್ಥಿತಿಯಲ್ಲಿ ಆರೋಗ್ಯ ವಿಮೆ ಹೊಂದಿರುವವರಿಗೆ ಈ ವೈರಸ್‌ ಸೋಕಿಂಗೆ ಚಿಕಿತ್ಸೆ ಲಭ್ಯ. ಈ ಸೋಂಕು, ಈ ಮೊದಲೇ ಇದ್ದ ಅನಾರೋಗ್ಯ (ಪ್ರೀ ಎಕ್ಸಿಸ್ಟಿಂಗ್ ಡಿಸೀಸ್) ಸಮಸ್ಯೆಯಲ್ಲದ ಕಾರಣ ಕಾಯುವಿಕೆ ಅವಧಿ (ವೇಯ್ಟಿಂಗ್ ಪೀರಿಯಡ್) ಇಲ್ಲದೆ ಚಿಕಿತ್ಸೆ ಲಭಿಸುತ್ತದೆ.

ಈ ನಡುವೆ ಕೋವಿಡ್ -19 ಗೇ ಪ್ರತ್ಯೇಕವಾಗಿ ಇನ್ಶುರೆನ್ಸ್ ಪಾಲಿಸಿಗಳನ್ನು ರೂಪಿಸುವಂತೆ ಸಹ ಐಆರ್‌ಡಿಎಐ ಸೂಚನೆ ನೀಡಿದೆ.

ಯಾವಾಗ ವಿಮಾ ಕವರೇಜ್ ಸಿಗುವುದಿಲ್ಲ?

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸದ್ಯ ಕೋವಿಡ್ -19 ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡಿಲ್ಲ. ಸಾಂಕ್ರಾಮಿಕ ಎಂದು ಘೋಷಣೆಯಾದ ಬಳಿಕ ಆರೋಗ್ಯ ವಿಮೆ ಕವರೇಜ್ ಸಿಗುವ ಸಾಧ್ಯತೆ ಕಡಿಮೆ.

ಏಕೆಂದರೆ, ಬಹುತೇಕ ಆರೋಗ್ಯ ವಿಮೆ ಪಾಲಿಸಿಗಳು ಸಾಂಕ್ರಾಮಿಕ ರೋಗಕ್ಕೆ ಕವರೇಜ್ ನೀಡುವುದಿಲ್ಲ ಎನ್ನುವ ಷರತ್ತನ್ನು ಪಾಲಿಸಿ ಖರೀದಿ ಸಮಯದಲ್ಲೇ ವಿಧಿಸಿರುತ್ತವೆ. ಆದರೆ ಸದ್ಯದ ಮಟ್ಟಿಗೆ ವಿಮೆ ಕವರೇಜ್ ಸಿಗುತ್ತದೆ ಎನ್ನುವುದು ಸ್ಪಷ್ಟ.

ಷೇರುಪೇಟೆ ದಿಕ್ಕು; ಊಹೆ ಕಷ್ಟ
ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 10 ರಂದು ಷೇರುಪೇಟೆಗೆ ರಜೆ. ಈ ವಾರ ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಕೈಗಾರಿಕೆ ಉತ್ಪಾದನೆ ದತ್ತಾಂಶಗಳು ಪ್ರಕಟಗೊಳ್ಳಲಿವೆ. ಹಣಕಾಸು ಆಯೋಗದ ಪ್ರಮುಖರು ಮಾರ್ಚ್ 13 ರಂದು ಎಲ್ಲಾ ರಾಜ್ಯಗಳ ಹಣಕಾಸು ಸಚಿವರನ್ನು ಭೇಟಿ ಮಾಡಲಿದ್ದಾರೆ.

ವಿತ್ತೀಯ ಕೊರತೆ ನಿರ್ವಹಣೆ ವಿಚಾರದಲ್ಲಿ ಎಫ್‌ಆರ್‌ಬಿಎಂ ನಿಯಮಗಳಿಗೆ ಅನುಗಣವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ. ಇದರ ಮಧ್ಯೆ 39 ನೇ ಜಿಎಸ್‌ಟಿ ಮಂಡಳಿ ಸಭೆಯೂ ಜರುಗಲಿದೆ. ಕೋವಿಡ್ -19 ಸೋಂಕಿನ ಕಾರಣದಿಂದಾಗಿ ಮತ್ತು ಯೆಸ್ ಬ್ಯಾಂಕ್ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆಯಲ್ಲಿರುವ ಅನಿಶ್ಚತ ವಾತಾವರಣ ಎಷ್ಟರ ಮಟ್ಟಿಗೆ ಬದಲಾವಣೆಯಾಗಲಿದೆ ಎನ್ನುವುದನ್ನು ಊಹೆ ಮಾಡುವುದು ಕಷ್ಟವಾಗಿದೆ.

ಕೋವಿಡ್, ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಪೇಟೆ ತತ್ತರ: ಯೆಸ್ ಬ್ಯಾಂಕ್ ಬಿಕ್ಕಟ್ಟು ಮತ್ತು ಕೋವಿಡ್ - 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ತತ್ತರಿಸಿದೆ. 37,576 ಅಂಶಗಳಿಗೆ ಕುಸಿದಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.8 ರಷ್ಟು ಕುಸಿದಿದ್ದರೆ, 10,989 ಅಂಶಗಳಲ್ಲಿ ವಹಿವಾಟು ಪೂರ್ಣಿಗೊಳಿಸಿರುವ ನಿಫ್ಟಿ (50) ಶೇ 1.9 ರಷ್ಟು ತಗ್ಗಿದೆ. ನಿಫ್ಟಿ (100) ಮಧ್ಯಮ ಶ್ರೇಣಿ ಸೂಚ್ಯಂಕ ಶೇ 2.4 ರಷ್ಟು ಹಿನ್ನಡೆ ಕಂಡಿದೆ. ವಲಯವಾರು ಪ್ರಗತಿ ನೋಡಿದಾಗ, ಈ ವಾರ ನಿಫ್ಟಿ ಮಾಹಿತಿ ತಂತ್ರಜ್ಞಾನ ಮತ್ತು ನಿಫ್ಟಿ ಫಾರ್ಮಾ ವಲಯ ಮಾತ್ರ ಸಕಾರಾತ್ಮಕ ಪ್ರಗತಿ ಕಂಡಿವೆ.

ಇಳಿಕೆ: ಯೆಸ್ ಬ್ಯಾಂಕ್ ಬಿಕ್ಕಟ್ಟಿನಿಂದಾಗಿ ಷೇರುಗಳು ವಾರದ ಅವಧಿಯಲ್ಲಿ ಶೇ 53 ರಷ್ಟು ಕುಸಿದಿವೆ.

ಕೋವಿಡ್‌ನಿಂದಾಗಿ ಟಾಟಾ ಮೋಟರ್ಸ್ ಷೇರುಗಳು ಶೇ 11 ರಷ್ಟು ತಗ್ಗಿದೆ. ಯೆಸ್ ಬ್ಯಾಂಕ್ ಎಸ್‌ಬಿಐ ವಶಕ್ಕೆ ಬರಲಿದೆ ಎನ್ನುವ ಸುದ್ದಿಯ ಹಿನ್ನಲೆಯಲ್ಲಿ ಎಸ್‌ಬಿಐ ಶೇ 11 ರಷ್ಟು ಇಳಿಕೆಯಾಗಿದ್ದರೆ, ಐಟಿಸಿ, ಟಾಟಾ ಸ್ಟೀಲ್ , ಜೀ ಎಂಟರ್‌ಟೇನ್ಮೆಂಟ್‌, ಆ್ಯಕ್ಸಿಸ್ ಬ್ಯಾಂಕ್, ಬಿಪಿಸಿಎಲ್, ಮತ್ತು ಭಾರ್ತಿ ಇನ್ಫ್ರಾಟೆಲ್ ಶೇ 5 ರಿಂದ ಶೇ 8 ರಷ್ಟು ಕುಗ್ಗಿವೆ.

ಏರಿಕೆ: ಡಾ. ರೆಡ್ಡೀಸ್ ಲ್ಯಾಬ್ಸ್, ಸನ್ ಫಾರ್ಮಾ, ಸಿಪ್ಲಾ ಸೇರಿ ಪ್ರಮುಖ ಫಾರ್ಮಾ ಷೇರುಗಳು ಶೇ 7 ರಿಂದ ಶೇ 8 ರಷ್ಟು ಜಿಗಿದಿವೆ. ಫಾರ್ಮಾ ಕಂಪನಿಗಳ ಹೂಡಿಕೆ ಸದ್ಯದ ಮಟ್ಟಿಗೆ ಸುರಕ್ಷಿತ ಎನ್ನುವ ಕಾರಣದಿಂದ ಮಾಡಿದ ಈ ಹೂಡಿಕೆ ಏರಿಕೆಗೆ ಕಾರಣವಾಗಿದೆ.

ರಾಯಲ್ ಎನ್ ಫೀಲ್ಡ್ ಬೈಕ್ ಮಾರಾಟದಲ್ಲಿ ಶೇ 1 ರಷ್ಟು ಏರಿಕೆಯಾಗಿರುವುದರಿಂದ ಐಷರ್ ಮೋಟರ್ಸ್‌ನ ಷೇರುಗಳ ಬೆಲೆ ಶೇ 7 ರಷ್ಟು ಹೆಚ್ಚಳವಾಗಿದೆ. ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ಪವರ್ ಗ್ರೀಡ್ , ಏಷಿಯನ್ ಪೇಂಟ್ಸ್ , ನೆಸ್ಲೆ , ಬ್ರಿಟಾನಿಯಾ ಕಂಪನಿಗಳು ಶೇ 3 ರಿಂದ ಶೇ 6 ರಷ್ಟು ಗಳಿಸಿವೆ. ಮಧ್ಯಮ ಶ್ರೇಣಿ ಷೇರುಗಳಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶೇ 40, ಇಂಡಿಯಾ ಬುಲ್ಸ್ ವೆಂಚರ್, ದೀಪಕ್ ನೈಟ್ರೈಟ್, ಪಿಡಿಲೈಟ್, ದಿವೀಸ್ ಲ್ಯಾಬ್ಸ್, ಹ್ಯಾವೆಲ್ಸ್ ಮೈಂಡ್ ಟ್ರೀ ಶೇ 3 ರಿಂದ ಶೇ 30 ರಷ್ಟು ಗಳಿಸಿವೆ.

ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT