ಸೋಮವಾರ, ಡಿಸೆಂಬರ್ 9, 2019
17 °C

ಹಣಕಾಸು ನಿರ್ವಹಣೆಗೆ ಪಂಚ ಸೂತ್ರ

Published:
Updated:

ನಾವು ಹಣವನ್ನು ಕಾಪಾಡಿದರೆ ಹಣ ನಮ್ಮನ್ನು ಕಾಪಾಡುತ್ತದೆ. ಹೌದು. ಈ ಮಾತು ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಅಕ್ಷರಶಃ ಸತ್ಯ. ಆರ್ಥಿಕ ಶಿಸ್ತು ರೂಢಿಸಿಕೊಂಡ ವ್ಯಕ್ತಿ ಜೀವನದಲ್ಲಿ ನೆಮ್ಮದಿ, ಯಶಸ್ಸು ಎರಡನ್ನೂ ಸಾಧಿಸುತ್ತಾನೆ. ಹಣಕಾಸು ನಿರ್ವಹಣೆಯಲ್ಲಿ ಬಹಳ ಮುಖ್ಯ ಎನಿಸುವ ಪಂಚ ಸೂತ್ರಗಳ ವಿ‌ವರಣೆ ಈ ಇಲ್ಲಿದೆ.

ಉಳಿತಾಯ ನಿಮ್ಮ ಆಪ್ತಮಿತ್ರ: ಹೆಚ್ಚು ಆದಾಯ ಇರುವವರು ಮಾತ್ರ ಉಳಿತಾಯ ಮಾಡಬಹುದು ಎನ್ನುವುದು ವಾಸ್ತವಕ್ಕೆ ದೂರವಾದ ಮಾತು. ಗಳಿಸಿದ ಹಣವನ್ನು ಉಳಿಸಿ ಬೆಳೆಸಲು ಗಟ್ಟಿ ನಿರ್ಧಾರ ಮಾಡುವುದು ಬಹಳ ಮುಖ್ಯ.

‘ಖರ್ಚು ಮಾಡಿದ ನಂತರ ಉಳಿತಾಯ ಮಾಡಬೇಡಿ, ಉಳಿತಾಯ ಮಾಡಿದ ನಂತರದಲ್ಲಿ ಖರ್ಚು ಮಾಡಿ’ ಎನ್ನುವ ಹೂಡಿಕೆ ತಜ್ಞ ವಾರನ್ ಬಫೆಟ್ ಅವರ ಮಾತನ್ನು ಇಲ್ಲಿ ಅರಿತುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಆದಾಯದ ಶೇ 10 ರಷ್ಟನ್ನಾದರೂ ಉಳಿತಾಯ ಮಾಡಬೇಕು ಎನ್ನುವುದು ಮಾನದಂಡ. ಆದರೆ ವಿವೇಚನೆ ಬಳಸಿ ಖರ್ಚು ಮಾಡುವುದರ ಜತೆಗೆ ಜೀವನಶೈಲಿಯಲ್ಲಿ ಸ್ವಲ್ಪ ಮಟ್ಟಿನ ರಾಜಿ ಮಾಡಿಕೊಂಡರೆ ಬರುವ ಆದಾಯದಲ್ಲಿ ಶೇ 20 ರಿಂದ ಶೇ 25 ರಷ್ಟು ಉಳಿಸಿ ಕ್ರಮಬದ್ಧವಾಗಿ ಹೂಡಿಕೆ ಮಾಡುವ ಮೂಲಕ ಹಣ ಬೆಳೆಸಬಹುದು.

ತುರ್ತು ನಿಧಿ ಯಾರಿಗೆ ಎಷ್ಟು ಅಗತ್ಯ: ಬದುಕಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸುವುದು ಸರ್ವೇ ಸಾಮಾನ್ಯ. ಇಂತಹ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಅಗತ್ಯ.

ತುರ್ತು ನಿಧಿ ಕಷ್ಟಕಾಲದಲ್ಲಿ ನಮ್ಮನ್ನು ಕಾಪಾಡುವ ಜತೆಗೆ, ಹೂಡಿಕೆಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಒದಗಿಸಿಕೊಡುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮ ಮೂರು ತಿಂಗಳ ಸಂಬಳವನ್ನು ತುರ್ತು ನಿಧಿಯ ರೂಪದಲ್ಲಿ ಇಟ್ಟುಕೊಂಡರೆ ಅನುಕೂಲ. ಖಾಸಗಿ ಉದ್ಯೋಗಿಗಳು 6 ತಿಂಗಳ ವೇತನವನ್ನು ಇದಕ್ಕೆ ಪರಿಗಣಿಸಬಹುದು. ಅದೇ ರೀತಿ ಸ್ವಂತ ಉದ್ಯೋಗ ಹೊಂದಿರುವವರು ಕನಿಷ್ಠ 10 ತಿಂಗಳ ಆದಾಯವನ್ನು ತುರ್ತು ನಿಧಿಗೆ ಮೀಸಲಿಡುವುದು ಒಳಿತು.

‘ಇಎಂಐ’ಗಳಿಗೆ ಲಕ್ಷ್ಮಣರೇಖೆ ಇರಲಿ: ನಾವೆಲ್ಲಾ ಏನನ್ನಾದರೂ ಕೊಳ್ಳುವ ಮೊದಲು ನಮ್ಮ ಅಗತ್ಯಗಳು, ಆದ್ಯತೆಗಳು ಮತ್ತು ಆರ್ಥಿಕ ಪರಿಸ್ಥಿತಿಯ ಬಗೆಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು. ಹಳೆಯ ತಲೆಮಾರಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಆದರೆ ಇವತ್ತಿನ ಕೊಳ್ಳುಬಾಕತನದ ಯುಗದಲ್ಲಿ ಎಲ್ಲವೂ ‘ಇಎಂಐ’ಮಯವಾಗಿದೆ.

ಸಾಲ ಮಾಡುವಾಗ ಅದು ಉತ್ಪಾದಕ ಸಾಲವೋ ಅನುತ್ಪಾದಕ ಸಾಲವೋ ಎನ್ನುವುದನ್ನು ಮನಗಂಡು ಮುನ್ನಡೆಯಬೇಕು. ಸಾಧ್ಯವಾದಷ್ಟು ಗೃಹ ಸಾಲ, ಶಿಕ್ಷಣ ಸಾಲ ಹೊರತುಪಡಿಸಿ ಇನ್ನುಳಿದ ಸಾಲಗಳನ್ನು ಪಡೆಯುವುದನ್ನು ತಪ್ಪಿಸಬೇಕು. ಯಾವುದೇ ಸಂದರ್ಭದಲ್ಲಿ ನಮ್ಮ ಸಾಲದ ಮಾಸಿಕ ಕಂತುಗಳು ನಮ್ಮ ಆದಾಯದ ಶೇ 30 ರಿಂದ ಶೇ 40ಕ್ಕಿಂತ ಅಧಿಕವಾಗಿರಬಾರದು.

ಷೇರುಪೇಟೆ ಹೂಡಿಕೆ ಕಡೆಗಣಿಸಬೇಡಿ: ಆರ್ಥಿಕ ಹಿಂಜರಿಕೆಯಂತಹ ಪರಿಸ್ಥಿತಿಗಳ ನಡುವೆಯೂ ಷೇರುಪೇಟೆ ಹೂಡಿಕೆ ಹೆಚ್ಚು ಆದಾಯ ತಂದುಕೊಡುತ್ತದೆ ಎನ್ನುವುದನ್ನು ಅಂಕಿ-ಅಂಶಗಳು ಹೇಳುತ್ತವೆ.

ಹೀಗಾಗಿ ನಿಮ್ಮ ಹೂಡಿಕೆಯಲ್ಲಿ ಷೇರು ಖರೀದಿ ಮತ್ತು ಮ್ಯೂಚುವಲ್ ಫಂಡ್‌ಗಳನ್ನು ನಿರ್ಲಕ್ಷಿಸಬೇಡಿ. ನೀವು ಎಷ್ಟು ಗಂಡಾಂತರ ಎದುರಿಸಬಲ್ಲಿರಿ (ರಿಸ್ಕ್ ತೆಗೆದುಕೊಳ್ಳಬಹುದು) ಎನ್ನುವುದನ್ನು ಮನಗಂಡು ಎಚ್ಚರಿಕೆಯಿಂದ ಷೇರುಗಳಲ್ಲಿ ಹಣ ತೊಡಗಿಸುವ ಬಗ್ಗೆ ತೀರ್ಮಾನಿಸಿ.

ಸಂಬಂಧಿಕರ ಮುಲಾಜಿಗೆ ಹೂಡಿಕೆ ಸಲ್ಲದು: ಪರಿಚಯದವರು ಹೇಳಿದರು, ಸಂಬಂಧಿಕರು ಕೇಳಿದರು ಎನ್ನುವ ಕಾರಣಗಳಿಗೆ ಕೆಲವರು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುತ್ತಾರೆ. ಆದರೆ ಹೀಗೆ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಯೇ ಹೆಚ್ಚು.

‘ಯಾವ ವ್ಯಕ್ತಿ ಕುಟುಂಬದವರ, ಸಂಬಂಧಿಕರ, ಮೂಲಾಜಿಗೆ ಸಿಕ್ಕಿ ಹಣ ವ್ಯಯಿಸುವ ಬಗ್ಗೆ ತೀರ್ಮಾನಿಸುತ್ತಾನೋ ಆ ವ್ಯಕ್ತಿ ಆರ್ಥಿಕ ಹಿನ್ನಡೆ ಅನುಭವಿಸುತ್ತಾನೆ’ ಎಂದು ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಈ ಮಾತಿನ ತಿರುಳನ್ನು ಅರ್ಥೈಸಿಕೊಂದು ಮುನ್ನಡೆಯುವುದಕ್ಕೆ ನಾವು ಆದ್ಯತೆ ನೀಡಬೇಕು.

ಕುಸಿತದ ನಡುವೆ ಚೇತರಿಕೆ ನಿರೀಕ್ಷೆ
ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಶೇ 2 ರಷ್ಟು ಕುಸಿತ ದಾಖಲಿಸಿವೆ. ಆರ್ಥಿಕತೆಗೆ ಬಲತುಂಬುವ ನಿಟ್ಟಿನಲ್ಲಿ ಸರ್ಕಾರ ಸುಧಾರಣಾ ಕ್ರಮಗಳನ್ನು ಘೋಷಿಸಲಿದೆ ಎಂಬ ನಿರೀಕ್ಷೆ ಹೂಡಿಕೆದಾರರ ವಲಯದಲ್ಲಿದ್ದ ಕಾರಣ ಪೇಟೆಯಲ್ಲಿ ಹಿಂಜರಿಕೆಯ ವಾತಾವರಣವಿತ್ತು. 36,701 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಗೆ ಶೇ 1.9 ರಷ್ಟು ಕುಸಿದಿದೆ. ನಿಫ್ಟಿ (50) 10,829 ರಲ್ಲಿ ವಹಿವಾಟು ಪೂರ್ಣಗೊಳಿಸಿದ್ದು, 1.7 ರಷ್ಟು ಕುಸಿತ ದಾಖಲಿಸಿದೆ.

ಮತ್ತೆ ಚೇತರಿಕೆ ನಿರೀಕ್ಷೆ: ವಿದೇಶಿ ಹೂಡಿಕೆದಾರರಿಗೆ ವಿಧಿಸಿರುವ ಸರ್ಚಾಜ್ ರದ್ದುಪಡಿಸುವಿಕೆ, ದೇಶೀಯ ಹೂಡಿಕೆದಾರರಿಗೆ ತೆರಿಗೆ ವಿನಾಯ್ತಿ, ಆರ್ಥಿಕ ಹಿಂಜರಿಕೆ ಸುಧಾರಿಸಲು ಪೂರಕ ಕ್ರಮಗಳ ಘೋಷಣೆ ಸೇರಿ ಸರ್ಕಾರದಿಂದ ಹಲವು ಸಕಾರಾತ್ಮಕ ತೀರ್ಮಾನಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಶುಕ್ರವಾರ (ಆಗಸ್ಟ್ 23) ತೆಗೆದುಕೊಂಡಿದ್ದಾರೆ. ಆದ್ದರಿಂದ ಪೇಟೆಯಲ್ಲಿ ಮತ್ತೆ ಚೇತರಿಕೆಯ ದಿನಗಳು ಕಂಡುಬರುವ ನಿರೀಕ್ಷೆಯಿದೆ.

ವಲಯವಾರು: ನಿಫ್ಟಿ ಐ.ಟಿ ಮತ್ತು ಫಾರ್ಮಾ ವಲಯ ಹೊರತುಪಡಿಸಿ ವಾರದ ಅವಧಿಯಲ್ಲಿ ಎಲ್ಲ ವಲಯಗಳು ಕುಸಿತ ಕಂಡಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 7.7, ಲೋಹ ವಲಯ ಶೇ 5.1, ಬ್ಯಾಂಕ್ ವಲಯ ಶೇ 4.4 ಮತ್ತು ಹಣಕಾಸು ವಲಯ 
ಶೇ 3.7 ರಷ್ಟು ಕುಸಿದಿವೆ.

ಗಳಿಕೆ: ಮಾರುತಿ ಸುಜುಕಿ ವಾರದ ಅವಧಿಯಲ್ಲಿ ಶೇ 4.7 ರಷ್ಟು ಗಳಿಕೆ ಕಂಡಿದೆ. ಟಿಸಿಎಸ್, ಟೆಕ್ ಮಹೀಂದ್ರಾ, ಇನ್ಫೊಸಿಸ್ ಷೇರುಗಳು ಶೇ 2.2 ರಿಂದ 4.3 ರಷ್ಟು ಪ್ರಗತಿ ಸಾಧಿಸಿವೆ.

ರೂಪಾಯಿ ಮೌಲ್ಯ ಕುಸಿತದ ಪರಿಣಾಮದಿಂದ ಐ.ಟಿ ವಲಯದ ಷೇರುಗಳಲ್ಲಿ ಚೇತರಿಕೆ ಕಾಣುತ್ತಿದೆ. ಸನ್ ಫಾರ್ಮಾ ಘಟಕದಲ್ಲಿ ಯಾವುದೇ ಕಾನೂನು ಲೋಪವಾಗಿಲ್ಲ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ದೃಢಪಡಿಸಿದ ಕಾರಣ ಕಂಪನಿ ಷೇರುಗಳಲ್ಲಿ ಶೇ 3.2 ರಷ್ಟು ಏರಿಕೆ ಕಂಡುಬಂತು.

ಇಳಿಕೆ: ಹಣಕಾಸು ದುರುಪಯೋಗದ ಆರೋಪ ಎದುರಿಸುತ್ತಿರುವ ಸಿಜಿ ಪವರ್‌ನಲ್ಲಿ ಶೇ 12.6 ರಷ್ಟು ಪಾಲುದಾರಿಕೆ ಹೊಂದಿರುವ ಬಗ್ಗೆ ಸುದ್ದಿಯಾಗಿರುವುದರಿಂದ ಯೆಸ್ ಬ್ಯಾಂಕ್ ಷೇರುಗಳು ವಾರದ ಅವಧಿಯಲ್ಲಿ ಶೇ25 ರಷ್ಟು ಕುಸಿದಿವೆ.

ಮುನ್ನೋಟ: ಮೊದಲನೇ ತ್ರೈಮಾಸಿಕದ ಜಿಡಿಪಿ ದತ್ತಾಂಶ ಈ ವಾರ ಹೊರಬೀಳಲಿದೆ. ಜತೆಗೆ ವಿತ್ತೀಯ ಕೊರತೆ ಅಂಕಿ-ಅಂಶವೂ ಲಭ್ಯವಾಗಲಿದೆ. ವಿತ್ತ ಸಚಿವರು ಘೋಷಿಸಿರುವ ತೆರಿಗೆ ವಿನಾಯ್ತಿ ಮತ್ತು ಇನ್ನಿತರ ಆರ್ಥಿಕ ಉತ್ತೇಜನಾ ಕ್ರಮಗಳು ಸಹ ಹೂಡಿಕೆದಾರರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.

(ಲೇಖಕ; ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು