ಸೋಮವಾರ, ಡಿಸೆಂಬರ್ 5, 2022
23 °C

ಚಿನ್ನ: ಹೂಡಿಕೆಗೆ 6 ದಾರಿಗಳು

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

ಚಿನ್ನದ ಮೇಲೆ ಹೂಡಿಕೆ ಎಂದಾಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಚಿತ್ರಣ ಆಭರಣ ಖರೀದಿ. ಆದರೆ ಒಡವೆ ಖರೀದಿಯ ಆಚೆಗೂ ಚಿನ್ನದ ಮೇಲಿನ ಹೂಡಿಕೆಯಲ್ಲಿ ಹಲವು ಆಯ್ಕೆಗಳಿವೆ. ಇಟಿಎಫ್, ಮ್ಯೂಚುವಲ್ ಫಂಡ್, ಸಾವರಿನ್ ಗೋಲ್ಡ್ ಬಾಂಡ್, ಡಿಜಿಟಲ್ ಗೋಲ್ಡ್ ಹೀಗೆ ವಿವಿಧ ಮಾದರಿಯ ಹೂಡಿಕೆಗಳು ಜನಪ್ರಿಯವಾಗಿವೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಇರುವ ವಿವಿಧ ಅನುಕೂಲಕರ ಆಯ್ಕೆಗಳ ಬಗ್ಗೆ ಹೆಚ್ಚು ತಿಳಿಯೋಣ.

1) ಆಭರಣ ಖರೀದಿ: ಚಿನ್ನದ ಆಭರಣ ಖರೀದಿಸುವ ಮೂಲಕ ಅನೇಕರು ಹೂಡಿಕೆ ಆರಂಭಿಸಿರುವುದಾಗಿ ಭಾವಿಸುತ್ತಾರೆ. ಆದರೆ ಒಡವೆ ಖರೀದಿಯು ವಾಸ್ತವದಲ್ಲಿ ಹೂಡಿಕೆ ಅಲ್ಲ. ವೈಯಕ್ತಿಕ ಖುಷಿಗಾಗಿ ಚಿನ್ನ ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಅದನ್ನು ಹೂಡಿಕೆ ಎಂದು ಭಾವಿಸಬೇಕಾಗಿಲ್ಲ. ಚಿನ್ನದ ಆಭರಣ ಖರೀದಿಸುವಾಗ ಬಹಳ ದೊಡ್ಡ ಹೊರೆ ಬೀಳುವುದು ಮೇಕಿಂಗ್ ಮತ್ತು ವೇಸ್ಟೇಜ್ ಶುಲ್ಕದ ಮೂಲಕ. ಸದ್ಯ ಮೇಕಿಂಗ್ ಚಾರ್ಜಸ್ ಶೇ 15ರಿಂದ ಶೇ 30ರವರೆಗೂ ಇದೆ. ಆಭರಣದ ವಿನ್ಯಾಸ ಹೇಗಿದೆ ಎನ್ನುವುದರ ಆಧಾರದಲ್ಲಿ ಮೇಕಿಂಗ್ ಚಾರ್ಜಸ್ ನಿರ್ಧಾರವಾಗುತ್ತದೆ. ಪುರಾತನ ಮಾದರಿಯ ಆಭರಣಗಳಾದಲ್ಲಿ ಶೇ 30ರವರೆಗೂ ಮೇಕಿಂಗ್ ಚಾರ್ಜಸ್ ನೀಡಬೇಕಾಗುತ್ತದೆ. ಇದಲ್ಲದೆ ಚಿನ್ನ ತೆಗೆದುಕೊಳ್ಳುವಾಗ ಶೇ 3ರಷ್ಟು ಜಿಎಎಸ್‌ಟಿ ತೆರಬೇಕಾಗುತ್ತದೆ. ಆಭರಣ ಖರೀದಿಸುವಾಗ ಅದರ ಶುದ್ಧತೆಯನ್ನು ದೃಢಪಡಿಸಿಕೊಳ್ಳುವುದು ಕೂಡ ಸವಾಲು. ಆಭರಣದ ಸುರಕ್ಷತೆಗಾಗಿ ಲಾಕರ್ ವ್ಯವಸ್ಥೆ ಬೇಕಾಗುತ್ತದೆ. ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ನೋಡಿದಾಗ ವೈಯಕ್ತಿಕ ಸಂತೋಷಕ್ಕೆ ಆಭರಣ ಖರೀದಿಸುದು ತಪ್ಪಲ್ಲವಾದರೂ, ಅದು ಹೂಡಿಕೆ ಆಗುವುದಿಲ್ಲ ಎನ್ನುವುದು ಅರಿವಿಗೆ ಬರುತ್ತದೆ.

2. ಚಿನ್ನದ ಬಿಸ್ಕೆಟ್ ಖರೀದಿ: ಚಿನ್ನದ ಬಿಸ್ಕೆಟ್ ಖರೀದಿ ಚಿನ್ನದ ಮೇಲಿನ ಹೂಡಿಕೆಯ ಒಂದು ವಿಧ. ಚಿನ್ನದ ಬಿಸ್ಕೆಟ್ ಖರೀದಿ ವೇಳೆ ಮೇಕಿಂಗ್ ಚಾರ್ಜಸ್ ಗೊಡವೆ ಇರುವುದಿಲ್ಲ. ಚಿನ್ನದ ದರದ ಮೇಲೆ ಶೇ 3ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಹಾಲ್‌ಮಾರ್ಕ್ ಇರುವ ಗಟ್ಟಿಯನ್ನು ಖರೀದಿಸಿದರೆ ಗುಣಮಟ್ಟದ ಬಗ್ಗೆ ಚಿಂತಿಸಬೇಕಾಗಿರುವುದಿಲ್ಲ. ಆದರೆ ಹೆಚ್ಚು ಗಟ್ಟಿಗಳನ್ನು ಖರೀದಿಸಿದರೆ ಅವುಗಳ ಸುರಕ್ಷತೆಗಾಗಿ ನೀವು ಲಾಕರ್ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

3. ಡಿಜಿಟಲ್ ಚಿನ್ನ: ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಲು ಅನೇಕ ವೇದಿಕೆಗಳಿವೆ. ₹ 100, ₹ 200, ₹ 500 ಹೀಗೆ ಸಣ್ಣ ಮೊತ್ತದ ಚಿನ್ನ ಖರೀದಿಸಲು ಸಾಧ್ಯವಿದೆ. ಡಿಜಿಟಲ್ ರೂಪದಲ್ಲಿ ಚಿನ್ನ ಖರೀದಿಸಿದಾಗ ಶೇ 3ರಷ್ಟು ಜಿಎಸ್‌ಟಿ ಜೊತೆಗೆ ಸಣ್ಣ ಮೊತ್ತವಾಗಿ ಪ್ಲಾಟ್‌ಫಾರಂ ನಿರ್ವಹಣಾ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮಾದರಿಯಲ್ಲಿ ಚಿನ್ನ ಖರೀದಿಸಿದಾಗ ನಗದೀಕರಣ ಸುಲಭ. ಅಲ್ಲದೆ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

4. ಗೋಲ್ಡ್ ಇಟಿಎಫ್: ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಇಟಿಎಫ್‌ಗಳ (ವಿನಿಮಯ ವಹಿವಾಟು ನಿಧಿ) ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ ಈ ಹೂಡಿಕೆಗೆ ನಿಮ್ಮ ಬಳಿ ಡಿ-ಮ್ಯಾಟ್ ಖಾತೆ ಇರಬೇಕು. ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್, ಯುಟಿಐ ಗೋಲ್ಡ್, ನಿಪ್ಪಾನ್ ಇಟಿಎಫ್ ಗೋಲ್ಡ್, ಎಸ್‌ಬಿಐ ಗೋಲ್ಡ್ ಇಟಿಎಫ್ ಈ ಮಾದರಿಯ ಹೂಡಿಕೆಗೆ ಕೆಲವು ಉದಾಹರಣೆಗಳು. ಚಿನ್ನದ ಬೆಲೆ ಹೆಚ್ಚಾದಂತೆ ಗೋಲ್ಡ್ ಇಟಿಎಫ್ ಯೂನಿಟ್‌ ಮೌಲ್ಯ ಹೆಚ್ಚಾಗುತ್ತದೆ. ಅದು ತಗ್ಗಿದರೆ ಇಟಿಎಫ್ ಮೌಲ್ಯವೂ ತಗ್ಗುತ್ತದೆ. ಇಟಿಎಫ್ ಖರೀದಿಗೆ ಶೇ 0.5ರಿಂದ ಶೇ 0.6ರಷ್ಟು ಶುಲ್ಕ ನೀಡಬೇಕಾಗುತ್ತದೆ. ನಿಮಗೆ ಬೇಕಾದಾಗ ಖರೀದಿ ಮತ್ತು ಮಾರಾಟ ಸಾಧ್ಯವಿರುವುದರಿಂದ ಇಟಿಎಫ್‌ಗಳಲ್ಲಿ ನಗದೀಕರಣ ಸುಲಭ.

5. ಗೋಲ್ಡ್ ಮ್ಯೂಚುವಲ್ ಫಂಡ್: ಮ್ಯೂಚುವಲ್ ಫಂಡ್‌ಗಳ ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಕ್ಸಿಸ್ ಗೋಲ್ಡ್ ಫಂಡ್, ಕೋಟಕ್ ಗೋಲ್ಡ್ ಫಂಡ್, ಎಸ್‌ಬಿಐ ಗೋಲ್ಡ್ ಫಂಡ್, ಎಚ್‌ಡಿಎಫ್‌ಸಿ ಗೋಲ್ಡ್ ಫಂಡ್ ಕೆಲವು ಉದಾಹರಣೆಗಳು. ಗೋಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ನಿರ್ವಹಣಾ ಶುಲ್ಕ ಶೇ 0.6ರಿಂದ ಶೇ 1ರವರೆಗೆ ಇರುತ್ತದೆ. ಬೇಕಾದಾಗ ಮಾರಾಟ ಮಾಡುವ ವ್ಯವಸ್ಥೆ ಇರುವುದರಿಂದ ಗೋಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ನಗದೀಕರಣ ಸುಲಭ.

6. ಸಾವರಿನ್ ಗೋಲ್ಡ್ ಬಾಂಡ್: ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡುವ ಬಾಂಡ್‌ಗಳನ್ನು ಸಾವರಿನ್ ಗೋಲ್ಡ್ ಬಾಂಡ್ ಎನ್ನುತ್ತಾರೆ. ಸಾವರಿನ್‌ ಗೋಲ್ಡ್‌  ಬಾಂಡ್‌ಗಳನ್ನು ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುತ್ತದೆ. ಘನರೂಪದ ಚಿನ್ನದ ಬದಲಿಗೆ ಬಾಂಡ್‌ ವಿತರಿಸಲಾಗುತ್ತದೆ. ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. 2022-23ನೇ ಸಾಲಿನ 1ನೇ ಹಂತದ ಬಾಂಡ್ ವಿತರಣೆಯಯಲ್ಲಿ ಪ್ರತಿ ಗ್ರಾಂ ಚಿನ್ನದ ಮೌಲ್ಯವನ್ನು ₹ 5,091ಕ್ಕೆ ನಿಗದಿಪಡಿಸಲಾಗಿತ್ತು. ಪ್ರಮುಖ ಅಂಚೆ ಕಚೇರಿಗಳು, ನಿಗದಿತ ಬ್ಯಾಂಕ್‌ ಶಾಖೆಗಳಿಂದ ಇವನ್ನು ಖರೀದಿಸಬಹುದು. ಡಿ–ಮ್ಯಾಟ್ ಖಾತೆ ಇಲ್ಲದಿದ್ದರೂ ಗೋಲ್ಡ್ ಬಾಂಡ್ ಖರೀದಿ ಸಾಧ್ಯವಿದೆ. ಆಭರಣ ಚಿನ್ನದ ಮೇಲೆ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳವಾದಾಗ ಮಾತ್ರ ಗಳಿಕೆ ಸಾಧ್ಯ. ಆದರೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಚಿನ್ನದ ಬೆಲೆ ಹೆಚ್ಚಳವಾದಾಗ ಅದರ ಲಾಭ ಸಿಗುವ ಜೊತೆಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ಲಾಭವೂ ಸಿಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಯಾಗುತ್ತದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

***

 

ಅಲ್ಪ ಕುಸಿತ ದಾಖಲಿಸಿದ ಷೇರುಪೇಟೆ

ಸತತ ನಾಲ್ಕು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ. ನವೆಂಬರ್ 18ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಂಡಿವೆ. 61,663 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.21ರಷ್ಟು ಕುಸಿದಿದೆ. 18,307 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.22ರಷ್ಟು ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 2.3ರಷ್ಟು ಜಿಗಿದಿದ್ದು ಬ್ಯಾಂಕ್ ನಿಫ್ಟಿ ಸೂಚ್ಯಂಕ ಶೇ 0.7ರಷ್ಟು ಹೆಚ್ಚಳ ದಾಖಲಿಸಿದೆ. ಮತ್ತೊಂದೆಡೆ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 5.3ರಷ್ಟು, ವಾಹನ ಸೂಚ್ಯಂಕ ಶೇ 2ರಷ್ಟು, ಎಫ್‌ಎಂಸಿಜಿ ಮತ್ತು ಎನರ್ಜಿ ಸೂಚ್ಯಂಕ ತಲಾ ಶೇ 1.7ರಷ್ಟು ಕುಸಿದಿವೆ. ಬಿಎಸ್ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.3ರಷ್ಟು ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 0.8ರಷ್ಟು ಇಳಿಕೆಯಾಗಿವೆ.

ಪೇಟಿಎಂ, ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ, ಕೋಲ್ ಇಂಡಿಯಾ, ಜೊಮಾಟೊ, ನೈಕಾ ಕುಸಿದಿವೆ. ಹಿಂದೂಸ್ಥಾನ್ ಜಿಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಅಂಬುಜಾ ಸಿಮೆಂಟ್ಸ್, ಇಂಡಸ್ ಟವರ್ಸ್ ಮತ್ತು ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್ ಗಳಿಸಿಕೊಂಡಿವೆ.

ಮುನ್ನೋಟ: ಅರಿಹಂತ್ ಇನ್ಸ್ಟಿಟ್ಯೂಟ್ ಲಿ., ಪಿಟಿಸಿ, ನಿಟ್ಕೋ, ಸೀಮನ್ಸ್, ಸಿನಿ ವಿಸ್ತಾ ಲಿ. ಸೇರಿ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳ ಜೊತೆಗೆ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು