ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶುವಿಗೆ ಆರೋಗ್ಯ ವಿಮೆ

Last Updated 30 ಜೂನ್ 2019, 19:45 IST
ಅಕ್ಷರ ಗಾತ್ರ

ನವಜಾತ ಶಿಶುವಿಗೆ ಆರೋಗ್ಯ ವಿಮೆ ಮಾಡಿಸಬಹುದೇ. ಮಕ್ಕಳಿಗೆ ಪ್ರತ್ಯೇಕವಾದ ಆರೋಗ್ಯ ವಿಮೆ ಸಿಗುವುದೇ. ಫ್ಯಾಮಿಲಿ ಫ್ಲೋಟರ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಮಗುವಿನ ಹೆಸರನ್ನು ಸೇರಿಸಬಹುದೇ– ಹೀಗೆ ಮಕ್ಕಳ ಆರೋಗ್ಯ ವಿಮೆಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಪೋಷಕರು ಕೇಳುತ್ತಾರೆ. ಇವತ್ತಿನ ಲೇಖನದಲ್ಲಿ ಮಕ್ಕಳ ಆರೋಗ್ಯ ವಿಮೆಯ ಸಾಧ್ಯತೆ ಮತ್ತು ಇತಿಮಿತಿಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಲಾಗಿದೆ.

ಕೂಸು ಹುಟ್ಟಿದಾಗಲೇ ಭವಿಷ್ಯದ ಬಗ್ಗೆ ಕನಸು ಕಾಣಲು ಆರಂಭಿಸುವ ಪೋಷಕರು, ಮಕ್ಕಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಧುತ್ತೆಂದು ಬರುವ ಮಕ್ಕಳ ವೈದ್ಯಕೀಯ ವೆಚ್ಚಗಳಿಗೆ ಪೋಷಕರು ಆರೋಗ್ಯ ವಿಮೆಯ ನೆರವು ಪಡೆದುಕೊಳ್ಳಬಹುದು. ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ ಹಲವು ಮಾದರಿಯ ಆರೋಗ್ಯ ವಿಮೆಗಳಿವೆ.

ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಮಗುವಿನ ಹೆಸರು ಸೇರಿಸಿ: ಫ್ಯಾಮಿಲಿ ಫ್ಲೋಟರ್ ಪಾಲಿಸಿ ಅಂದ್ರೆ ಕುಟುಂಬದ ಎಲ್ಲ ಸದಸ್ಯರಿಗೂ ಒಳಗೊಂಡಂತೆ ಮಾಡಿಸುವ ಆರೋಗ್ಯ ವಿಮೆ. ನವಜಾತ ಶಿಶುವನ್ನು ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ತಕ್ಷಣವೇ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ. ಆದರೆ ಮಗುವಿಗೆ ಮೂರು ತಿಂಗಳು ತುಂಬಿದ ಬಳಿಕ, ಈಗಾಗಲೇ ಹೊಂದಿರುವ ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಮಗುವಿನ ಹೆಸರು ನೋಂದಾಯಿಸಬಹುದು.

ಬಹುತೇಕ ಆರೋಗ್ಯ ವಿಮಾ ಕಂಪನಿಗಳು 3 ತಿಂಗಳಿಂದ ಹಿಡಿದು 25 ವರ್ಷದ ಒಳಗಿನ ಮಕ್ಕಳ ಹೆಸರನ್ನು ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸುತ್ತವೆ. ಕುಟುಂಬದ ಹಿರಿಯ ಸದಸ್ಯನ ವಯಸ್ಸು ಆಧರಿಸಿ ಇಲ್ಲಿ ಪ್ರೀಮಿಯಂ ನಿಗದಿ ಮಾಡಲಾಗುತ್ತದೆ. ಮನೆಯಲ್ಲಿ ಯಾರಿಗೇ ಅನಾರೋಗ್ಯ ಉಂಟಾದರೂ ಇನ್ಶೂರೆನ್ಸ್ ಕವರೇಜ್ ಮಿತಿ ಆಧರಿಸಿ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಫ್ಯಾಮಿಲಿ ಅಂದ್ರೆ ಮನೆಯ ಯಜಮಾನ, ಪತ್ನಿ ಮತ್ತು ಇಬ್ಬರು ಮಕ್ಕಳು. ಆದರೆ ಕೆಲ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್‌ಗಳು ಪೋಷಕರು ಮತ್ತು ಅತ್ತೆ ಮಾವನ ಹೆಸರು ಸೇರ್ಪಡೆಗೂ ಅವಕಾಶ ಕಲ್ಪಿಸುತ್ತವೆ.

ಮಗು ಹುಟ್ಟಿದ ತಕ್ಷಣ ವಿಮೆ ರಕ್ಷಣೆ ಸಿಗುವುದೇ. ಬಹುತೇಕ ಕಂಪನಿಗಳು ನವಜಾತ ಶಿಶುಗಳಿಗೆ ಪ್ರತ್ಯೇಕ ಆರೋಗ್ಯ ವಿಮೆ ಕೊಡಲು ಒಪ್ಪುವುದಿಲ್ಲ, ಕೆಲ ಕಂಪನಿಗಳು ಪ್ರತ್ಯೇಕ ವಿಮೆ ನೀಡಲು ಸಮ್ಮತಿಸಿದರೂ ಹೆಚ್ಚುವರಿ ಪ್ರೀಮಿಯಂ ನಿಗದಿ ಮಾಡುತ್ತವೆ. ಆದರೆ ಕೆಲ ಆಯ್ದ ಇನ್ಶೂರೆನ್ಸ್ ಕಂಪನಿಗಳು ಮತ್ತು ಗ್ರೂಪ್ ಇನ್ಶೂರೆನ್ಸ್ ಕಂಪನಿಗಳು ಹೆರಿಗೆ ಸೌಲಭ್ಯಕ್ಕೆ ಇನ್ಶೂರೆನ್ಸ್ ಕೊಡುವಾಗ 90 ದಿನಗಳ ವರೆಗೆ ನವಜಾತ ಶಿಶುವಿನ ಆರೈಕೆ ಮತ್ತು ಚಿಕಿತ್ಸೆಯನ್ನು ಪರಿಗಣಿಸುತ್ತವೆ.

ಅಗತ್ಯ ದಾಖಲೆ ಮತ್ತು ಪ್ರೀಮಿಯಂ ಮೊತ್ತ: ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಮಗುವಿನ ಹೆಸರನ್ನು ಸೇರಿಸಲು ಜನನ ಪ್ರಮಾಣ ಪತ್ರ
( ಬರ್ತ್ ಸರ್ಟಿಫಿಕೆಟ್) , ಆಸ್ಪತ್ರೆ ಡಿಸ್ಚಾರ್ಜ್ ದಾಖಲೆ, ಫೋಟೊ ಮತ್ತು ಮಗುವಿನ ಆರೋಗ್ಯ ಸ್ಥಿತಿಯ ವರದಿಯನ್ನು ಇನ್ಶೂರೆನ್ಸ್ ಕಂಪನಿಗಳು ಕೇಳುತ್ತವೆ. ಈಗಾಗಲೇ ಹೊಂದಿರುವ ಫ್ಯಾಮಿಲಿ ಫ್ಲೋಟರ್ ಪಾಲಿಸಿಯ ನವೀಕರಣದ ಸಂದರ್ಭದಲ್ಲಿ ಮಗುವಿನ ಹೆಸರು ಸೇರ್ಪಡೆಗೆ ಇನ್ಶೂರೆನ್ಸ್ ಕಂಪನಿಗೆ ಅರ್ಜಿ ಸಲ್ಲಿಸಬಹುದು. ಮಗುವಿನ ಹೆಸರು ಸೇರಿಸುವಾಗ ಅದಕ್ಕೆ ಹೆಚ್ಚುವರಿಯಾಗಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ನಿಫ್ಟಿ ಮಿಡ್‌ ಕ್ಯಾಪ್‌ ನಿರೀಕ್ಷೆಗೂ ಮೀರಿ ಸುಧಾರಣೆ
ಮೂರು ವಾರಗಳಿಂದ ನಿರಂತರ ಕುಸಿತ ದಾಖಲಿಸಿದ್ದ ಷೇರುಪೇಟೆ ಸೂಚ್ಯಂಕಗಳು ಕೊನೆಗೂ ಚೇತರಿಕೆಯತ್ತ ಮುಖ ಮಾಡಿವೆ. 39,395 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.5 ರಷ್ಟು ಏರಿಕೆ ಕಂಡಿದೆ.

11,789 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಕೂಡ ಶೇ 0.5 ರಷ್ಟು ಪ್ರಗತಿ ದಾಖಲಿಸಿದೆ. ಇನ್ನು ನಿಫ್ಟಿ ಮಧ್ಯಮ ಶ್ರೇಣಿ (ಮಿಡ್ ಕ್ಯಾಪ್) ಷೇರು ಸೂಚ್ಯಂಕ ಶೇ 1.4 ರಷ್ಟು ಗಳಿಗೆ ಸಾಧಿಸಿ ನಿರೀಕ್ಷೆಗೂ ಮೀರಿದ ಸುಧಾರಣೆ ತೋರಿದೆ.

ನಿಫ್ಟಿಯ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ವಲಯ ಹೊರತುಪಡಿಸಿ ಎಲ್ಲ ವಲಯಗಳಲ್ಲೂ ಏರಿಕೆ ಕಂಡುಬಂದಿದೆ. ರಿಯಲ್ ಎಸ್ಟೇಟ್ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಶೇ 4 ರಷ್ಟು ಏರಿಕೆ ದಾಖಲಿಸಿವೆ. ಫಾರ್ಮಾ ವಲಯ ಶೇ 2 ರಷ್ಟು ಹೆಚ್ಚಳ ಕಂಡಿದೆ. ಲೋಹ, ಹಣಕಾಸು ಸೇವೆ ತಲಾ ಶೇ 1.7 ರಷ್ಟು ಜಿಗಿದಿವೆ. ಬ್ಯಾಂಕಿಂಗ್ ವಲಯ ಶೇ 1.5 ಗಳಿಸಿದರೆ, ವಾಹನ ತಯಾರಿಕೆ ಶೇ 0.8 ರಷ್ಟು ಚೇತರಿಸಿಕೊಂಡಿದೆ. ಇನ್ನು ನಿಫ್ಟಿ ಮಾಹಿತಿ ತಂತ್ರಜ್ಞಾನ ಮತ್ತು ಮಾಧ್ಯಮ ವಲಯ ಕ್ರಮವಾಗಿ ಶೇ 1.6 ಮತ್ತು ಶೇ 0.4 ರಷ್ಟು ಕುಸಿದಿವೆ.

ಗಳಿಕೆ: ನಿಫ್ಟಿ ವಲಯದಲ್ಲಿ ಯುಪಿಎಲ್ ಶೇ 5.3 ರಷ್ಟು ಗಳಿಕೆ ಕಂಡು ಅಗ್ರ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ನವೀಕೃತ ಇಂಧನ ಇಲಾಖೆಯ 40 ಮೆಗಾವಾಟ್‌ ಸೌರ ವಿದ್ಯುತ್ ಉತ್ಪಾದನೆ ಯೋಜನೆಯ ಟೆಂಡರ್ ಅನ್ನು ಪಡೆದುಕೊಂಡ ಕಾರಣದಿಂದ ಎನ್‌ಟಿಪಿಸಿ ಷೇರುಗಳು ಶೇ 5 ರಷ್ಟು ಜಿಗಿದಿವೆ.

ಷೇರುಗಳ ಮಾರಾಟದಿಂದ ಸಂಪನ್ಮೂಲ ಸಂಗ್ರಹಕ್ಕೆ ಆ್ಯಕ್ಸಿಸ್ ಬ್ಯಾಂಕ್ ಮುಂದಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 4.9 ರಷ್ಟು ಏರಿಕೆಯಾಗಿವೆ. ಸನ್ ಫಾರ್ಮಾಶೇ 4.7, ಹಿಂಡಾಲ್ಕೊ ಶೇ 4.8, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 4.4 , ಜೆಎಸ್‌ಡಬ್ಲ್ಯು ಸ್ಟೀಲ್ ಶೇ 3.5 ಮತ್ತು ಪವರ್ ಗ್ರಿಡ್ ಶೇ 3.5 ರಷ್ಟು ಏರಿಕೆ ದಾಖಲಿಸಿವೆ.

ಇಳಿಕೆ: ರೂಪಾಯಿ ಮೌಲ್ಯ ಮತ್ತು ಅಮೆರಿಕದ ಎಚ್ 1 ಬಿ ವೀಸಾ ಮಿತಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಐ.ಟಿ ವಲಯದ ಷೇರುಗಳಲ್ಲಿ ಇಡೀ ವಾರ ಒತ್ತಡವಿತ್ತು.

ಟೆಕ್ ಮಹೀಂದ್ರಾ ಶೇ 4.4 ರಷ್ಟು ಇಳಿದರೆ, ಇನ್ಫೊಸಿಸ್ ಮತ್ತು ವಿಪ್ರೊ ಕ್ರಮವಾಗಿ ಶೇ 2.4 ಮತ್ತು ಶೇ 1.9 ರಷ್ಟು ಕುಸಿತ ದಾಖಲಿಸಿವೆ. ಬ್ರಿಟಾನಿಯಾದ ಎಂಡಿ ವರುಣ್ ಬೆರ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 2.9 ರಷ್ಟು ಹಿನ್ನಡೆ ಕಂಡಿವೆ. ಏಷಿಯನ್ ಪೇಂಟ್ಸ್ ಶೇ 1.7, ಐಷರ್ ಮೋಟರ್ಸ್ ಶೇ 3, ರಿಲಯನ್ಸ್ ಶೇ 2 ರಷ್ಟು ತಗ್ಗಿವೆ.

ಮುನ್ನೋಟ: ‘ಜಿ–20’ ಶೃಂಗ ಸಭೆಯಲ್ಲಿ ಅಮೆರಿಕ ಮತ್ತು ಚೀನಾ ಅಧ್ಯಕ್ಷರುಗಳ ಮುಖಾಮುಖಿ, ಜುಲೈ 1 ರಂದು ನಡೆಯಲಿರುವ ತೈಲ ಉತ್ಪಾದನೆ ರಾಷ್ಟ್ರಗಳ ಒಕ್ಕೂಟದ ಸಭೆ, ರೂಪಾಯಿ ಮೌಲ್ಯ, ಆರ್ಥಿಕ ಸಮೀಕ್ಷೆಯ ಅಂಕಿ ಅಂಶ, ಬಜೆಟ್ ಮಂಡನೆ, ಮುಂಗಾರಿನ ಸ್ಥಿತಿಗತಿ ಸೇರಿ ಇನ್ನೂ ಹತ್ತಾರು ಸಂಗತಿಗಳು ಮಾರುಕಟ್ಟೆ ಏರಿಳಿತಕ್ಕೆ ಕಾರಣವಾಗಲಿವೆ.

ಪ್ರಸ್ತುತ ವಾರದಲ್ಲಿ ಅನಿಶ್ಚಿತತೆಯ ವಾತಾವರಣ ಹೆಚ್ಚಿರಲಿದೆ. ಬಜೆಟ್‌ನ ಘೋಷಣೆಗಳು ಸೇರಿ ಹಲವು ಜಾಗತಿಕ ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಲಿದ್ದಾರೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT