ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಬೇಕು?

Last Updated 20 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನನ್ನ ಬಳಿ ಹೂಡಿಕೆಗೆ ₹ 100 ಇದ್ದರೆ ಷೇರು ಮಾರುಕಟ್ಟೆಯಲ್ಲಿ ಎಷ್ಟನ್ನು ತೊಡಗಿಸಬೇಕು? ಈ ಪ್ರಶ್ನೆ ಪ್ರತಿ ಹೂಡಿಕೆದಾರನಿಗೂ ಎದುರಾಗುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಲವು ಸಿದ್ಧಸೂತ್ರಗಳು ಇವೆ ಎಂಬುದು ನಿಜ. ಅಂತಹ ಸೂತ್ರಗಳ ಸಾಲಿನಲ್ಲಿ ‘ನಿಮ್ಮ ವಯಸ್ಸನ್ನು 100ರಿಂದ ಕಳೆದಾಗ ಯಾವ ಸಂಖ್ಯೆ ಬರುವುದೋ, ಅಷ್ಟು ಪ್ರಮಾಣದ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ’ ಎಂದು ಹೇಳುವ ಲೆಕ್ಕಾಚಾರವೊಂದು ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ ಈ ಸೂತ್ರ ಸರಿಯೇ? ವಯಸ್ಸನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಪ್ರಮಾಣ ತೀರ್ಮಾನಿಸುವುದು ಸೂಕ್ತವೇ?

ವಯಸ್ಸನ್ನು ಆಧರಿಸಿ ಹೂಡಿಕೆ ಪ್ರಮಾಣ ತೀರ್ಮಾನಿಸುವ ಈ ನಿಯಮ ಹೇಳುವುದು ಏನನ್ನು? ನಿಮ್ಮ ವಯಸ್ಸು 28 ಎಂದಿಟ್ಟುಕೊಳ್ಳೋಣ. ನಿಮ್ಮ ವಯಸ್ಸನ್ನು 100ರಿಂದ ಕಳೆದಾಗ (100-28=72) 72 ಬರುತ್ತದೆ. ಅಂದರೆ ಈ ನಿಯಮದ ಪ್ರಕಾರ ನಿಮ್ಮ ಬಳಿ ಹೂಡಿಕೆಗೆ ನೂರು ರೂಪಾಯಿ ಇದ್ದರೆ, ₹ 72ನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು. ಈ ಸೂತ್ರದ ಅನ್ವಯ, 50 ವರ್ಷ ವಯಸ್ಸಿನ ವ್ಯಕ್ತಿ ತನ್ನ ಬಳಿ ಹೂಡಿಕೆಗೆಂದು ಇರುವ ₹ 100ರಲ್ಲಿ ₹ 50ನ್ನು ಮಾತ್ರ ಷೇರು ಮಾರುಕಟ್ಟೆಯಲ್ಲಿ ತೊಡಗಿಸಬಹುದು. ವ್ಯಕ್ತಿಯ ವಯಸ್ಸು ಹೆಚ್ಚಾದಂತೆಲ್ಲ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಪ್ರಮಾಣ ಕಡಿಮೆ ಆಗಬೇಕು ಎಂದು ಈ ಸೂತ್ರ ಹೇಳುತ್ತದೆ. ಆದರೆ ಇದು ಸರ್ವಕಾಲಕ್ಕೂ ಸಲ್ಲುವಂಥದ್ದಲ್ಲ. ವಯಸ್ಸನ್ನು ಮಾತ್ರ ಆಧರಿಸಿ ಹೂಡಿಕೆ ಪ್ರಮಾಣ ನಿರ್ಧರಿಸುವುದು ಸೂಕ್ತವಲ್ಲ. ಹೂಡಿಕೆದಾರನ ಆರ್ಥಿಕ ಸ್ಥಿತಿ, ಆತನ ಹೂಡಿಕೆ ಗುರಿಗಳು, ಹೂಡಿಕೆಗಿರುವ ಅವಧಿ ಸೇರಿ ಹಲವು ಅಂಶಗಳನ್ನು ಆಧರಿಸಿ ಹೂಡಿಕೆ ತೀರ್ಮಾನಗಳನ್ನು ಮಾಡಬೇಕಾಗುತ್ತದೆ.

40 ವರ್ಷ ವಯಸ್ಸಿನ ಇಬ್ಬರು ಸ್ನೇಹಿತರಿದ್ದಾರೆ ಎಂದಿಟ್ಟುಕೊಳ್ಳೋಣ. ಮೇಲಿನ ನಿಯಮದ ಪ್ರಕಾರ ಇಬ್ಬರೂ ಸ್ನೇಹಿತರು ಶೇಕಡ 60ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು. ಆದರೆ ಇಬ್ಬರ ಆರ್ಥಿಕ ಸ್ಥಿತಿ ಮತ್ತು ಸಂದರ್ಭಗಳು ಬೇರೆ. ಮೊದಲನೆಯ ವ್ಯಕ್ತಿ ದೊಡ್ಡ ಉದ್ಯಮಿಯಾಗಿದ್ದಾನೆ. ಆತನ ಪತ್ನಿ ಒಳ್ಳೆಯ ಕೆಲಸದಲ್ಲಿದ್ದಾರೆ. ಮಗು ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದೆ. ತಂದೆ ತಾಯಿ ನಿವೃತ್ತ ಸರ್ಕಾರಿ ನೌಕರರು, ಅವರಿಗೆ ಪಿಂಚಣಿ ಬರುತ್ತಿದೆ. ಎರಡನೆಯ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ, ಆತನ ಪತ್ನಿ ಗೃಹಿಣಿ. ಮಕ್ಕಳಿಬ್ಬರು ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆ ತಾಯಿ ಕೂಡ ಮಗನ ಆದಾಯದ ಮೇಲೆಯೇ ಅವಲಂಬಿತರಾಗಿದ್ದಾರೆ. ಎರಡೂ ಸ್ಥಿತಿಗಳು ಭಿನ್ನ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ? ಹೌದು, ಈ ಕಾರಣಕ್ಕಾಗಿಯೇ 100ರಿಂದ ನಿಮ್ಮ ವಯಸ್ಸನ್ನು ಕಳೆದಾಗ ಬರುವ ಸಂಖ್ಯೆಯ ಪ್ರಮಾಣದಲ್ಲಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು ಎನ್ನುವ ನಿಯಮ ಎಲ್ಲ ಸಂದರ್ಭಗಳಿಗೂ ಸೂಕ್ತವಲ್ಲ.

ಗುರಿ ಕೇಂದ್ರಿತವಾಗಿರಲಿ: ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದನ್ನು ವಯಸ್ಸಿನ ಆಧಾರದಲ್ಲಿ ಅಂದಾಜಿಸುವುದಕ್ಕಿಂತ ಗುರಿಯನ್ನು ಆಧರಿಸಿ ತೀರ್ಮಾನಿಸಬೇಕು. ನಿಮ್ಮ ಸದ್ಯದ ಆರ್ಥಿಕ ಸ್ಥಿತಿ ಹೇಗಿದೆ? ಮನೆಯಲ್ಲಿ ಎಷ್ಟು ಮಂದಿ ದುಡಿಯುತ್ತಿದ್ದಾರೆ? ಮಾಸಿಕ ಎಷ್ಟು ಉಳಿತಾಯ ಮಾಡಬಹುದು? ಉಳಿತಾಯ ಮಾಡಿದ ಹಣ ಮತ್ತೆ ಯಾವಾಗ ಬೇಕಾಗುತ್ತದೆ? ಹೂಡಿಕೆ ಮಾಡುವಾಗ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು? ಹೀಗೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಅವಧಿ, ರಿಸ್ಕ್‌ನ ಮಹತ್ವ: ನಿಮ್ಮ ಬಳಿ ಈಗ ₹ 50 ಸಾವಿರ ಇದೆ, ಆ ಹಣ ಮುಂದಿನ ವರ್ಷ ನಿಮ್ಮ ಮಗಳ ಶಾಲೆಯ ಶುಲ್ಕ ಪಾವತಿಗೆ ಬೇಕು ಎಂದಾದಲ್ಲಿ ಆ ಹಣವನ್ನು ನೀವು ನಿಶ್ಚಿತ ಠೇವಣಿಯಲ್ಲಿ (ಎಫ್.ಡಿ.) ಅಥವಾ ಲಿಕ್ವಿಡ್ ಮ್ಯೂಚುವಲ್ ಫಂಡ್‌ನಲ್ಲಿ ಇಡುವುದು ಸೂಕ್ತ. ಅಲ್ಪ ಸ್ವಲ್ಪ ರಿಸ್ಕ್ ಕೂಡ ಬೇಡವೆಂದರೆ ಎಫ್.ಡಿ. ಸುರಕ್ಷಿತ ಆಯ್ಕೆ. ನಿಮ್ಮ ಬಳಿ ₹ 2 ಲಕ್ಷವಿದೆ, ಆ ಹಣ ಐದು ವರ್ಷಗಳ ನಂತರ ಬೇಕು ಎಂದಾದರೆ, ಅದರಲ್ಲಿ ಶೇ 50ರಷ್ಟು ಹಣವನ್ನು ಎಫ್.ಡಿ. ಅಥವಾ ಡೆಟ್ (ಸಾಲಪತ್ರ) ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿ. ಇನ್ನುಳಿದ ಶೇ 50ರಷ್ಟು ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಬಳಿ ₹ 3 ಲಕ್ಷವಿದೆ, 10 ವರ್ಷಗಳ ನಂತರ ಆ ಹಣ ಬೇಕು ಎಂದಾದರೆ ಶೇ 75ರಷ್ಟನ್ನು ಷೇರು ಮಾರುಕಟ್ಟೆ ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು. ಇನ್ನುಳಿದ ಶೇ 25ರಷ್ಟನ್ನು ಡೆಟ್ ಮ್ಯೂಚುವಲ್ ಫಂಡ್ ಅಥವಾ ಬ್ಯಾಂಕ್ ಎಫ್.ಡಿ. ರೂಪದಲ್ಲಿ ಇರಿಸುವುದು ಸೂಕ್ತ.

ಸತತ ಏರಿಕೆ, ಹೂಡಿಕೆಯಲ್ಲಿರಲಿ ಎಚ್ಚರಿಕೆ
ಷೇರುಪೇಟೆ ಸೂಚ್ಯಂಕಗಳು ಸತತ ಏಳನೇ ವಾರವೂ ಏರಿಕೆ ಕಂಡು ದಾಖಲೆ ನಿರ್ಮಿಸಿವೆ. ಡಿಸೆಂಬರ್ 18ಕ್ಕೆ ಕೊನೆಯಾದ ವಾರದಲ್ಲಿ 46,960 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇಕಡ 1.9ರಷ್ಟು ಜಿಗಿದಿದ್ದರೆ, 13,760 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.8ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆ ಸೂಚ್ಯಂಕಗಳು ಸದ್ಯಕ್ಕೆ ನಕಾರಾತ್ಮಕ ಹಾದಿ ತುಳಿಯುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಆದರೆ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಏರಿಕೆ ಕಾಣುತ್ತಿರುವಾಗ ಆಳ–ಅಗಲ ಅರಿಯದೆ ದೊಡ್ಡ ಮೊತ್ತದ ಹೂಡಿಕೆ ನಿರ್ಧಾರ ಮಾಡುವುದು ತರವಲ್ಲ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ರಿಯಲ್ ಎಸ್ಟೇಟ್ ಶೇ 3.7ರಷ್ಟು, ಫಾರ್ಮಾ ವಲಯ ಶೇ 3ರಷ್ಟು, ಮಾಹಿತಿ ತಂತ್ರಜ್ಞಾನ ವಲಯ ಶೇ2.6ರಷ್ಟು ಹೆಚ್ಚಳ ದಾಖಲಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.4ರಷ್ಟು ಕುಸಿದಿದೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಎಚ್‌ಡಿಎಫ್‌ಸಿ ಮತ್ತು ಬಜಾಜ್ ಫೈನಾನ್ಸ್ ತಲಾ ಶೇ 8ರಷ್ಟು, ಎಲ್ಆ್ಯಂಡ್‌ಟಿ ಶೇ 6.6ರಷ್ಟು, ಯುಪಿಎಲ್ ಶೇ 6ರಷ್ಟು, ಟೈಟನ್ ಶೇ 5.5ರಷ್ಟು, ಸಿಪ್ಲಾ ಶೇ 5ರಷ್ಟು, ಡಿವೀಸ್ ಲ್ಯಾಬ್ಸ್ ಶೇ 5ರಷ್ಟು ಜಿಗಿದಿವೆ. ಮಾರುತಿ ಶೇ 2.3ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 2ರಷ್ಟು ಮತ್ತು ಹಿಂದೂಸ್ಥಾನ್ ಯುನಿಲಿವರ್ ಶೇ 1.7ರಷ್ಟು ಕುಸಿದಿವೆ.

ಮುನ್ನೋಟ: ಡಿಸೆಂಬರ್ 21ರಂದು ಅಂಟಾನಿ ವೇಸ್ಟ್ ಮ್ಯಾನೇಜ್ಮೆಂಟ್ ಸೆಲ್‌ನ ಐಪಿಒ ಆರಂಭವಾಗಲಿದೆ. ಕ್ರಿಸ್‌ಮಸ್ ಮತ್ತು ಹೂಸ ವರ್ಷದ ಪ್ರಯುಕ್ತ ಕೆಲ ದೇಶಗಳ ಮಾರುಕಟ್ಟೆಗಳು ವಹಿವಾಟು ನಿಲ್ಲಿಸಲಿವೆ. ಅರ್ಥ ವ್ಯವಸ್ಥೆಯಲ್ಲಿ ನಗದು ಲಭ್ಯತೆ, ಉತ್ಪಾದನೆ ಆಧರಿತ ಸಹಾಯಧನ ಯೋಜನೆ ನಿರೀಕ್ಷೆ, ಚೇತರಿಕೆ ಕಾಣುತ್ತಿರುವ ಅರ್ಥಿಕ ಚಟುವಟಿಕೆಗಳು, ಕೋವಿಡ್ ಲಸಿಕೆ ನಿಟ್ಟಿನಲ್ಲಿ ಆಗುತ್ತಿರುವ ಉತ್ತಮ ಬೆಳವಣಿಗೆಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಸತತ 12 ವಾರಗಳಿಂದ ಹರಿದುಬರುತ್ತಿರುವ ಬಂಡವಾಳ ಸೇರಿ ಹಲವು ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಸದ್ಯದ ಜಿಗತಕ್ಕೆ ಕಾರಣವಾಗಿವೆ. ಮಾರುಕಟ್ಟೆ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆ ದಾಖಲಿಸುತ್ತಿರುವಾಗ ಎಚ್ಚರಿಕೆಯ ಹೂಡಿಕೆ ತೀರ್ಮಾನ ಅಗತ್ಯ.

(ಲೇಖಕ ‘ಇಂಡಿಯನ್‌ಮನಿ.ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT