ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಅಪಘಾತ ವಿಮೆ ಕಡೆಗಣಿಸಬೇಡಿ

Last Updated 22 ನವೆಂಬರ್ 2020, 20:51 IST
ಅಕ್ಷರ ಗಾತ್ರ

ವಾರದ ಹಿಂದೆ ಸ್ನೇಹಿತನೊಬ್ಬ ಕರೆ ಮಾಡಿ ಕ್ರಿಕೆಟ್ ಆಡುವಾಗ ಬಾಲ್ ಬಿದ್ದು ಒಂದು ಕಣ್ಣಿನ ದೃಷ್ಟಿ ಮಂದವಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಸಮಸ್ಯೆ ಸರಿಯಾಗಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ ಈಗ ಶಸ್ತ್ರ ಚಿಕಿತ್ಸೆಗೆ ₹ 60 ಸಾವಿರದಿಂದ ₹70 ಸಾವಿರ ಬೇಕು. ಅಷ್ಟು ಹಣ ಹೊಂದಿಸಿದ ಮೇಲೆ ದೃಷ್ಟಿ ಸಮಸ್ಯೆ ಬಗೆಹರಿಯದಿದ್ದರೆ ಏನು ಗತಿ ಎಂಬ ಆತಂಕವಿದೆ ಎಂದು ಅಲವತ್ತುಕೊಳ್ಳುತ್ತಿದ್ದ. ಈ ಸಂದರ್ಭದಲ್ಲಿ ನನಗೆ ಜನರಲ್ಲಿ ವೈಯಕ್ತಿಕ ಅಪಘಾತ ವಿಮೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನಿಸಿತು.

ವೈಯಕ್ತಿಕ ಅಪಘಾತ ವಿಮೆ ಎಂದರೇನು? ಮನೆಯ ಆದಾಯಕ್ಕೆ ಆಧಾರ ಸ್ತಂಭದಂತೆ ಇರುವವರಿಗೆ ಅಪಘಾತವಾದಾಗ ಕುಟುಂಬದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಒಂದು ಕಡೆ ಆದಾಯಕ್ಕೆ ಹೊಡೆತ ಬಿದ್ದರೆ ಮತ್ತೊಂದು ಕಡೆ ಆಸ್ಪತ್ರೆ ಖರ್ಚು ನಿಮ್ಮನ್ನು ಹೈರಾಣಾಗಿಸುತ್ತದೆ. ಅಪಘಾತದ ಸಂದರ್ಭದಲ್ಲಿ ನಿಮ್ಮ ಆದಾಯಕ್ಕೆ ಧಕ್ಕೆಯಾದರೆ ವೈಯಕ್ತಿಕ ಅಪಘಾತ ವಿಮೆಯು ಸುರಕ್ಷತೆ ಒದಗಿಸುತ್ತದೆ. ಅಪಘಾತದಿಂದ ಸಾವು ಸಂಭವಿಸಿದರೆ, ಗಾಯಗೊಂಡರೆ, ಶಾಶ್ವತ ಇಲ್ಲ ಭಾಗಶಃ ಅಂಗವೈಕಲ್ಯ ಉಂಟಾದರೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ವಿಮೆ ನೆರವಿಗೆ ಬರುತ್ತದೆ.

ಯಾವುದಕ್ಕೆ ಕವರೇಜ್ ಸಿಗುತ್ತದೆ? ಅಪಘಾತ ಎಂದಾಕ್ಷಣ ರಸ್ತೆ ಅಪಘಾತದಿಂದ ತೊಂದರೆಯಾದಲ್ಲಿ ಮಾತ್ರ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಮೆಟ್ಟಿಲಿನಿಂದ ಎಡವಿ ಗಾಯಗೊಳ್ಳುವುದು, ಸ್ನಾನದ ಮನೆಯಲ್ಲಿ ಜಾರಿ ಬಿದ್ದಾಗ ಗಂಭೀರ ಗಾಯಗಳಾಗುವುದು, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಮಸ್ಯೆಯಾಗುವುದು, ಸಿಲಿಂಡರ್ ಸ್ಫೋಟ, ಎಲೆಕ್ಟ್ರಿಕ್ ಶಾಕ್, ಅಗ್ನಿ ಆಕಸ್ಮಿಕಗಳಿಂದ ಗಾಯಗೊಳ್ಳುವುದು ಹೀಗೆ ವಿವಿಧ ರೀತಿಯ ಅಪಘಾತಗಳನ್ನುವೈಯಕ್ತಿಕ ಅಪಘಾತ ವಿಮೆಪರಿಗಣಿಸುತ್ತದೆ. ದೇಶದ ಒಳಗಷ್ಟೇ ಅಲ್ಲ, ಹೊರದೇಶಗಳಲ್ಲಿ ನಿಮಗೆ ಈ ರೀತಿ ತೊಂದರೆ ಆದರೂ ಸಹಿತ ಕವರೇಜ್ ಲಭಿಸುತ್ತದೆ.

ಮೂರು ರೀತಿಯ ಕವರೇಜ್:
1. ಶಾಶ್ವತ ಅಂಗವೈಕಲ್ಯ: ದೇಹದ ಪ್ರಮುಖ ಅಂಗಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವುದು ಅಂದರೆ ಎರಡು ಕೈ- ಕಾಲುಗಳನ್ನು ಕಳೆದುಕೊಳ್ಳುವುದು, ಶಾಶ್ವತ ಅಂಧತ್ವ, ಮಾತು ಬಾರದಂತೆ ಆಗುವುದು, ಚಿತ್ತ ವೈಕಲ್ಯ ಉಂಟಾಗುವುದು ಸೇರಿ ಇದೇ ರೀತಿಯ ಸಮಸ್ಯೆಗಳಾದಲ್ಲಿ ಇನ್ಶೂರೆನ್ಸ್ ಕಂಪನಿ ಶೇ 100 ರಷ್ಟು ಕವರೇಜ್ ಮೊತ್ತ ನೀಡುತ್ತದೆ.

2. ಶಾಶ್ವತ ಭಾಗಶಃ ಅಂಗವೈಕಲ್ಯ: ಒಂದು ಕೈ ಅಥವಾ ಕೈಲು, ಶ್ರವಣ ದೋಷ, ಒಂದು ಕಣ್ಣಿನಲ್ಲಿ ದೃಷ್ಟಿಹೀನತೆ, ಅಪಘಾತದಲ್ಲಿ ಬೆರಳು ಕಳೆದುಕೊಳ್ಳುವುದು ಸೇರಿ ಈ ರೀತಿಯ ತೊಂದರೆಗಳಾದಾಗ ಇನ್ಶೂರೆನ್ಸ್ ಕವರೇಜ್‌ನ ಒಂದಿಷ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತದೆ.

3. ತಾತ್ಕಾಲಿಕ ಅಂಗವೈಕಲ್ಯ: ಅಪಘಾತದ ನಂತರದಲ್ಲಿ ತಾತ್ಕಾಲಿಕವಾಗಿ ಉಂಟಾಗುವ ತೊಂದರೆಗೆ ಇದು ಪರಿಹಾರ ಒದಗಿಸುತ್ತದೆ. ಸಾಮಾನ್ಯವಾಗಿ ಗುಣಮುಖರಾಗುವ ವರೆಗೆ ಇನ್ಶೂರೆನ್ಸ್ ಕವರೇಜ್ ಮೊತ್ತದ ಶೇ 1 ರಷ್ಟು ಹಣವನ್ನು ಚಿಕಿತ್ಸೆಗಾಗಿ ವಾರಕ್ಕೊಮ್ಮೆ ನೀಡಲಾಗುತ್ತದೆ.

ವರ್ಷಕ್ಕೆ ₹ 12 ಕೊಟ್ರೆ ₹ 2 ಲಕ್ಷ ಕವರೇಜ್: ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸುರಕ್ಷಾ ಯೋಜನೆ ಅರಂಭಿಸಿದ್ದು ಕೇವಲ ₹ 12 ಪಾವತಿಸಿದರೆ ₹ 2 ಲಕ್ಷದ ವರೆಗೆ ಅಪಘಾತದ ಸಂದರ್ಭದಲ್ಲಿ ಪರಿಹಾರ
ದೊರೆಯುತ್ತದೆ.

ಪ್ರೀಮಿಯಂ ನಿಗದಿ, ಕವರೇಜ್ ಮೊತ್ತ, ಮತ್ತು ಪ್ರೀಮಿಯಂ ದರ: ಸಾಮಾನ್ಯವಾಗಿ ನೀವು ಯಾವ ಉದ್ಯೋಗದಲ್ಲಿದ್ದೀರಿ, ಆ ಉದ್ಯೋಗದಲ್ಲಿ ಎಷ್ಟು ರಿಸ್ಕ್ ಇದೆ ಮತ್ತು ಎಷ್ಟು ಮೊತ್ತದ ಕವರೇಜ್ ಬೇಕು ಎನ್ನುವದರ ಆಧಾರದಲ್ಲಿ ಪ್ರೀಮಿಯಂ ಮೊತ್ತ ನಿಗದಿಯಾಗುತ್ತದೆ. ನಿಮ್ಮ ವಾರ್ಷಿಕ ಆದಾಯದ 4 ರಿಂದ 5 ಪಟ್ಟು ವೈಯಕ್ತಿಕ ಅಪಘಾತ ವಿಮೆ ಪಡೆದುಕೊಳ್ಳುವುದು ಸೂಕ್ತ. 15 ಲಕ್ಷ ಕವರೇಜ್‌ನ ಪ್ರೀಮಿಯಂ ಮೊತ್ತ ಸುಮಾರು ₹ 2 ರಿಂದ ₹ 2.5 ಸಾವಿರ ಇರುತ್ತದೆ.

ಅರ್ಥ ವ್ಯವಸ್ಥೆ ಚೇತರಿಕೆ, ಪೇಟೆಯಲ್ಲಿ ಹೆಚ್ಚಿದ ಉತ್ಸಾಹ
ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಚೇತರಿಕೆಯ ಮುನ್ಸೂಚನೆಗಳು ಕಂಡುಬರುತ್ತಿರುವುದರಿಂದ ಷೇರುಪೇಟೆ ಸೂಚ್ಯಂಕಗಳು ಹೊಸ ಮಟ್ಟದ ಏರಿಕೆಗಳನ್ನು ದಾಖಲಿಸುತ್ತಿವೆ. 43,882 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.6 ರಷ್ಟು ಹೆಚ್ಚಳ ಕಂಡಿದ್ದರೆ, 12,859 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.8 ರಷ್ಟು ಏರಿಕೆ ದಾಖಲಿಸಿದೆ.

ವಲಯವಾರು ಪ್ರಗತಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್, ವಾಹನ ತಯಾರಿಕೆ, ಲೋಹ, ರಿಯಲ್ ಎಸ್ಟೇಟ್ ಶೇ 2 ರಿಂದ ಶೇ 4 ರ ವರೆಗೆ ಜಿಗಿದಿವೆ. ಐಟಿ , ಫಾರ್ಮಾ ಮತ್ತು ಎಫ್ ಎಂಸಿಜಿ ವಲಯ ಕುಸಿತ ಕಂಡಿವೆ. ಕೋವಿಡ್ ಬಂದ ಸಂದರ್ಭದಲ್ಲಿ ಐಟಿ, ಫಾರ್ಮಾ ಮತ್ತು ಎಫ್ ಎಂಸಿಜಿ ವಲಯಗಳು ಹೆಚ್ಚು ಸುರಕ್ಷಿತ ಎಂಬ ಮನಸ್ಥಿತಿ ಹೂಡಿಕೆದಾರರಲ್ಲಿತ್ತು, ಆದರೆ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆಯ ಸೂಚನೆಗಳು ಕಂಡುಬಂದಿರುವುದರಿಂದ ಈಗ ಆ ಲೆಕ್ಕಾಚಾರ ಮೀರಿ ಅನ್ಯ ವಲಯಗಳಲ್ಲೂ ಹೂಡಿಕೆ ಹೆಚ್ಚಳವಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಏರಿಕೆ ಮತ್ತು ಇಳಿಕೆ ಕಂಡಿರುವ ವಲಯಗಳು: ಸಿಮೆಂಟ್ ,ಖಾಸಗಿ ಬ್ಯಾಂಕ್ ಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು, ತೈಲ ಮತ್ತು ಗ್ಯಾಸ್, ಆರೋಗ್ಯ ವಲಯ, ಮಾಹಿತಿ ತಂತ್ರಜ್ಞಾನ , ಪೇಂಟ್ಸ್ ಮತ್ತಿತರ ಕೆಲ ವಲಯಗಳು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸಿವೆ. ಆದರೆ ವಾಹನ ಉತ್ಪಾದನೆ, ಎನ್ ಬಿಎಫ್ ಸಿಗಳು, ರಿಟೇಲ್ ಗ್ರಾಹಕ ವಸ್ತುಗಳ ವಲಯದಲ್ಲಿ ಬೆಳವಣಿಗೆ ಕಂಡುಬಂದಿಲ್ಲ.

ಗಳಿಕೆ- ಇಳಿಕೆ: ನಿಫ್ಟಿಯಲ್ಲಿ ಬಜಾಜ್ ಫಿನ್ ಸರ್ವ್ ಶೇ 16.5, ಬಜಾಜ್ ಫೈನಾನ್ಸ್ ಶೇ 8, ಮಹೀಂದ್ರಾ ಅಂಡ್ ಮಹೀಂದ್ರಾ ಶೇ 13, ಟಾಟಾ ಮೋಟರ್ಸ್ ಶೇ 13, ಟಾಟಾ ಸ್ಟೀಲ್ ಶೇ 8, ಟೈಟನ್ ಶೇ 5.8, ಎಲ್ ಅಂಡ್ ಟಿ ಶೇ 7 ಮತ್ತು ಕೋಟಕ್ ಬ್ಯಾಂಕ್ ಶೇ 7 ರಷ್ಟು ಏರಿಕೆ ದಾಖಲಿಸಿವೆ. ಬಿಪಿಸಿಎಲ್ ಶೇ 7, ರಿಲಯನ್ಸ್ ಇಂಡಸ್ಟ್ರೀಸ್ ಲಿ., ಶೇ 5, ಕೋಲ್ ಇಂಡಿಯಾ ಶೇ 4.5, ಡಾ ರೆಡ್ಡೀಸ್ ಶೇ 4, ಹಿರೋ ಮೋಟೋ ಶೇ 4, ಹಿಂದೂಸ್ಥಾನ್ ಯುನಿಲಿವರ್ ಶೇ 3 ಇನ್ಫೊಸಿಸ್ ಶೇ 2.6, ಮತ್ತು ಸನ್ ಫಾರ್ಮಾ ಶೇ 2 ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಸೀಮನ್ಸ್, ಕಾಫೀ ಡೇ ಎಂಟರ್ ಪ್ರೈಸಸ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ ಸಭೆ ನಡೆಯಲಿದ್ದು ಅದರ ಪ್ರಮುಖಾಂಶಗಳು ಸಹ ಲಭ್ಯವಾಗಲಿವೆ. ವಿದೇಶಿ ವಿನಿಮಯದ ದತ್ತಾಂಶಗಳು ಕೂಡ ಹೊರಬೀಳಲಿವೆ. ಟಿಸಿಎಸ್ ಷೇರುಗಳ ಮರು ಖರೀದಿಗೆ ಸಂಬಂಧಿಸಿದಂತೆ ಕೆಲ ಬೆಳವಣಿಗೆಗಳಾಗಲಿವೆ. ಇದಲ್ಲದೆ ಕಳೆದ ವಾರ ಆರ್‌ಬಿಐನ ಕರಡಿನಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಮತ್ತು ಬ್ಯಾಂಕ್ ಪ್ರರ್ತಕರ ಷೇರು ಹೆಚ್ಚಳ ಪ್ರಸ್ತಾವ ವಿಚಾರ ಕೂಡ ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT