ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಎಂಎಫ್: ವಿಧಗಳನ್ನು ತಿಳಿಯದೆ ಹೂಡಿಕೆ ಬೇಡ

Last Updated 15 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಎಕ್ಸಿಸ್ ಮ್ಯೂಚುವಲ್ ಫಂಡ್, ಐಸಿಐಸಿಐ ಮ್ಯೂಚುವಲ್ ಫಂಡ್, ಡಿಎಸ್‌ಪಿ ಮಿಡ್ ಕ್ಯಾಪ್ ಫಂಡ್, ಮಿರಾಯ್ ಅಸೆಟ್ ಫಂಡ್, ಪರಾಗ್ ಪರೀಕ್ ಫಂಡ್... ಅಬ್ಬಬ್ಬಾ ಒಂದಾ ಎರಡಾ? ಭಾರತದಲ್ಲಿರುವ ಸುಮಾರು 44 ಮ್ಯೂಚುಯಲ್ ಫಂಡ್ ಹೌಸ್‌ಗಳು ನೂರಾರು ಮ್ಯೂಚುವಲ್ ಫಂಡ್ ಯೋಜನೆಗಳನ್ನು ಹುಟ್ಟುಹಾಕಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫಂಡ್‌ಗಳಿರುವಾಗ ಹೂಡಿಕೆ ಮಾಡುವುದು ಎಲ್ಲಿ ಎನ್ನುವುದೇ ಹೂಡಿಕೆದಾರನಲ್ಲಿ ಇರುವ ಗೊಂದಲ.

ಈ ಗೊಂದಲಕ್ಕೆ ಸಿಲುಕಿದ ಎಷ್ಟೋ ಮಂದಿ ತಮಗೆ ಸೂಕ್ತವಲ್ಲದ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವ ಉದಾಹರಣೆಗಳು ಇವೆ. ಇದನ್ನು ತಪ್ಪಿಸುವ ಸಲುವಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮ್ಯೂಚುವಲ್ ಫಂಡ್‌ಗಳನ್ನು ಪ್ರಮುಖವಾಗಿ ಮೂರು ಬಗೆಗಳಲ್ಲಿ ವರ್ಗೀಕರಿಸಿದೆ. ಈ ವಿಂಗಡಣೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಹೂಡಿಕೆಯ ಹಾದಿ ಸುಗಮ.

1. ಈಕ್ವಿಟಿ ಮ್ಯೂಚುವಲ್ ಫಂಡ್:
ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ. ಈ ಹೂಡಿಕೆಯಲ್ಲಿ ರಿಸ್ಕ್ ಜಾಸ್ತಿ ಇದ್ದು, ಲಾಭಗಳಿಸುವ ಅವಕಾಶವೂ ಹೆಚ್ಚಿಗೆ ಇರುತ್ತದೆ. ದೀರ್ಘಾವಧಿ, ಅಂದರೆ 5ರಿಂದ 10 ವರ್ಷಗಳ ಅವಧಿಯ ಹೂಡಿಕೆ ಆಗಿದ್ದರೆ ಈಕ್ವಿಟಿ ಮ್ಯೂಚುವಲ್ ಫಂಡ್ ಸೂಕ್ತ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಶೇಕಡ 12ರಿಂದ ಶೇ 13ರಷ್ಟು ಲಾಭ ನಿರೀಕ್ಷಿಸಬಹುದು. ಆದರೆ ಈ ಹೂಡಿಕೆಯಲ್ಲಿ ನಿಶ್ಚಿತ ಠೇವಣಿಗಳಲ್ಲಿ ಇರುವಂತೆ ಇಂತಿಷ್ಟೇ ಬಡ್ಡಿ ಲಾಭ ಸಿಗುತ್ತದೆ ಎನ್ನುವ ಖಾತರಿ ಇರುವುದಿಲ್ಲ. ಈಕ್ವಿಟಿ ಮ್ಯೂಚುವಲ್ ಫಂಡ್ ಅಡಿಯಲ್ಲಿ ಪ್ರಮುಖವಾಗಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳು ಇವೆ. ಲಾರ್ಜ್ ಕ್ಯಾಪ್ ಫಂಡ್‌ಗಳು ದೊಡ್ಡ ಪ್ರಮಾಣದ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳು ಕ್ರಮವಾಗಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪನಿಗಳಲ್ಲಿ ಹಣವನ್ನು ತೊಡಗಿಸುತ್ತವೆ.

2. ಡೆಟ್ ಮ್ಯೂಚುವಲ್ ಫಂಡ್:
ಡೆಟ್ (ಸಾಲಪತ್ರ) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರಿಂದ ಸಂಗ್ರಹಿಸುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಿಲ್ಲ. ಸರ್ಕಾರಿ ಬಾಂಡ್‌ಗಳು, ಡಿಬೆಂಚರ್‌ಗಳು, ಕಾರ್ಪೊರೇಟ್ ಎಫ್.ಡಿ.ಗಳು, ಟ್ರೆಷರಿ ಬಿಲ್‌ಗಳಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ಹೂಡಿಕೆದಾರನ ಹಣಕ್ಕೆ ಹೆಚ್ಚು ರಿಸ್ಕ್ ಇರುವುದಿಲ್ಲ. ಹೂಡಿಕೆ ಮೊತ್ತದ ಮೇಲೆ ಸಿಗುವ ಲಾಭದ ಪ್ರಮಾಣವೂ ಇಲ್ಲಿ ಈಕ್ವಿಟಿಗಿಂತ ಕಡಿಮೆ. ಹೂಡಿಕೆಯಲ್ಲಿ ಹೆಚ್ಚು ರಿಸ್ಕ್ ಬೇಡ ಎನ್ನುವವರು ಮತ್ತು ಅಲ್ಪಾವಧಿಯ ಹೂಡಿಕೆ ಮಾಡಬೇಕು ಎನ್ನುವವರು ಡೆಟ್ ಫಂಡ್ ಪರಿಗಣಿಸಬಹುದು.

ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಅವಧಿ ಆಧರಿಸಿ ಲಿಕ್ವಿಡ್ ಫಂಡ್, ಮನಿ ಮಾರ್ಕೆಟ್ ಫಂಡ್, ಡೈನಾಮಿಕ್ ಬಾಂಡ್ ಫಂಡ್, ಕಾರ್ಪೊರೇಟ್ ಬಾಂಡ್ ಫಂಡ್, ಬ್ಯಾಂಕಿಂಗ್ ಆ್ಯಂಡ್ ಪಿಎಸ್‌ಯು ಫಂಡ್, ಗಿಲ್ಟ್ ಫಂಡ್, ಕ್ರೆಡಿಟ್ ರಿಸ್ಕ್ ಫಂಡ್, ಫ್ಲೋಟರ್ ಫಂಡ್, ಓವರ್ ನೈಟ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಡ್ಯುರೇಷನ್ ಫಂಡ್, ಲೋ ಡ್ಯುರೇಷನ್ ಫಂಡ್, ಮೀಡಿಯಂ ಡ್ಯುರೇಷನ್ ಫಂಡ್, ಮೀಡಿಯಂ ಟು ಲಾಂಗ್
ಡ್ಯುರೇಷನ್ ಫಂಡ್, ಲಾಂಗ್ ಡ್ಯುರೇಷನ್ ಫಂಡ್ ಆಯ್ಕೆಗಳಿವೆ.

3. ಹೈಬ್ರಿಡ್ ಮ್ಯೂಚುವಲ್ ಫಂಡ್:
ಈಕ್ವಿಟಿ ಮತ್ತು ಡೆಟ್ ಮ್ಯೂಚುವಲ್ ಫಂಡ್‌ಗಳ ಮಿಶ್ರಣವೇ ಹೈಬ್ರಿಡ್ ಮ್ಯೂಚುವಲ್ ಫಂಡ್. ಅಂದರೆ ಹೆಚ್ಚು ರಿಸ್ಕ್ ಇರುವ ಕಂಪನಿ ಷೇರುಗಳು ಮತ್ತು ಕಡಿಮೆ ರಿಸ್ಕ್ ಇರುವ ಬಾಂಡ್, ಡಿಬೆಂಚರ್, ಕಾರ್ಪೊರೇಟ್ ಎಫ್.ಡಿ, ಗವರ್ನಮೆಂಟ್ ಸೆಕ್ಯೂರಿಟೀಸ್‌ಗಳಲ್ಲಿ ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಇಲ್ಲಿ ರಿಸ್ಕ್ ಮತ್ತು ಲಾಭಾಂಶ ಎರಡೂ ಕೂಡ ಮಧ್ಯಮ ಪ್ರಮಾಣದಲ್ಲಿರುತ್ತವೆ. ಹೈಬ್ರಿಡ್ ಫಂಡ್‌ಗಳ ಅಡಿಯಲ್ಲಿ ಈಕ್ವಿಟಿ ಓರಿಯಂಟೆಡ್ ಹೈಬ್ರಿಡ್ ಫಂಡ್, ಡೆಟ್ ಓರಿಯಂಟೆಡ್ ಹೈಬ್ರಿಡ್ ಫಂಡ್, ಬ್ಯಾಲೆನ್ಸ್ಡ್ ಫಂಡ್, ಮಂತ್ಲಿ ಇನ್‌ಕಂ ಪ್ಲಾನ್ಸ್ ಮತ್ತು ಆರ್ಬಿಟ್ರೇಜ್ ಫಂಡ್‌ಗಳಿವೆ.

ನೆನಪಿಡಿ: ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೀರಿ, ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಮತ್ತು ಎಷ್ಟು ಸಮಯದವರೆಗೆ ನೀವು ಹೂಡಿಕೆ ಮಾಡಬಹುದು ಎನ್ನುವ ಅಂಶಗಳನ್ನು ಪರಿಗಣಿಸಿ ಯಾವ ಫಂಡ್ ಸೂಕ್ತ ಎಂಬುದನ್ನು ನಿರ್ಧರಿಸುವುದು ಸೂಕ್ತ.

ಹೊಸ ದಾಖಲೆ ಬರೆದ ಷೇರುಪೇಟೆ

ಆಗಸ್ಟ್ 13ಕ್ಕೆ ಕೊನೆಯಾದ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಸಾರ್ವಕಾಲಿಕ ಏರಿಕೆ ಕಂಡು ಹೊಸ ದಾಖಲೆ ಬರೆದಿವೆ. 55,437 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಮತ್ತು 16,529 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ತಲಾ ಶೇ 1.8ರಷ್ಟು ಏರಿಕೆ ದಾಖಲಿಸಿವೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.24ರಷ್ಟು ಕುಸಿತ ಕಂಡಿದ್ದರೆ ಸ್ಮಾಲ್ ಕ್ಯಾಪ್ ಶೇ 1.68ರಷ್ಟು ತಗ್ಗಿದೆ.

ಮುಂಬರುವ ತ್ರೈಮಾಸಿಕಗಳಲ್ಲಿ ಕಂಪನಿಗಳು ಉತ್ತಮ ಫಲಿತಾಂಶ ದಾಖಲಿಸಬಹುದು ಎನ್ನುವ ಆಶಾವಾದದ ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಯಥಾಸ್ಥಿತಿಯಲ್ಲಿಟ್ಟು ಅರ್ಥ ವ್ಯವಸ್ಥೆಯಲ್ಲಿ ನಗದು ಹರಿವಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ವೀಕರಿಸಿದೆ. ಕೋವಿಡ್ ನಡುವೆಯೂ ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುವುದು ಷೇರುಪೇಟೆಗೆ ಪೂರಕವಾಗಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ವಲಯ ಶೇ 4.4ರಷ್ಟು, ಎಫ್‌ಎಂಸಿಜಿ ಶೇ 1.8ರಷ್ಟು ಜಿಗಿದಿವೆ. ಮಾಧ್ಯಮ ವಲಯ ಶೇ 0.6ರಷ್ಟು, ಫಾರ್ಮಾ ವಲಯ ಶೇ 3.2ರಷ್ಟು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ ಶೇ 2.2ರಷ್ಟು ಇಳಿಕೆ ಕಂಡಿವೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಟೆಕ್ ಮಹೀಂದ್ರ ಶೇ 9.4ರಷ್ಟು, ಎಚ್‌ಸಿಎಲ್ ಟೆಕ್ ಶೇ 6.7ರಷ್ಟು, ಪವರ್ ಗ್ರಿಡ್ ಶೇ 5.6ರಷ್ಟು, ಟಿಸಿಎಸ್‌ ಶೇ 5ರಷ್ಟು, ಇನ್ಫೊಸಿಸ್ ಶೇ 4ರಷ್ಟು, ಏರ್‌ಟೆಲ್ ಶೇ 5ರಷ್ಟು ಏರಿಕೆಯಾಗಿವೆ. ಐಷರ್ ಮೋಟರ್ಸ್ ಶೇ 8ರಷ್ಟು, ಶ್ರೀ ಸಿಮೆಂಟ್ ಶೇ 6.4ರಷ್ಟು, ಡಿಆರ್‌ಎಲ್ ಶೇ 3ರಷ್ಟು, ಹೀರೊ ಮೋಟೊಕಾರ್ಪ್ ಶೇ 2.3ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಷೇರುಪೇಟೆಯಲ್ಲಿ ದೊಡ್ಡ (ಲಾರ್ಜ್ ಕ್ಯಾಪ್) ಕಂಪನಿಗಳು ಉತ್ತಮ ಪ್ರಗತಿ ಸಾಧಿಸಿರುವುದನ್ನು ಕಳೆದ ವಾರ ನೋಡಿದ್ದೇವೆ. ಮಿಡ್ ಕ್ಯಾಪ್ ಅಂದರೆ, ಮಧ್ಯಮ ಪ್ರಮಾಣದ ಕಂಪನಿಗಳು ಮತ್ತು ಸ್ಮಾಲ್ ಕ್ಯಾಪ್ ಅಂದರೆ, ಸಣ್ಣ ಪ್ರಮಾಣದಕಂಪನಿಗಳು ಕುಸಿತ ದಾಖಲಿಸಿರುವುದು ಕಂಡುಬಂದಿದೆ. ಒಟ್ಟಾರೆ ಚಿತ್ರಣ ನೋಡಿದಾಗ ಲಾರ್ಜ್, ಮಿಡ್ ಅಥವಾ ಸ್ಮಾಲ್ ಕ್ಯಾಪ್ ಎನ್ನುವುದಕ್ಕಿಂದ ನೀವು ಹೂಡಿಕೆ ಮಾಡಿರುವ ಕಂಪನಿ ಮೂಲಭೂತವಾಗಿ ಎಷ್ಟು ಉತ್ತಮ ಸ್ಥಿತಿಯಲ್ಲಿದೆ ಎನ್ನುವುದರ ಆಧಾರದಲ್ಲಿ ಷೇರಿನ ಬೆಲೆ ಏರಿಕೆಯಾಗುತ್ತದೋ ಇಳಿಕೆಯಾಗುತ್ತದೋ ಎನ್ನುವುದು ನಿರ್ಧಾರವಾಗುತ್ತಿದೆ.

ಅಂದರೆ ಉತ್ತಮ ಕಂಪನಿಗಳನ್ನು ಆಯ್ಕೆ ಮಾಡಿ ದೀರ್ಘಾವಧಿಗೆ ಹೂಡಿಕೆ ಮಾಡುವವರು ಚಿಂತಿಸಬೇಕಿಲ್ಲ. ಆದರೆ ಅಲ್ಪಾವಧಿ ಹೂಡಿಕೆ ಮಾಡುವವರಿಗೆ ಏರಿಳಿತದ ರಿಸ್ಕ್ ಇದ್ದೇ ಇದೆ. ಈ ವಾರ ಶಾರ್ಪ್, ಕೆನ್ನಾಮೆಟಲ್ ಇಂಡಿಯಾ ಲಿ., ಶೈನ್ ಫ್ಯಾಶನ್ಸ್ ಇಂಡಿಯಾ, ಬಿಎಫ್ ಯುಟಿಲಿಟೀಸ್ ಲಿ. ಸೇರಿ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT