ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಪಿಪಿಎಫ್ ಹೂಡಿಕೆ: ಸಿಗುತ್ತೆ ಸಾಲ

Last Updated 9 ಮೇ 2021, 19:31 IST
ಅಕ್ಷರ ಗಾತ್ರ

ದೇಶದಲ್ಲಿ ಕೋವಿಡ್-19ರ ಎರಡನೆಯ ಅಲೆಯಿಂದಾಗಿ ಉದ್ಯೋಗ ನಷ್ಟ, ವೇತನ ಕಡಿತದಂತಹ ಕ್ರಮಗಳು ಜಾರಿಗೆ ಬಂದಿವೆ. ಇವುಗಳಿಂದಾಗಿ ಜನ ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ತಾತ್ಕಾಲಿಕ ಶಮನ ಪಡೆಯಲು ಕೆಲವರು ಹಿಂದೆ ಕೂಡಿಟ್ಟಿದ್ದ ತುರ್ತು ನಿಧಿಯ ಮೊರೆ ಹೋದರೆ ಮತ್ತೆ ಕೆಲವರು ಉಳಿತಾಯದ ಹಣ ಬಳಸಲು ಮುಂದಾಗುತ್ತಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆಯ ಮೇಲೆ ಸಾಲ ಪಡೆಯಬಹುದು ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಪಿಪಿಎಫ್ ಹೂಡಿಕೆ ಮೇಲೆ ಸಾಲ ಪಡೆಯುವುದು ಹೇಗೆ, ಅದರ ಸಾಧಕ–ಬಾಧಕಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಪಿಪಿಎಫ್ ಸಾಲದ ಬಡ್ಡಿ ಲೆಕ್ಕಾಚಾರ: ಪಿಪಿಎಫ್ ಎಂಬುದು ಹೂಡಿಕೆ ಮತ್ತು ತೆರಿಗೆ ಉಳಿತಾಯದ ಸಾಧನ ಮಾತ್ರವೇ ಅಲ್ಲ. ಹಣಕಾಸಿನ ತುರ್ತು ಪರಿಸ್ಥಿತಿಗಳಲ್ಲಿ ಪಿಪಿಎಫ್ ಹೂಡಿಕೆಯ ಮೇಲೆ ಸಾಲ ಪಡೆಯಲು ಸಾಧ್ಯವಿದೆ. ಪಿಪಿಎಫ್ ಸಾಲ ನಿಯಮಗಳ ಅನ್ವಯ, ಖಾತೆದಾರರು ಮೂರನೇ ವರ್ಷದಿಂದ ಆರನೇ ವರ್ಷದ ಅವಧಿಯಲ್ಲಿ ಶೇಕಡ 1ರಬಡ್ಡಿ ದರದಲ್ಲಿ ಸಾಲ ಪಡೆಯಬಹುದು! ಅರೆ, ಕೇವಲ ಶೇ 1ರ ಬಡ್ಡಿ ದರವೇ ಎಂದು ಹುಬ್ಬೇರಿಸಬೇಡಿ. ವಾಸ್ತವದಲ್ಲಿ ಬಡ್ಡಿ ದರ ಹೆಚ್ಚಿಗೆ ಇದೆ.

ನೀವು ಪಡೆಯುವ ಸಾಲದ ಮೊತ್ತ ಎಷ್ಟೋ, ಪಿಪಿಎಫ್ ಖಾತೆಯಲ್ಲಿ ಇರುವ ಅಷ್ಟು ಮೊತ್ತಕ್ಕೆ ಸಾಲ ತೀರುವವರೆಗೆ ಬಡ್ಡಿ ಸಿಗುವುದಿಲ್ಲ! ಇದರ ಪರಿಣಾಮವಾಗಿ, ಚಾಲ್ತಿಯಲ್ಲಿರುವ ಪಿಪಿಎಫ್ ಬಡ್ಡಿ ದರಕ್ಕೆ ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ದರ ನಿಮ್ಮ ಸಾಲದ ಮೇಲಿನ ಬಡ್ಡಿ ದರವಾಗಿರುತ್ತದೆ. ಉದಾಹರಣೆಗೆ, ಏಪ್ರಿಲ್–ಜೂನ್ ತ್ರೈಮಾಸಿಕದ ಪಿಪಿಎಫ್ ಬಡ್ಡಿ ದರ ಶೇ 7.1ರಷ್ಟಿದೆ. ಪಿಪಿಎಫ್ ಸಾಲದ ಮೇಲಿನ ಬಡ್ಡಿ ದರ ಶೇ 7.1 + ಶೇ 1 = ಶೇ 8.1ರಷ್ಟು ಆಗುತ್ತದೆ.

ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಶೇ 10ರಿಂದ ಶೇ 18ರಷ್ಟಿರುತ್ತದೆ. ಅದಕ್ಕೆ ಹೋಲಿಕೆ ಮಾಡಿ ನೋಡಿದಾಗ ಪಿಪಿಎಫ್ ಮೇಲಿನ ಸಾಲದ ಬಡ್ಡಿ ದರ ಕಡಿಮೆ.

ಎಷ್ಟು ಸಾಲ ಪಡೆಯಬಹುದು?: ಪಿಪಿಎಫ್ ಹೂಡಿಕೆ ಆರಂಭಿಸಿದ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ ಸಾಲ ಪಡೆಯಬಹುದು. ಎರಡನೆಯ ವರ್ಷದ ಅಂತ್ಯದಲ್ಲಿ ಪಿಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ 25ರಷ್ಟು ಹಣ ಸಾಲದ ರೂಪದಲ್ಲಿ ಪಡೆಯಬಹುದು. ಉದಾಹರಣೆಗೆ ನೀವು ಎರಡು ವರ್ಷಗಳ ಅವಧಿಯಲ್ಲಿ ಪಿಪಿಎಫ್‌ನಲ್ಲಿ ₹ 3 ಲಕ್ಷ ಹೂಡಿಕೆ ಮಾಡಿದ್ದು, ಬಡ್ಡಿ ದರ ಸೇರಿ ಅದರ ಮೌಲ್ಯ ₹ 3.1 ಲಕ್ಷ ಆಗಿದೆ ಎಂದು ಭಾವಿಸೋಣ. ಮೂರನೇ ವರ್ಷ ಪಿಪಿಎಫ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂದುಕೊಳ್ಳೋಣ. ನಿಮಗೆ ₹ 56,081 (₹ 3.1 ಲಕ್ಷದ ಶೇ 25 ರಷ್ಟು) ಸಾಲವಾಗಿ ಸಿಗುತ್ತದೆ. ಮೂರನೇ ವರ್ಷದಲ್ಲಿ ಸಾಲಕ್ಕೆ ಅರ್ಜಿಸಲ್ಲಿಸಿದಾಗ ಇದಕ್ಕಿಂತ ಹೆಚ್ಚಿಸ ಸಾಲ ಸಿಗಲು ಸಾಧ್ಯವಿಲ್ಲ. ನಾಲ್ಕನೇ, ಐದನೇ ಮತ್ತು ಆರನೇ ವರ್ಷ ಕಳೆದಂತೆ ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ಸಿಗುವ ಸಾಲದ ಮೊತ್ತ ಹೆಚ್ಚಾಗುತ್ತದೆ.

ಪಿಪಿಎಫ್ ಮೇಲಿನ ಸಾಲ ಅಲ್ಪಾವಧಿ ಸಾಲವಾಗಿದ್ದು , ಗರಿಷ್ಠ 36 ತಿಂಗಳ ಅವಧಿಗೆ ಮಾತ್ರ ಸಿಗಲಿದೆ. ಅಂದರೆ ಸಾಲವನ್ನು 36 ತಿಂಗಳ ಒಳಗಾಗಿ ಮರುಪಾವತಿ ಮಾಡಬೇಕು. ಸಾಲ ಪಾವತಿ ವಿಳಂಬವಾದರೆ ಹೆಚ್ಚುವರಿಯಾಗಿ ಶೇ 6ರಷ್ಟು ಬಡ್ಡಿ ಹೊರೆ ಬೀಳುತ್ತದೆ.

ಅನುಕೂಲಗಳೇನು?: ಪಿಪಿಎಫ್ ಸಾಲ ಪಡೆಯಲು ಯಾವುದೇ ಮೇಲಾಧಾರ (COLLATERAL) ಅಗತ್ಯವಿಲ್ಲ, ಇಲ್ಲಿ ನಿಮ್ಮ ಪಿಪಿಎಫ್ ಹೂಡಿಕೆ ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗುತ್ತದೆ. ವೈಯಕ್ತಿಕ ಸಾಲಗಳ ಬಡ್ಡಿ ದರ ಶೇ 10ರಿಂದ ಶೇ 18ರವರೆಗೆ ಇರುತ್ತದೆ. ಅದಕ್ಕೆ ಹೋಲಿಕೆ ಮಾಡಿ ನೋಡಿದಾಗ ಪಿಪಿಎಫ್ ಮೇಲಿನ ಸಾಲ ಒಳ್ಳೆಯ ಆಯ್ಕೆ. ಸಾಲ ಮರುಪಾವತಿಗೆ 36 ತಿಂಗಳ ಅವಧಿ ಸಿಗುತ್ತದೆ. ಹಾಗಾಗಿ ನಿಮ್ಮ ತಿಂಗಳ ಖರ್ಚು–ವೆಚ್ಚಗಳಿಗೆ ತೊಂದರೆಯಾಗದಂತೆ ಸುಲಭವಾಗಿ ಸಾಲ ಮರುಪಾವತಿ ಮಾಡಬಹುದು. ಸುಲಭ ಮಾಸಿಕ ಕಂತುಗಳಲ್ಲಿ (ಇಎಂಐ) ಪಿಪಿಎಫ್ ಸಾಲ ಪಾವತಿಸಬಹುದು.

ಅನಿಶ್ಚಿತತೆಯ ನಡುವೆ ಷೇರುಪೇಟೆ ಜಿಗಿತ
ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ವಾರವೂ ಗಳಿಕೆ ಕಂಡಿವೆ. 49,206 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.87ರಷ್ಟು ಜಿಗಿದಿದೆ. 14,823 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.31ರಷ್ಟು ಗಳಿಕೆ ಕಂಡಿದೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.4 ಮತ್ತು ಶೇ 2.5ರಷ್ಟು ಗಳಿಕೆ ಕಂಡಿವೆ.

ಜಾಗತಿಕ ವಿದ್ಯಮಾನಗಳು ಷೇರುಪೇಟೆಗೆ ಪೂರಕವಾಗಿರುವುದು, ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿರುವುದು, ಸೊರಗಿರುವ ಅರ್ಥ ವ್ಯವಸ್ಥೆಯನ್ನು ಬಲಗೊಳಿಸಲು ಆರ್‌ಬಿಐ ಕೈಗೊಂಡ ಆರ್ಥಿಕ ಕ್ರಮಗಳು ಸೇರಿ ಕೆಲವು ಬೆಳವಣಿಗೆಗಳು ಮಾರುಕಟ್ಟೆಯ ಉತ್ಸಾಹಕ್ಕೆ ಕಾರಣವಾಗಿವೆ. ಆದರೆ ಪ್ರತಿದಿನ ಸುಮಾರು ನಾಲ್ಕು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದು ಹೂಡಿಕೆದಾರರನ್ನು ಚಿಂತೆಗೆ ದೂಡಿದೆ.

ರಿಯಲ್ ಎಸ್ಟೇಟ್ ಹೊರತುಪಡಿಸಿ ಎಲ್ಲ ವಲಯಗಳು ಈ ವಾರ ಗಳಿಕೆ ಕಂಡಿವೆ. ನಿಫ್ಟಿ ಲೋಹ ವಲಯ ಶೇ 10ರಷ್ಟು ಗಳಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3ರಷ್ಟು, ಮಾಹಿತಿ ತಂತ್ರಜ್ಞಾನ ವಲಯ ಶೇ 2.3ರಷ್ಟು ಜಿಗಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,092.50 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,135.23 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಟಾಟಾ ಸ್ಟೀಲ್ ಶೇ 7.40ರಷ್ಟು, ಹಿಂಡಾಲ್ಕೋ ಶೇ 3.93ರಷ್ಟು, ಏರ್‌ಟೆಲ್ ಶೇ 5.92ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 3.72ರಷ್ಟು, ಅದಾನಿ ಪೋರ್ಟ್ಸ್ ಶೇ 5.16ರಷ್ಟು ಹೆಚ್ಚಳ ಕಂಡಿವೆ. ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ 6.05ರಷ್ಟು, ರಿಲಯನ್ಸ್ ಶೇ 3.15ರಷ್ಟು, ಟೈಟಾನ್ ಶೇ 3.03ರಷ್ಟು, ಸಿಪ್ಲಾ ಶೇ 3.02ರಷ್ಟು ಮತ್ತು ಪವರ್ ಗ್ರಿಡ್ ಶೇ 2.50ರಷ್ಟು ಕುಸಿದಿವೆ.

ಮುನ್ನೋಟ: ಮಾರ್ಚ್ ಆರಂಭದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿತ್ತು ಎನ್ನುವಂತ ಸ್ಥಿತಿ ಇತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ಅರ್ಥ ವ್ಯವಸ್ಥೆಯ ಮೇಲೆ ಕೋವಿಡ್ ಕಾರ್ಮೋಡ ಆವರಿಸಿರುವುದರಿಂದ ಷೇರುಪೇಯಲ್ಲಿ ಭಾರೀ ಏರಿಳಿತವಾಗಬಹುದು. ಒಳ್ಳೆಯ ಕಂಪನಿ ಷೇರುಗಳು ಕೂಡ ಕುಸಿತ ಕಾಣಬಹುದು. ಆದರೆ ಆತಂಕಕ್ಕೆ ಒಳಗಾಗಬೇಕಿಲ್ಲ, ತಾಳ್ಮೆಯಿಂದ ಹೂಡಿಕೆ ನಿಭಾಯಿಸಬೇಕು.

ನೀವು ಹೂಡಿಕೆ ಮಾಡಿರುವುದು ದೀರ್ಘಾವಧಿಗೆ ಎನ್ನುವ ಸ್ಪಷ್ಟತೆ ನಿಮ್ಮಲ್ಲಿರಬೇಕು. ಗುಣಮಟ್ಟದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಇದಕ್ಕೆ ಪರ್ಯಾಯ ಆಯ್ಕೆ ಮತ್ತೊಂದಿಲ್ಲ. ಕಂಪನಿಯ ಅಡಿಪಾಯ ಭದ್ರವಾಗಿದ್ದಾಗ ತಾತ್ಕಾಲಿಕ ಏರಿಳಿತಕ್ಕೆ ತಲೆಕೆಡಿಸಿಕೊಳ್ಳದೆ ಹೂಡಿಕೆ ಮುಂದುವರಿಸಬಹುದು. ಈ ವಾರ ಅಪೋಲೋ ಟಯರ್ಸ್, ಹ್ಯಾಪಿಯೆಸ್ಟ್ ಮೈಂಡ್ಸ್, ಲುಪಿನ್, ಜಿಂದಾಲ್ ಸ್ಟೀಲ್, ಏಷ್ಯನ್ ಪೇಂಟ್ಸ್, ಇಂಡಿಗೋ ಪೇಂಟ್ಸ್, ಪಿಡಿಲೈಟ್ ಇಂಡಸ್ಟ್ರೀಸ್, ಟಾಟಾ ಪವರ್, ಯುಪಿಎಲ್, ವೋಲ್ಟಾಸ್, ಬ್ರಿಗೇಡ್, ಪಾಲಿಕ್ಯಾಬ್, ಸಿಪ್ಲಾ, ಡಾ ರೆಡ್ಡೀಸ್, ಎಸ್ಕೋರ್ಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ
ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT