ಸೋಮವಾರ, ಜೂಲೈ 6, 2020
23 °C

ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಆಯ್ಕೆ

ಅವಿನಾಶ್ ಕೆ. ಟಿ. Updated:

ಅಕ್ಷರ ಗಾತ್ರ : | |

‘ಕೋವಿಡ್-19’ನಿಂದಾಗಿ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಲಾಭ ಕೊಡುವ ಹೂಡಿಕೆ ಆಯ್ಕೆಗಳು ಕಡಿಮೆಯಾಗುತ್ತಿದ್ದು, ನಿರ್ದಿಷ್ಟ ಮಾಸಿಕ ಆದಾಯಕ್ಕೆ ಕಷ್ಟ ಪಡುವಂತಾಗಿದೆ. ರೆಪೊ ದರ ಇಳಿಕೆಯಿಂದಾಗಿ ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳ (ಫಿಕ್ಸೆಡ್ ಡೆಪಾಸಿಟ್–ಎಫ್‌ಡಿ) ಮೇಲಿನ ಬಡ್ಡಿ ದರಗಳನ್ನು ಮೇಲಿಂದ ಮೇಲೆ ಕಡಿತಗೊಳಿಸುತ್ತಿವೆ. ಈ ಹೊತ್ತಿನಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಒಂದಿಷ್ಟು ಉತ್ತಮ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.‌

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ): ಹಿರಿಯ ನಾಗರಿಕರಿಗಾಗಿಯೇ ಇರುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು ಈ ಮೊದಲು ಮಾರ್ಚ್ 31, 2020 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಯೋಜನೆಯನ್ನು ಈಗ ಮಾರ್ಚ್ 31, 2023 ರ ವರೆಗೆ ವಿಸ್ತರಿಸಲಾಗಿದೆ. ಆದರೆ ಶೇ 8 ರಷ್ಟಿದ ಬಡ್ಡಿ ದರವನ್ನು ಶೇ 7.4 ಕ್ಕೆ ಇಳಿಸಲಾಗಿದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ (ಪಿಒಎಂಐಎಸ್): ಈ ಯೋಜನೆಯ ಬಡ್ಡಿ ದರ ಸೇ 6.6 ರಷ್ಟಿದೆ. ಐದು ವರ್ಷಗಳ ಅವಧಿಯ ಎಸ್‌ಬಿಐನ ವಿ ಕೇರ್ ಫಿಕ್ಸೆಡ್ ಡೆಪಾಸಿಟ್ ಶೇ 6.5 ರಷ್ಟು ಬಡ್ಡಿ ದರ ನೀಡುತ್ತದೆ. ಇವುಗಳಿಗೆ ಹೋಲಿಕೆ ಮಾಡಿ ನೋಡಿದಾಗ ಪಿಎಂವಿವಿವೈ ಯೋಜನೆ ಆಕರ್ಷಕ ಎನಿಸುತ್ತದೆ. ಇದು ಸರ್ಕಾರ ಸಹಭಾಗಿತ್ವದ ಯೋಜನೆಯಾಗಿರುವುದರಿಂದ ಹೂಡಿಕೆ ಹಣದ ಬಗ್ಗೆ ಚಿಂತೆ ಮಾಡಬೇಕಿಲ್ಲ.

’ಪಿಎಂವಿವಿವೈ’ ಯೋಜನೆಯಲ್ಲಿ ಕನಿಷ್ಠ ₹ 1,56,658 ಮತ್ತು ಗರಿಷ್ಠ ₹ 14,49,086 ಹೂಡಿಕೆ ಮಾಡಬಹುದು. ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ₹ 1 ಸಾವಿರ ದಿಂದ ₹ 9,250 ಗಳ ವರೆಗೆ ಮಾಸಿಕ ಪಿಂಚಣಿ ಮಾತ್ತ ಪಡೆಯಲು ಸಾಧ್ಯವಿದೆ. 10 ವರ್ಷಗಳ ಲಾಕಿನ್ ಅವಧಿ ಇರುವ ’ಪಿಎಂವಿವಿವೈ’ ಯೋಜನೆಯನ್ನು ಎಲ್‌ಐಸಿ ಕಾರ್ಯಗತಗೊಳಿಸುತ್ತಿದೆ. ಎಲ್‌ಐಸಿ ಏಜೆಂಟರ ಮೂಲಕ ಅಥವಾ ನೇರವಾಗಿ ಆನ್ ಲೈನ್ ಮೂಲಕ ಇಲ್ಲಿ ಹೂಡಿಕೆ ಮಾಡಬಹುದಾಗಿದೆ. ಯೋಜನೆಯಿಂದ ಗಳಿಸುವ ಬಡ್ಡಿ ಲಾಭಕ್ಕೆ ಆದಾಯ ತೆರಿಗೆ ಮಿತಿಗೆ ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್): ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಸರ್ಕಾರಿ ಸಹಭಾಗಿತ್ವದ ಹೂಡಿಕೆ ಯೋಜನೆಯಾಗಿದ್ದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ‘ಎಸ್‌ಸಿಎಸ್‌ಎಸ್’ನಲ್ಲಿ ಕನಿಷ್ಠ ₹ 1 ಸಾವಿರ, ಗರಿಷ್ಠ ₹ 15 ಲಕ್ಷ ಹೂಡಿಕೆಗೆ ಅವಕಾಶವಿದೆ. ಹಿರಿಯ ನಾಗರಿಕರಾಗಿರುವ  ಸಂಗಾತಿ ಜತೆಗೆ ಜಂಟಿ ಖಾತೆ ತೆರೆಯಬಹುದಾಗಿದೆ. ಸದ್ಯ ಇದರ ಬಡ್ಡಿ ದರ ಶೇ 7.4 ರಷ್ಟಿದೆ. ಈ ಹೂಡಿಕೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದು ನಿರ್ದಿಷ್ಟ ಆದಾಯ ನಿರೀಕ್ಷಿಸುವ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

ಡೆಟ್ ಫಂಡ್‌ಗಳು: ಡೆಟ್ ಫಂಡ್‌ಗಳು (ಸಾಲ ನಿಧಿ) ಮ್ಯೂಚುವಲ್ ಫಂಡ್ ಹೂಡಿಕೆಯ ಒಂದು ಮಾದರಿ. ಈ ಫಂಡ್‌ಗಳಲ್ಲಿ ಹೂಡಿಕೆದಾರರ ಹಣವನ್ನು ಸರ್ಕಾರಿ ಬಾಂಡ್‌, ಕಾರ್ಪೊರೇಟ್ ಬಾಂಡ್, ಟ್ರೆಷರಿ ಬಿಲ್  ಮುಂತಾದ ಸುರಕ್ಷಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹಿರಿಯ ನಾಗರಿಕರು ಲಿಕ್ವಿಡ್ ಫಂಡ್, ಓವರ್ ನೈಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಲಿಕ್ವಿಟ್ ಫಂಡ್‌ಗಳಲ್ಲಿ ನಗದೀಕರಣ ಸುಲಭ ಮತ್ತು ಹಣಕ್ಕೆ ಒಂದಿಷ್ಟು ಗ್ಯಾರಂಟಿ ಇರುತ್ತದೆ. ಆದರೆ ಯಾವುದೇ ಮಾದರಿಯ ಮ್ಯೂಚುವಲ್ ಫಂಡ್‌ನಲ್ಲಿ ಒಂದಿಷ್ಟು ರಿಸ್ಕ್ ಇದ್ದೇ ಇರುತ್ತದೆ ಎನ್ನುವುದು ಗೊತ್ತಿರಬೇಕು. ಡೆಟ್ ಫಂಡ್‌ಗಳಲ್ಲಿನ ಹೂಡಿಕೆಯಿಂದ ಬರುವ ಲಾಭಕ್ಕೆ ನಿಮ್ಮ ಆದಾಯ ತೆರಿಗೆ ಮಿತಿಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಕಾರ್ಪೊರೇಟ್ ಠೇವಣಿಗಳು: ಬ್ಯಾಂಕ್‌ಗಳಲ್ಲಿನ ಠೇವಣಿಗೆ ಬಡ್ಡಿ ದರ ಕಡಿಮೆ ಆಗಿರುವುದರಿಂದ ಹಿರಿಯ ನಾಗರಿಕರು ಕಾರ್ಪೊರೇಟ್ ಡೆಪಾಸಿಟ್‌ಗಳ ಬಗ್ಗೆ ಗಮನಹರಿಸಬಹುದು. ಕಾರ್ಪೊರೇಟ್ ಠೇವಣಿಗಳಲ್ಲಿನ ಹೂಡಿಕೆಯಲ್ಲಿ ಸ್ವಲ್ಪ ರಿಸ್ಕ್ ( ಅಪಾಯ) ಇರುವುದರಿಂದ ಹಿರಿಯ ನಾಗರಿಕರು ಎಎಎ ಶ್ರೇಣಿಯ ಠೇವಣಿಗಳಲ್ಲಿ ಮಾತ್ರ ಹೂಡುವ ಬಗ್ಗೆ ಚಿಂತಿಸಬೇಕು.

ಆರ್ಥಿಕ ಚಟುವಟಿಕೆಗಳಿಗೆ ವೇಗದ ನಿರೀಕ್ಷೆ : ಜಿಗಿದ ಸೂಚ್ಯಂಕ
ತ್ವರಿತ ಏರಿಳಿತಗಳ ನಡುವೆಯೂ ವಾರದ ಅವಧಿಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಕಾರಾತ್ಮಕ ಹಾದಿಗೆ ಮರಳಿವೆ. ಸೆನ್ಸೆಕ್ಸ್ 32,000 ಅಂಶಗಳ ಗಡಿ ದಾಟಿದರೆ, ನಿಫ್ಟಿ 9,550 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ. ವಾರದಲ್ಲಿದ್ದ ನಾಲ್ಕು ವಹಿವಾಟಿನ ದಿನಗಳಲ್ಲಿ ನಿಫ್ಟಿ (50) ಸೂಚ್ಯಂಕ ಶೇ 6 ರಷ್ಟು ಜಿಗಿದಿದ್ದರೆ , ಸೆನ್ಸೆಕ್ಸ್ ಶೇ 5.7 ರಷ್ಟು ಏರಿಕೆಯಾಗಿದೆ.

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್‌ ದಿನದಿಂದ ದಿನಕ್ಕೆ ಮತ್ತಷ್ಟು ಸಡಿಲಗೊಂಡು ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಮರಳುವಂತೆ ಮಾಡಿದೆ. ಇದರಿಂದಾಗಿ ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸಹ ತಲಾ ಶೇ 4 ರಷ್ಟು ಏರಿಕೆ ಕಂಡಿವೆ. ವಲಯವಾರು ಪ್ರಗತಿಯಲ್ಲಿ, ಮಾಧ್ಯಮ ಮತ್ತು ಐಟಿ ವಲಯ ಹೊರತುಪಡಿಸಿ ಇನ್ನುಳಿದ ವಲಯಗಳ ಸೂಚ್ಯಂಕಗಳು ಸಕಾರಾತ್ಮಕವಾಗಿರುವುದು ಕಂಡು ಬಂದಿದೆ,

ಹೀಗಿದ್ದರೂ ಸಹಿತ ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆ ಏರಿಳಿತ ಮುಂದುವರಿಯುವುದರಿಂದ ಎಪ್‌ಎಂಸಿಜಿ, ವಾಹನ ತಯಾರಿಕಾ ವಲಯ, ಮಾಹಿತಿ ತಂತ್ರಜ್ಞಾನ, ಫಾರ್ಮಾ ವಲಯ ಮತ್ತು ಟೆಲಿಕಾಂ ವಲಯಗಳು ಆಶಾದಾಯಕವಾಗಿ ಕಾಣುತ್ತಿವೆ.

ಏರಿಕೆ- ಇಳಿಕೆ: ವಾರದ ಅವಧಿಯಲ್ಲಿ ಐಷರ್ ಮೋಟರ್ಸ್ ಶೇ 19, ಹೀರೊ ಮೋಟೊ ಕಾರ್ಪ್ ಶೇ 10, ಇಂಡಸ್ ಇಂಡ್ ಬ್ಯಾಂಕ್ ಶೇ 17, ಐಸಿಐಸಿಐ ಬ್ಯಾಂಕ್ ಶೇ 14, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 13.5, ಆ್ಯಕ್ಸಿಸ್ ಬ್ಯಾಂಕ್ ಶೇ 14, ಎಲ್‌ಆ್ಯಂಡ್‌ಟಿ ಶೇ 14.9 ರಷ್ಟು ಏರಿಕೆ ದಾಖಲಿಸಿವೆ. ಭಾರ್ತಿ ಏರ್‌ಟೆಲ್ ಶೇ 7 , ಟಿಸಿಎಸ್ ಶೇ 3 ಮತ್ತು ಇನ್ಫೊಸಿಸ್ ಶೇ 0.5 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸರ್ಕಾರದ ಮುಂದಿನ ನಡೆಗಳನ್ನು ಹೂಡಿಕೆದಾರರು ಗಮನಿಸಲಿದ್ದಾರೆ. ಮೇ ತಿಂಗಳ ವಾಹನ ಮಾರಾಟ ದತ್ತಾಂಶ ಜೂನ್ 1 ರಂದು ಹೊರಬೀಳಲಿದೆ. ಈ ವಾರವೇ ಉತ್ಪಾದನಾ ಅಂಕಿ- ಅಂಶ ಪ್ರಕಟಗೊಳ್ಳಲಿದೆ. ಮುಂಗಾರು ಈ ವಾರ ಪ್ರವೇಶಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರ ಕುರಿತು ನಿರ್ಧಾರ ಪ್ರಕಟಿಸಲಿದೆ. ಎಲ್‌ಆ್ಯಂಡ್‌ಟಿ, ಬ್ರಿಟಾನಿಯಾ, ಬಿಪಿಸಿಎಲ್, ಮದರ್ ಸನ್ ಸುಮಿ, ಇಂಟರ್ ಗ್ಲೋಬ್ , ಚೋಳಮಂಡಳಂ ಫೈನಾನ್ಸ್, ಎಸ್‌ಆರ್‌ಎಫ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

 (ಲೇಖಕ; ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು