ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಷೇರುಪೇಟೆ: ಪರ್ಯಾಯ ಆದಾಯ

Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಒಂದೆಡೆ ಹಣದುಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ, ಮತ್ತೊಂದೆಡೆ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಯ ಬಡ್ಡಿ ದರ ಶೇ 7ರ ಗಡಿ ದಾಟುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಿರ್ದಿಷ್ಟ ಪರ್ಯಾಯ ಆದಾಯ ಕಂಡುಕೊಳ್ಳುವುದು ಹೇಗೆ ಎನ್ನುವುದು ಹಲವರ ಪ್ರಶ್ನೆ. ಷೇರುಗಳಲ್ಲಿ ಹೂಡಿಕೆ ಮಾಡಿ ಅವುಗಳಿಂದ ಸಿಗುವ ಲಾಭಾಂಶದ (ಡಿವಿಡೆಂಡ್‌) ಮೂಲಕ ಪರ್ಯಾಯ ಆದಾಯ ಗಳಿಸಲು ಸಾಧ್ಯವಿದೆ. ಷೇರು ಹೂಡಿಕೆಯಲ್ಲಿ ಲಾಭಾಂಶ ಅಂದರೆ ಏನು? ಕಂಪನಿಗಳು ಏಕೆ ಲಾಭಾಂಶ ಕೊಡುತ್ತವೆ? ಷೇರು ಲಾಭಾಂಶದ ಮೂಲಕ ಆದಾಯ ಗಳಿಸಲು ತಿಳಿದಿರಬೇಕಾದ ವಿಚಾರಗಳೇನು? ಹೆಚ್ಚು ಲಾಭಾಂಶ ಆದಾಯ ಗಳಿಸಲು ಯಾವ ರೀತಿ ಷೇರುಗಳ ಆಯ್ಕೆ ಮಾಡಬೇಕು? ಬನ್ನಿ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳೋಣ.

ಷೇರುಗಳಲ್ಲಿ ಹೂಡಿಕೆ ಮಾಡಿ 2 ರೀತಿಯ ಆದಾಯ ಗಳಿಕೆ ಸಾಧ್ಯ: ಷೇರುಗಳಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಲು ಎರಡು ದಾರಿಗಳಿವೆ. ಒಂದನೆಯದು, ಷೇರಿನ ಬೆಲೆ ಹೆಚ್ಚಳದ ಮೂಲಕ, ಅಂದರೆ, ನೀವು ₹ 100 ನೀಡಿ ಕಂಪನಿಯೊಂದರ ಷೇರು ಖರೀದಿಸಿರುತ್ತೀರಿ. ಅದರ ಬೆಲೆ ಮುಂದಿನ ದಿನಗಳಲಿ ₹ 150 ಆಗುತ್ತದೆ. ಹೀಗಾದಾಗ ನಿಮಗೆ ₹ 50 ಲಾಭವಾಗುತ್ತದೆ. ಇನ್ನು ಎರಡನೇಯ ದಾರಿ, ಕಂಪನಿಗಳು ಘೋಷಣೆ ಮಾಡುವ ಲಾಭಾಂಶದ ಮೂಲಕ ನಿಮಗೆ ಆದಾಯ ಸಿಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಂಪನಿಯೊಂದರ 20 ಷೇರುಗಳಿವೆ ಎಂದುಕೊಳ್ಳಿ ಆ ಕಂಪನಿ ಪ್ರತಿ ಷೇರಿಗೆ ₹10 ಲಾಭಾಂಶ ಘೋಷಣೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ₹ 200 ರೂಪಾಯಿ ಸಂದಾಯವಾಗುತ್ತದೆ.

ಲಾಭಾಂಶ ಅಂದರೆ ಏನು? ಯಾವುದೇ ಕಂಪನಿಯ ಷೇರು ಖರೀದಿಸಿದಾಗ ಅದರಲ್ಲಿ ನಿಮ್ಮದೊಂದಿಷ್ಟು ಪಾಲುದಾರಿಕೆ ಇರುತ್ತದೆ. ಷೇರು ಹೊಂದಿರುವ ಕಂಪನಿ ಲಾಭ ಗಳಿಸಿದಾಗ ಆ ಲಾಭದ ಒಂದಿಷ್ಟು ಪಾಲನ್ನು ಷೇರುದಾರರಿಗೆ ಹಂಚಿಕೆ ಮಾಡುತ್ತದೆ. ಅದೇ ಲಾಭಾಂಶ ಆದಾಯ. ಎಲ್ಲಾ ಕಂಪನಿಗಳ ಷೇರುಗಳು ಹೆಚ್ಚು ಲಾಭಾಂಶದ ಆದಾಯ ತಂದು ಕೊಡುವುದಿಲ್ಲ. ಉದಾಹರಣೆಗೆ ಐಟಿಸಿ ಹೆಚ್ಚೆಚ್ಚು ಲಾಭಾಂಶವನ್ನು ಹೂಡಿಕೆದಾರರಿಗೆ ನೀಡುತ್ತಾ ಬಂದಿದೆ. ಆದರೆ ಹಿಂದೂಸ್ಥಾನ ಯುನಿಲಿವರ್ ತನ್ನ ಹೂಡಿಕೆದಾರರಿಗೆ ಹೆಚ್ಚು ಪ್ರಮಾಣದಲ್ಲಿ ಲಾಭಾಂಶ ಘೋಷಣೆ ಮಾಡುವುದಿಲ್ಲ. ಬಂದ ಲಾಭದಿಂದ ವಹಿವಾಟು ವಿಸ್ತರಣೆ ಮಾಡಿ ಷೇರುಗಳ ಬೆಲೆ ಮತ್ತಷ್ಟು ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಿದೆ. ನೆನಪಿಡಿ ಲಾಭಾಂಶ ಘೋಷಣೆ ಮಾಡುವ ಕಂಪನಿಗಳೆಲ್ಲಾ ಉತ್ತಮ, ಘೋಷಣೆ ಮಾಡದ ಕಂಪನಿಗಳೆಲ್ಲಾ ಕಳಪೆ ಎಂಬ ಲೆಕ್ಕಾಚಾರ ಸರಿಯಲ್ಲ. ಲಾಭಾಂಶ ಘೋಷಣೆ ನಿರ್ದಿಷ್ಟ ಕಂಪನಿಯ ವಹಿವಾಟಿನ ವಿಧಾನ ಮತ್ತು ರೀತಿ–ನೀತಿಗಳನ್ನು ಅವಲಂಬಿಸಿರುತ್ತದೆ.

ಒಳ್ಳೆಯ ಲಾಭಾಂಶ ನೀಡುವ ಷೇರುಗಳ ಆಯ್ಕೆ ಹೇಗೆ: ಮೊದಲೇ ಹೇಳಿದ ಹಾಗೆ ಎಲ್ಲಾ ಕಂಪನಿಗಳು ಹೂಡಿಕೆದಾರರಿಗೆ ಲಾಭಾಂಶ ಘೋಷಣೆ ಮಾಡುವುದಿಲ್ಲ. ಹಾಗಾಗಿ ಐತಿಹಾಸಿಕವಾಗಿ ಯಾವ ಕಂಪನಿಗಳು ನಿಯಮಿತವಾಗಿ ಲಾಭಾಂಶ ಘೋಷಣೆ ಮಾಡುತ್ತಿವೆ ಎನ್ನುವುದನ್ನು ಮೊದಲು ನೋಡಿಕೊಂಡು ಷೇರುಗಳ ಆಯ್ಕೆ ಮಾಡಿಕೊಳ್ಳಬೇಕು. ಎರಡನೆಯದಾಗಿ ಕಂಪನಿ ವಾರ್ಷಿಕವಾಗಿ ಎಷ್ಟು ಪ್ರಮಾಣದಲ್ಲಿ ಲಾಭಾಂಶ ಘೋಷಣೆ ಮಾಡುತ್ತಿದೆ ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಶೇ 1 ರಿಂದ ಶೇ 4 ರಷ್ಟು ಲಾಭಾಂಶವನ್ನು ಕಂಪನಿಗಳು ನೀಡುತ್ತವೆ. ಅದಕ್ಕಿಂತಲೂ ಹೆಚ್ಚು ಲಾಭಾಂಶ ನೀಡುವ ಕಂಪನಿಗಳೂ ಕೂಡ ಇವೆ. ನಿರ್ದಿಷ್ಟ ಕಂಪನಿ ಪ್ರತಿ ಷೇರಿಗೆ ವಾರ್ಷಿಕವಾಗಿ ಲಾಭಾಂಶ ನೀಡಿರುವ ಮೊತ್ತವನ್ನು ತೆಗೆದುಕೊಂಡು, ಆ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆಯೊಂದಿಗೆ ಭಾಗಿಸಿದಾಗ ಪ್ರತಿ ಷೇರಿಗೆ ಸಿಗುತ್ತಿರುವ ಶೇಕಡವಾರು ಲಾಭಾಂಶದ ಮೊತ್ತ ತಿಳಿಯುತ್ತದೆ. (ಸೂತ್ರ:ಪ್ರತಿ ಷೇರಿಗೆ ಘೋಷಣೆಯಾಗಿರುವ ಲಾಭಾಂಶ / ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ = ಲಾಭಾಂಶ ಗಳಿಕೆ. ಉದಾಹರಣೆಗೆ ಕಂಪನಿಯೊಂದು ಒಂದು ವರ್ಷದ ಅವಧಿಯಲ್ಲಿ ₹ 10 ಲಾಭಾಂಶ ಘೋಷಣೆ ಮಾಡಿದ್ದು ಆ ಕಂಪನಿಯ ಷೇರಿನ ಪ್ರಸ್ತುತ ಮಾರುಕಟ್ಟೆ ದರ ₹ 100 ಇದೆ ಎಂದಾದಲ್ಲಿ ಲಾಭಾಂಶ ಗಳಿಕೆ ಶೇ 10 ರಷ್ಟಾಗುತ್ತದೆ.

ಮೂರನೇ ವಾರವೂ ಸೂಚ್ಯಂಕಗಳ ಗಳಿಕೆ
ಅನಿಶ್ಚಿತತೆಯ ನಡುವೆ ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರ ಗಳಿಕೆ ದಾಖಲಿಸಿವೆ. ಜೂನ್ 3 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಶೇ 1.61 ರಷ್ಟು ಜಿಗಿದಿದೆ. ನಿಫ್ಟಿ ಶೇ 1.42 ರಷ್ಟು ಸುಧಾರಿಸಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಶೇ 1.32 ರಷ್ಟು ಹೆಚ್ಚಳ ದಾಖಲಿಸಿದ್ದರೆ, ಬಿಎಸ್‌ಸಿ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.98 ರಷ್ಟು ಮುನ್ನಡೆದಿದೆ.

ವಲಯವಾರು ಪ್ರಗತಿಯಲ್ಲಿ ಫಾರ್ಮಾ ಮತ್ತು ಬ್ಯಾಂಕಿಂಗ್ ವಲಯ ಹೊರತುಪಡಿಸಿ ಎಲ್ಲ ವಲಯಗಳು ಗಳಿಕೆ ಕಂಡಿವೆ. ನಿಫ್ಟಿ ರಿಯಲ್ ಎಸ್ಟೇಟ್ ಶೇ 4.90, ಮಾಹಿತಿ ತಂತ್ರಜ್ಞಾನ ಶೇ 4.41, ನಿಫ್ಟಿ ಮಾಧ್ಯಮ ಶೇ 3.59, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.43, ಲೋಹ ವಲಯ ಶೇ 2.25 ರಷ್ಟು ಹೆಚ್ಚಳವಾಗಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಮಹಿಂದ್ರ ಅಂಡ್ ಮಹಿಂದ್ರ ಶೇ 7.96, ರಿಲಯನ್ಸ್ ಶೇ 7.94, ಟಿಸಿಎಸ್ ಶೇ 5.48 ರಷ್ಟು ಜಿಗಿದಿವೆ. ಅಪೊಲೋ ಹಾಸ್ಪಿಟಲ್ಸ್ ಶೇ 7.07, ಹಿರೋ ಮೊಟೋ ಕಾರ್ಪ್ ಶೇ 5 ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಶೇ 4.53 ರಷ್ಟು ಕುಸಿದಿವೆ.

ಮುನ್ನೋಟ: ಜೂನ್ 6 ರಂದು ಅಮೆರಿಕ ಉದ್ಯೋಗ ಕುರಿತ ದತ್ತಾಂಶಕ್ಕೆ ಮಾರುಕಟ್ಟೆಗಳು ಪ್ರತಿಕ್ರಿಯಿಸಲಿವೆ. ಜಾಗತಿಕವಾಗಿ ಬಹುತೇಕ ದೇಶಗಳ ಷೇರುಪೇಟೆಗಳು ಸದ್ಯ ಬಡ್ಡಿ ದರ ಹೆಚ್ಚಳ ಮತ್ತು ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿವೆ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 40 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಅದು ಕೂಡ ಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

–ಅವಿನಾಶ್ ಕೆ.ಟಿ,ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ
–ಅವಿನಾಶ್ ಕೆ.ಟಿ,ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT