ಗುರುವಾರ , ಜನವರಿ 28, 2021
25 °C

ಬಂಡವಾಳ ಮಾರುಕಟ್ಟೆ: ಸಾಮಾನ್ಯರಿಗೂ ಸಿಗುತ್ತೆ ಅವಧಿ ವಿಮೆ

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

 ಜೀವ ವಿಮೆ

ಭಾರತದ 138 ಕೋಟಿ ಜನರ ಪೈಕಿ 100 ಕೋಟಿ ಜನರ ಬಳಿ ಯಾವುದೇ ಬಗೆಯ ಜೀವ ವಿಮೆ (ಲೈಫ್ ಇನ್ಶೂರೆನ್ಸ್) ಇಲ್ಲ! ಇದು ಆಶ್ಚರ್ಯದ ಸಂಗತಿಯಂತೆ ಅನಿಸಿದರೂ ಈ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ವಿಮೆ ಬಗ್ಗೆ ಅರಿವಿನ ಕೊರತೆ, ಆರ್ಥಿಕ ಸ್ಥಿತಿಗತಿಗಳ ಕಾರಣದಿಂದಾಗಿ ಹೆಚ್ಚು ಜನ ವಿಮೆಯ ರಕ್ಷಣೆ ಪಡೆದುಕೊಂಡಿಲ್ಲ. ಇದನ್ನು ಮನಗಂಡ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಈ ವರ್ಷದ ಜನವರಿ 1ರಿಂದ ‘ಸರಳ್ ಜೀವನ್ ಬಿಮಾ’ ಎಂಬ ಹೆಸರಿನ ಏಕರೂಪದ ಅವಧಿ ವಿಮೆಯನ್ನು (ಟರ್ಮ್‌ ಇನ್ಶೂರೆನ್ಸ್‌) ರೂಪಿಸಿದೆ. ಸರಳವಾಗಿ ವಿನ್ಯಾಸಗೊಳಿಸಲಾಗಿರುವ ಈ ಹೊಸ ವಿಮೆಯಿಂದ ಆದಾಯ ಕಡಿಮೆ ಇರುವ ಕುಟುಂಬಗಳಿಗೆ, ನಿರ್ದಿಷ್ಟ ಮಾಸಿಕ ಆದಾಯವಿಲ್ಲದವರಿಗೆ ಕೂಡ ವಿಮಾ ರಕ್ಷಣೆ ಸಿಗಲಿದೆ.

ಏನಿದು ‘ಸರಳ್ ಜೀವನ್ ಬಿಮಾ’?: ಇದು ಏಕರೂಪದ ಅವಧಿ ವಿಮಾ ಪಾಲಿಸಿಯಾಗಿದ್ದು, ಇದನ್ನು ಪಡೆದಿರುವ ವ್ಯಕ್ತಿಯು ಪಾಲಿಸಿ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಸಾವನ್ನಪ್ಪಿದರೆ, ವಿಮಾ ಕಂಪನಿಯು ಸಾವನ್ನಪ್ಪಿದ ಪಾಲಿಸಿದಾರನ ಕುಟುಂಬಕ್ಕೆ ನಿರ್ದಿಷ್ಟ ಮೊತ್ತದ ಹಣಕಾಸಿನ ಪರಿಹಾರವನ್ನು ನೀಡುತ್ತದೆ. ಉದಾಹರಣೆಗೆ 30 ವರ್ಷ ವಯಸ್ಸಿನ ‘ಅ’ ಎಂಬಾತ ₹ 25 ಲಕ್ಷಕ್ಕೆ ‘ಸರಳ್ ಜೀವನ್ ಬಿಮಾ’ ಪಾಲಿಸಿ ಮಾಡಿಸಿರುತ್ತಾನೆ ಎಂದಿಟ್ಟುಕೊಳ್ಳಿ. ‘ಅ’ ಒಂದೊಮ್ಮೆ ಪಾಲಿಸಿ ಅವಧಿಯಲ್ಲಿ ಸಾವನ್ನಪ್ಪಿದರೆ ಅವನ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ದೊರೆಯುತ್ತದೆ.

ಈ ಪಾಲಿಸಿ ಪಡೆಯಲು ಆದಾಯ ಪ್ರಮಾಣ ಪತ್ರ ಬೇಕಿಲ್ಲ!: ಅವಧಿ ವಿಮೆ ಪಡೆಯಬೇಕಾದರೆ ಆದಾಯ ಪ್ರಮಾಣ ಪತ್ರ ನೀಡುವುದು ಕಡ್ಡಾಯ. ಸಾಮಾನ್ಯವಾಗಿ ಆದಾಯ ಆಧರಿಸಿ ಮಾತ್ರ ಅವಧಿ ವಿಮೆಯ ಕವರೇಜ್ ಮೊತ್ತ ಹೆಚ್ಚಿಸಿಕೊಳ್ಳಬಹುದು. ಆದರೆ ‘ಸರಳ್ ಜೀವನ್ ಬಿಮಾ’ ಪಾಲಿಸಿ ಪಡೆಯಲು ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ. ಪ್ರೀಮಿಯಂ ಕಟ್ಟುವ ಸಾಮರ್ಥ್ಯವಿದ್ದರೆ ಸಾಕು, ಅಗತ್ಯವಿದ್ದವರಿಗೆ ಪಾಲಿಸಿ ಸಿಗುತ್ತದೆ. ಆದಾಯ ಕಡಿಮೆ ಇರುವವರಿಗೆ, ಗ್ರಾಮೀಣ ಭಾಗದ ಜನರಿಗೆ ಮತ್ತು ನಿರ್ದಿಷ್ಟ ಮಾಸಿಕ ಆದಾಯವಿಲ್ಲದವರಿಗೆ ಇದು ಈ ಕಾರಣದಿಂದಾಗಿ ವರದಾನವಾಗಲಿದೆ.

‘ಸರಳ್ ಜೀವನ್ ಬಿಮಾ’ ವಿವರ: ಪಾಲಿಸಿ ಪಡೆಯುವವರ ವಯೋಮಿತಿ 18ರಿಂದ 65 ವರ್ಷಗಳ ನಡುವೆ ಇರಬೇಕು. 5ರಿಂದ 40 ವರ್ಷಗಳ ಅವಧಿಗೆ ಪಾಲಿಸಿ ಕವರೇಜ್ ಸಿಗುತ್ತದೆ. ಗರಿಷ್ಠ ಮೆಚ್ಯೂರಿಟಿ ವಯಸ್ಸು 70 ವರ್ಷ. ಕನಿಷ್ಠ ಸಮ್ ಅಶೂರ್ಡ್ ಮೊತ್ತ ₹ 5 ಲಕ್ಷ. ಗರಿಷ್ಠ ಸಮ್ ಅಶೂರ್ಡ್ ಮೊತ್ತ ₹ 25 ಲಕ್ಷ. ಎಲ್ಲಾ ಇನ್ಶೂರೆನ್ಸ್ ಕಂಪನಿಗಳು ಈ ಪಾಲಿಸಿ ಮಾರಾಟ ಮಾಡುತ್ತವೆ. ಪ್ರೀಮಿಯಂಅನ್ನು ವಾರ್ಷಿಕ, ಅರೆ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು. ಐದು ಅಥವಾ ಹತ್ತು ವರ್ಷಗಳಿಗೊಮ್ಮೆ ಅಥವಾ ಒಂದೇ ಕಂತಿನಲ್ಲಿ ಪ್ರೀಮಿಯಂ ಪಾವತಿಸುವ ಅವಕಾಶವಿದೆ. ಪಾಲಿಸಿಯು ಕಾರ್ಯಗತಗೊಳ್ಳಲು 45 ದಿನಗಳ ಕಾಯುವಿಕೆ ಅವಧಿ ಇದೆ. ಕಾಯುವಿಕೆಯ ಅವಧಿಯಲ್ಲಿ ವ್ಯಕ್ತಿ ಅಪಘಾತದಿಂದ ಸಾವನ್ನಪ್ಪಿದರೆ ಮಾತ್ರ ಕವರೇಜ್ ಮೊತ್ತ ಸಿಗಲಿದೆ. ಆನ್‌ಲೈನ್ ಮೂಲಕ ಖರೀದಿ ಮಾಡಿದರೆ ಶೇಕಡ 20ರಷ್ಟು ರಿಯಾಯಿತಿ ಇದೆ.

ಪ್ರೀಮಿಯಂ ಎಷ್ಟು?: 30 ವರ್ಷ ವಯಸ್ಸಿನ ವ್ಯಕ್ತಿ ₹ 25 ಲಕ್ಷ ಕವರೇಜ್ ಅನ್ನು 60 ವರ್ಷ ವಯಸ್ಸಿನವರೆಗೆ ಪಡೆಯಲು ವಾರ್ಷಿಕವಾಗಿ ಅಂದಾಜು ₹ 4,500ರಿಂದ ₹ 5,000ದವರೆಗೆ ಪ್ರೀಮಿಯಂ ಕಟ್ಟಬೇಕಾಗುತ್ತದೆ. ವಯಸ್ಸು, ಕವರೇಜ್ ಅವಧಿ ಆಧರಿಸಿ ಪ್ರೀಮಿಯಂ ದರದಲ್ಲಿ ವ್ಯತ್ಯಾಸವಾಗುತ್ತದೆ.

ತ್ರೈಮಾಸಿಕ ಫಲಿತಾಂಶಗಳತ್ತ ಹೂಡಿಕೆದಾರರ ಚಿತ್ತ

ಷೇರುಪೇಟೆ ಸೂಚ್ಯಂಕಗಳು ಹೊಸ ವರ್ಷದಲ್ಲೂ ಸಕಾರಾತ್ಮಕವಾಗಿ ಕಂಡುಬಂದಿವೆ. 47,868 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.91ರಷ್ಟು ಗಳಿಕೆ ಕಂಡಿದ್ದರೆ, 14,018 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.96ರಷ್ಟು ಗಳಿಸಿಕೊಂಡಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.7ರಷ್ಟು ಮತ್ತು ಶೇ 3.3ರಷ್ಟು ಹೆಚ್ಚಳ ಕಂಡಿವೆ. ಈ ವಾರದಿಂದ ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆ ಶುರುವಾಗುವುದರಿಂದ ಹೂಡಿಕೆದಾರರು ಅತ್ತ ಚಿತ್ತ ಹರಿಸಿದ್ದಾರೆ.


ಅವಿನಾಶ್ ಕೆ.ಟಿ.

ವಿದೇಶಿ ಹೂಡಿಕೆದಾರರ ವಿಶ್ವಾಸ: ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಸದ್ಯದ ಮಟ್ಟಿಗೆ ಭಾರತೀಯ ಷೇರುಪೇಟೆ ನೆಚ್ಚಿನ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಕಳೆದ ಐದು ವಹಿವಾಟಿನ ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,404 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಕಳೆದ ವಾರ ಸೆನ್ಸೆಕ್ಸ್‌ನ ಪಟ್ಟಿಯಲ್ಲಿರುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹ 185.18 ಲಕ್ಷ ಕೋಟಿ ಆಗಿತ್ತು. ಈ ವಾರ ಅದರ ಮೌಲ್ಯ ₹ 189.27 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರ ಸಂಪತ್ತು ₹ 4.09 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಮಾರುಕಟ್ಟೆ ಜಿಗಿತಕ್ಕೆ ಕಾರಣಗಳು: ವಿದೇಶಿ ಹೂಡಿಕೆಯ ಜತೆ ಕೋವಿಡ್–19 ಲಸಿಕೆಯ ವಿಚಾರದಲ್ಲಿ ಆಗುತ್ತಿರುವ ಪ್ರಗತಿ, ಜಿಎಸ್‌ಟಿ ಸಂಗ್ರಹದಲ್ಲಿನ ಹೆಚ್ಚಳ, ಡಿಸೆಂಬರ್‌ನಲ್ಲಿ ವಾಹನ ಮಾರಾಟ ಚೇತರಿಕೆ ಮತ್ತು ಕೋವಿಡ್ ಪ್ರಕರಣಗಳಲ್ಲಿ ನಿರಂತರ ಇಳಿಕೆ ಮಾರುಕಟ್ಟೆ ಜಿಗಿತಕ್ಕೆ ಪೂರಕ ಅಂಶಗಳಾಗಿವೆ. ವಲಯವಾರು ನೋಡಿದಾಗ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6ರಷ್ಟು, ರಿಯಲ್ ಎಸ್ಟೇಟ್ ಶೇ 5.7ರಷ್ಟು ಮತ್ತು ಲೋಹ ವಲಯ ಶೇ 3.6ರಷ್ಟು ಗಳಿಸಿಕೊಂಡಿವೆ.

ಏರಿಕೆ-ಇಳಿಕೆ: ಸೆನ್ಸೆಕ್ಸ್‌ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಮದರ್ ಸನ್ ಸುಮಿ ಸಿಸ್ಟಮ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬ್ಯಾಂಕ್ ಆಫ್ ಬರೋಡಾ ಮತ್ತು ಟಾಟಾ ಮೋಟರ್ಸ್ ಶೇ 6ರಿಂದ ಶೇ 10ರಷ್ಟು ಏರಿಕೆ ಕಂಡಿವೆ. ಕ್ಯಾಡಿಲಾ ಹೆಲ್ತ್ ಕೇರ್, ಇಂಡಸ್ ಟವರ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ವೇದಾಂತ ಮತ್ತು ಬಜಾಜ್ ಫಿನ್‌ಸರ್ವ್ ಉತ್ತಮ ಗಳಿಕೆ ಕಾಣುವಲ್ಲಿ ಸಫಲವಾಗಿಲ್ಲ.

2020ರಲ್ಲಿ ಮಿಶ್ರ ಬೆಳವಣಿಗೆ: ಕೋವಿಡ್‌ನಿಂದಾಗಿ ಮಾರುಕಟ್ಟೆಯಲ್ಲಿ ಉಂಟಾದ ಹಿಂಜರಿಕೆ ಹೊರ ತಾಗಿಯೂ ಷೇರು ಮಾರುಕಟ್ಟೆ 2020ರಲ್ಲಿ ಉತ್ತಮ ಸಾಧನೆ ತೋರಿದೆ. ಸೆನ್ಸೆಕ್ಸ್ ಶೇ 15.75ರಷ್ಟು ಗಳಿಕೆ ಕಂಡಿದ್ದರೆ ನಿಫ್ಟಿ ಶೇ 14.90ರಷ್ಟು ಹೆಚ್ಚಳ ಕಂಡಿದೆ. ನಗದು ಲಭ್ಯತೆ, ಬಡ್ಡಿ ದರ ಇಳಿಕೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಸುಧಾರಣೆ ಸೇರಿ ಹಲವು ಅಂಶಗಳು ಈ ಜಿಗಿತಕ್ಕೆ ಕಾರಣವಾಗಿವೆ.

ಮುನ್ನೋಟ: ಈ ವಾರ ಟಿಸಿಎಸ್, ಉತ್ತಮ್ ಶುಗರ್, ಮೆಟಲ್ ಫೋರ್ಜ್, ಆಲ್ಫಾ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಹೊರಬೀಳಲಿವೆ. ಅಮೆರಿಕದಲ್ಲಿ ಆರ್ಥಿಕ ಪ್ಯಾಕೇಜ್ ಅನುಮೋದಿಸಲಾಗಿದ್ದು ಜೋ ಬೈಡನ್ ಅವರ ಪದಗ್ರಹಣದ ಮೇಲೆ ಮಾರುಕಟ್ಟೆ ದೃಷ್ಟಿನೆಟ್ಟಿದೆ. ಜಾಗತಿಕವಾಗಿ ಕೋವಿಡ್–19 ಸೋಂಕಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದರಿಂದ ಹೂಡಿಕೆ ಮೇಲೆ ಅದು ಸಹ ಪರಿಣಾಮ ಬೀರಲಿದೆ.

(ಲೇಖಕ ‘ಇಂಡಿಯನ್‌ಮನಿ.ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು