ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ವಿದೇಶಿ ಹೂಡಿಕೆಯ ಎಂಎಫ್‌ ಉತ್ತಮವೇ?

Last Updated 3 ಜುಲೈ 2022, 19:30 IST
ಅಕ್ಷರ ಗಾತ್ರ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಮ್ಯೂಚುವಲ್ ಫಂಡ್ ಕಂಪನಿಗಳಿಗೆ ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡದಂತೆ ಫೆಬ್ರುವರಿಯಲ್ಲಿ ನಿರ್ಬಂಧ ಹೇರಿತ್ತು. ಸೆಬಿ ಹೇರಿದ್ದ 7 ಬಿಲಿಯನ್ ಡಾಲರ್ (ಅಂದಾಜು 54 ಸಾವಿರ ಕೋಟಿ) ಹೂಡಿಕೆ ಮಿತಿಯನ್ನು ಬಹುತೇಕ ಮ್ಯೂಚುವಲ್ ಫಂಡ್ ಕಂಪನಿಗಳು ಉಲ್ಲಂಘಿಸಿದ ಪರಿಣಾಮ ನಿರ್ಬಂಧ ಜಾರಿಯಾಗಿತ್ತು. ಸೆಬಿ ವಿದೇಶಿ ಷೇರುಗಳಲ್ಲಿ ಮತ್ತೆ ಹೂಡಿಕೆ ಮಾಡಲು ಫಂಡ್ ಕಂಪನಿಗಳಿಗೆ ಈಚೆಗೆ ಮತ್ತೆ ಅನುಮತಿ ನೀಡಿದೆ.

ಆದರೆ, ಕಂಪನಿಗಳು ಮಾಡುವ ಒಟ್ಟು ಹೂಡಿಕೆಯು 7 ಬಿಲಿಯನ್ ಡಾಲರ್ ಮೀರಬಾರದು ಎಂದು ಸೆಬಿ ತಾಕೀತು ಮಾಡಿದೆ.

ದೈತ್ಯ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ: ಅಮೆಜಾನ್, ಗೂಗಲ್, ಆ್ಯಪಲ್, ಫೇಸ್‌ಬುಕ್, ಮೈಕ್ರೊಸಾಫ್ಟ್, ನೆಟ್‌ಫ್ಲಿಕ್ಸ್, ಟೆಸ್ಲಾ... ದೈತ್ಯ ಬ್ರ್ಯಾಂಡ್‌ಗಳ ಹೆಸರು ಹೇಳುತ್ತಿರುವುದು ಏಕೆ ಎಂದು ಹುಬ್ಬೇರಿಸಬೇಡಿ. ಮನಸ್ಸು ಮಾಡಿದರೆ ನೀವೂ ಈ ಕಂಪನಿಗಳಲ್ಲಿ ಪಾಲುದಾರರಾಗಬಹುದು! ಆಶ್ಚರ್ಯ ಅಂತ ಅನಿಸಿದರೂ, ಅಂತಾರಾಷ್ಟ್ರೀಯ, ವಿದೇಶಿ ಮ್ಯೂಚುವಲ್ ಫಂಡ್ ಹೂಡಿಕೆ ವ್ಯವಸ್ಥೆಯಲ್ಲಿ ಇಂತಹ ಅವಕಾಶವಿದೆ.

ಭಾರತದ ಷೇರು ಮಾರುಕಟ್ಟೆ ಹೊರತುಪಡಿಸಿ ಇತರ ಜಾಗತಿಕ ಮಾರುಕಟ್ಟೆಗಳಲ್ಲಿನ ಕಂಪನಿಗಳಲ್ಲಿ ಹೂಡಿಕೆ ಮಾಡುವ ಕೆಲಸವನ್ನು ಅಂತರರಾಷ್ಟ್ರೀಯ ಅಥವಾ ವಿದೇಶಿ ಮ್ಯೂಚುವಲ್ ಫಂಡ್‌ಗಳು ಮಾಡುತ್ತವೆ. ಜಗತ್ತಿನ ಅತಿದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಲು ಈ ಮ್ಯೂಚುವಲ್ ಫಂಡ್‌ಗಳು ಅವಕಾಶ ಕಲ್ಪಿಸುತ್ತವೆ.

ಅನುಕೂಲ–ಅನನುಕೂಲ: ವಿಶ್ವದ ಎಲ್ಲ ಷೇರು ಮಾರುಕಟ್ಟೆಗಳೂ ಏಕಕಾಲದಲ್ಲಿ ಕುಸಿಯುವ ಸಾಧ್ಯತೆ ಕಡಿಮೆ ಇರುವುದರಿಂದ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ವಿದೇಶಿ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆ.ಅಲ್ಲದೆ ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಿಗೆ ಇರುವುದರಿಂದ ಅದರ ಅನುಕೂಲವೂ ಸಿಗುತ್ತದೆ. ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವಾಗ, ರಾಜಕೀಯ ಅಸ್ಥಿರತೆ ಜಾಸ್ತಿ ಇರುವ ಕಡೆಗಳಲ್ಲಿ ಹೆಚ್ಚು ಹಣ ತೊಡಗಿಸದೆ ಇರುವುದು ಒಳಿತು.

ತೆರಿಗೆ: ವಿದೇಶಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಡೆಟ್ ಮ್ಯೂಚುವಲ್ ಫಂಡ್‌ಗೆ ಅನ್ವಯಿಸುವಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಹೂಡಿಕೆ ಮಾಡಿದ ಮೂರು ವರ್ಷಗಳ ಒಳಗಾಗಿ ಹೂಡಿಕೆ ಮೊತ್ತವನ್ನು ಹಿಂಪಡೆದರೆ ನಿಮ್ಮ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ಎಸ್‌ಟಿಸಿಜಿ (ಅಲ್ಪಾವಧಿ ಬಂಡವಾಳ ಗಳಿಕೆ) ತೆರಿಗೆ ಅನ್ವಯಿಸುತ್ತದೆ. ಆದರೆ ಮೂರು ವರ್ಷಗಳ ನಂತರದಲ್ಲಿ ಹೂಡಿಕೆ ಹಿಂಪಡೆದರೆ ಬೆಲೆ ಸೂಚ್ಯಂಕದ ಏರಿಳಿತಕ್ಕೆ ತಕ್ಕಂತೆ ಇಂಡೆಕ್ಸೇಷನ್ ಒಳಗೊಂಡು ಶೇಕಡ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಪ್ರಮುಖ ಆಯ್ಕೆಗಳು:

1. ಇಂಡೆಕ್ಸ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್/ ಸೂಚ್ಯಂಕ ಆಧಾರಿತ ಇಟಿಎಫ್: ಹೂಡಿಕೆದಾರ ಸೂಚ್ಯಂಕ (Index) ಆಧಾರಿತ ಭಾರತದ ಇಟಿಎಫ್‌ನಲ್ಲಿ ಮೊದಲಿಗೆ ಹೂಡಿಕೆ ಮಾಡುತ್ತಾನೆ. ಈ ಫಂಡ್ ನಿರ್ವಹಣೆ ಮಾಡುವವರು ಆ ಹೂಡಿಕೆಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ತೊಡಗಿಸುತ್ತಾರೆ. ಇಲ್ಲಿ ಹೂಡಿಕೆದಾರ ಪರೋಕ್ಷವಾಗಿ ವಿದೇಶಿ ಮ್ಯೂಚು
ವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾನೆ.

2. ಫಂಡ್ ಆಫ್ ಫಂಡ್ಸ್: ಹೂಡಿಕೆದಾರ ಮೊದಲಿಗೆ ಭಾರತದ ಮ್ಯೂಚುವಲ್ ಫಂಡ್ ಒಂದರಲ್ಲಿ ಹೂಡಿಕೆ ಮಾಡುತ್ತಾನೆ. ಹೀಗೆ ಮಾಡಿದ ಹೂಡಿಕೆಯನ್ನು ದೇಶಿ ಮ್ಯೂಚುವಲ್ ಫಂಡ್ ಸಂಸ್ಥೆಯು, ವಿದೇಶಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಮುಂದಿನ ಹಂತದಲ್ಲಿ ಆ ವಿದೇಶಿ ಮ್ಯೂಚುವಲ್ ಫಂಡ್ ನಿರ್ವಹಿಸುವ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತದೆ. ಇಲ್ಲಿ, ಹೂಡಿಕೆದಾರ ಪರೋಕ್ಷವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಾನೆ.

3. ಸಕ್ರಿಯ ನಿರ್ವಹಣೆಯ ಫಂಡ್: ಹೂಡಿಕೆದಾರ ತೊಡಗಿಸುವ ಹಣವನ್ನು ಯಾವ ವಿದೇಶಿ ಕಂಪನಿಯಲ್ಲಿ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ಫಂಡ್ ಮ್ಯಾನೇಜರ್ ಮತ್ತು ವೃತ್ತಿಪರರ ತಂಡ ತೀರ್ಮಾನಿಸುತ್ತದೆ. ಈ ರೀತಿಯ ಹೂಡಿಕೆಗಳನ್ನು ಸಕ್ರಿಯ ನಿರ್ವಹಣೆಯ (ಆಕ್ಟಿವ್ಲಿ ಮ್ಯಾನೇಜ್ಡ್) ಫಂಡ್ ಎಂದು ಕರೆಯಲಾಗುತ್ತೆ.

4. ಫೀಡರ್ ಫಂಡ್: ಸಣ್ಣ ಸಣ್ಣ ಹೂಡಿಕೆಗಳನ್ನು ಸಂಗ್ರಹಿಸಿ ದೊಡ್ಡ ಫಂಡ್‌ ಒಂದಕ್ಕೆ (ಮಾಸ್ಟರ್ ಫಂಡ್) ಹೂಡಿಕೆ ಮಾಡುವ ವ್ಯವಸ್ಥೆಯನ್ನು ಫೀಡರ್ ಫಂಡ್ ಎನ್ನಲಾಗುತ್ತದೆ. ಮಾಸ್ಟರ್ ಫಂಡ್‌ನಲ್ಲಿ ಸಂಗ್ರಹವಾದ ಮೊತ್ತವನ್ನು ಹೂಡಿಕೆ ಸಲಹೆಗಾರರು ಅನ್ಯ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ತೊಡಗಿಸುತ್ತಾರೆ. ಇದರಿಂದ ಹೂಡಿಕೆದಾರನಿಗೆ ಪರೋಕ್ಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಲಾಭ ಸಿಗುತ್ತದೆ.

ಅಲ್ಪ ಗಳಿಕೆ ದಾಖಲಿಸಿದ ಸೂಚ್ಯಂಕಗಳು

ಅನಿಶ್ಚಿತತೆಯ ನಡುವೆ ಷೇರುಪೇಟೆ ಸೂಚ್ಯಂಕಗಳು ಅಲ್ಪ ಪ್ರಮಾಣದ ಗಳಿಕೆ ದಾಖಲಿಸಿವೆ. ಜುಲೈ 1ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿವೆ. ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.34ರಷ್ಟು ಜಿಗಿದಿದೆ. ನಿಫ್ಟಿ ಶೇ 0.33ರಷ್ಟು ಗಳಿಸಿಕೊಂಡಿದೆ. ಆದರೆ ಜೂನ್ ತಿಂಗಳ ಒಟ್ಟಾರೆ ಲೆಕ್ಕಾಚಾರವನ್ನು ಪರಿಗಣಿಸಿದಾಗ ಸೆನ್ಸೆಕ್ಸ್ ಶೇ 4.5ರಷ್ಟು ಮತ್ತು ನಿಫ್ಟಿ ಶೇ 4.8ರಷ್ಟು ಇಳಿಕೆಯಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರವಾಗಿ ಷೇರುಗಳ ಮಾರಾಟ, ಜೂನ್ ತಿಂಗಳ ವಾಹನ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳ, ದಾಖಲೆ ಜಿಎಸ್‌ಟಿ ಸಂಗ್ರಹ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕ ಶೇ 2.5ರಷ್ಟು ಜಿಗಿದಿದೆ. ಲೋಹ ಮತ್ತು ರಿಯಲ್ ಎಸ್ಟೇಟ್ ಸೂಚ್ಯಂಕಗಳು ತಲಾ ಶೇ 2ರಷ್ಟು ಹೆಚ್ಚಳ ಕಂಡಿವೆ. ನಿಫ್ಪಿ ಅನಿಲ ಮತ್ತು ತೈಲ ಸೂಚ್ಯಂಕ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕಗಳು ಶೇ 0.5ರಿಂದ ಶೇ 1ರಷ್ಟು ಇಳಿಕೆಯಾಗಿವೆ. ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 0.5ರಷ್ಟು ಸುಧಾರಿಸಿದ್ದರೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕ್ರಮವಾಗಿ ಶೇ 0.26ರಷ್ಟು ಮತ್ತು ಶೇ 1ರಷ್ಟು ಜಿಗಿದಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,836.71 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,926.47 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಐಟಿಸಿ ಶೇ 6.96ರಷ್ಟು, ಹಿಂಡಾಲ್ಕೊ ಶೇ 5.85ರಷ್ಟು, ಎಲ್ ಆ್ಯಂಡ್ ಟಿ ಶೇ 5.17ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 4.09ರಷ್ಟು, ಕೋಲ್ ಇಂಡಿಯಾ ಶೇ 3.79ರಷ್ಟು ಹೆಚ್ಚಳ ಕಂಡಿವೆ. ಬಜಾಜ್ ಆಟೊ ಶೇ 4.95ರಷ್ಟು, ಟೈಟನ್ ಶೇ 4.86ರಷ್ಟು, ಒಎನ್‌ಜಿಸಿ ಶೇ 4.59ರಷ್ಟು, ರಿಲಯನ್ಸ್ ಶೇ 3.65ರಷ್ಟು ಮತ್ತು ಐಷರ್ ಮೋಟರ್ಸ್ ಶೇ 3.30ರಷ್ಟು ಕುಸಿದಿವೆ.

ಮುನ್ನೋಟ: ಜೂನ್ ತಿಂಗಳಲ್ಲಿ ಸೆನ್ಸೆಕ್ಸ್ ಶೇ 4.5ರಷ್ಟು ಮತ್ತು ನಿಫ್ಟಿ ಶೇ 4.8ರಷ್ಟು ಕುಸಿದಿವೆ. ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆ ಸುಧಾರಿಸಿಕೊಳ್ಳುವುದು ಕಷ್ಟ ಎನ್ನಬಹುದು. ಈಗ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವುದು ಶುರುವಾಗಲಿದೆ.

ಈ ವಾರ ಟಿಸಿಎಸ್, ಡಿಮಾರ್ಟ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸಲಿವೆ. ತ್ರೈಮಾಸಿಕ ಫಲಿತಾಂಶದಲ್ಲಿ ಕಂಪನಿಗಳು ಎಷ್ಟರ ಮಟ್ಟಿಗೆ ಸಾಧನೆ ತೋರಿವೆ ಎನ್ನುವ ಅಂಶ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೆ ಜಾಗತಿಕ ವಿದ್ಯಮಾನಗಳಿಗೂ ಸಹ ಪೇಟೆ ಪ್ರತಿಕ್ರಿಯಿಸಲಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT