ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಕಾಂತ ವಡ್ಡು ಅಂಕಣ| ಅನುದಾನ ಅಭಿವೃದ್ಧಿಯ ಅಳತೆಗೋಲಲ್ಲ!

ಅಭಿವೃದ್ಧಿ ಎನ್ನುವುದು ವಾಸ್ತವದಲ್ಲಿ ಪಕ್ಕಾ ಆರ್ಥಿಕ ವ್ಯವಹಾರ, ಪರ್ಸೆಂಟೇಜುಗಳ ಲೆಕ್ಕಾಚಾರ
Last Updated 8 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಈ ಬಾರಿಯ ಸುರಿಯುತ್ತಿರುವ ಮಳೆ, ಹರಿಯುತ್ತಿರುವ ಹೊಳೆಹಳ್ಳಗಳು, ತುಳುಕುತ್ತಿರುವ ಕೆರೆಕಟ್ಟೆಗಳು ಎಂದಿನಂತೆ ಸಂತಸ-ಸಮೃದ್ಧಿಯ ಸಂಕೇತಗಳಾಗಿ ಉಳಿದಿಲ್ಲ. ನೆಲನೆಚ್ಚಿ ಬದುಕುವ ರೈತಾಪಿ ಜನರ ಬದುಕನ್ನು ಅತಂತ್ರದಲ್ಲಿ ತೇಲಿಸುತ್ತಿವೆ. ನಗರಗಳ ಬದುಕು ಕೂಡ ಬಚಾವಾಗಿಲ್ಲ. ಬೆಂಗಳೂರಿನ ಕೆಲವು ಪ್ರದೇಶಗಳ ಜನಜೀವನ ಪೂರ್ತಿ ಅಸ್ತವ್ಯಸ್ತವಾಗಿದೆ. ಶ್ರೀಮಂತರು ಹೆಚ್ಚಿಗೆ ವಾಸಿಸುವ ಐಷಾರಾಮಿ ಬಡಾವಣೆಗಳ ಬಂಗಲೆಗಳೂ ಬಯಲಲ್ಲಿ ಹರಡಿಕೊಂಡ ಬಡವರ ಗುಡಿಸಲುಗಳೂ ಅನಾಹುತದಲ್ಲಿ ಸಮಾನತೆ ಕಂಡುಕೊಂಡಿವೆ.

ಚಂದ್ರಕಾಂತ ವಡ್ಡು
ಚಂದ್ರಕಾಂತ ವಡ್ಡು

ಜೀವ ಮತ್ತು ಜೀವನವನ್ನು ಅಂಗೈಯಲ್ಲಿ ಹಿಡಿದುಕೊಂಡು ಒದ್ದಾಡುತ್ತಿರುವ ಸಂತ್ರಸ್ತ ಜನಸಮುದಾಯ ಒಂದೆಡೆಯಾದರೆ, ಸಾವು, ನೋವು, ಸಂಕಟ... ಸಕಲವನ್ನೂ ಚಮತ್ಕಾರದ ತೋರ್ಪಡಿಕೆಗೆ ಸಾಮಗ್ರಿಯಾಗಿಸಿಕೊಳ್ಳುವ ಟ್ರೋಲಿಗರ ಪಡೆ ಇನ್ನೊಂದೆಡೆ. ತಮಾಷೆಯ ಲೇಪನದೊಂದಿಗೆ ಎದುರಿಗಿರುವ ಕಟುವಾಸ್ತವ, ವ್ಯವಸ್ಥೆಯ ಲೋಪಗಳನ್ನು ಕಾಣಿಸುವ ಪ್ರಯತ್ನಗಳೂ ಮತ್ತೊಂದೆಡೆ ನಡೆಯುತ್ತಿವೆ. ಇವುಗಳ ಜೊತೆಗೆ ರಾಜಕೀಯ ‘ಪಕ್ಷ’ಪಾತಿಗಳ ಕಣ್ಣಿಗೆ ಅವರವರ ಆಯ್ಕೆಯ ಬಣ್ಣದ ಕನ್ನಡಕ, ತಮ್ಮ ತಮ್ಮ ಮೂಗಿನ ನೇರಕ್ಕೇ ವಿದ್ಯಮಾನಗಳ ಗ್ರಹಿಕೆ.

ಈ ಮಧ್ಯೆ ‘ಇಡೀ ಬೆಂಗಳೂರು ಮುಳುಗಿಹೋಗಿಲ್ಲ, ಹಾಗೆ ಬಿಂಬಿಸುವ ಅಗತ್ಯವಿಲ್ಲ’ ಎಂದು ಸಮಜಾಯಿಷಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಮಳೆ ನಮ್ಮನ್ನು ಕೇಳಿ ಬರುತ್ತದೆಯೇ’ ಎಂದು ತರ್ಕಬದ್ಧವಾಗಿಯೇ ಪ್ರಶ್ನಿಸಿದ್ದಾರೆ. ಆದರೆ ಆಡಳಿತ ನಡೆಸುವವರು ನಗರದ ಬೆಳವಣಿಗೆಯನ್ನು ಯೋಜನಾಬದ್ಧವಾಗಿ ರೂಪಿಸುವಾಗ ಮಳೆನೀರಿನ ಹರಿವು ಹೇಗಿರುತ್ತದೆ ಎಂಬುದನ್ನು ಅರಿಯಬೇಕಿದ್ದುದನ್ನು ಬುದ್ಧಿವಂತ ಬೊಮ್ಮಾಯಿಯವರು ಮರೆಯುತ್ತಾರೆ!

‘ಕಾಂಗ್ರೆಸ್ ದುರಾಡಳಿತ ಬೆಂಗಳೂರು ದುಃಸ್ಥಿತಿಗೆ ಕಾರಣ’ ಎಂಬ ಮತ್ತೊಂದು ಶೋಧನಾತ್ಮಕ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿಯವರು ತಮ್ಮದೇ ಒಕ್ಕೂಟ ಸರ್ಕಾರದ ಪ್ರಮುಖರು ದೇಶದ ಪ್ರತಿಯೊಂದು ಬಿಕ್ಕಟ್ಟನ್ನೂ ನೆಹರೂ ಯುಗದ ಹೆಗಲಿಗೇರಿಸುವ ಪರಿಪಾಟವನ್ನು ಯಥಾವತ್ ಪಾಲಿಸಿ ಸೈ ಎನ್ನಿಸಿದ್ದಾರೆ. ಬೊಮ್ಮಾಯಿಯವರ ಈ ಧೋರಣೆ ಅವರು ತಮ್ಮ ಪೂರ್ವಾಶ್ರಮವಾದ ಜನತಾ ಪರಿವಾರದ ಹಂಗು ಮತ್ತು ಹ್ಯಾಂಗೋವರುಗಳ ಪೊರೆ ಕಳಚಿಕೊಂಡು ನೈಜ ಬಿಜೆಪಿ ನಾಗರನಂತೆ ಹೆಡೆಯೆತ್ತಬೇಕೆಂಬ ಕಸರತ್ತಿನ ಭಾಗದಂತಿದೆ.

ಬೊಮ್ಮಾಯಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದವು, ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. ‘ಅತಿಯಾದ ಮಳೆಹಾನಿಗೆ ಒಳಗಾಗಿರುವ ಬೆಂಗಳೂರಿನ ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳನ್ನು
ಪ್ರತಿನಿಧಿಸುತ್ತಿರುವವರು ಯಾವ ಪಕ್ಷದ ಶಾಸಕರು?’ ಎಂಬ ಸಿದ್ದರಾಮಯ್ಯನವರ ಪ್ರಶ್ನೆಯಲ್ಲಿ ಅಕ್ಷರಶಃ ‘ಅರ್ಥ’ವಿದೆ. ಏಕೆಂದರೆ ಕ್ಷೇತ್ರದ ಅಭಿವೃದ್ಧಿ, ನಾಗರಿಕ ಸೌಲಭ್ಯಗಳ ಪ್ರಗತಿ, ಸ್ಥಳೀಯ ಸಮಸ್ಯೆಗಳ ಪರಿಹಾರ ಎಲ್ಲವೂ ಆ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಲಭಿಸುವ ಹಣಕಾಸಿನ ಮೇಲೆ ಅವಲಂಬಿತ. ಹಾಗೆಯೇ ಬಿಡುಗಡೆಯಾಗುವ ಮೊತ್ತವು ಆ ಕ್ಷೇತ್ರ ಪ್ರತಿನಿಧಿಸುವ ಶಾಸಕರ ಚೌಕಾಸಿ ಸಾಮರ್ಥ್ಯ, ಪಕ್ಷದಲ್ಲಿನ ಪ್ರಭಾವ, ಕೆಲವು ಬಾರಿ ಬೆದರಿಕೆ ತಂತ್ರ ಇತ್ಯಾದಿ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಮಂತ್ರಿಗಿರಿ, ನಿಗಮ– ಮಂಡಳಿಗಳಿಗೆ ಅತೀವ ಪ್ರಯತ್ನ ಮಾಡಿ ವಿಫಲರಾದವರನ್ನು ಅಂತಿಮವಾಗಿ ಸಮಾಧಾನಪಡಿಸಲು ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಆಮಿಷ ಒಡ್ಡುವುದನ್ನು ಗಮನಿಸುತ್ತೇವೆ. ಅಧಿಕಾರಕ್ಕೆ ಆಸೆಪಟ್ಟ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ರಾಜಿಯಾಗುವುದು ಹೊರನೋಟಕ್ಕೆ ಅವರ ದೊಡ್ಡತನ ಮತ್ತು ಜನಪರ ಕಾಳಜಿಯಂತೆ ತೋರಿ ಗೌರವ ಭಾವನೆ ಮೂಡಿಸುವುದು ಸಹಜ. ಆದರೆ ವಾಸ್ತವದಲ್ಲಿ ಅಭಿವೃದ್ಧಿ ಎನ್ನುವುದು ಪಕ್ಕಾ ಆರ್ಥಿಕ ವ್ಯವಹಾರ, ಪರ್ಸೆಂಟೇಜುಗಳ ಲೆಕ್ಕಾಚಾರ.

ಆಯವ್ಯಯ ಅಂಗೀಕಾರದ ನಂತರ ಹಣ ಬಿಡುಗಡೆಯ ಪರ್ವ. ಅದೂ ಹಲವು ಹಂತಗಳಲ್ಲಿ, ಅನೇಕಾನೇಕ ಅಂಶಗಳನ್ನು ಪರಿಗಣಿಸಿ, ತೂಗಿ, ಅಳೆದು, ಕಳೆದು ಬಿಡುಗಡೆಯಾಗುವಂತಹದು. ಅಧಿಕಾರಸ್ಥರ ಭಾಷಣಗಳಲ್ಲಿ, ಹೇಳಿಕೆಗಳಲ್ಲಿ ಕಾರ್ಯಗತವಾದ ಅಭಿವೃದ್ಧಿಯ ವಿವರಗಳು ಕಾಣಿಸಿಕೊಳ್ಳುವುದು ವಿರಳ. ಅವರ ಬಾಯಿಯಲ್ಲಿ ಹೊರಡುವುದು ಬಿಡುಗಡೆಯಾದ ಹಣದ ಅಂಕಿಅಂಶಗಳೇ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ₹ 3,800 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು. ಇದೀಗ ಬೆಂಗಳೂರಿನ ಮಳೆಹಾನಿ ಪರಿಹಾರ ಕಾರ್ಯಗಳಿಗೆ ₹ 1,800 ಕೋಟಿ ಬಿಡುಗಡೆ ಮಾಡಿರುವುದಾಗಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ.

ಹೀಗೆ ಬಿಡುಗಡೆಯಾಗುವ ಹಣಕಾಸಿಗೆ ಸರ್ಕಾರದ ನೀತಿನಿಯಮಗಳ ಪ್ರಕಾರ ಪಕ್ಕಾ ಲೆಕ್ಕಾಚಾರವಿರುತ್ತದೆ, ಹೊಣೆಗಾರಿಕೆ ಇರುತ್ತದೆ, ಉತ್ತರದಾಯಿಗಳೂ ಇರುತ್ತಾರೆ. ಪುಟಗಟ್ಟಲೇ ಬಿಲ್ಲುಗಳು, ರಶೀದಿಗಳು, ಕಡತಗಳು ಸೃಷ್ಟಿಯಾಗುತ್ತವೆ. ದಾಖಲೆಗಳಲ್ಲಿ ಎಲ್ಲವೂ ಸಾಚಾ. ಆದರೂ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಹಿರಂಗವಾಗಿಯೇ ಕೇಳಿಬರುತ್ತದೆ. ಇದು ವ್ಯವಸ್ಥೆ ಅಳವಡಿಸಿಕೊಂಡಿರುವ ಜಾದೂ ತಂತ್ರ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40 ಪರ್ಸೆಂಟ್ ಕಮಿಷನ್ ಆರೋಪ ಮತ್ತು ಅವರು ಪ್ರಧಾನಿಗೆ ನೀಡಿದ ದೂರು ಇದ್ದಲ್ಲಿಯೇ ಇವೆ.

ಸರ್ಕಾರ ಬಿಡುಗಡೆ ಮಾಡುವ ಹಣದ ಮೊತ್ತದಿಂದ ಅಭಿವೃದ್ಧಿಯನ್ನು ಅಳೆಯುವ ಚಾಲ್ತಿ ಪರಿಪಾಟದಲ್ಲೇ ದೋಷವಿದೆ ಎಂದೆನ್ನಿಸುತ್ತದೆ. ಹಣ ಬಿಡುಗಡೆ ಮಾಡುವುದು ನಿರ್ದಿಷ್ಟ ಯೋಜನೆಗೆ, ಕಾರ್ಯಕ್ರಮಕ್ಕೆ, ಖಚಿತ ಉದ್ದೇಶಕ್ಕೆ. ಆರಂಭದಲ್ಲಿ ಯೋಜನೆಯ ಮೊತ್ತ ಘೋಷಿಸುವುದನ್ನು ಸಹಿಸಬಹುದು. ಆದರೆ ಯೋಜನೆ ಕಾರ್ಯಗತವಾದ ನಂತರವೂ ಖರ್ಚು ಮಾಡಿದ ಒಟ್ಟು ಮೊತ್ತವೇ ಅಭಿವೃದ್ಧಿಯ ಮಾನದಂಡ ಆಗುವುದು ಅನುಮಾನಾಸ್ಪದ ಆಗಿ ಕಾಣುತ್ತದೆ.

ಕೆಲವು ಇಲಾಖೆಗಳಲ್ಲಿ ಕಾಮಗಾರಿ ಕಾರ್ಯಗತವಾದಾಗ ಹಣ ಬಿಡುಗಡೆಗೂ ಮುನ್ನ ತಜ್ಞರ ಆಮೂಲಾಗ್ರ ಪರಿಶೀಲನೆ, ಪರಿವೀಕ್ಷಣೆ, ಅನುಮೋದನೆಯಂತಹ ಕಟ್ಟುನಿಟ್ಟು ಕ್ರಮಗಳು ಉಂಟು. ಆದರೆ ಹೀಗೆ ಪರಿಶೀಲನೆಗೆ ಅಳವಡಿಸಿಕೊಂಡ ವಿಧಾನಗಳು ಮತ್ತಷ್ಟು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದು ವಿಪರ್ಯಾಸಕರ. ಇತ್ತೀಚೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿದ್ದ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಲಂಚದ ಪ್ರಮಾಣ ಶೇ 40ರಿಂದ ಶೇ 50ಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದರು. ಅವರ ಪ್ರಕಾರ, ಪರ್ಸೆಂಟೇಜ್ ಪ್ರಮಾಣ ಹೆಚ್ಚಾಗಲು ಕಾಮಗಾರಿ ಪರಿವೀಕ್ಷಿಸುವ ಅಧಿಕಾರಿಗಳ ಸಂಖ್ಯೆಯ ಹೆಚ್ಚಳವೇ ಕಾರಣ. ಅಂದರೆ ಕಾಮಗಾರಿಯ ಗುಣಮಟ್ಟ, ಗುತ್ತಿಗೆ ಷರತ್ತುಗಳ ಪಾಲನೆ ಇತ್ಯಾದಿಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸುವ ವ್ಯವಸ್ಥೆ ವಿಸ್ತಾರವಾದರೆ, ಅವರ ಪರಿಭಾಷೆಯಲ್ಲಿ ಲಂಚದ ಟೇಬಲ್ಲುಗಳ ಸಂಖ್ಯೆ ಹೆಚ್ಚಾಗುತ್ತದೆ! ಟೇಬಲ್ಲುಗಳ ಸಂಖ್ಯೆ ಕಡಿಮೆ ಮಾಡಿ ಎಂಬುದೇ ಗುತ್ತಿಗೆದಾರರ ಬೇಡಿಕೆಯಾಗಿದೆ.

ಸರ್ಕಾರದ ಪ್ರಮುಖ ಇಲಾಖೆಗಳ ಮೇಲೆ ಇಷ್ಟೊಂದು ಭ್ರಷ್ಟಾಚಾರದ ಆರೋಪಗಳು ವ್ಯಾಪಕವಾಗಿ ಕೇಳಿಬಂದ ಮೇಲೂ ಅಧಿಕಾರದಲ್ಲಿರುವವರು ನ್ಯಾಯಸಮ್ಮತ ತನಿಖೆಗೆ ಒಳಪಡದೆ, ‘ಲೋಕಾಯುಕ್ತಕ್ಕೆ ದೂರು ನೀಡಲಿ, ದಾಖಲೆ ಬಿಡುಗಡೆ ಮಾಡಲಿ’ ಎಂದು ಹಾರಿಕೆ ಮಾತನಾಡುತ್ತಾ ಜಾರಿಕೊಂಡರೆ ಹೇಗೆ?

ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡಾಗ ‘ಶಿಗ್ಗಾವಿ ಮಾದರಿ’ ಅಭಿವೃದ್ಧಿ ಆಶಿಸಿದ್ದವರಿಗೆ ಬೇರೊಂದು ಮಾದರಿ ಪರಿಚಯಿಸಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT