ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ–ಶಾಂತಿಯ ಸಂದೇಶ ಸಾರುವ ‘ಕ್ರಿಸ್‌ಮಸ್‌’

Last Updated 22 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ತ್ಯಾಗ, ಕ್ಷಮೆ, ಬಲಿದಾನ ಆಶಯದ ಮೂಲಕ ಮನುಕುಲಕ್ಕೆ ಪ್ರೀತಿಯ ಸಂದೇಶ ಸಾರಿದ ಸಂತ ಏಸುಕ್ರಿಸ್ತರ ಜನ್ಮದಿನದ ಸಂಭ್ರಮ ‘ಕ್ರಿಸ್‌ಮಸ್’ ಆಚರಣೆಗೆ ವಿಜಯಪುರ ನಗರವೂ ಸೇರಿದಂತೆ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತ ಸಮುದಾಯ ಚಾಲನೆ ನೀಡಿದೆ.

ಈಗಾಗಲೇ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಚರ್ಚ್ ಸೇರಿದಂತೆ ಮನೆಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. ಕ್ರಿಶ್ಚಿಯನ್ನರ ಮನೆ ಮುಂಭಾಗ ಏಸು ಹುಟ್ಟಿನ ಸಂದೇಶ ಸಾರುವ ನಕ್ಷತ್ರದ ದ್ಯೋತಕವಾಗಿ ಬಣ್ಣ ಬಣ್ಣದ ನಕ್ಷತ್ರಗಳು ತೂಗುತ್ತಿವೆ.

ಕ್ರಿಸ್‌ಮಸ್ ಈ ಬಾರಿ ಮಂಗಳವಾರ ಬಂದಿದೆ. ನಾಲ್ಕೈದು ದಿನಗಳಿಂದಲೇ ಹಬ್ಬದ ತಯಾರಿ ಬಿರುಸಿನಿಂದ ನಡೆದಿದೆ. ಮನೆ ಮನೆಗೆ ತೆರಳಿ ಶುಭಾಶಯ ಕೋರುವ ಪ್ರಕ್ರಿಯೆ ಈಗಾಗಲೇ ಸಂಪೂರ್ಣಗೊಂಡಿದೆ.

ಕ್ರಿಸ್‌ಮಸ್‌ ಆಚರಣೆಗೂ (ಡಿ.25) ಮುನ್ನ ಬರುವ ನಾಲ್ಕು ಭಾನುವಾರ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ‘ಮೂರು ರಾಯರ ಹಬ್ಬ’ದ ಆಚರಣೆ ನಡೆದಿದೆ.

ಈಗಾಗಲೇ ನಾಲ್ಕು ಭಾನುವಾರಗಳಲ್ಲಿ ಮೊದಲ ವಾರ ‘ಭರವಸೆ’, ಎರಡನೇ ವಾರ ‘ಸಂತಸ’ ಮೂರನೇ ವಾರ ‘ಶಾಂತಿ’, ಕೊನೆ ವಾರ ‘ಪ್ರೀತಿ’ ಕುರಿತು ಏಸು ನೀಡಿದ ಸಂದೇಶಗಳನ್ನು ಚರ್ಚ್‌ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮತ್ತೊಮ್ಮೆ ಪ್ರವಚನದ ಮೂಲಕ ಕ್ರೈಸ್ತ ಸಮೂಹಕ್ಕೆ ತಲುಪಿಸುತ್ತೇವೆ.

ಈ ನಾಲ್ಕು ಪ್ರವಚನದಲ್ಲಿ ಏಸುಕ್ರಿಸ್ತರು ಜಗತ್ತಿಗೆ ಬೋಧಿಸಿದ ಧರ್ಮ ಬೋಧೆಯ ಸಾರವನ್ನು, ಬದುಕುವ ರೀತಿ, ದೇವರಿಗಾಗಿ ತಮ್ಮ ಜೀವನವನ್ನು ಯಾವ ರೀತಿ ಸಮರ್ಪಣೆ ಮಾಡಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸಲಿದ್ದೇವೆ ಎಂದು ವಿಜಯಪುರದ ಕ್ಯಾಥೋಲಿಕ್‌ ಧರ್ಮಗುರು ಫಾದರ್ ಜಾನ್‌ ಡಿ’ಸೋಜಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕ್ರಿಸ್‌ಮಸ್‌ ಹಾಡುಗಳು

‘ಆಧ್ಯಾತ್ಮಿಕವಾಗಿ ಕ್ರಿಸ್‌ಮಸ್‌ ಆಚರಿಸಲಾಗುವುದು. ವಿಜಯಪುರದಲ್ಲಿನ ಕ್ರೈಸ್ತರ ಮನೆಗಳಿಗೆ ಚರ್ಚ್‌ನ ಪ್ರಾರ್ಥನಾ ತಂಡ ತೆರಳಿ ಅವರ ಒಳಿತಿಗಾಗಿ ‘ಕ್ಯಾರಲ್‌ ಮ್ಯೂಸಿಕ್‌’ ಮೂಲಕ ಪ್ರಾರ್ಥಿಸಿದೆ. ಇದೇ ಸಂದರ್ಭ ನಾಲ್ಕೈದು ಹಿಂದೂ–ಮುಸ್ಲಿಂರ ಮನೆಗಳಿಗೂ ಅವರ ಆಹ್ವಾನದ ಕೋರಿಕೆ ಮೇರೆಗೆ ತೆರಳಿ ‘ಕ್ರಿಸ್‌ಮಸ್‌ ಹಾಡು’ಗಳನ್ನು ಹಾಡಿ ಪ್ರಾರ್ಥಿಸಲಾಯಿತು’ ಎಂದು ಪೀಟರ್‌ ಅಲೆಕ್ಝಾಂಡರ್ ತಿಳಿಸಿದರು.

‘ಪ್ರಾರ್ಥನಾ ತಂಡಕ್ಕೆ ಪ್ರತಿ ಮನೆಯಲ್ಲೂ ಆದರಾತಿಥ್ಯ ದೊರಕಿತು. ಬಗೆಬಗೆಯ ಕೇಕ್‌, ಲಡ್ಡುಗಳು, ತರಹೇವಾರಿ ಸಿಹಿ ತಿನಿಸುಗಳು, ಮನೆಯಲ್ಲೇ ತಯಾರಿಸಿದ ಭಕ್ಷ್ಯ ಭೋಜನಗಳು, ಅಂಗಡಿಯಿಂದ ತಿಂದ ತಿನಿಸು, ಪಾನಕ ಜತೆ ಕಾಫಿ, ಚಹಾದ ಸತ್ಕಾರ ದೊರೆಯಿತು.

ಪ್ರಾರ್ಥನಾ ತಂಡ ವಾಹನ ಇಳಿಯುತ್ತಿದ್ದಂತೆ ಜಿಂಗಲ್ ಬೆಲ್‌, ಜಿಂಗಲ್ ಬೆಲ್‌ ಹಾಡು ಹಾಡುವ ಮೂಲಕ ಸಾಂತಾಕ್ಲಾಸ್‌ ಒಟ್ಟಿಗೆ ಮನೆ ಪ್ರವೇಶಿಸುವುದು ಸಂಪ್ರದಾಯ. ನಂತರ ಒಳಗೆ ಸರ್ವರ ಏಳಿಗೆಗಾಗಿ ‘silent night, holy night...’, ‘joy to the world, the lord as came...’ ಹಾಡುಗಳನ್ನು ಕಡ್ಡಾಯವಾಗಿ ಹಾಡಲಾಗುವುದು.

ಕನ್ನಡ ಭಾಷಿಕರ ಮನೆಗಳಲ್ಲಿ ಇವೇ ಹಾಡನ್ನು ಕನ್ನಡದಲ್ಲಿ ‘ಹರ್ಷದಲ್ಲಿ ಹಾಡುವೆವು ಇಂದು, ಏಸು ಬಾಲ ಜನಿಸಿದರು ಎಂದು’ ಎಂದು ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ವಾದ್ಯ ಪರಿಕರ ಜತೆಯಲ್ಲಿದ್ದವು ಎಂದು ಜೋಸೆಫ್‌ ವಿವರಿಸಿದರು.

ಕ್ರಿಸ್‌ಮಸ್‌ ಆಚರಣೆ

ಇದೇ 24ರ ಸೋಮವಾರ ರಾತ್ರಿ ಚರ್ಚ್‌ನಲ್ಲಿ ವಿಶೇಷ ಪೂಜೆ ನಡೆಯಲಿದೆ. ರಾತ್ರಿ 9ಕ್ಕೆ ಕ್ರಿಸ್‌ಮಸ್‌ ಹಾಡುಗಳ ಗಾಯನ. 9.30ರಿಂದ 11.30ರವರೆಗೆ ಬಲಿ ಪೂಜೆ ಜರುಗಲಿದೆ. ನಂತರ ಧರ್ಮ ಗುರುಗಳು ಗೋದಲಿಗೆ ವಿಶೇಷ ಪೂಜೆ ಸಲ್ಲಿಸಿ ಬಾಲ ಏಸುವಿನ ಮೂರ್ತಿ ಪ್ರತಿಷ್ಠಾಪಿಸಿ, 10 ರಿಂದ 20 ನಿಮಿಷ ಏಸುವಿನ ಜನ್ಮ ವೃತ್ತಾಂತದ ಸಂದೇಶ ನೀಡುತ್ತಾರೆ. ಬಳಿಕ ನೆರೆದ ಎಲ್ಲರಿಗೂ ಕೇಕ್‌ ವಿತರಿಸಿ ಕ್ರಿಸ್‌ಮಸ್‌ ಶುಭಾಶಯ ಕೋರುವುದು ವಾಡಿಕೆ ಎಂದು ಪೀಟರ್‌ ಕ್ರಿಸ್‌ಮಸ್‌ ಅಚರಣೆ ಕುರಿತಂತೆ ಮಾಹಿತಿ ನೀಡಿದರು.

25ರ ಮಂಗಳವಾರ ಮನೆಯಲ್ಲಿ ಸಂಭ್ರಮ. ಚರ್ಚ್‌ಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಕ್ರೈಸ್ತರು ತಮ್ಮ ಆತ್ಮೀಯರು, ಬಂಧು ಬಾಂಧವರೊಟ್ಟಿಗೆ ಹೊಸಬಟ್ಟೆ ತೊಟ್ಟು ಹಬ್ಬ ಆಚರಿಸುತ್ತಾರೆ. ಸಾಮೂಹಿಕವಾಗಿ ಹಬ್ಬದ ಭಕ್ಷ್ಯ–ಭೋಜನ ಸವಿಯುತ್ತಾರೆ ಎಂದು ಅಲೆಕ್ಝಾಂಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT