ದೇವರು ಎಂದರೇನು ?

7

ದೇವರು ಎಂದರೇನು ?

ಗುರುರಾಜ ಕರಜಗಿ
Published:
Updated:

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? |
ನಾವರಿಯಲಾರದೆಲ್ಲದರೊಟ್ಟು ಹೆಸರೆ ? ||
ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? |
ಸಾವು ಹುಟ್ಟುಗಳೇನು ? – ಮಂಕುತಿಮ್ಮ ||5||

(ದೇವರೆಂಬುದದೇನು = ದೇವರು + ಎಂಬುದು +ಅದೇನು?, ನಾವರಿಯಲಾರದೆಲ್ಲದರೊಟ್ಟು = ನಾವು + ಅರಿಯಲಾರದ + ಎಲ್ಲದರ + ಒಟ್ಟು, ಕಾವನೋರ್ವನಿರಲ್ಕೆ = ಕಾವನು (ಕಾಯುವವನು) + ಓರ್ವನು (ಒಬ್ಬನು) + ಇರಲ್ಕೆ (ಇರುವುದಾದರೆ)

ದೇವರು ಎಂಬುದು ಕಗ್ಗತ್ತಲೆಯ ಗವಿಯೆ? ಅಥವಾ ನಮಗೆ ತಿಳಿಯಲಾರದ ಎಲ್ಲವನ್ನೂ ದೇವರೆಂದು ಕರೆದಿದ್ದೇವೆಯೆ? ಕಾಯುವವನು ಒಬ್ಬನಿದ್ದಾನೆ ಎನ್ನುವುದಾದರೆ ಜಗತ್ತಿನ ಪರಿಸ್ಥಿತಿ ಹೀಗೇಕೆ ? ಸಾವು, ಹುಟ್ಟುಗಳೇಕೆ?
ಇದು ಶತಶತಮಾನಗಳಿಂದ ಸಂದೇಹವಾದಿಗಳು ಕೇಳಿಕೊಂಡು ಬಂದ ಪ್ರಶ್ನೆ. ಅವರ ಪ್ರಕಾರ ದೇವರು ಎನ್ನುವುದು ನಮ್ಮದೇ ಸೃಷ್ಟಿ. ಅದು ಮನುಷ್ಯನು ಹೆದರಿಕೆಯಿಂದ ಮಾಡಿಕೊಂಡ ಸಂಕೇತವೇ ಹೊರತು ವಾಸ್ತವವಲ್ಲ. ಕೇವಲ ಶಕ್ತಿ ಮತ್ತು ಬುದ್ಧಿಗಳಿಂದ ಏನನ್ನಾದರೂ ಗೆಲ್ಲಬಹುದು. ಡಿ.ವಿ.ಜಿಯ ಪ್ರಶ್ನೆ ಕೇವಲ ಪ್ರಶ್ನೆಯಲ್ಲ. ಅದು ನಮ್ಮ ಚಿಂತನೆಯನ್ನು ಕೆಣಕುವ ರೀತಿ, ಉತ್ತರವನ್ನು ಹುಡುಕಿ ಎಂದು ಪ್ರಚೋದಿಸುವ ಬಗೆ.

ದೇವರು ಇದ್ದಾನೆ ಎಂದು ನಂಬುವುದರಿಂದ ಪ್ರಯೋಜನಗಳಿವೆ. ಆದರೆ ಪ್ರಯೋಜನವಿದೆಯೆಂದು ಇಲ್ಲದ್ದನ್ನು ಉಂಟೆಂದು ಹೇಳಲಾಗದು. ಹಾಗಾದರೆ ಸತ್ಯ ಯಾವುದು? ನಾವು ಮತ್ತೆ ಶಾಸ್ತ್ರಕ್ಕೆ ಮೊರೆ ಹೋಗಬೇಕು. ತೈತ್ತರೀಯ ಉಪನಿಷತ್ತು ಫೋಷಿಸುತ್ತದೆ:
ಅಸನ್ನೇವ ಸ ಭವತಿ | ಅಸದ್ಬ್ರಹ್ಮೇತಿ ವೇದ ಚೇತ್||
ಅಸ್ತಿ ಬ್ರಹ್ಮೇತಿ ಚೇದ್ಪೇದ / ಸಸ್ತಮೇನಂ ತತೋ ವಿದು:||

ಯಾವನು ಬ್ರಹ್ಮವು ಇಲ್ಲವೆಂದು ತಿಳಿಯುತ್ತಾನೋ ಅವನು ತಾನೇ ಇಲ್ಲವಾಗುತ್ತಾನೆ. ಯಾರು ಬ್ರಹ್ಮವು ಉಂಟೆಂದು ತಿಳಿಯುತ್ತಾನೋ ಅವನು ತನ್ನ ಇರುವಿಕೆಯನ್ನೂ ತಿಳಿಯುತ್ತಾನೆ ಮತ್ತು ಸತ್ (ಒಳ್ಳೆಯದು) ಎಂಬುದನ್ನು ತಿಳಿಯುತ್ತಾನೆ.

ಏನು ಈ ಮಾತಿನ ಅರ್ಥ? ದೇವರು ಎಂದು ಕರೆಸಿಕೊಳ್ಳುವ ಬ್ರಹ್ಮವಸ್ತುವಿಗೂ ಮನುಷ್ಯರಿಗೂ ಒಂದು ಸಂಬಂಧವಿದೆಯೆಂದು ಸಿದ್ಧವಾಯಿತು. ದೇವರು ಇದ್ದರೆ ತಾನು ಇದ್ದಾನೆ, ದೇವರು ಇಲ್ಲದಿದ್ದರೆ ತಾನೂ ಇಲ್ಲ. ತಾನು ಇರುವುದು ಅನುಭವಕ್ಕೆ ಬಂದ ಮೇಲೆ ಬ್ರಹ್ಮವೂ ಇದ್ದೇ ಇರಬೇಕಲ್ಲ! ಇದೆಲ್ಲ ಸರಿ, ಆದರೆ ಈ ಶಾಸ್ತ್ರಗಳನ್ನು ಏಕೆ ನಂಬಬೇಕು? ಎಂಬ ಪ್ರಶ್ನೆ. ಇದಕ್ಕೆ ಉತ್ತರವನ್ನು ಸ್ವಾಮಿ ವಿವೇಕಾನಂದರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಬಂದಾಗ ಅಲ್ಲಿಯ ತರುಣರಿಗೆ ನೀಡಿದ್ದರು. ಆ ಹುಡುಗರು ನಿಮ್ಮ ವೇದಾಂತವೆಲ್ಲ ಬರೀ ಕಲ್ಪನೆ ಅವುಗಳಿಗೆ ಯಾವ ಆಧಾರವೂ ಇಲ್ಲ ಎಂದಾಗ ವಿವೇಕಾನಂದರು ನೀಡಿದ ಉತ್ತರ ಅದ್ಭುತ, “ನಿಮ್ಮ ವಿಜ್ಞಾನಕ್ಕೆ ಮೂರು ಆಧಾರಗಳು – 1.ಪ್ರಯೋಗ (experience): ಮೊದಲು ಪ್ರಯೋಗದಿಂದ ಪರೀಕ್ಷೆ. ಯಾವುದನ್ನು ಪ್ರಯೋಗ ಮಾಡಲು ಸಾಧ್ಯವಿಲ್ಲವೋ ಅದನ್ನು 2. ಅನುಮಾನ (inference) ದಿಂದ ಗುರುತಿಸುತ್ತೇವೆ. ಅದರಿಂದಲೂ ತೀರ್ಮಾನಕ್ಕೆ ಬರಲಾಗದಿದ್ದರೆ 3. ಸಂಶೋಧನಾ ಪ್ರಬಂಧಗಳ ಮೊರೆಹೋಗು
ತ್ತೇವೆ (referene). ಅಂತೆಯೇ ನಮ್ಮ ವೇದಾಂತದಲ್ಲೂ ಮೊದಲು ಪ್ರತ್ಯಕ್ಷ ಪ್ರಮಾಣ, ನಂತರ ಅನುಮಾನ, ಕೊನೆಗೆ ಶಾಸ್ತ್ರ. ನಮ್ಮ ಶೃತಿ, ಸ್ಮೃತಿ, ಪುರಾಣಗಳು ನಮ್ಮ ಶಾಸ್ತ್ರಗಳು. ಇವೆಲ್ಲವುಗಳ ಮೂಲಕ ನಮ್ಮ ನಂಬಿಕೆ.
ಬದುಕಿನಲ್ಲಿ, ಅದರಲ್ಲೂ ಅಸಹಾಯಕತೆ ಎದ್ದು ನಿಂತಾಗ, ಸೋತಾಗ ಮನಸ್ಸಿಗೆ ಇಂಥ ಪ್ರಶ್ನೆಗಳು ಬರುವುದುಂಟು. ಈ ಪ್ರಶ್ನೆಗಳಿಗೆ ಉಪನಿಷತ್ ಪರಂಪರೆಯಂತೆ ಮುಂದೆ ಉತ್ತರಗಳನ್ನು ಕಗ್ಗ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !