ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ctrl+Alt+Delete ಎಂಬ ‘ತಪ್ಪು’ ಹೇಗಾಯಿತು?

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಒಂದು ತಿಂಗಳ ಹಿಂದೆ ಹಾರ್ವರ್ಡ್ ವಿಶ್ವವಿದ್ಯಾಲಯದ ನಿಧಿ ಸಂಗ್ರ ಹಣಾ ಕಾರ್ಯಕ್ರಮದ ಭಾಗವಾಗಿ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ  ಮೈಕ್ರೋ ಸಾಫ್ಟ್‌ನ  ಸಹ ಸ್ಥಾಪಕ ಬಿಲ್ ಗೇಟ್ಸ್ ಒಂದು ವಿಚಿತ್ರ ಪ್ರಶ್ನೆಗೆ ಉತ್ತರ ನೀಡಬೇಕಾಯಿತು. ಪ್ರಶ್ನೆ ಬಹಳ ಸರಳ. ‘ವಿಂಡೋಸ್‌ ಕಾರ್ಯಾಚರಣ ವ್ಯವಸ್ಥೆಯೊಳಕ್ಕೆ ಪ್ರವೇಶಿಸುವುದಕ್ಕೆ ಅಗತ್ಯವಿರುವ ಲಾಗ್-ಇನ್ ಮತ್ತು ಪಾಸ್‌ವರ್ಡ್‌ಗಳನ್ನು ನೀಡುವುದಕ್ಕೆ Ctrl+Alt+Delete ಕೀಲಿಗಳನ್ನು ಒಟ್ಟಿಗೆ ಯಾಕೆ ಒತ್ತಬೇಕು. ಇದರ ಬದಲಿಗೆ ಒಂದು ಕೀಲಿಯನ್ನು ನಿಗದಿ ಪಡಿಸಲು ಸಾಧ್ಯವಿರಲಿಲ್ಲವೇ?’

ಮೈಕ್ರೋಸಾಫ್ಟ್‌ ವಿಂಡೋಸ್‌ನ ಮುಖ್ಯ ಶಿಲ್ಪಿ ಬಿಲ್ ಗೇಟ್ಸ್ ಅವರಿಗೆ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಬಹಳ ಕಷ್ಟವಿತ್ತು. ಉತ್ತರ ನೀಡಲು ಕಷ್ಟವಾದಾಗ ಎಲ್ಲರೂ ಮಾಡುವಂತೆ ಬಿಲ್ ಗೇಟ್ಸ್ ಕೂಡಾ ‘ತಪ್ಪೊಪ್ಪಿಕೊಂಡರು’. ಅವರದೇ ಮಾತುಗಳಲ್ಲಿ ಹೇಳುವುದಾದರೆ ‘ಅದೊಂದು ತಪ್ಪಾಗಿತ್ತು. ನಮಗೇನೋ ಈ ಕೆಲಸಕ್ಕೆ ಒಂದೇ ಕೀಲಿಯನ್ನು ನೀಡುವ ಉದ್ದೇಶ ವಿತ್ತು. ಆದರೆ ಐಬಿಎಂನ ಕೀಲಿ ಮಣೆಯನ್ನು ವಿನ್ಯಾಸಗೊಳಿಸಿದಾತ ಇಂಥದ್ದೊಂದು ಕೀಲಿ ಯನ್ನು ನೀಡಲು ಸಿದ್ಧವಿರಲಿಲ್ಲ’.

ಐಬಿಎಂ ರೂಪಿಸಿದ ಪರ್ಸನಲ್ ಕಂಪ್ಯೂ ಟರ್‌ನ ಕೀಲಿ ಮಣೆಯನ್ನು ವಿನ್ಯಾಸಗೊಳಿಸಿದ್ದು  ಡೆವಿಡ್ ಬ್ರಾಡ್ಲಿ. ಈತ ಸುಮಾರು ಎರಡು ವರ್ಷಗಳ ಹಿಂದೆಯೇ ಸಂದರ್ಶನವೊಂದರಲ್ಲಿ Ctrl+Alt+Delete ಯಕ್ಷ ಪ್ರಶ್ನೆಗೆ ಉತ್ತರ ನೀಡಿದ್ದರು. ‘ನಾನು ಈ ಕೀಲಿ ಸಂಯೋಜನೆ ಯನ್ನು ಕಂಡು ಹಿಡಿದದ್ದು ನಿಜ. ಆದರೆ ಇದನ್ನು ಪ್ರಸಿದ್ಧಗೊಳಿಸಿದ್ದು ಬಿಲ್ ಗೇಟ್ಸ್’.

ಬ್ರಾಡ್ಲಿ ಹೇಳಿದ ಮಾತಿನಲ್ಲಿ ಸತ್ಯಾಂಶವಿದೆ. ಬ್ರಾಡ್ಲಿ ಇದನ್ನು ವಿನ್ಯಾಸಗೊಳಿಸಿದ ಕಾಲಕ್ಕೆ ಸೀಮಿತ ಗೊಳಿಸಿ ನೋಡಿದರೆ ಒಂದು ಕೀಲಿಯ ಅವಕಾಶ, ಬಿಲ್ ಗೇಟ್ಸ್ ರೂಪಿಸಿದ ವಿಂಡೋಸ್‌ಗೆ ಇರಲಿಲ್ಲ ಎಂಬುದು ನಿಜ. ಆದರೆ ಕಾಲ ಕ್ರಮೇಣ ಐಬಿಎಂನ ಯಂತ್ರಾಂಶ ವಿನ್ಯಾಸಗಳಿಗಿಂತ ಹೆಚ್ಚು ಮೈಕ್ರೋಸಾಫ್ಟ್‌ನ ತಂತ್ರಾಂಶ ವಿನ್ಯಾಸಗಳೇ ಮುಖ್ಯವಾಗಿಬಿಟ್ಟವು. ಮಾರುಕಟ್ಟೆ ಬಲವೂ ಮೈಕ್ರೋಸಾಫ್ಟ್ ಕೈಯಲ್ಲಿಯೇ ಇತ್ತು. ಅದಕ್ಕಿಂತ ಹೆಚ್ಚಾಗಿ ಸ್ವತಃ ಮೈಕ್ರೋಸಾಫ್ಟ್ ಕೂಡಾ ಕೀಲಿಮಣೆ, ಮೌಸ್‌ಗಳಂಥ ಯಂತ್ರಾಂಶ ವಿನ್ಯಾಸ ಮತ್ತು ತಯಾರಿಕೆಗೂ ಇಳಿಯಿತು. ಆದರೂ Ctrl+Alt+Delete ಮಾತ್ರ ಬದಲಾಗಲಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಬ್ರಾಡ್ಲಿಯ ಮಾತು ನಿಜ.

ಈಗ ವಿಂಡೋಸ್–8 ಬಳಕೆಯಲ್ಲಿದೆ. ಇದರಲ್ಲಿಯೂ ಒಂದು ಅಪ್ಲಿಕೇಶನ್ ಸ್ತಬ್ಧವಾಗಿ ಬಿಟ್ಟರೆ ಅದನ್ನು ಮಾತ್ರ ಪುನರಾರಂಭಿಸುವುದಕ್ಕೆ ಬಳಸಬೇಕಾದ ಕೀಲಿ ಸಂಯೋಜನೆ Ctrl+Alt+ Delete ಅರ್ಥಾತ್ ತ್ರೀ ಫಿಂಗರ್ ಸೆಲ್ಯೂಟ್ ಬಳಸಬೇಕು.  ಆಗ ಟಾಸ್ಕ್ ಮ್ಯಾನೇಜರ್ ನಮ್ಮ ಎದುರು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಯಾವ ನಿರ್ದಿಷ್ಟ ಅಪ್ಲಿಕೇಶನ್ ನಿಲ್ಲಿಸಬೇಕು ಎಂಬುದನ್ನು ಆರಿಸಿಕೊಳ್ಳಬಹುದು. ಇಲ್ಲವಾದರೆ ಮತ್ತೊಮ್ಮೆ Ctrl+Alt+Delete ಒತ್ತಿ ಕಂಪ್ಯೂಟರನ್ನೇ ಮರು ಚಾಲನೆಗೊಳಿಸಬಹುದು. ಕೆಲಸ ಏನೇ ಇದ್ದರೂ ಮೂರು ಕೀಲಿ ಬಳಸುವ ಕ್ರಿಯೆಯ ಬದಲಿಗೆ ಒಂದೇ ಕೀಲಿಯನ್ನು ಇದಕ್ಕೆ ನಿಗದಿ ಪಡಿಸಲು ಅಡ್ಡಿಯಾದದ್ದು ಏನು?

ಈ ಪ್ರಶ್ನೆಗಿರುವ ಉತ್ತರ ಬಹಳ ಸಂಕೀರ್ಣ ವಾದದ್ದು. ಐಬಿಎಂ ತನ್ನ ಪಿ.ಸಿ. ಅಥವಾ ಪರ್ಸನಲ್ ಕಂಪ್ಯೂಟರ್ ರೂಪಿಸಿದ ಸಂದರ್ಭದಲ್ಲಿ ರಿ-ಬೂಟಿಂಗ್ ಅಥವಾ ಮರುಚಾಲನಾ ಕ್ರಿಯೆಗೆ ಒಂದೇ ಕೀಲಿಯನ್ನು ಕೀಲಿ ಮಣೆಯಲ್ಲಿ ನಿಗದಿ ಪಡಿಸಬಹುದಿತ್ತು. ಆದರೆ ಅದನ್ನು ತಪ್ಪಾಗಿ ಒತ್ತಿಬಿಟ್ಟರೆ ಅಲ್ಲಿಯ ತನಕ ಮಾಡಿರುವ ಕೆಲಸವೆಲ್ಲವು ಇಲ್ಲವಾಗುವ ಸಾಧ್ಯತೆ ಇತ್ತು. ಇದನ್ನು ತಡೆಯುವುದಕ್ಕಾಗಿ ಎರಡೂ ಕೈಗಳನ್ನು ಬಳಸಲೇಬೇಕಾದ ಒಂದು ಕೀಲಿ ಸಂಯೋಜನೆಯನ್ನು ಡೆವಿಡ್ ಬ್ರಾಡ್ಲಿ ರೂಪಿಸಿದರು.

ಕೀಲಿ ಮಣೆಯಲ್ಲಿ Ctrl ಮತ್ತು Alt ಕೀಲಿಗಳನ್ನು ಒಂದೇ ಕೈಯ ಎರಡು ಬೆರಳುಗಳಲ್ಲಿ ಬಳಸ ಬಹುದು.  ಆದರೆ Delete ಕೀಲಿ ಮಣೆಯ ಮತ್ತೊಂದು ಭಾಗದಲ್ಲಿರುತ್ತದೆ. ಅದಕ್ಕಾಗಿ ಇನ್ನೊಂದು ಕೈಯ ಬೆರಳನ್ನು ಬಳಸಬೇಕಾಗುತ್ತದೆ. ಅಕಸ್ಮಾತ್ ಆಗಿ ಈ ಸಂಯೋಜನೆ ರೂಪುಗೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪ್ರಜ್ಞಾ ಪೂರ್ವಕ ಪ್ರಯತ್ನ ಬೇಕು. ಐಬಿಎಂನ ಪಿ.ಸಿ.ಯಲ್ಲಿ ಈ ಕ್ರಿಯೆಗೆ ಬೇಕಿದ್ದದ್ದು ತಜ್ಞರಿಗೆ ಮಾತ್ರ. ಪಿ.ಸಿ.ಯ ಜನಪ್ರಿಯತೆ ಹೆಚ್ಚುತ್ತಿದ್ದ ಕಾಲದಲ್ಲಿದ್ದ 286 ಮತ್ತು 386 ಮೆಗಾಹರ್ಟ್ಸ್ ವೇಗದ ಸಂಸ್ಕಾರಕಗಳೆರಡರಲ್ಲಿಯೂ ಕೆಲಸ ಮಾಡಬಲ್ಲ ಕಾರ್ಯಾಚರಣ ವ್ಯವಸ್ಥೆಯಾಗಿದ್ದ ವಿಂಡೋಸ್ 3.0 ಮತ್ತು 3.1ಗಳಲ್ಲಿ Ctrl+Alt+Delete ವ್ಯವಸ್ಥೆ ಹೆಚ್ಚು ಜನಪ್ರಿಯವಾಯಿತು.

ತೊಂಬತ್ತರ ದಶಕದ ಪೂರ್ವಾರ್ಧದ ತನಕವೂ ಜನಪ್ರಿಯವಾಗಿದ್ದ ಈ ಕಾರ್ಯಾ ಚರಣ ವ್ಯವಸ್ಥೆಗಳು 386 ಮೆಗಾಹರ್ಟ್ಸ್ ವೇಗದ ಪ್ರೊಸೆಸರ್‌ನಲ್ಲಿದ್ದ ಯಾಂತ್ರಿಕ ಅನುಕೂಲ ಗಳನ್ನು ಬಳಸಿಕೊಳ್ಳುವುದಕ್ಕೆ ಪೂರಕವಾಗಿ ರೂಪುಗೊಂಡಿದ್ದವು. ಈಗ ನಾವು ಮಲ್ಟಿ ಟಾಸ್ಕಿಂಗ್ ಎಂದು ಕರೆಯುವ ಬಹು ತಂತ್ರಾಂಶ ಗಳನ್ನು ಏಕಕಾಲದಲ್ಲಿ ಚಾಲನೆಯಲ್ಲಿಡುವ ವ್ಯವಸ್ಥೆಯ ಆರಂಭದ ಕಾಲಘಟ್ಟವದು.

ಅಂದರೆ ಒಂದು ತಂತ್ರಾಂಶದಲ್ಲಿ ಟೈಪ್ ಮಾಡುತ್ತಿರುವಾಗಲೇ ಮತ್ತೊಂದು ತಂತ್ರಾಂಶದಲ್ಲಿ ಫೋಟೋಗಳನ್ನು ನೋಡುವುದು, ಇನ್ನೊಂದರಲ್ಲಿ ಇಂಟರ್‌ನೆಟ್ ಬಳಸುವುದು ಈ ಎಲ್ಲವೂ ನಡೆಯುತ್ತಿರುವಾಗಲೇ ವೈರಸ್ ನಿರೋಧಕ ತಂತ್ರಾಂಶ ತನ್ನ ಕೆಲಸ ಮಾಡುವ ಕ್ರಿಯೆಯನ್ನು ಮಲ್ಟಿ ಟಾಸ್ಕಿಂಗ್ ಎನ್ನಬಹುದು. ಈ ಪ್ರಕ್ರಿಯೆಯಲ್ಲಿ ಯಾವುದಾದರೊಂದು ತಂತ್ರಾಂಶ ಕೈ ಕೊಟ್ಟರೆ ಅದನ್ನು ಮಾತ್ರ ನಿಲ್ಲಿಸುವುದಕ್ಕೆ ಅಗತ್ಯವಿರುವ ವ್ಯವಸ್ಥೆಯೊಂದು ಬೇಕಿತ್ತು. ಹಾಗಾಗಿ ಮೈಕ್ರೋಸಾಫ್ಟ್ ‘ತಪ್ಪನ್ನು’ ಮುಂದುವರಿಸಿತು.

ಆದರೆ ಈಗ ಬಿಲ್ ಗೇಟ್ಸ್ ಜಾಣ ಮರೆವು ನಟಿಸುತ್ತಿದ್ದಾರೆ ಅಷ್ಟೇ. ಕಂಪ್ಯೂಟರ್ ತಂತ್ರಜ್ಞಾನ ಎಷ್ಟೇ ಆಧುನಿಕ, ವೈಜ್ಞಾನಿಕ, ತರ್ಕಬದ್ಧ ಎಂದು ಹೇಳಿದರೂ ಅದೂ ಕೂಡಾ ಮತ-ಧರ್ಮದಂತೆ ಸಂಪ್ರ ದಾಯ, ನಂಬಿಕೆಗಳನ್ನು ಪ್ರಶ್ನಿಸದ ಪರಂಪರೆ ಯನ್ನೇ ಹೊಂದಿದೆ. ಅದರಿಂದಾಗಿಯೇ ಕಂಪ್ಯೂ ಟರ್ ತಂತ್ರಜ್ಞಾನವೆಂಬುದು ಅನಗತ್ಯವಾಗಿ ಸರಳ ರೇಖಾತ್ಮಕವಾಗಿದೆ.

ಎಲ್ಲಾ ಸಂಕೀರ್ಣ ಕ್ರಿಯೆ ಗಳನ್ನೂ ಸಿಕ್ಕಾಪಟ್ಟೆ ಸರಳೀಕರಿಸಿ ಅವುಗಳನ್ನೊಂದು ಶ್ರೇಣೀಕೃತ ಮಾದರಿಯಲ್ಲಿ ಕಾರ್ಯ ರೂಪಕ್ಕೆ ತರಲಾಗಿದೆ. ಇದನ್ನು ಒಂದು ಸರಳ ಉದಾಹರಣೆಯ ಮೂಲಕ ಹೇಳಬಹುದು. ಬಹುತೇಕ ಎಲ್ಲಾ ಕಾರ್ಯಾಚರಣ ವ್ಯವಸ್ಥೆ ಗಳಲ್ಲಿಯೂ Ctrl ಮತ್ತು c ಕೀಲಿಗಳನ್ನು ಒತ್ತಿದರೆ ಆಯ್ಕೆ ಮಾಡಿದ ಫೈಲ್ ಅಥವಾ ಆಯ್ಕೆ ಮಾಡಿದ ಪಠ್ಯವನ್ನು ನಕಲಿಸಿಟ್ಟು ಕೊಳ್ಳುತ್ತದೆ. ಇದನ್ನು ಎಲ್ಲಿಯಾದರೂ ಅಂಟಿಸದೆ ಮತ್ತೊಂದು ಫೈಲ್ ಅಥವಾ ಆಯ್ಕೆ ಮಾಡಿದ ಪಠ್ಯವನ್ನು Ctrl ಮತ್ತು c ಕೀಲಿಗಳನ್ನು ಬಳಸಿ ನಕಲಿಸಿದರೆ ಹಿಂದೆ ನಕಲಿಸಿದ್ದು ಅದಕ್ಕೆ ಮರೆತು ಹೋಗುತ್ತದೆ. ಕಾರ್ಯಾಚರಣ ವ್ಯವಸ್ಥೆ ಯ ಕೆಲಸ ಮಾಡುವ ಕೆಲವು ತಂತ್ರಾಂಶಗಳು ಇದಕ್ಕಿಂತ ಭಿನ್ನವಾಗಿ ಕೆಲಸ ಮಾಡುತ್ತವೆಯೇ ಹೊರತು ಕಾರ್ಯಾಚರಣ ವ್ಯವಸ್ಥೆಯೊಳಗೆ ಬಹು ಆಯ್ಕೆಗಳನ್ನು ಪ್ರತ್ಯೇಕವಾಗಿ ನಕಲಿಸಿ ನೆನಪಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ.

ಇದು ಹೀಗಿರುವುದಕ್ಕೆ ಯಾವುದೇ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿಲ್ಲ. ಮೊದಲಿನಿಂದಲೂ ಅದು ಹೀಗೆ ಬಂದಿದೆ ಎನ್ನುವ ಕಾರಣಕ್ಕೆ ಅದು ಮುಂದುವರಿಯುತ್ತಿದೆ ಅಷ್ಟೇ. ಎಲ್ಲಾ ಕಾರ್ಯಾಚರಣ ವ್ಯವಸ್ಥೆಗಳ ಜೊತೆಗೆ ಒಂದು ಪದ ಸಂಸ್ಕರಣೆಯ ಕೆಲಸಕ್ಕಾಗಿ ಒಂದು ಪರಿಕರವಿದ್ದೇ ಇರುತ್ತದೆ. ವಿಂಡೋಸ್‌ನಲ್ಲಿ ಇದನ್ನು ವರ್ಡ್ ಪ್ಯಾಡ್ ಎಂದು ಕರೆಯ ಲಾಗುತ್ತದೆ

ಹಾಗೆಯೇ ನೋಟ್ ಪ್ಯಾಡ್ ಎಂಬ ಮತ್ತೊಂದು ಪರಿಕರವೂ ಇದೆ. ಇವುಗಳಲ್ಲಿ ಸೈಡ್ ಬೈ ಸೈಡ್ ಅನೋಟೇಷನ್ ಅಥವಾ ಬದಿ ಟಿಪ್ಪಣಿಗಳನ್ನು ಹಾಕಲು ಸಾಧ್ಯವಿಲ್ಲ. ಸಾಮಾನ್ಯ ವಾಗಿ ಕೈ ಬರಹದ ಪುಟಗಳಲ್ಲಿ ಅಥವಾ ಮುದ್ರಿತ ಪುಟಗಳಲ್ಲಿ ಎರಡೂ ಬದಿಯಲ್ಲಿರುವ ಸ್ಥಳದಲ್ಲಿ ತಿದ್ದುಪಡಿ, ಟಿಪ್ಪಣಿ ಇತ್ಯಾದಿಗಳನ್ನು ಹಾಕಲು ಸಾಧ್ಯವಾಗುವಂತೆ ವರ್ಡ್ ಪ್ಯಾಡ್‌ನಲ್ಲಿ ಹಾಕು ವಂತೆ ವ್ಯವಸ್ಥೆ ಮಾಡುವುದಕ್ಕೆ ಯಾವ ಅಡ್ಡಿ ಯೂ ಇರಲಿಲ್ಲ. ಆದರೆ ಇಂಥ ಕೆಲಸ ಮಾಡು ವುದಕ್ಕೆ ಈಗ ಆಫೀಸ್ ತರಹದ ತಂತ್ರಾಂಶಗಳನ್ನು ಬಳಸಬೇಕಾಗುತ್ತದೆ. ವರ್ಡ್ ಪ್ಯಾಡ್‌ನಲ್ಲಿ ಇದೇಕೆ ಸಾಧ್ಯವಿಲ್ಲ ಎಂಬುದಕ್ಕೆ ಈಗ ವ್ಯಾಪಾರೀ ಕಾರಣಗಳನ್ನು ಕೊಡಬಹುದೇನೋ. ಆದರೆ ವಾಸ್ತವದಲ್ಲಿ ವ್ಯಾಪಾರಕ್ಕಿಂತ ಭಿನ್ನವಾದ ಕಾರಣಗಳು ಕೆಲಸ ಮಾಡಿವೆ.

ಕಂಪ್ಯೂಟರ್ ರೂಪಿಸುವ ಕ್ರಿಯೆಯಲ್ಲೇ ಅದನ್ನು ಕಾಗದದ ಪ್ರತಿರೂಪವನ್ನಾಗಿಸುವ ಕೆಲಸ ನಡೆಯಿತು. ಇದಕ್ಕೆ ವಿರುದ್ಧವಾಗಿ ಟೆಡ್ ನೆಲ್ಸನ್  ತರಹದ ಕಂಪ್ಯೂಟರ್ ಕ್ಷೇತ್ರದ ಭಿನ್ನಮತೀಯರು ಝನಾಡು (Xnadu) ಡಾಕ್ಯುಮೆಂಟ್ ರೂಪಿಸಿ ದರಾದರೂ ಅದಕ್ಕೆ ಜನಪ್ರಿಯತೆ ದೊರೆಯಲೇ ಇಲ್ಲ. ಈಗಿರುವ ಪದ ಸಂಸ್ಕಾರದ ಸ್ವರೂಪದ ಹಿಂದೆ ಝೆರಾಕ್ಸ್ ಕಂಪೆನಿಯ ನೇತೃತ್ವದಲ್ಲಿದ್ದ ಝೆರಾಕ್ಸ್-ನ ಪಾಲೋ ಆಲ್ಟೋ ರಿಸರ್ಚ್ ಸೆಂಟರ್‌ನ ಕಾಣಿಕೆ ಬಹಳಷ್ಟಿದೆ. ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯುತ್ತಿದ್ದವವರು ತಮ್ಮ ಬರವಣಿಗೆಯನ್ನು ಅಕ್ಷರಾರ್ಥದಲ್ಲಿ ಕತ್ತರಿಸಿ ಜೋಡಿಸುವ ಕೆಲಸ ಮಾಡುತ್ತಿದ್ದರು.

ಅಂದರೆ ಪುಟಗಳನ್ನು ಮೇಜಿನ ಮೇಲೆ ಹರಡಿಕೊಂಡು ಬೇಕಾದ ಭಾಗಗಳನ್ನು ಬೇಕಾದ ಕಡೆಯಿಂದ ಕತ್ತರಿಸಿ ಜೋಡಿಸುವ ಕೆಲಸ. ಆದರೆ ಇಂಥ ದ್ದೊಂದು ಕೆಲಸವನ್ನು ಕಂಪ್ಯೂಟರಿನಲ್ಲಿ ಮಾಡಬೇಕೆಂದರೆ ಅದಕ್ಕೆಂದೇ ರೂಪಿಸಲಾದ ವಿಶೇಷ ತಂತ್ರಾಂಶಗಳನ್ನು ಖರೀದಿಸಬೇಕಷ್ಟೆ. ಮೂಲ ಭೂತ ತಂತ್ರಾಂಶಗಳಲ್ಲಿ ಈ ಸವಲತ್ತು ಲಭ್ಯವಿಲ್ಲ.

ಪಾಲೋ ಆಲ್ಟೋ ರಿಸರ್ಚ್ ಸೆಂಟರ್‌ನ ತಜ್ಞರಿಗೆ ಝೆರಾಕ್ಸ್ ಕಂಪೆನಿ ತಯಾರಿಸುತ್ತಿದ್ದ ಪ್ರಿಂಟರ್‌ಗಳನ್ನು ಮಾರಬೇಕಾಗಿತ್ತು. ಹಾಗಾಗಿ ಈಗ what you see what you get ಅಥವಾ (WYSWYG) ಪರಿಕಲ್ಪನೆಯೇ ನೀವು ಕಂಪ್ಯೂ ಟರಿನಲ್ಲಿ ಕಾಣುವುದು ಮುದ್ರಿಸಿದ ನಂತರವೂ ಕಾಣಿಸುತ್ತದೆ ಎಂಬ ಅರ್ಥದಲ್ಲಿ. ಪುಟ ವೊಂದನ್ನು ಮುದ್ರಿಸುವುದಷ್ಟೇ ಮುಖ್ಯವಾಗಿ ನಮ್ಮ ಪದ ಸಂಸ್ಕಾರಕಗಳು ಈಗಿರುವ ಮಟ್ಟಕ್ಕೆ ಉಳಿದವು. ಇದು ಕೇವಲ ಪದ ಸಂಸ್ಕಾರಕದ ಮಾತಷ್ಟೇ ಅಲ್ಲ. ಕೇವಲ Ctrl+Alt+ Deleteನಂಥ ಏಕ ಮೂಲಿಕೆಯಿಂದ ಆರಂಭಿಸಿ ನಾವಿಂದು ನೋಡುವ ಗ್ರಾಫಿಕ್ ಯೂಸರ್ ಇಂಟರ್ ಫೇಸ್‌ನ ತನಕ ವಿಷಯಗಳು ಈಗಿರುವಷ್ಟು ಸರಳ ರೇಖಾತ್ಮಕವಾಗಿ ಇರಬೇಕಾಗಿಲ್ಲ. ಈ ಸರಳ ರೇಖಾತ್ಮಕತೆಯೇ ಕಂಪ್ಯೂಟರನ್ನು ಕೇವಲ ಒಂದು ಭಾಷೆಯಲ್ಲಷ್ಟೇ ಮೂಲಭೂತವಾಗಿ ಗ್ರಹಿಸುವಂತೆ ಮಾಡಿಬಿಟ್ಟಿದೆ.

ಶಿಷ್ಟತೆಗಳೂ ಕೂಡಾ ಕಂಪ್ಯೂಟರ್ ತಂತ್ರಜ್ಞಾನವನ್ನು ಸರಳ ರೇಖಾತ್ಮಕಗೊಳಿಸುವ ಒಂದು ಮಾರ್ಗವೇ. ಇದರಿಂದ ಕೆಲವು ಬೃಹತ್ ಸಂಸ್ಥೆಗಳಿಗೆ ತಮ್ಮ ತಂತ್ರಾಂಶ ಮತ್ತು ಯಂತ್ರಾಂಶಗಳನ್ನು ತಯಾರಿಸಿ ಮಾರುವ ಕ್ರಿಯೆ ಸುಲಭವಾಗುತ್ತದೆಯೇ ಹೊರತು ಕಂಪ್ಯೂಟರ್ ಬಳಸುವ ಜನರಿಗೆ ಅನುಕೂಲ ಕಲ್ಪಿಸುವುದಿಲ್ಲ. ಯೂನಿಕೋಡ್ ಇಂಗ್ಲಿಷೇತರ ಭಾಷೆಗಳ ಕಂಪ್ಯೂಟಿಂಗ್‌ನ ಮಟ್ಟಿಗೆ ಒಂದು ಪರಿಹಾರ ಎಂಬುದು ಸದ್ಯಕ್ಕೆ ನಾವೆಲ್ಲರೂ ಒಪ್ಪಿಕೊಂಡಿರುವ ನಿಜ. ಇದೂ ಒಂದು ಬಗೆಯಲ್ಲಿ ಕಂಪ್ಯೂಟರನ್ನು ಕಾಗದದ ನಕಲಾಗಿಸಿದ್ದರ ಪರಿಣಾಮ. ಇದು ಹೀಗೇ ಇರಬೇಕಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದ ಪರ್ಯಾಯವನ್ನು ಭಾರತೀಯ ಭಾಷೆಗಳ ಕಂಪ್ಯೂಟಿಂಗ್‌ನ ಪಿತಾಮಹರೆಂದು ಗುರುತಿಸಬಹುದಾದ ಕೆ.ಪಿ.ರಾವ್ ಅವರು ನೀಡುತ್ತಾರೆ.

‘ಪ್ರಪಂಚದ ಎಲ್ಲಾ ಭಾಷೆಗಳ ಮೂಲ ಘಟಕವೂ ಧ್ವನಿಗಳು. ಎಲ್ಲಾ ಧ್ವನಿಗಳಿಗೂ ಒಂದೊಂದು ಸಂಕೇತವನ್ನು ರೂಪಿಸಿದ್ದರೆ ಒಂದು ಸಂಕೇತ ವ್ಯವಸ್ಥೆ ಎಲ್ಲಾ ಭಾಷೆಗಳನ್ನೂ ಒಳಗೊಳ್ಳುತ್ತಿತ್ತು. ಆಯಾ ಭಾಷೆಗಳ ಲಿಪಿಯ ಮಿತಿಯಲ್ಲಿ  ಕಂಪ್ಯೂಟರ್ ಅವುಗಳನ್ನು ತೋರಿಸುವಂತೆ ಮಾಡಬಹುದಿತ್ತು. ಅದರ ಬದಲಿಗೆ ನಾವು ಲಿಪಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಶಿಷ್ಟತೆಗಳನ್ನು ರೂಪಿಸಿದೆವು. ಇದು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿತು’. ಯೂನಿಕೋಡ್ ಭಾಷಾ ಕಂಪ್ಯೂಟಿಂಗ್‌ಗೆ ಏಕೈಕ ಪರಿಹಾರ ಎಂದು ಒಪ್ಪಿಕೊಂಡದ್ದರಿಂದ ಈಗ ಮತ್ತಷ್ಟು ಶಿಷ್ಟತೆಗಳು ಬೇಕಾಗಿವೆ.

ಅಂದರೆ ಲಿಪ್ಯಂತರಣದ ಶಿಷ್ಟತೆ, ಈ ಲಿಪ್ಯಂತರಣ ಭಾಷೆಯಿಂದ ಭಾಷೆಗೆ ಬದಲಾಗುವುದರಿಂದ ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ಲಿಪ್ಯಂತರಣ ನಿಯಮಗಳು ಹೀಗೆ. ಒಂದು ವೇಳೆ ಕೆ.ಪಿ.ರಾವ್ ಅವರು ಮಂಡಿಸುತ್ತಿರುವ ಧ್ವನಿ ಪ್ರಧಾನ ಶಿಷ್ಟತೆಯ ಮಾದರಿಯನ್ನು ಅಳವಡಿಸಿ ಕೊಂಡಿದ್ದರೆ ಈ ಬಹುಶಿಷ್ಟತೆಗಳ ಪ್ರಶ್ನೆಯೇ ಇರುತ್ತಿರಲಿಲ್ಲ. ಆದರೆ ತಂತ್ರಜ್ಞಾನ ಎಂಬುದರ ಒಳಗೆ ಯಾವತ್ತೂ ಪರ್ಯಾಯ ಚಿಂತನೆ ಗಳಿಗಿಂತ ಹೆಚ್ಚಾಗಿ ಯಾಜಮಾನ್ಯವೇ ಪ್ರಾಬಲ್ಯ ಸಾಧಿಸಿಬಿಡುತ್ತದೆ.

ಇಂದು ನಾವು ಬಳಸುವ ಕಂಪ್ಯೂಟರ್ ಕೂಡಾ ಕೆಲವೇ ‘ಬುದ್ಧಿವಂತರು’ ತಮ್ಮ ಮಾರಾಟ ತಂತ್ರಕ್ಕೆ ಅನುಗುಣವಾಗಿ ರಚಿಸಿದ ಮಾದರಿ ಮಾತ್ರ. ಇದನ್ನು ಬಳಸುತ್ತಿರುವಾಗಲೇ ಪರ್ಯಾಯಗಳ ಬಗ್ಗೆ ಯೋಚಿಸುವುದು ತಂತ್ರಜ್ಞಾನದ ಸಹಜ ವಿಕಾಸಕ್ಕೆ ಅಗತ್ಯ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT