ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

Last Updated 19 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ರಾಜ್ಯದ ಹದಿನೈದನೇ ವಿಧಾನಸಭೆಗಾಗಿ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಮತಬೇಟೆಯಲ್ಲಿ ತೊಡಗಿಯಾಗಿವೆ. ಆದರೆ, ಬದುಕಿನ ಮೂಲ ನೆಲೆಯಾದ ಅರಣ್ಯ ಮತು ಪರಿಸರ ಸಂರಕ್ಷಣೆ ಸಂಗತಿಗಳು ಪಕ್ಷಗಳ ಘೋಷಣೆಗಳಲ್ಲಿ ಸ್ಥಾನ ಪಡೆಯುತ್ತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೆಲ-ಜಲ-ಕಾಡಿನ ಸಂರಕ್ಷಣೆಗಾಗಿ ಸೂಕ್ತ ನೀತಿಗಳನ್ನು ಮಂಡಿಸುವಂತೆ ಪಕ್ಷಗಳನ್ನು ಒತ್ತಾಯಿಸಬೇಕಾದ ಸಮಯವಿದು. ಈ ನಿಟ್ಟಿನಲ್ಲಿ ಸಾರ್ವಜನಿಕ ಚರ್ಚೆಯ ಅಗತ್ಯವನ್ನು ನೆನಪಿಸುತ್ತ, ಅರಣ್ಯ ಹಾಗೂ ಕೆರೆಗಳ ಕುರಿತ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಮೊದಲನೆಯದು, ಕಾಡು ಹಾಗೂ ಸಾಮೂಹಿಕ ಭೂಮಿ ಒತ್ತುವರಿ ಕುರಿತು. ರಾಜ್ಯದೆಲ್ಲೆಡೆ ಕಾದಿಟ್ಟ ಅರಣ್ಯವು ಅತಿಕ್ರಮಣಕ್ಕೆ ಬಲಿಯಾಗುತ್ತಿದೆ. ಗೋಮಾಳ, ಕುಮ್ಕಿ, ಹಾಡಿಯಂಥ ಸಮುದಾಯ ಭೂಮಿಯೂ ಖಾಸಗಿ ಸೊತ್ತಾಗುತ್ತಿವೆ. ವೈರುಧ್ಯ ನೋಡಿ, ಅರಣ್ಯಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡ ಮತ್ತು ವನವಾಸಿಗಳ ಎಲ್ಲ ಅರ್ಹ ಕುಟುಂಬಗಳಿಗೆ ಕೃಷಿಭೂಮಿ ಇನ್ನೂ ಸಿಕ್ಕಿಲ್ಲ. ಆದರೆ, ಆ ಹೆಸರಿನಲ್ಲಿ ಮಲೆನಾಡು ಹಾಗೂ ಕರಾವಳಿಯ ಕಾದಿಟ್ಟ ಅರಣ್ಯ ಹಾಗೂ ಡೀಮ್ಡ್ ಅರಣ್ಯಗಳು ಒತ್ತುವರಿ
ಯಾಗುತ್ತಿವೆ. ಹಲವೆಡೆ ಕಾಯ್ದೆ ಮೀರಿ ಪಟ್ಟಾ ಕೂಡಾ ನೀಡಲಾಗುತ್ತಿದೆ! ಕರ್ನಾಟಕ ಭೂಕಂದಾಯ ಕಾನೂನಿನ ಕೆಲವು ಸವಲತ್ತುಗಳನ್ನು ದುರ್ಬಳಕೆ ಮಾಡಿಯೋ ಅಥವಾ ನ್ಯಾಯಾಲಯಗಳ ಕಣ್ಣಿಗೆ ಮಣ್ಣೆರಚಿಯೋ, ಅಧಿಕೃತವಾಗಿಯೂ ಭೂಕಬಳಿಕೆಯಾಗುತ್ತಿದೆ. ಇದರಿಂದಾಗಿಯೇ, ರಾಜ್ಯದ ದಟ್ಟ ಅರಣ್ಯದ ಕ್ಷೇತ್ರ ಶೇಕಡ 2.35ಕ್ಕಿಂತಲೂ ಕಡಿಮೆಯಾಗಿರುವುದು. ಅರಣ್ಯಹಕ್ಕು ಕಾಯ್ದೆಯ (2006) ಅನ್ವಯ ಈವರೆಗೆ 38,499 ಎಕರೆ ಅರಣ್ಯದಲ್ಲಿ ಪಟ್ಟಾ ನೀಡಲಾಗಿದ್ದು, ಅದರಲ್ಲಿ ವ್ಯಾಪಕ ಅಕ್ರಮವಾಗಿರುವ ಆರೋಪವಿದೆ. ಇತ್ತೀಚೆಗೆ ಅಕ್ರಮವಾಗಿ ಒತ್ತುವರಿಯಾದ ಲಕ್ಷಾಂತರ ಹೆಕ್ಟೇರ್ ಅರಣ್ಯದ ರಕ್ಷಣೆಗೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದ
ನ್ನೆಲ್ಲ ಮನಗಂಡೇ, ಸುಪ್ರೀಂ ಕೋರ್ಟ್‌ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ!

ಇನ್ನೊಂದು, ಅಳಿದುಳಿದ ಅರಣ್ಯ ಭೂಮಿಯನ್ನೂ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯೇತರ ಕಾಮಗಾರಿಗಳಿಗೆ ಹಸ್ತಾಂತರಿಸುತ್ತಿರುವ ಆಘಾತಕಾರಿ ಬೆಳವಣಿಗೆ. ಈಚೆಗಷ್ಟೇ, ಶರಾವತಿ ನದಿಕಣಿವೆಯ ಅಭಯಾರಣ್ಯದಂಚಿನ ಕಾಡಿನಲ್ಲಿ ಹೊಸದೊಂದು ಜಲವಿದ್ಯುತ್ ಯೋಜನೆಯ ಪ್ರಸ್ತಾಪವಾಗಿದೆ. ವಿನಾಶದಂಚಿನ ಸಸ್ತನಿ ಸಿಂಗಳಿಕದ ಆವಾಸಸ್ಥಾನವಾದ ಜೋಗ ಜಲಪಾತ ಕಣಿವೆಯ ಸಮೃದ್ಧ ಕಾಡನ್ನು ಕಡಿದು ನಿರ್ಮಿಸ ಹೊರಟಿರುವ ಬೃಹತ್ ಯೋಜನೆಯಿದು. ಸರ್ಕಾರಿ ಸ್ವಾಮ್ಯದ ಮೈಸೂರು ಪೇಪರ್ ಮಿಲ್ಸ್, ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಹಾಗೂ ಗೋಮಾಳ ಭೂಮಿಯನ್ನು ನೀಲಗಿರಿ ನೆಡುತೋಪಿಗಾಗಿ ಬಳಸುತ್ತಿತ್ತು. ಇದೀಗ ಗುತ್ತಿಗೆ ಅವಧಿ ಮುಗಿದಿದೆ. ತುಂಗಾ, ಭದ್ರಾ ಹಾಗೂ ಶರಾವತಿ ನದಿಕೊಳ್ಳಗಳಲ್ಲಿನ ಈ ಅರಣ್ಯಪ್ರದೇಶವನ್ನು ಅರಣ್ಯ ಇಲಾಖೆ ಪಡೆಯಬೇಕಿದೆ. ಆದರೆ ಅದನ್ನೂ ವಾಣಿಜ್ಯಕ ಉದ್ದೇಶಗಳಿಗೆ ಬಳಸಲು ಸರ್ಕಾರವೀಗ ಚಿಂತಿಸುತ್ತಿದೆ! ಸ್ಥಳೀಯ ಜನರ ವಿರೋಧದ ನಡುವೆಯೂ, ಅರಣ್ಯ ನಾಶಮಾಡಬಲ್ಲ ರೈಲು ಯೋಜನೆಗಳು ಕೊಡಗಿನಲ್ಲಿ ಪ್ರಸ್ತಾಪವಾಗಿವೆ. ಉತ್ತರ ಕನ್ನಡದ ದಟ್ಟಕಾಡಿನಲ್ಲಿ ಕಿರು ಜಲವಿದ್ಯುತ್ ಯೋಜನೆಗಳು ಜಾರಿಯಾಗಹೊರಟಿವೆ. ಪಶ್ಚಿಮಘಟ್ಟದ ಸಂರಕ್ಷಿತ ಅರಣ್ಯಗಳು ಹಾಗೂ ಕರಾವಳಿಯ ಹಿನ್ನೀರು ಪ್ರದೇಶಗಳಲ್ಲಿ ಅವೈಜ್ಞಾನಿಕ ಪ್ರವಾಸೋದ್ಯಮಗಳು ತಲೆ ಎತ್ತುತ್ತಿವೆ.

ಅರಣ್ಯಭೂಮಿ ಅತಿಕ್ರಮಣ ಹಾಗೂ ಭೂಪರಿವರ್ತನೆಯ ಪರಿಣಾಮವನ್ನು ನಾವು ಈಗಲೇ ಅನುಭವಿಸುತ್ತಿದ್ದೇವೆ. ಸತತ ಬರದಿಂದಾಗಿ ಒಣಗುತ್ತಿರುವ ತೋಟಗದ್ದೆ
ಗಳು, ಕಾಡಿನ ಬೆಂಕಿ, ನಾಡಿಗೆ ನುಗ್ಗುವ ಆನೆ- ಚಿರತೆಗಳು... ಇವನ್ನೆಲ್ಲ ಅನುಭವಿಸಿ ರೈತರು ಕಂಗೆಟ್ಟಿದ್ದಾರೆ! ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಪೂರೈಸುವುದೇ ಸವಾಲಾಗಿದೆ. ಆದ್ದರಿಂದ, ಮುಂಬರುವ ಸರ್ಕಾರವಾದರೂ ಅರಣ್ಯ ಹಾಗೂ ಜಲಮೂಲಗಳ ನಿರ್ವಹಣೆಗೆ ಆದ್ಯತೆ ನೀಡಲೇಬೇಕಿದೆ. ಪಕ್ಷಗಳು ಪ್ರಣಾಳಿಕೆಯಲ್ಲಿ ಸೇರಿಸಲೇಬೇಕಾದ ಎರಡು ಪ್ರಮುಖ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಒಂದನೆಯದು, ನೈಸರ್ಗಿಕ ಸಂಪನ್ಮೂಲಗಳ ಮಿತಿ ಮತ್ತು ಪರಿಸರದ ಧಾರಣಾ ಸಾಮರ್ಥ್ಯದ ಪರಿಮಿತಿಯಲ್ಲಿಯೇ ಸುಸ್ಥಿರ ಅಭಿವೃದ್ಧಿಯ ಆಯಾಮಗಳನ್ನು ರೂಪಿಸಲು, ಭೂಬಳಕೆ ನೀತಿಯೊಂದು ಅವಶ್ಯವಿದೆ. ಪ್ರತಿ ಗ್ರಾಮದಲ್ಲಿಯೂ ರಸ್ತೆ, ವಸತಿ, ಉದ್ಯಮ ಇತ್ಯಾದಿಗಳಿಗೆ ಸೂಕ್ತ ಪ್ರದೇಶವನ್ನು ಪಾರದರ್ಶಕ ರೀತಿಯಲ್ಲಿ ಒದಗಿಸಲು ವೈಜ್ಞಾನಿಕ ಮಾರ್ಗದರ್ಶಿ ಸೂತ್ರಗಳು ಅದರಲ್ಲಿರಬೇಕು. ಅರಣ್ಯ ಹಾಗೂ ಪರಿಸರ ಕಾನೂನುಗಳ ಅಶಯವನ್ನು ಪುರಸ್ಕರಿಸುತ್ತಲೇ, ಜನರ ಅಗತ್ಯ ಸೌಕರ್ಯ ಪೂರೈಸಲು ಇಂಥ ‘ಸಮಗ್ರ ಭೂಬಳಕೆ ನೀತಿ’ ಯಿಂದ ಮಾತ್ರ ಸಾಧ್ಯ.

ಎರಡನೆಯದು, ಕೆರೆಗಳ ಕುರಿತಾಗಿ. ಸಣ್ಣ ನೀರಾವರಿ ಇಲಾಖೆ ಹಾಗೂ ಕೆರೆ ಪ್ರಾಧಿಕಾರಗಳು ಅಪಾರ ಅನುದಾನದೊಂದಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದ್ದರೂ, ನಾಡಿನ ಕೆರೆಗಳು ದುಃಸ್ಥಿತಿಯಲ್ಲಿವೆ. ಮಳೆನೀರು ಇಂಗಿಸಿ ಕೆರೆಗಳಿಗೆ ಜಲ ಮರುಪೂರಣ ಮಾಡಬೇಕಿದೆ. ಆದರೆ, ರಾಜ್ಯ ಸರ್ಕಾರ ಈಗ ಅನುಷ್ಠಾನ ಮಾಡುತ್ತಿರುವ ಕೆರೆ ತುಂಬಿಸುವ ಯೋಜನೆಗಳಲ್ಲಿ ಈ ಅಂಶಗಳೇ ಇಲ್ಲ. ಬದಲಾಗಿ, ಕಾಂಕ್ರೀಟ್ ಕಾಮಗಾರಿಯೇ ಪ್ರಮುಖವಾಗಿರುವ ಏತನೀರಾವರಿಯಂಥ ಯೋಜನೆಗಳಾಗಿಬಿಟ್ಟಿವೆ ಅವು. ನೂರಾರು ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಈ ರಚನೆಗಳೆಲ್ಲ ಕೆಲವೇ ವರ್ಷಗಳಲ್ಲಿ ಕೆಟ್ಟು ಹೋಗುವಂಥವು! ಇದರ ಬದಲು, ಸಾರ್ವಜನಿಕ ಕೆರೆಗಳೆಲ್ಲವನ್ನೂ ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ಪರಿಸರಸ್ನೇಹಿಯಾಗಿ ಪುನರುಜ್ಜೀವ
ಗೊಳಿಸಿ ನಿರ್ವಹಿಸುವ, ಹೊಸ ಆಡಳಿತ ವಿಧಾನ ರೂಪಿಸಬೇಕಿದೆ.

ಎಂಥ ವಿರೋಧಾಭಾಸ ನೋಡಿ! ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಕುರಿತಾಗಿ ಸರ್ಕಾರದಲ್ಲಿ ಕಾನೂನು, ಅನುದಾನ ಮತ್ತು ಯೋಜನೆಗಳಿಗೆ ಬರವಿಲ್ಲ. ಈ ಕುರಿತ ಸಂಶೋಧನೆ, ಸಮ್ಮೇಳನ, ದಿನಾಚರಣೆ, ಜಾಹೀರಾತಿಗೂ ಕೊರತೆಯಿಲ್ಲ! ಆದರಿಂದು, ಅರಣ್ಯ ಇಲಾಖೆಯ ಇರುವಿಕೆಯ ಔಚಿತ್ಯವನ್ನೇ ಪ್ರಶ್ನಿಸ
ಬೇಕಾದಷ್ಟು ಪರಿಸರ ನಾಶವಾಗುತ್ತಿದೆ. ಜನರ ಒತ್ತಾಸೆ, ಕಾನೂನಿನ ಆಶಯ, ವಿಜ್ಞಾನದ ಎಚ್ಚರಿಕೆ- ಯಾವುದನ್ನೂ ಲೆಕ್ಕಿಸದೆ ಸಾಗುತ್ತಿರುವ ಈ ಪರಿಸರ ನಾಶದ ವಿರುದ್ಧ ನಾಗರಿಕರು ಧ್ವನಿಯೆತ್ತಲೇಬೇಕಿದೆ. ಕಾಲಬದ್ಧ ಸಂರಕ್ಷಣಾ ಕಾರ್ಯಕ್ರಮಗಳುಳ್ಳ ನೀತಿಯನ್ನು ಪ್ರಕಟಿಸಲು ರಾಜಕೀಯ ಪಕ್ಷಗಳನ್ನು ಒತ್ತಾಯಿಸಬೇಕಿದೆ. ಈ ಚುನಾವಣಾ ಗಳಿಗೆಯಲ್ಲಾದರೂ ಮತದಾರರು ಈ ನಿಟ್ಟಿನಲ್ಲಿ ಕ್ರಿಯಾಶೀಲತೆ ತೋರಿದ್ದಾದರೆ, ರಾಜಕೀಯ ಸಂಘಟನೆಗಳು ಕನಿಷ್ಠ ಜವಾಬ್ದಾರಿ ಪ್ರದರ್ಶಿಸಿಯಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT