ಅಸೂಯೆಯಿಂದ ಬಯಲಾದ ಸತ್ಯ

7

ಅಸೂಯೆಯಿಂದ ಬಯಲಾದ ಸತ್ಯ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಅವನ ಮಂತ್ರಿಯಾಗಿದ್ದ. ರಾಜ ಒಮ್ಮೆ ಪರಿವಾರದೊಂದಿಗೆ ಕಾಡಿಗೆ ಬೇಟೆಯಾಡಲು ಹೋಗಿದ್ದ. ಅಲ್ಲಿ ಪುಷ್ಕರಣಿಯಲ್ಲಿ ಜಲಕ್ರೀಡೆಯಾಡಲು ನೀರಿಗಿಳಿದು ಅಂತಃ‌ಪುರದ ಸ್ತ್ರೀಯರನ್ನೆಲ್ಲ ಕರೆದ. ಆ ಹೆಣ್ಣುಮಕ್ಕಳು ತಾವು ಧರಿಸಿದ್ದ ಬಟ್ಟೆಗಳು, ಆಭರಣಗಳನ್ನೆಲ್ಲ ಕಳಚಿ ಪುಷ್ಕರಣಿಯ ಮೆಟ್ಟಿಲುಗಳ ಮೇಲಿಟ್ಟು, ದಾಸಿಯೊಬ್ಬಳನ್ನು ಕಾಯಲು ಹೇಳಿ ನೀರಿಗಿಳಿದರು. ಮರದ ಮೇಲಿದ್ದ ಹೆಣ್ಣು ಕೋತಿಯೊಂದು ಮಹಿಳೆಯರು ಆಭರಣಗಳನ್ನು ತೆಗೆಯುವುದನ್ನು ನೋಡಿತು. ಅದರಲ್ಲಿದ್ದ ಕಂಠೀಹಾರ ಅದರ ಮನಸೆಳೆಯಿತು. ದಾಸಿ ಮತ್ತೆಲ್ಲೋ ನೋಡುತ್ತಿರುವಾಗ ಮನೋವೇಗದಿಂದ ಬಂದು ಹಾರವನ್ನು ಕೊರಳಿಗೆ ಹಾಕಿಕೊಂಡು ಅದೇ ಮನೋವೇಗದಿಂದ ಮರವನ್ನೇರಿ, ಹಾರವನ್ನು ಪೊಟರೆಯೊಳಗಿಟ್ಟು ಅದನ್ನೇ ಕಾಯುತ್ತ ಕುಳಿತಿತು.

ಕ್ಷಣಕಾಲದ ನಂತರ ದಾಸಿ ಎಚ್ಚೆತ್ತುಕೊಂಡು, ಹಾರ ಇಲ್ಲದ್ದನ್ನು ಕಂಡು, ಇನ್ನು ತನ್ನ ಮೇಲೆಯೇ ಅಪವಾದ ಬರುತ್ತದೆಂದು ತಿಳಿದು, ‘ಕಳ್ಳ ಕಳ್ಳ, ಹಿಡಿಯಿರಿ. ಆತ ಹಾರ ಕದ್ದು ಓಡುತ್ತಿದ್ದಾನೆ’ ಎಂದು ಬೊಬ್ಬೆ ಹಾಕಿದಳು. ಸೈನಿಕರು ಕಾಣದ ವ್ಯಕ್ತಿಯನ್ನು ಬೆನ್ನಟ್ಟಿದರು. ಪುಷ್ಕರಣಿಯ ಹೊರಗೆ ಕೆಲಸ ಮಾಡುತ್ತಿದ್ದ ರೈತ ಈ ಕೋಲಾಹಲಕ್ಕೆ ಹೆದರಿ ಓಡತೊಡಗಿದ. ಅವನೇ ಕಳ್ಳನೆಂದು ಭಾವಿಸಿ ಸೈನಿಕರು ಅವನನ್ನು ಹಿಡಿದರು. ಆತ ಜೀವಭಯದಿಂದ ತಾನೇ ಹಾರವನ್ನು ಕದ್ದದ್ದು ನಿಜ. ಆದರೆ ಅದನ್ನು ಮಾಡಿಸಿದ್ದು ಊರಿನ ಶ್ರೇಷ್ಠಿ ಎಂದುಬಿಟ್ಟ. ಶ್ರೇಷ್ಠಿಯನ್ನು ಕರೆಸಿದರು. ಆತನೂ ಭಯದಿಂದ ಹಾರವನ್ನು ಪುರೋಹಿತನಿಗೆ ಕೊಟ್ಟಿದ್ದೇನೆ ಎಂದ. ಪುರೋಹಿತ ದಾರಿಕಾಣದೇ ಆ ಹಾರವನ್ನು ತಾನು ಆಗಾಗ ಹೋಗುವ ವೇಶ್ಯೆಗೆ ಕೊಟ್ಟಿದ್ದೇನೆ ಎಂದ. ಆಕೆ ಮಾತ್ರ ನಾನು ಹಾರವನ್ನು ಕಂಡಿಲ್ಲ ಎಂದಳು. ನಾಲ್ಕೂ ಜನರನ್ನು ಬಂಧಿಸಿ ಜೈಲಿನಲ್ಲಿಟ್ಟರು.

ಅವರನ್ನು ಗಮನಿಸುತ್ತಿದ್ದ ಬೋಧಿಸತ್ವನಿಗೆ ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನಿಸಿತು. ಅವರು ಜೈಲಿನಲ್ಲಿ ಮಾತನಾಡುವುದನ್ನು ಗಮನಿಸಲು ಗೂಢಚಾರನನ್ನು ನೇಮಿಸಿದ. ಆತ ಮರುದಿನ ಬಂದು ಅವರಾರೂ ಹಾರವನ್ನು ಕಂಡವರೇ ಅಲ್ಲ. ಅದಲ್ಲದೇ ಅಷ್ಟೊಂದು ಭದ್ರತೆ ಇರುವಾಗ ರೈತ ಪುಷ್ಕರಣಿಯ ಹತ್ತಿರ ಹೋಗುವುದೇ ಅಸಾಧ್ಯ ಎಂದ. ಬೋಧಿಸತ್ವ ಕ್ಷಣಕಾಲ ಚಿಂತಿಸಿ ಇದು ಅಲ್ಲಿ ವಿಪುಲವಾಗಿರುವ ಕೋತಿಗಳ ಕಾರ್ಯವೇ ಇದ್ದಿರಬೇಕು ಎಂದುಕೊಂಡು ಮರದ ಹಾರಗಳನ್ನು ಮಾಡಲು ಕುಶಲಕರ್ಮಿಗಳಿಗೆ ಹೇಳಿದ. ಅವುಗಳಿಗೆ ಕೆಂಪು ಬಣ್ಣ ಕೊಟ್ಟು ಮಿರಮಿರನೆ ಹೊಳೆಯುವಂತೆ ಮಾಡಿಸಿದ. ಸೇವಕರಿಗೆ ಹೇಳಿ ಅಲ್ಲಿ ಸುತ್ತಮತ್ತಲಿದ್ದ ಹೆಣ್ಣು ಕೋತಿಗಳಿಗೆ ಅವುಗಳನ್ನು ನೀಡುವಂತೆ ಮಾಡಿದ. ಹೊಸ ಆಭರಣಗಳನ್ನು ಹಾಕಿಕೊಂಡು ಸಂತೋಷದಿಂದ ಕುಣಿಯುತ್ತ ಈ ಹೆಣ್ಣುಕೋತಿಗಳು ಹಾರಾಡತೊಡಗಿದವು.

ಪೊಟರೆಯ ಬಳಿ ಚಿನ್ನದ ಸರವನ್ನು ಕಾಯುತ್ತ ಕುಳಿತ ಹೆಣ್ಣುಕೋತಿಗೆ ಹೊಟ್ಟೆ ಉರಿಯಿತು. ಈ ಮರದ ಹಾರವನ್ನೇ ಹಾಕಿಕೊಂಡು ಸಂಭ್ರಮಿಸುವ ಹುಚ್ಚು ಕೋತಿಗಳಿಗೆ ಚಿನ್ನದ ಬೆಲೆ ಏನು ಗೊತ್ತು? ತೋರಿಸಿಯೇ ಬಿಡುತ್ತೇನೆ ಎಂದುಕೊಂಡು ಚಿನ್ನದ ಹಾರವನ್ನು ಹಾಕಿಕೊಂಡು ಎಲ್ಲೆಡೆಯೂ ಸುತ್ತಾಡತೊಡಗಿತು. ಉಳಿದ ಕೋತಿಗಳು ಅದನ್ನೇ ನೋಡುತ್ತ ಸುತ್ತುವರಿದವು. ಅದನ್ನೇ ಗಮನಿಸುತ್ತಿದ್ದ ಸೈನಿಕರು ಈ ಕೋತಿಯನ್ನು ಹಿಡಿದು ಹಾರವನ್ನು ತೆಗೆದುಕೊಂಡು ರಾಜನಿಗೆ ಒಪ್ಪಿಸಿದರು. ನಂತರ ನಾಲ್ಕೂ ಕೈದಿಗಳನ್ನು ಬಿಡುಗಡೆ ಮಾಡಿದರು. ಕೋತಿಯ ಅಸೂಯೆ ಗುಣ ಹಾರವನ್ನು ಕಳೆದುಕೊಳ್ಳುವಂತೆ ಮಾಡಿತ್ತು.

ಬುದ್ಧ ಹೇಳಿದ, ‘ಎಲ್ಲ ಕೆಟ್ಟ ಗುಣಗಳಲ್ಲಿ ಅಸೂಯೆಯನ್ನು ಹತ್ತಿಕ್ಕುವುದು ಬಹಳ ಕಷ್ಟದ ಕೆಲಸ. ಅಸೂಯೆ ಸಲ್ಲದ ಕೆಲಸವನ್ನು ಮಾಡಿಸಿ ಸರಿಯಾದ ಸಮಯದಲ್ಲಿ ಮರ್ಯಾದೆಯನ್ನು ಕಳೆಯುತ್ತದೆ. ಅದನ್ನು ಕಡಿಮೆ ಮಾಡುವ ಕ್ರಿಯೆ ನಮ್ಮನ್ನು ಸಂತೋಷದ ಜೀವನದ ಕಡೆಗೆ ಕರೆದೊಯ್ಯುತ್ತದೆ’

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !