ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಚರಿತ್ರೆ

Last Updated 8 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |

ಸುಮವಪ್ಪುದಂತೆ ಮರುವಗಲು ಮಗುಳ್ದಂತು ||

ಅಮಿತ ಪ್ರಪಂಚನಾಕುಂಚನಾವರ್ತನ |

ಕ್ರಮವೆ ವಿಶ್ವಚರಿತ್ರೆ – ಮಂಕುತಿಮ್ಮ || 91 ||

ಪದ-ಅರ್ಥ:ಕಮಲವುದಯದೊಳರಳಿ=ಕಮಲ+ಉದಯದಲ್ಲಿ+ಅರಳಿ, ಮುಗುಳಾಗಿ= ಮುಗುಳು(ಮೊಗ್ಗು)+ಆಗಿ, ಸುಮ=ಹೂವು, ಪ್ರಪಂಚನಾಕುಂಚನಾವರ್ತನ=ಪ್ರಪಂಚ+ಆಕುಂಚನ+ಆವರ್ತನ

ವಾಚ್ಯಾರ್ಥ: ತಾವರೆ ಉದಯಕಾಲದಲ್ಲಿ ಅರಳಿ ಸಂಜೆಯಲ್ಲಿ ಮತ್ತೆ ಮೊಗ್ಗಾಗುತ್ತದಂತೆ, ಮತ್ತೆ ಮರುದಿನ ಅರಳಿ ಹೂವಾಗುತ್ತದೆ. ಇದರಂತೆಯೇ ಅಸಂಖ್ಯವಾದ ಆಕುಂಚನ, ಆವರ್ತನ ಕ್ರಮಗಳೇ ವಿಶ್ವಚರಿತ್ರೆ.

ವಿವರಣೆ: ಖಗೋಲಶಾಸ್ತ್ರದಲ್ಲಿ ಒಂದು ಸೈದ್ಧಾಂತಿಕವಾದ ಮಾದರಿ ಇದೆ. ಅದನ್ನು ಬಿಗ್ ಬೌನ್ಸ್ (Big Bounce)ಮಾದರಿ ಎನ್ನುತ್ತಾರೆ. ಇದು ಈ ವಿಶ್ವವ್ಯವಸ್ಥೆಯನ್ನು ಕುರಿತಾದ ಸಿದ್ಧಾಂತ. ಇದು ಚಕ್ರಗತಿಯ ಅಥವಾ ಆವರ್ತದ ಸಿದ್ಧಾಂತ. ಇದರ ಪ್ರಕಾರ ಪ್ರಪಂಚ ಮೊದಲು ವಿಸ್ತಾರಗೊಳ್ಳುತ್ತ ಹೋಗುತ್ತದೆ. ಇದನ್ನು ಮಹಾಸ್ಫೋಟ ಅಥವಾ Big Bangಎನ್ನುತ್ತಾರೆ. ಜಗತ್ತು ವಿಸ್ತಾರವಾಗುತ್ತಲೇ ಹೋಗುತ್ತದೆ, ಕ್ಷಣಕ್ಷಣಕ್ಕೂ ಗ್ರಹಗಳು, ನಕ್ಷತ್ರಗಳು, ಆಕಾಶಕಾಯಗಳು ಒಂದರಿಂದ ಮತ್ತೊಂದು ದೂರಕ್ಕೆ ಹೋಗುತ್ತವೆ. ಎಷ್ಟೋ ಕಾಲದವರೆಗೆ ಈ ವಿಸ್ತರಣೆ ನಡೆಯುತ್ತಲೇ ಹೋಗುತ್ತದೆ. ಆದರೆ ಒಂದು ಹಂತ ಬರುತ್ತದೆ. ಆಗ ವಿಸ್ತಾರಗೊಂಡಿದ್ದ ವಿಶ್ವ ಪರಸ್ಪರ ಆಕರ್ಷಣೆಗೆ ಒಳಗಾಗಿ ಮತ್ತೆ ಆಕುಂಚನಗೊಳ್ಳುತ್ತ ಹೋಗುತ್ತದೆ. ಹೀಗೆ ಆಕುಂಚನ, ವಿಸ್ತಾರಗಳ ಆವರ್ತನ ನಡೆದೇ ಇರುತ್ತದೆ.

ಒಂದು ನಕ್ಷತ್ರದ ಸ್ಥಿತಿಯೂ ಹೀಗೆಯೇ. ತನ್ನೊಳಗಿದ್ದ ಅನಿಲವನ್ನು ಉರಿಸುತ್ತ, ಉರಿಸುತ್ತ ಸೂರ್ಯನಂತಹ ನಕ್ಷತ್ರ ಹಲವು ಮಿಲಿಯನ್ ವರ್ಷಗಳ ನಂತರ ದೊಡ್ಡದಾಗುತ್ತ ಬರುತ್ತದೆ. ಅದು ಅತೀ ದೊಡ್ಡದಾಗಿ ದೈತ್ಯ ತಾರೆ (Red giant)ಎಂಬ ಸ್ಥಿತಿಗೆ ಬರುತ್ತದೆ. ನಂತರ ತನ್ನಷ್ಟಕ್ಕೆ ತಾನೇ ಕುಸಿಯುತ್ತ ಆಕುಂಚನವಾಗುತ್ತ ಕಪ್ಪು ರಂಧ್ರವಾಗಿಯೋ, ನ್ಯೂಟ್ರಾನ್ ಸ್ಟಾರ್ ಆಗಿಯೋ ನಿಲ್ಲುತ್ತದೆ. ಈ ವಿಸ್ತರಣ ಮತ್ತು ಆಕುಂಚನ ನಕ್ಷತ್ರಕ್ಕೆ ತಪ್ಪಿದ್ದಲ್ಲ.

ಈ ಪ್ರಪಂಚದ ಈ ಕ್ರಿಯೆಯನ್ನು ಕಗ್ಗ ಎಷ್ಟು ಸುಂದರವಾದ ಆದರೆ ನಮ್ಮೆಲ್ಲರ ಮನಸ್ಸಿಗೆ ತಟ್ಟುವಂತಹ ಉದಾಹರಣೆಯೊಂದಿಗೆ ವಿವರಿಸುತ್ತದೆ! ಕಮಲದ ಬದುಕನ್ನು ವಿಶ್ವಕ್ಕೆ ಹೋಲಿಸುತ್ತದೆ! ಕಮಲದ ಹೂವಿನದು ಒಂದು ವಿಶೇಷ. ಬೆಳಿಗ್ಗೆ ಸೂರ್ಯೋದಯವಾಗಿ ಬಿಸಿಲಿನ ಕಿರಣಗಳು ಮೈಮೇಲೆ ಬಿದ್ದಾಗ ಕಮಲದ ಮೊಗ್ಗು ಬಿರಿದು ಅರಳುತ್ತದೆ. ಬಿಸಿಲಿರುವವರೆಗೂ ಅರಳಿಯೇ ಇರುತ್ತದೆ. ಸಂಜೆಯಾದ ಮೇಲೆ ಅರಳಿದ ಕಮಲ ಪಕಳೆಗಳನ್ನು ಮುಚ್ಚಿಕೊಂಡು ಮತ್ತೆ ಮೊಗ್ಗಾಗುತ್ತದೆ. ಮರಳಿ ಬೆಳಗಾಗುವುದನ್ನೇ ಕಾಯ್ದುಕೊಂಡಿದ್ದು ಸೂರ್ಯಕಿರಣಗಳು ಬಿದ್ದೊಡನೆ ಮತ್ತೆ ಅರಳುತ್ತದೆ. ಅದರ ಬದುಕು ಹೀಗೆಯೇ ವಿಸ್ತರಣ ಮತ್ತು ಆಕುಂಚನ - ಅರಳುವಿಕೆ ಮತ್ತೆ ಮೊಗ್ಗಾಗುವಿಕೆ. ಕಮಲದ ಹೂವಿನ ಬದುಕಿನಲ್ಲಿ ಕೆಲವೊಂದು ಬಾರಿ ಈ ಆವರ್ತನ ಕ್ರಿಯೆ ಆಗಬಹುದು. ಆದರೆ ಇದೇ ಆವರ್ತನ ಪ್ರಪಂಚದಲ್ಲಿ ಅಸಂಖ್ಯ ಬಾರಿ ಅಗುತ್ತದೆ - ಅದೇ ಈ ವಿಶ್ವದ ಚರಿತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT