ಜಡವನ್ನು ಚಲನಶೀಲವನ್ನಾಗಿಸುವ ಶಕ್ತಿ

ಸೋಮವಾರ, ಏಪ್ರಿಲ್ 22, 2019
29 °C

ಜಡವನ್ನು ಚಲನಶೀಲವನ್ನಾಗಿಸುವ ಶಕ್ತಿ

ಗುರುರಾಜ ಕರಜಗಿ
Published:
Updated:

ಶಿಲೆಯಾಗಿ ನಿದ್ರಿಸುತ್ತಿದ್ದಾಕೆ ರಾಮಪದ |
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ||
ಚಲಿಸದೆನಿಸದ ಜಡವನಾವ ಗಾಳಿಯೊ ಸೋಕೆ |
ಬಲ ತೀವಿ ಚಲಿಪುದದು – ಮಂಕುತಿಮ್ಮ || 109 ||

ಪದ-ಅರ್ಥ: ಸಂಸ್ಪರ್ಶದಿಂದೆದ್ದು=ಸಂಸ್ಪರ್ಶ(ಸೋಕುವಿಕೆ)ಯಿಂದ+ಎದ್ದು, ಚಲಿಸದೆನಿಸದ=ಚಲಿಸದು+ಎನ್ನಿಸದ, ಜಡವನಾವ=ಜಡವನು+ಅವ, ತೀವಿ=ತುಂಬಿ.

ವಾಚ್ಯಾರ್ಥ: ಕಲ್ಲಾಗಿ ನಿಶ್ಚಲಳಾಗಿದ್ದ ಅಹಲ್ಯೆ ರಾಮಪಾದದ ಸೋಕುವಿಕೆಯಿಂದ ಎದ್ದು ನಿಂತಂತೆ, ಚಲಿಸದು ಎನ್ನಿಸಿದ್ದ ಜಡವಸ್ತುವನ್ನು ಯಾವುದೋ ಗಾಳಿ, ಚೈತನ್ಯ ಸೋಕಿದಾಗ ಅದು ಶಕ್ತಿಯನ್ನು ತುಂಬಿಕೊಂಡು ನಡೆಯುತ್ತದೆ.

ವಿವರಣೆ: ಇದೊಂದು ರಾಮಾಯಣದ ವಿಶೇಷ ಪ್ರಸಂಗ. ಇದು ರಾಮನ ಅತಿಮಾನವ ಶಕ್ತಿಯನ್ನು ತೋರುವ ಒಂದು ಘಟನೆ. ವಿಶ್ವಾಮಿತ್ರರು ರಾಮ–ಲಕ್ಷ್ಮಣರನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುವ ದಾರಿಯಲ್ಲಿ ಗೌತಮಾಶ್ರಮಕ್ಕೆ ಬಂದಾಗ ಶಿಲೆಯಾಗಿ ಬಿದ್ದಿದ್ದ ಅಹಲ್ಯೆಗೆ ಶ್ರೀರಾಮಪದ ಸ್ಪರ್ಶವಾದೊಡನೆ ಆಕೆ ಪುನಃ ಜೀವಂತಿಕೆಯಿಂದ ಮೈದುಂಬಿ ಎದ್ದು ನಿಂತಳೆಂಬುದು ಪವಾಡ ಸದೃಶ ಪ್ರಸಂಗ. ಇವೆಲ್ಲ ಕೇವಲ ಸಂಕೇತಗಳು. ಅಹಲ್ಯೆ ಕಲ್ಲುಬಂಡೆಯಾಗಿಯೇ ಮಾರ್ಪಟ್ಟು ಬಿದ್ದಿದ್ದಳೆಂದಲ್ಲ. ತನ್ನ ಮನವನ್ನು ತುಂಬಿದ ಅಪರಾಧಿಭಾವದಿಂದ, ಜನರ ಟೀಕೆಗಳಿಗೆ, ಅವರ ತೀಕ್ಷ್ಣ ನೋಟಗಳಿಗೆ ನೊಂದು ತನ್ನ ಮನಸ್ಸನ್ನು ಕಲ್ಲುಮಾಡಿಕೊಂಡಿದ್ದಳು. ಹೊರಜಗತ್ತಿನ ಜೊತೆಗೆ ಯಾವ ಸಂಪರ್ಕವನ್ನು ಇಟ್ಟುಕೊಳ್ಳದೆ ಜಡವಾಗಿ ಉಳಿದಿದ್ದಳು. ಶ್ರೀರಾಮನ ಪ್ರೇಮ, ಕರುಣೆಯ ಸ್ಪರ್ಶ ಅವಳಲ್ಲಿ ಮತ್ತೆ ಚೇತನವನ್ನು ತುಂಬಿಸಿ ಅವಳ ಬದುಕನ್ನು ಚೇತೋಹಾರಿಯನ್ನಾಗಿಸಿತು. ಇದು ಜಡವಾದ ಮನಸ್ಸನ್ನು ಚೈತನ್ಯಪೂರ್ಣವಾಗುವಂತೆ ಮಾಡಿದ ಸ್ಪರ್ಶ. ಇದರ ಹಾಗೆಯೇ ಜಡವಾದ ವಸ್ತುವೊಂದನ್ನು ಯಾವುದೋ ಚೈತನ್ಯದ ಗಾಳಿ ತಟ್ಟಿ ಶಕ್ತಿ ತುಂಬಿ ಚಲಿಸುವಂತೆ ಮಾಡುತ್ತೆ ಎನ್ನುತ್ತದೆ ಕಗ್ಗ.

ಹದಿನೇಳನೆ ಶತಮಾನದಲ್ಲಿ ಬದುಕಿದ್ದ ಮಹತ್ವದ ವಚನಕಾರ ಷಣ್ಮುಖಸ್ವಾಮಿ ಬರೆದೊಂದು ವಚನ ಇದನ್ನೇ ಧ್ವನಿಸುತ್ತದೆ.

ಎನ್ನ ತನುವೆಂಬ ಅಚೇತನ ಬೊಂಬೆಗೆ
ಪ್ರಾಣವಾಯುವೆಂಬ ಜೀವಸೂತ್ರವ ಹೂಡಿ
ಮನವೆಂಬ ತೆರೆಯಮರೆಯಲ್ಲಿ ನಿಂದು
ನೀನಾಡಿಸಿದಂತೆ ನಾನಾಡುತಿರ್ಪೆನಲ್ಲದೆ
ಎನಗೆ ಬೇರೆ ಸ್ವತಂತ್ರವೇ ಹೇಳಾ ಅಖಂಡೇಶ್ವರಾ?

ಕಗ್ಗದ ಮಾತಿಗೆ ಧ್ವನಿಯಾಗುತ್ತದೆ ಈ ವಚನ. ದೇಹವೆಂಬ ಗೊಂಬೆ ಅಚೇತನವಾದದ್ದು. ಅದರ ದೇಹ ಜಡ. ಇಂಥ ಜಡವಾದ ದೇಹದೊಳಗೆ ಭಗವಂತ ಪ್ರಾಣವಾಯುವೆಂಬ ಜೀವಸೂತ್ರವನ್ನು ಹೂಡುತ್ತಾನಂತೆ! ನಮ್ಮ ಮನಸ್ಸು ಎಂಬ ಮರೆಯಲ್ಲಿ ನಿಂತು ದೇಹವನ್ನು ಆಡಿಸುತ್ತಾನಂತೆ. ಇದೇ ಜಡದೇಹವನ್ನು ತುಂಬಿ ಚಲಿಸುವಂತೆ ಮಾಡುವ ಚೈತನ್ಯ. ಹೀಗೆ ಚೈತನ್ಯ ಜಡವನ್ನು ಜೀವಿಯನ್ನಾಗಿಸುವ ಬೆರಗನ್ನು ಈ ಕಗ್ಗ ಸುಲಭವಾಗಿ ಕಟ್ಟಿಕೊಡುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !