ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕ್ಷಣೆಗೆ ಹರಿದುಬರುತ್ತಿರುವ ಭಕ್ತರು

ಶ್ರೀಕ್ಷೇತ್ರ ರೇವಗ್ಗಿ ಸುತ್ತ ಬಿರುಗಾಳಿ, ಮಳೆ: ಧರೆಗುರುಳಿದ 54 ಅಡಿ ಮೂರ್ತಿ
Last Updated 28 ಮೇ 2018, 7:17 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಐತಿಹಾಸಿಕ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಲ್ಲಿ ಕಳೆದ ವರ್ಷ ಪ್ರತಿಷ್ಠಾಪಿಸಲಾಗಿದ್ದ 54 ಅಡಿ ಎತ್ತರದ ರೇವಣಸಿದ್ದೇಶ್ವರ ಫೈಬರ್ ಮೂರ್ತಿ ಮಳೆ, ಗಾಳಿಗೆ ಧರೆಗುರುಳಿ ಬಿದ್ದಿದ್ದು, ಮೂರ್ತಿಯನ್ನು ನೋಡಲು ಭಕ್ತಸ್ತೋಮ ಹರಿದುಬರುತ್ತಿದೆ.

ದಾಸೋಹ ಮಂದಿರದ ಶೀಟ್‌, ಸಿ.ಸಿ.ಟಿ.ವಿ ಕ್ಯಾಮೆರಾ, ಲೈಟಿಂಗ್ ಫಲಕಗಳು, ಕಲ್ಯಾಣ ಮಂಟಪ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದ್ದು, ಅಪಾರ ನಷ್ಟವಾಗಿದೆ.

ಸೂಗೂರ ಸಂಸ್ಥಾನ ಮಠದ ಚೆನ್ನರುದ್ರಮುನಿ ಶಿವಾಚಾರ್ಯರು, ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಳಗಿ ತಹಶೀಲ್ದಾರ ರವೀಂದ್ರ ದಾಮಾ, ಪಿಎಸ್‌ಐ ಚೇತನಾ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.

ಭಕ್ತರಾದ ಚೆನ್ನಬಸಪ್ಪ ದೇವರಮನಿ, ಶಿವಶರಣಪ್ಪ ಚೆನ್ನೂರ, ಶಿವರಾಜ ಪಾಟೀಲ ಗೊಣಗಿ, ದತ್ತಾತ್ರೇಯ ರಾಯಗೋಳ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮು ರಾಠೋಡ್, ರೇವಣಸಿದ್ದಪ್ಪ ಅರಣಕಲ್, ಸಿದ್ದು ಮಾನಕರ್, ಗಿರೀಶ ದೇವರಮನಿ ಮುಂದಿನ ಯೋಜನೆ ಬಗ್ಗೆ ಚರ್ಚಿಸಿದ್ದಾರೆ.

ಶ್ರೀಕ್ಷೇತ್ರವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ದೇವಸ್ಥಾನ ಸಮಿತಿ ಅಧ್ಯಕ್ಷರಾಗಿದ್ದ ಉಪವಿಭಾಗಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಆಸಕ್ತಿವಹಿಸಿ ಗುಡ್ಡದಲ್ಲಿ ಧ್ಯಾನ ಕೇಂದ್ರ, ಉದ್ಯಾನವನ, ಮಹಾದ್ವಾರ, ಶರಣರ ವಾಣಿ ಸರಮಾಲೆ, ಕಲ್ಯಾಣ ಮಂಟಪ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ.

ಶಾಸಕ ಡಾ.ಉಮೇಶ ಜಾಧವ್‌ ಸಹೋದರ ರಾಮಚಂದ್ರ ಜಾಧವ್ ಅವರು ₹20 ಲಕ್ಷ ಅಂದಾಜು ವೆಚ್ಚದ ರೇವಣಸಿದ್ದೇಶ್ವರ ಮೂರ್ತಿಯನ್ನು ಭಕ್ತಿ ಸೇವೆಯಾಗಿ ನೀಡಿದ್ದರು. ಶಿರಾ ಶಿಲೆಯಿಂದ 18 ಅಡಿ ಎತ್ತರದ ಜಗುಲಿ ನಿರ್ಮಿಸಿ ರೇಣುಕಾಚಾರ್ಯರ ಜಯಂತಿ ದಿನ ಪ್ರತಿಷ್ಠಾಪನೆ ಮಾಡಲಾಗಿತ್ತು. ಅಂದಿನಿಂದ ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಉರುಳಿದ ಮರಗಳು:

ಸುಗೂರ, ರಟಕಲ್, ಕಂದಗೂಳ, ರೇವಗ್ಗಿ, ಅರಣಕಲ್, ಗೋಟೂರ, ಕಣಸೂರ, ವಚ್ಚಾ, ಕೋಡ್ಲಿ, ಕೋರವಾರ ರಸ್ತೆ ಬದಿ ಮರಗಳು ಮುರಿದು ರಸ್ತೆ ಮೇಲೆ ಬಿದ್ದಿವೆ. ದೇವಿಕಲ್ ತಾಂಡಾ, ರೇವಗ್ಗಿ ಗುಡ್ಡ, ಕರಿಕಲ್ ತಾಂಡಾ ಬಳಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.  ಕಾಳಗಿ ಹೊರತುಪಡಿಸಿ ಉಳಿದೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಕೆಲವೆಡೆ ವಿದ್ಯುತ್ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT