ಸೋಮವಾರ, ಅಕ್ಟೋಬರ್ 14, 2019
23 °C
ಎಚ್‌ಡಿಕೆ ತೋರಿಸಿಕೊಟ್ಟ ‘ಕೆಡಹುವ ಮಾರ್ಗ’ವನ್ನು ಬಿಜೆಪಿ ಅನುಸರಿಸುತ್ತಿದೆಯೇ?

ಅನೈತಿಕತೆಯೇ ನೈತಿಕತೆಯಾದಾಗ...

Published:
Updated:
Prajavani

ನೈತಿಕ, ಅನೈತಿಕ ಪದಗಳನ್ನು ರಾಜಕೀಯ ಅರ್ಥಕೋಶದಿಂದ ಕಿತ್ತು ಅರಬ್ಬೀ ಸಮುದ್ರಕ್ಕೆ ಎಸೆದು ದಶಕಗಳೇ ಸಂದವು. ತಮಗೆ ಅಧಿಕಾರ ಸಿಗದೇ ಇದ್ದಾಗ ತಮ್ಮ ಮಿತ್ರತ್ವ ಬಯಸದ ನಾಯಕರ ವರ್ತನೆ, ಧೋರಣೆಗಳನ್ನು ಅನೈತಿಕ ಎಂಬ ಬೀಸು ದೊಣ್ಣೆಯಿಂದ ಬಡಿಯುವುದು ರಾಜಕಾರಣಿಗಳಿಗೆ ಚಾಳಿಯಾಗಿಬಿಟ್ಟಿದೆ.

ಕೂಡುವಿಕೆ, ಕಳೆಯುವಿಕೆಗಳು ರಾಜಕೀಯ ನೇತಾರರ ಪಾಲಿಗೆ ಅವಕಾಶವೊಂದರ ಓಣಿಯಿದ್ದಂತೆ. ಲಾಭವಾಗುತ್ತದೆ ಎಂದಾಗ ಸಂಕಲನ, ಕೈಗೂಡದೇ ಇದ್ದಾಗ ವ್ಯವಕಲನ ಮಾಡುವ ಕಲೆ ಅವರಿಗೆ ಕರಗತ. ಮುಚ್ಚಿದ ಓಣಿ ತೆರೆದುಕೊಂಡ ಕೂಡಲೇ ಒಳನುಗ್ಗಿ ಗುಣಾಕಾರ, ಭಾಗಾಕಾರ ಮಾಡಿ ಅಧಿಕಾರದ ಗದ್ದುಗೆ ಹಿಡಿಯುವುದರಲ್ಲಿ, ಹಿಡಿದ ಕುರ್ಚಿ ಭದ್ರಪಡಿಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು.

ಹೀಗಾಗಿಯೇ ಕಾಲಕ್ಕೆ ತಕ್ಕಂತೆ ಓತಿಕ್ಯಾತಗಳ ಹಾಗೆ ಬಣ್ಣ ಬದಲಾಯಿಸುವ ಚಾಣಾಕ್ಷತೆಯನ್ನೂ ಅವರು ತೋರಬಲ್ಲರು. ಈ ಕಾರಣಕ್ಕಾಗಿಯೇ ಇತ್ತೀಚಿನ ವರ್ಷಗಳಲ್ಲಿ ‘ಅನೈತಿಕತೆಯೇ ನೈತಿಕತೆ’ಯಾಗಿದೆ. ತಮ್ಮ ‘ಅಮೂಲ್ಯ’ ಮತ ಹಾಕುವವರು ಇಂತಹದೇ ವ್ಯಕ್ತಿತ್ವಗಳಿಗೆ ಪರಾಕು ಪಂಪನ್ನು ಒತ್ತುತ್ತಿದ್ದಾರೆ.

ಬಹುತೇಕ ರಾಜಕಾರಣಿಗಳು ಮಾತುಮಾತಿಗೆ ಶರಣರ ವಚನಗಳನ್ನು ಉದ್ಧರಿಸಿ ತಮ್ಮ ‘ಸಾಚಾತನ’ ಬಿಂಬಿಸಿಕೊಳ್ಳುವುದುಂಟು. ಇಂತಹವರನ್ನು ಕುರಿತು ಬಸವಣ್ಣನವರ ವಚನವೊಂದನ್ನು ಉಲ್ಲೇಖಿಸಿದರೆ ಅದು ಕೆಲವರಿಗೆ ಅಪಥ್ಯವಾಗಬಹುದು.

‘ಹಲವು ಕಾಲ ಹಂಸೆಯ ಸಂಗದಲಿದ್ದರೇನು 

ಬಕ ಶುಚಿಯಾಗಬಲ್ಲುದೇ...

ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ಅದರ ಹಾಲು ಪಂಚಾಮೃತಕ್ಕೆ ಸಲುವುದೇ...

ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ’

ಎಂದು ಇಂತಹ ಮಂದಿಯನ್ನು ಕುರಿತೇ ಬಸವಣ್ಣನವರು ಹೇಳಿದ್ದಿರಬಹುದು. ರಾಜಕಾರಣಿಗಳ ಇಂತಿಪ್ಪ ‘ನೈತಿಕ’ ನಡಾವಳಿಗೆ ಒಂದೂವರೆ ದಶಕದ ‘ಮಾದರಿ’ಗಳನ್ನು ನೆನಪಿಸಿದರೆ ಸೂಕ್ತವಾದೀತು.  

2004ರಲ್ಲಿ ಇದೇ ರೀತಿಯ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಿತ್ತು. ಬಿಜೆಪಿ 79 ಸ್ಥಾನಗಳಲ್ಲಿ, ಕಾಂಗ್ರೆಸ್‌ 65 ಮತ್ತು ಜೆಡಿಎಸ್‌ 58 ಸ್ಥಾನಗಳಲ್ಲಿ ಗೆದ್ದಿತ್ತು. ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ಹೊರಗಿರಿಸುವ ಸಲುವಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದ ಎಚ್‌.ಡಿ. ದೇವೇಗೌಡರು ‘ಅಧಿಕಾರ ಸೂತ್ರ’ವನ್ನು ತನ್ನ ಕೈಗೆ ಮುಫತ್ತಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿ, ಅಂದು ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ತಮ್ಮ ‘ಶಾಶ್ವತ ಹಗೆಗಾರ’ ಡಿ.ಕೆ. ಶಿವಕುಮಾರ್‌ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಇರಕೂಡದು ಎಂದು ಸೂತ್ರಧಾರ ದೇವೇಗೌಡರು ಫರ್ಮಾನು ಹೊರಡಿಸಿದ್ದರು. ಏಕೆಂದರೆ, ಅದಕ್ಕೂ ಮೊದಲಿದ್ದ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ನಗರಾಭಿವೃದ್ಧಿ, ಸಹಕಾರ ಖಾತೆಗಳನ್ನು ನಿರ್ವಹಿಸಿದ್ದ ಶಿವಕುಮಾರ್‌, ತೊಂದರೆ ಕೊಟ್ಟಿದ್ದರು ಎಂಬ ಕಾರಣಕ್ಕೆ ಈ ಷರತ್ತು ಹಾಕಿದ್ದರು. ಈಗ ಕಾಲ ಬದಲಾಗಿದೆ; ಅಂದು ಹಗೆಗಾರರಾಗಿದ್ದ ಶಿವಕುಮಾರ್ ಈಗ ಗೆಣೆಕಾರರಂತಿದ್ದು, ಕುಮಾರಸ್ವಾಮಿ ಅವರ ಆಪದ್ಬಾಂಧವನಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

ಅಂದು ಮೈತ್ರಿ ಸರ್ಕಾರ ಬಂದು ವರ್ಷ ಕಳೆಯುವಷ್ಟರಲ್ಲಿಯೇ ಸಿದ್ದರಾಮಯ್ಯ ಮತ್ತು ದೇವೇಗೌಡರ ಸಂಬಂಧ ಹಳಸಿತ್ತು. ಎಚ್.ಡಿ. ಕುಮಾರಸ್ವಾಮಿ ಪರ್ಯಾಯ ನಾಯಕನಾಗಿ ಬೆಳೆಯುವ ತವಕದಲ್ಲಿದ್ದರು. ತಮ್ಮದೇ ಗುಂಪು ಕಟ್ಟಿಕೊಂಡು ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಹೊಂಚಿನ ನೇತೃತ್ವವನ್ನೂ ವಹಿಸಿದ್ದರು.

ಅದೇ ಹೊತ್ತಿನಲ್ಲಿ ವಿರೋಧ ಪಕ್ಷದಲ್ಲಿದ್ದ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದರಿತು, ‘ಒಂದು ಸಚಿವ ಸ್ಥಾನವನ್ನಾದರೂ ಕೊಡಿ ಜೆಡಿಎಸ್‌ಗೆ ಬರುವೆ’ ಎಂದು ದುಂಬಾಲು ಬಿದ್ದಿದ್ದರು. ಈ ಬೆಳವಣಿಗೆಗಳು ಮುಪ್ಪುರಿಗೊಂಡು ರಾತ್ರೋರಾತ್ರಿ ನಡೆದ ‘ಕ್ರಾಂತಿ’ಯಲ್ಲಿ ಧರ್ಮಸಿಂಗ್ ಅವರಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಕುಮಾರಸ್ವಾಮಿ (ದೇವೇಗೌಡರ ಅಭಿಮತಕ್ಕೆ ವಿರುದ್ಧವಾಗಿ) ಮುಖ್ಯಮಂತ್ರಿ ಹುದ್ದೆಗೆ ಏರಿದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. 

ಅತ್ತ ದೇವೇಗೌಡರ ನಡೆಯಿಂದ ಬೇಸತ್ತ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಿಸಿದರು. ಜೆಡಿಎಸ್–ಬಿಜೆಪಿ ಮೈತ್ರಿ ಸರ್ಕಾರ ಅವರನ್ನು ಸೋಲಿಸಲು ಹರಸಾಹಸ ನಡೆಸಿದರೂ 257 ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆದ್ದರು. ‘ಮತ್ತೆಂದೂ ಚುನಾವಣೆ ಎದುರಿಸುವುದಿಲ್ಲ. ಇದೇ ನನ್ನ ಕೊನೆ ಚುನಾವಣೆ, ಸಾಕಪ್ಪಾ ಸಾಕು’ ಎಂದೂ ಅವರು ನಿಟ್ಟುಸಿರು ಬಿಟ್ಟಿದ್ದರು. 

ಅದಾದ ಬಳಿಕ ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು. ಆಗ, 11 ಮಂದಿ ಬಿಜೆಪಿ ಹಾಗೂ ಐವರು ಪಕ್ಷೇತರ ಶಾಸಕರನ್ನು ಸೇರಿಸಿಕೊಂಡ ಕುಮಾರಸ್ವಾಮಿ, ಎಲ್ಲ ಅಡ್ಡದಾರಿಗಳನ್ನೂ ಬಳಸಿಕೊಂಡು ಭಿನ್ನರನ್ನು ಕರೆದುಕೊಂಡು ರಾಜಭವನಕ್ಕೆ ತೆರಳಿದರು. ಯಡಿಯೂರಪ್ಪ ಅವರಿಗೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿಯೂ ಅವರಿಂದ ಹೇಳಿಸಿದರು. ದೆಹಲಿ ಮಟ್ಟದಲ್ಲಿ ತಮ್ಮ ‘ತಂತ್ರ’ ಹೆಣೆದ ಯಡಿಯೂರಪ್ಪ ವಾಮಮಾರ್ಗಗಳೆಲ್ಲವನ್ನೂ ಹೊಸೆದು ಅಧಿಕಾರ ಉಳಿಸಿಕೊಂಡರು. 

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಹೆಸರು ಉಲ್ಲೇಖವಾಗಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದಾಗ ಡಿ.ವಿ. ಸದಾನಂದಗೌಡರನ್ನು ಯಡಿಯೂರಪ್ಪ ಮುಂದೆ ಬಿಟ್ಟರು. ಆಗಿನ ಕಾಲಕ್ಕೆ ಪ್ರಬಲರಾಗಿದ್ದ ಅನಂತಕುಮಾರ್‌, ಜನಾರ್ದನ ರೆಡ್ಡಿ ಬಣ ಜಗದೀಶ ಶೆಟ್ಟರ್ ಅವರನ್ನು ಹುರಿಯಾಳಾಗಿಸಿತು. ಕೊನೆಗೂ ಯಡಿಯೂರಪ್ಪ ಗೆದ್ದರು. ಆದರೆ, ಈ ಸರ್ಕಾರ ಸುದೀರ್ಘ ಕಾಲ ಇರುವುದು ಅವರಿಗೆ ಬೇಡವಾಗಿತ್ತು. ಒಂದು ಬಜೆಟ್ ಮಂಡಿಸುವ ಹೊತ್ತಿಗೆ ಸದಾನಂದಗೌಡರನ್ನು ಇಳಿಸಿ, ಶೆಟ್ಟರ್ ಅವರನ್ನು ಕೂರಿಸಿದರು. ಅಷ್ಟಕ್ಕೆ ನಿಲ್ಲದ ಯಡಿಯೂರಪ್ಪ ಪಕ್ಷದಿಂದ ಹೊರನಡೆದು ಕರ್ನಾಟಕ ಜನತಾ ಪಕ್ಷ ಕಟ್ಟಿ, ಬಿಜೆಪಿಯನ್ನೇ ರಾಜ್ಯದಿಂದ ಓಡಿಸುವ ಪಣತೊಟ್ಟು ರಾಜ್ಯ ಸುತ್ತಿದರು. ಅದರಲ್ಲಿ ಗೆಲುವು ಸಿಗದಾದಾಗ ಪುನಃ ಬಿಜೆಪಿಗೆ ಮರಳಿದರು. 

2018ರಲ್ಲಿ ಚುನಾವಣೆ ನಡೆದಾಗ 2004ರ ಪರಿಸ್ಥಿತಿ ಮರುಕಳಿಸಿತು. 104 ಶಾಸಕರ ಬಲ ಹೊಂದಿದ್ದ ಯಡಿಯೂರಪ್ಪ ರಾಜಭವನ ಬಳಸಿ ಅಧಿಕಾರ ಹಿಡಿದರು. ಅದು ಬಹುಕಾಲ ಉಳಿಯದೇ ಇದ್ದಾಗ ಅವರು ಸುಮ್ಮನೇ ಕೂರಲಿಲ್ಲ. ಸರ್ಕಾರ ಪತನಕ್ಕೆ ಮಾರ್ಗಗಳನ್ನು ಹುಡುಕತೊಡಗಿದರು. 2010ರಲ್ಲಿ ಕುಮಾರಸ್ವಾಮಿ ತೋರಿಸಿಕೊಟ್ಟಿದ್ದ ‘ಸರ್ಕಾರ ಕೆಡಹುವ ಮಾರ್ಗ’ವನ್ನು ಈಗ ಯಡಿಯೂರಪ್ಪ ಬಳಸುತ್ತಿದ್ದಾರೆ.

ಅಂದು ಯಡಿಯೂರಪ್ಪ ಜತೆ ಸೇರಿ ಉಪಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯನವರನ್ನು ಕೆಡವಿದ್ದ ಕುಮಾರಸ್ವಾಮಿ, ಈಗ ತಮ್ಮ ಹಳೆಯ ಶತ್ರುವಿನ ‘ಋಣ’ದಲ್ಲಿದ್ದಾರೆ. ಯಾವ ಜಗದೀಶ ಶೆಟ್ಟರ್‌ಗೆ ಯಡಿಯೂರಪ್ಪ ಅಧಿಕಾರ ತಪ್ಪಿಸಿದ್ದರೋ ಅದೇ ಶೆಟ್ಟರ್ ಈಗ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಕೈಂಕರ್ಯದ ನೇತೃತ್ವ ವಹಿಸಿದ್ದಾರೆ.

ಕಾಲ ಬದಲಾಗುತ್ತಿದೆ; ಅಪವಿತ್ರ ಮೈತ್ರಿಗಳು ‘ಪವಿತ್ರ’ವಾಗಿವೆ.

‘ನಿಮ್ಮ ನಿಲವಿಂಗೆ ನೀವು ನಾಚಬೇಡವೆ? ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ? ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ’ ಎಂಬ ಅಕ್ಕಮಹಾದೇವಿಯ ವಚನ ಹೆಚ್ಚು ಪ್ರಸ್ತುತವೆನಿಸುತ್ತಿದೆ. 

Post Comments (+)