ಮೋದಿ ವಿರುದ್ಧ ಮಹಾಮೈತ್ರಿ ನೀರ ಗುಳ್ಳೆಯೇ?

7
ಗತವೈಭವದ ಶಿಖರದಿಂದ ಕೆಳಗಿಳಿದು ಕೈ ಚಾಚಲು ಕಾಂಗ್ರೆಸ್ ಇನ್ನೂ ಮೀನ ಮೇಷ ಎಣಿಸುತ್ತಿದ್ದಂತಿದೆ

ಮೋದಿ ವಿರುದ್ಧ ಮಹಾಮೈತ್ರಿ ನೀರ ಗುಳ್ಳೆಯೇ?

ಡಿ. ಉಮಾಪತಿ
Published:
Updated:

ಸಂಸತ್ತಿನ ಮೇಲ್ಮನೆ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಗಳಿಗೆ ಅಂತಹ ರಾಜಕೀಯ ಮಹತ್ವವೇನೂ ಇರುವುದಿಲ್ಲ. ಆದರೆ ಮೊನ್ನೆ ನಡೆದ ಚುನಾವಣೆಯ ಕುರಿತು ಈ ಮಾತು ಹೇಳಲು ಬರುವುದಿಲ್ಲ. ಒಮ್ಮತದ ಆಯ್ಕೆ ನಡೆಯುತ್ತಿದ್ದ ಈ ಸ್ಥಾನದ ಚುನಾವಣೆಗೆ ಬಹುತೇಕ ಎರಡೂವರೆ ದಶಕಗಳ ನಂತರ ಮಹತ್ವ ಬಂದಿತ್ತು. ಆಳುವ ಪಕ್ಷ ಮತ್ತು ಪ್ರತಿಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿದ್ದವು. ಲೋಕಸಭಾ ಚುನಾವಣೆಗಳು ಕೇವಲ ಏಳು ತಿಂಗಳಾಚೆ ಕದ ಬಡಿದಿರುವುದೇ ಈ ಪ್ರತಿಷ್ಠೆ, ಪೈಪೋಟಿಯ ಹಿಂದಿನ ಏಕೈಕ ಕಾರಣ.

ಲೋಕಸಭೆಯಲ್ಲಿ ಪ್ರಾಬಲ್ಯ ಮೆರೆದಿರುವ ಆಳುವ ಪಕ್ಷ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸೊಲ್ಲಡಗಿಸುವುದು ಇನ್ನೂ ಸಾಧ್ಯವಾಗಿಲ್ಲ. ಸಂಸತ್ತಿನ ಮೇಲ್ಮನೆಯಲ್ಲಿ ಎನ್‌.ಡಿ.ಎ.ಗೆ ಬಹುಮತ ಇನ್ನೂ ಕೈಗೂಡಿಲ್ಲ. ಹೀಗಾಗಿ ತಾನು ಕಣಕ್ಕಿಳಿಸಿದ್ದ ಅಭ್ಯರ್ಥಿಯನ್ನು ಗೆಲ್ಲಿಸುವುದು ಮೋದಿ ಸಂಗಾತಿಗಳಿಗೆ ಅಷ್ಟು ಸುಲಭವೇನೂ ಆಗಿರಲಿಲ್ಲ. ಆದರೂ ಉಪಸಭಾಪತಿ ಚುನಾವಣೆಯನ್ನು ಮೋದಿ ಸಂಗಾತಿಗಳು ಗೆದ್ದುಕೊಂಡರು. ಚುನಾವಣೆ ತಂತ್ರಗಾರಿಕೆಯಲ್ಲಿ ತಾವು ಈಗಲೂ ತಮ್ಮ ಎದುರಾಳಿಗಳಿಗಿಂತ ಮುಂದೆ ಎಂಬುದನ್ನು ಸಿದ್ಧಪಡಿಸಿ ತೋರಿಸಿದರು.

ಬಿಜೆಪಿಯ ಯುಕ್ತಿ ಮತ್ತು ರಾಜಕೀಯ ತಂತ್ರಗಾರಿಕೆಯು ಕೇವಲ ಗಣಿತವನ್ನು ನೆಚ್ಚಿದ ವಿರೋಧಪಕ್ಷಗಳನ್ನು ಮಕಾಡೆ ಮಲಗಿಸಿತು. ಮೇಲ್ಮನೆಯ ವಿರೋಧಪಕ್ಷಗಳ ಶಿಬಿರದೊಳಕ್ಕೆ ನುಗ್ಗಿ ಗೆಲ್ಲಬಲ್ಲೆ ಎಂಬ ಸಾಂಕೇತಿಕ ಆತ್ಮವಿಶ್ವಾಸವನ್ನು ವಿರೋಧಪಕ್ಷಗಳು ಬೆಳ್ಳಿತಟ್ಟೆಯಲ್ಲಿಟ್ಟು ಬಿಜೆಪಿಗೆ ಒಪ್ಪಿಸಿದವು. ಬಹಿರಂಗವಾಗಿ ಒಪ್ಪಿಕೊಳ್ಳಲಿ ಬಿಡಲಿ, ಲೋಕಸಭಾ ಚುನಾವಣೆಗಳ ಹೊಸ್ತಿಲಿನಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳ ಆಡಂಬರಕ್ಕೆ ಬಿದ್ದಿರುವ ಹೊಡೆತವಿದು.

ಅಗ್ರಾಸನದಲ್ಲಿ ಕುಳಿತು ದರ್ಪದಿಂದ ಬೀಗಬಲ್ಲ ಪ್ರಧಾನಿ ನರೇಂದ್ರ ಮೋದಿ, ಅಗತ್ಯ ಬಿದ್ದಾಗ ಕೆಳಗಿಳಿದು ಕಟಿ ಬಾಗಿಸಿ ನೆರವು ಕೋರಿ ಕೈಚಾಚಬಲ್ಲರು ಎಂಬ ಮಹತ್ವದ ಸಂದೇಶವನ್ನು ಮಿತ್ರಪಕ್ಷಗಳಿಗೆ ರವಾನಿಸಿದ್ದಾರೆ. ಆದರೆ ತನ್ನ ಗತವೈಭವದ ಶಿಖರದಿಂದ ಕೆಳಗಿಳಿಯಲು ಕಾಂಗ್ರೆಸ್ ಇನ್ನೂ ಮೀನ ಮೇಷ ಎಣಿಸುತ್ತಿದ್ದಂತಿದೆ. 

ದೇಶ ನಡೆಸಲು ಮನಸು ದೊಡ್ಡದಿರಬೇಕು (ದೇಶ್ ಚಲಾನೇಕೇ ಲಿಯೇ ದಿಲ್ ಬಡಾ ರಖನಾ ಪಡೇಗಾ) ಎಂಬ ಆಮ್ ಆದ್ಮಿ ಪಾರ್ಟಿಯ ಸುಡುನುಡಿಗಳಲ್ಲಿ ಅರ್ಥವಿದೆ. ಸಮ್ಮಿಶ್ರ ಸರ್ಕಾರ ನಡೆಸಲು ಅಟಲ್ ಬಿಹಾರಿ ವಾಜಪೇಯಿ ತೋರಿದ್ದ ದೊಡ್ಡ ಮನಸ್ಸನ್ನು ಮೋದಿ ತೋರುತ್ತಿಲ್ಲ ಎಂಬುದು ಬಿಜೆಪಿಯ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಅಕಾಲಿದಳದ ದೊಡ್ಡ ದನಿಯ ದೂರು. ಈ ದೂರಿಗೆ ತಡವಾಗಿಯಾದರೂ ಮೋದಿ ಕಿವಿಗೊಟ್ಟಂತೆ ನಡೆದುಕೊಂಡಿದ್ದಾರೆ.

 2019ರ ಲೋಕಸಭಾ ಚುನಾವಣೆಗಳಲ್ಲಿ ಯಾರು ಎಲ್ಲಿ ನಿಲ್ಲಬಹುದು ಎಂಬ ಅಜಮಾಸು ನೀಲನಕ್ಷೆಯನ್ನು ಈ ಚುನಾವಣೆ ಬಿಡಿಸಿಟ್ಟಿದೆ. ಈ ನಕಾಶೆಯಲ್ಲಿ ಏರುಪೇರುಗಳು ಸ್ವಾಭಾವಿಕ. ಈ ಚುನಾವಣೆಯ ವಿದ್ಯಮಾನಗಳನ್ನು ಲೋಕಸಭಾ ಚುನಾವಣೆಗಳ ಎತ್ತರ-ವಿಸ್ತೀರ್ಣದ ಅಗಾಧತೆಗೆ ಅನ್ವಯಿಸಿ ವಿಸ್ತರಿಸುವುದು ಸೂಕ್ತ ಅಲ್ಲ ಎಂಬ ವಾದ ಕೇಳಿ ಬಂದಿದೆ. ಆದರೂ ಮೋದಿ ಎಂಬ ದಿಗ್ಗಜವನ್ನು ಎದುರಿಸಲು ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೈ ಕಲೆಸಿದ ವಿರೋಧಪಕ್ಷಗಳ ಮಹಾಮೈತ್ರಿ ಪಾದ ಊರಿ, ಎದೆ ಸೆಟೆಸಿ, ತಲೆಯೆತ್ತಿ ನಿಲ್ಲುವುದು ಅಷ್ಟು ಸಲೀಸಲ್ಲ ಎಂಬ ನಿಚ್ಚಳ ಪಾಠವನ್ನು ಈ ಚುನಾವಣೆ ಬರೆದಿದೆ. ಓದಿಕೊಂಡು ತಿದ್ದಿಕೊಳ್ಳದಿದ್ದರೆ ನಷ್ಟ ವಿರೋಧ ಪಕ್ಷಗಳದೇ ವಿನಾ ಮೋದಿಯವರದು ಅಲ್ಲವೇ ಅಲ್ಲ.

ತೆಲಂಗಾಣ ರಾಷ್ಟ್ರ ಸಮಿತಿ, ಬಿಜು ಜನತಾದಳ, ತೆಲುಗುದೇಶಂ ಪಾರ್ಟಿ, ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಮಾತ್ರವಲ್ಲದೆ ಡಿ.ಎಂ.ಕೆ.ಯಂತಹ ಪ್ರಾದೇಶಿಕ ಪಕ್ಷ ಕೂಡ ಅಡ್ಡಗೋಡೆಯ ಮೇಲಿನ ದೀಪಗಳು ಇಲ್ಲವೇ ಬೇಲಿಯ ಮೇಲೆ ಕುಳಿತಿರುವಂತಹವು ಎಂಬುದು ಕಡು ವಾಸ್ತವ. ಮಹಾಮೈತ್ರಿಯಲ್ಲಿನ ದೊಡ್ಡ ಪಕ್ಷಗಳು ಈ ನಿಜದತ್ತ ಕಣ್ಣು ತೆರೆಯದಿದ್ದರೆ ಮೋದಿಯವರ ಬಿಜೆಪಿಯನ್ನು ಹಿಂದೆ ಹಾಕುವುದು ಕನಸಿನ ಮಾತೇ ಸರಿ.

ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಡಿ.ಎಂ.ಕೆ. ಹಾಗೂ ತೃಣಮೂಲ ಕಾಂಗ್ರೆಸ್ ಪಾರ್ಟಿಯ ಹತ್ತು ಮಂದಿ ಸದಸ್ಯರು ಮತದಾನದ ದಿನದಂದು ನಾನಾ ಕಾರಣಗಳಿಗಾಗಿ ಗೈರು ಹಾಜರಾಗಿದ್ದರು. ಅವರನ್ನು ಕಲೆ ಹಾಕುವ ಯೋಜಿತ ಮತ್ತು ಸಂಘಟಿತ ಪ್ರಯತ್ನ ಮುಂದಾಗಿಯೇ ನಡೆಯಲಿಲ್ಲ. ಅತ್ತ ಬಿಜೆಪಿ ತನ್ನ ಅಸ್ವಸ್ಥ ಮಂತ್ರಿ ಅರುಣ್ ಜೇಟ್ಲಿಯವರನ್ನೂ ಬಿಡದೆ ಸದನಕ್ಕೆ ಕರೆತಂದು ಮತ ಹಾಕಿಸಿತು.

ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆಗಳ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷ ತೋರಿದ್ದ ಹಸಿವು ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಕಣ್ಮರೆಯಾಗಿತ್ತು. ಕರ್ನಾಟಕದ ಸಂದರ್ಭದಲ್ಲಿ ಚುರುಕುತನವನ್ನೂ ಹಸಿವನ್ನೂ ತೋರಿದ ಕಾಂಗ್ರೆಸ್, ಬಿಜೆಪಿಗಿಂತ ಮೊದಲೇ ಜಾತ್ಯತೀತ ದಳವನ್ನು ಸಂಪರ್ಕಿಸಿತ್ತು. ಗುಲಾಂ ನಬಿ ಆಜಾದ್ ಕರೆ ಮಾಡಿದ ಹತ್ತು- ಹದಿನೈದು ನಿಮಿಷಗಳ ನಂತರ ಅಮಿತ್ ಶಾ ಕರೆ ಬಂದಿತ್ತು ಎಂದು ಜಾತ್ಯತೀತ ಜನತಾದಳದ ಉನ್ನತ ನಾಯಕರೊಬ್ಬರು ಹೇಳಿದ್ದುಂಟು.

ಬಿಹಾರದ ಮಹಾಮೈತ್ರಿಯಿಂದ ಹೊರಬಂದು ಪುನಃ ಬಿಜೆಪಿ ತೆಕ್ಕೆಗೆ ಮರಳಿದ್ದರು ಸಂಯುಕ್ತ ಜನತಾದಳದ ನಿತೀಶ್ ಕುಮಾರ್. ಮೋದಿ ಮತ್ತು ಶಾ‌ ಜೋಡಿ ತಮ್ಮನ್ನು ನಡೆಸಿಕೊಂಡ ವೈಖರಿ ಅವರನ್ನು ಪುನರಾಲೋಚನೆಗೆ ನೂಕಿದ್ದ ಸೂಚನೆಗಳು ಮೂಡಿದ್ದವು. ನಿತೀಶ್ ಮತ್ತು ಬಿಜೆಪಿಯ ಮತ್ತೊಂದು ಮಿತ್ರಪಕ್ಷ ಲೋಕ ಜನಶಕ್ತಿ ಪಾರ್ಟಿಯ ರಾಮವಿಲಾಸ್ ಪಾಸ್ವಾನ್ ಒಟ್ಟಾಗಿ ಎನ್.ಡಿ.ಎ.ಯಿಂದ ಹೊರಬಿದ್ದು ಬಿಹಾರದಲ್ಲಿ ಮೂರನೆಯ ರಾಜಕೀಯ ಶಕ್ತಿ ಉದಯಿಸಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ಮತ್ತು ನಿತೀಶ್ ನಡುವೆ ಸಂಪರ್ಕ ಏರ್ಪಟ್ಟಿತ್ತು. ಈ ನಡುವೆ ಎಚ್ಚೆತ್ತ ಮೋದಿ- ಶಾ, ನಿತೀಶ್- ಪಾಸ್ವಾನ್ ಜೊತೆ ಸಂಬಂಧ ತಿದ್ದಿಕೊಂಡರು. 

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿಯನ್ನು ಹೂಡಿದರೆ ಸೋಲು ಖಚಿತವೆಂದು ಗೊತ್ತಿತ್ತು. ಹೀಗಾಗಿ ಸಂಯುಕ್ತ ಜನತಾದಳದ ಹರಿವಂಶ್ ಅವರನ್ನು ಕಣಕ್ಕೆ ಇಳಿಸಿದರು. 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ದೂರ ಸರಿಯತೊಡಗಿದ್ದ ನಿತೀಶ್ ಅವರನ್ನು ಪುನಃ ವಿಶ್ವಾಸಕ್ಕೆ ತೆಗೆದುಕೊಂಡಂತೆಯೂ ಆಯಿತು. ಬಿಜೆಪಿ ಅಭ್ಯರ್ಥಿ ಇಳಿಸಿದರೆ ಮತ ಹಾಕಲು ಒಲ್ಲದಿದ್ದ ಬಿಜು ಜನತಾದಳದಂತಹ ಪಕ್ಷದ ಬೆಂಬಲವನ್ನು ಪಡೆದುಕೊಂಡಂತೆಯೂ ಆಯಿತು. ಕಲ್ಲು ಒಂದೇ ಆದರೂ ಹೊಡೆದ ಹಕ್ಕಿ ಎರಡು!

ಮತ್ತೊಂದೆಡೆ ದಲಿತ ಹಿತರಕ್ಷಣೆಯ ವಿಷಯಗಳನ್ನು ಮುಂದಿರಿಸಿಕೊಂಡು ಬಂಡಾಯದ ಬೆದರಿಕೆ ಹಾಕತೊಡಗಿದ್ದರು ಪಾಸ್ವಾನ್. ತನ್ನ ಬಳಿ ಪರಿಶಿಷ್ಟ ಜಾತಿ- ಪಂಗಡಗಳ 40 ಮಂದಿ ಲೋಕಸಭಾ ಸದಸ್ಯರಿದ್ದರೂ ದಲಿತ ನಾಯಕತ್ವ ಬಿಜೆಪಿಯಲ್ಲಿ ಇಲ್ಲ. ಈ ನಲವತ್ತು ಮಂದಿ ಕೂಡ ಪರೋಕ್ಷವಾಗಿ- ಪ್ರತ್ಯಕ್ಷವಾಗಿ ದಲಿತ ಹಿತದ ವಿಷಯಗಳನ್ನು ಎತ್ತಲು ಪಾಸ್ವಾನ್ ಸುತ್ತಲೇ ಗಿರಕಿ ಹೊಡೆದದ್ದು ಹೌದು.

 ಈ ಅವಕಾಶವನ್ನು ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲೆ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತಂದು ಲೋಕಸಭಾ ಚುನಾವಣೆಗೆ ಮುನ್ನ ಪಾಸ್ವಾನ್ ಅವರನ್ನೂ, ತನ್ನ ದಲಿತ ಸಂಸದರ ಆಗ್ರಹವನ್ನು ಬಿಜೆಪಿ ಗಣನೀಯ ಪ್ರಮಾಣದಲ್ಲಿ ತಣಿಸಿದೆ.

ಪ್ರಧಾನಮಂತ್ರಿಯೇ ನವೀನ್ ಪಟ್ನಾಯಕ್ ಮತ್ತು ಕೆ.ಚಂದ್ರಶೇಖರ ರಾವ್ ಬೆಂಬಲ ಕೇಳಿ ದೂರವಾಣಿ ಕರೆ ಮಾಡಬಹುದಾದರೆ ಕೇಜ್ರಿವಾಲ್ ಜೊತೆ ಮಾತಾಡಲು ರಾಹುಲ್ ಗಾಂಧಿಗೆ ಯಾವ ಪ್ರತಿಷ್ಠೆ ಅಡ್ಡ ಬಂತು? ತೆಲಂಗಾಣದಲ್ಲಿ ಬಿಜೆಪಿ ಮತ್ತು ಚಂದ್ರಶೇಖರ ರಾವ್ ರಾಜಕೀಯವಾಗಿ ಬದ್ಧ ವೈರಿಗಳಲ್ಲದೆ ಇರಬಹುದು. ಆದರೆ ಒಡಿಶಾದಲ್ಲಿ ಬಿಜೆಪಿ ಮತ್ತು ನವೀನ್ ಪಟ್ನಾಯಕ್ ಅವರ ಬಿಜೆಡಿ ಕಡು ಪ್ರತಿಸ್ಪರ್ಧಿಗಳು. ಆದರೂ ಮೋದಿ- ಶಾ ಜೋಡಿ ಪಟ್ನಾಯಕ್ ಜೊತೆ ಮಾತಾಡಲಿಲ್ಲವೇ?

 ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ತಾನು ಗಳಿಸಿದ ಸಮೃದ್ಧ ಜನಬೆಂಬಲ ಈಗಲೂ ಸೊರಗಿಲ್ಲ. ಒಡಿಶಾದಲ್ಲಿ ನಮಗೆ ಮಿತ್ರಪಕ್ಷದ ಅಗತ್ಯ ಇಲ್ಲವೇ ಇಲ್ಲ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಹೂಡಿದ ಅಭ್ಯರ್ಥಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಸೇರಿರಲಿಲ್ಲ ಎಂಬುದು ನಮ್ಮ ರಾಜಕೀಯ ನೀತಿ ನಿಲುವಿಗೆ ಪೂರಕ. 

ಹೀಗಾಗಿ ಬೆಂಬಲಿಸಿದೆವು. ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ತತ್ವ, ನೀತಿ ಹಾಗೂ ಅಂದಂದಿನ ಸನ್ನಿವೇಶ ನೋಡಿಕೊಂಡು ಹೆಜ್ಜೆ ಇಡುತ್ತೇವೆ ಎಂಬುದು ಬಿಜು ಜನತಾದಳದ ವಿವರಣೆ.

 ವಿರೋಧ ಪಕ್ಷದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಬಲಿಸುವಂತೆ ಎನ್.ಸಿ.ಪಿ.ಯ ಶರದ್ ಪವಾರ್ ಅವರು ನವೀನ್ ಪಟ್ನಾಯಕ್ ಅವರನ್ನು ಸಂಪರ್ಕಿಸಿರುವುದು ಹೌದು. ಆದರೆ ಅವರಿಗಿಂತ ಮೊದಲು ಮಾತಾಡಿದ್ದ ನಿತೀಶ್ ಕುಮಾರ್ ಅವರಿಗೆ ಪಟ್ನಾಯಕ್ ಮಾತು ಕೊಟ್ಟು ಆಗಿತ್ತು. ಎನ್.ಸಿ.ಪಿ. ಅಭ್ಯರ್ಥಿಯಾಗಿ ವಂದನಾ ಚವಾಣ್ ಅವರನ್ನು ಕಣಕ್ಕಿಳಿಸುವ ಆಲೋಚನೆಯ ಹಂತದಲ್ಲೇ ಪಟ್ನಾಯಕ್ ಅವರನ್ನು ಸಂಪರ್ಕಿಸಬಹುದಿತ್ತು.

ವಂದನಾ ಕಣದಲ್ಲಿ ಉಳಿಯುವಂತಿದ್ದರೆ ಶಿವಸೇನೆಯ ಬೆಂಬಲ ಕೂಡ ಕೈಗೆಟುಕುತ್ತಿತ್ತು. ಈ ಹಿಂದೆ ಕಾಂಗ್ರೆಸ್ಸಿನ ಪ್ರತಿಭಾ ಪಾಟೀಲರನ್ನು ಮಹಾರಾಷ್ಟ್ರದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲಿಸಿತ್ತು ಶಿವಸೇನೆ. ಹಾಗೆಯೇ 2017ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಬದಲಿಗೆ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಬಿಜು ಜನತಾದಳ ಬೆಂಬಲಿಸಿತ್ತು.

 ಚುನಾವಣೆಯ ಕೆಲ ದಿನಗಳ ಹಿಂದೆಯಷ್ಟೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನಡೆದ ಚುನಾವಣೆಯಲ್ಲಿ ಹರಿವಂಶ್ ಅವರನ್ನು ತೆಲುಗುದೇಶಂ ಪಾರ್ಟಿಯ ಸಿ.ಎಂ. ರಮೇಶ್ ಸೋಲಿಸಿದ್ದರು. ಅವರನ್ನೇ ವಿರೋಧಪಕ್ಷಗಳ ಅಭ್ಯರ್ಥಿಯನ್ನಾಗಿ ಹೂಡಬಹುದಿತ್ತು ಎಂಬ ಸಲಹೆ ಕಾಂಗ್ರೆಸ್‌ಗೆ ಹಿಡಿಸಲಿಲ್ಲ. ಕೇಜ್ರಿವಾಲ್, ಚಂದ್ರಶೇಖರ ರಾವ್ ಹಾಗೂ ನವೀನ್ ಪಟ್ನಾಯಕ್ ಜೊತೆ ಮಾತಾಡಬೇಕೆಂಬ ಸಲಹೆಯನ್ನು ಮಮತಾ ಬ್ಯಾನರ್ಜಿ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.

ಆಮ್ ಆದ್ಮಿ ಪಾರ್ಟಿಯು ತನ್ನ ಪಾಲಿಗೆ ಬಿಜೆಪಿಗಿಂತ ದೊಡ್ಡ ರಾಜಕೀಯ ಶತ್ರುವೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿಕೊಳ್ಳಬೇಕು. ಬಿಜೆಪಿ ತಲೆಯಾಳುಗಳಾದ ಧರ್ಮೇಂದ್ರ ಪ್ರಧಾನ್ ಮತ್ತು ಪೀಯೂಷ್ ಗೋಯಲ್ ಅವರು ಕೇಜ್ರಿವಾಲ್ ಜೊತೆ ಮಾತಾಡಿ ಬೆಂಬಲ ಕೋರುತ್ತಾರೆ. ನಿತೀಶ್ ಕುಮಾರ್ ಕೂಡ ಮತ ನೀಡುವಂತೆ ವಿನಂತಿಸುತ್ತಾರೆ. ಆದರೆ ರಾಹುಲ್ ಗಾಂಧಿ ಮಾತಾಡುವುದಿಲ್ಲ. ಅಂದಹಾಗೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಆಮ್
ಆದ್ಮಿ ಪಾರ್ಟಿ ವಿರೋಧಪಕ್ಷಗಳೊಂದಿಗೆ ಮತ ಚಲಾಯಿಸಿತ್ತು.

ಮಾತಾಡಿಸಿದರೆ ಮತ ನೀಡಲು ಸಿದ್ಧವೆಂದ ಕೇಜ್ರಿವಾಲ್ ಮತ್ತು ಬಿಜೆಪಿಯಿಂದ ‘ಬೆನ್ನಿಗೆ ಚೂರಿ ಹಾಕಿಸಿಕೊಂಡ’ ಪಿ.ಡಿ.ಪಿ.ಯ ಮೆಹಬೂಬಾ ಮುಫ್ತಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸಿದ್ಧರಿದ್ದರು. ಅವರನ್ನು ಬಿಜೆಪಿಯ ರಾಮಮಾಧವ್ ಎನ್.ಡಿ.ಎ. ಪರ ಮನ ಒಲಿಸಿಕೊಂಡರು.

ವಿರೋಧ ಪಕ್ಷಗಳ ಏಕತೆ ಇನ್ನೂ ದೂರದ ದಾರಿಯೇ ಹೌದು. ರಾಜ್ಯಗಳಲ್ಲಿ ಪರಸ್ಪರ ಕಡು ಹಗೆಗಳಾಗಿರುವ ಹಲವು ಪಕ್ಷಗಳು ಇನ್ನೂ ನಿಚ್ಚಳ ರೂಪು ತಳೆಯದಿರುವ ‘ಮಹಾಮೈತ್ರಿ’ಯ ಭಾಗವಾಗಿವೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ, ಬಂಗಾಳದಲ್ಲಿ ತೃಣಮೂಲ ಮತ್ತು ಎಡರಂಗ, ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡರಂಗ, ಆಂಧ್ರದಲ್ಲಿ ತೆಲುಗುದೇಶಂ ಪಾರ್ಟಿ ಮತ್ತು ಕಾಂಗ್ರೆಸ್, ದೆಹಲಿ ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯ ರಾಜಕೀಯ ಮುಖಾಮುಖಿಯನ್ನು ಅಲ್ಲಗಳೆಯಲು ಬರುವುದಿಲ್ಲ.

ಮಿತ್ರಪಕ್ಷಗಳ ಕಾಲುತುಳಿಯತೊಡಗಿದ್ದ ಮೋದಿ- ಶಾ ಕಾರುಬಾರಿನಲ್ಲಿ ಬಹಳ ಕಾಲದ ನಂತರ ಎನ್.ಡಿ.ಎ. ಹೆಸರು ಪುನಃ ಚಾಲ್ತಿಗೆ ಬಂದಿದೆ. ತನ್ನನ್ನು ಬಿಟ್ಟರೆ ಇನ್ನಿಲ್ಲ ಎನ್ನತೊಡಗಿದ್ದ ಬಿಜೆಪಿ ಚುನಾವಣೆಯ ಹೊಸ್ತಿಲಲ್ಲಿ ಜಾಣತನದ ರಾಜಕಾರಣ ಆರಂಭಿಸಿದೆ. ಬಂಡಾಯದ ಬೆದರಿಕೆ ಹಾಕುತ್ತಲೇ ಬಂದಿರುವ ಬಿಜೆಪಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಅಕಾಲಿದಳವನ್ನೂ ಈ ಫಲಿತಾಂಶ ಸದ್ಯಕ್ಕಾದರೂ ತಣ್ಣಗೆ ಮಾಡಿದ್ದರೆ ಆಶ್ಚರ್ಯವಿಲ್ಲ.

ಕೈಯಲ್ಲಿದ್ದ ಅವಕಾಶಗಳನ್ನು ಯುಪಿಎ ಕಳೆದುಕೊಂಡ ಸಣ್ಣ ಕತೆಯಿದು. 2019ರ ದೊಡ್ಡ ಕಾಳಗದಲ್ಲೂ ಇದೇ ಕಳಪೆ ನಿರೂಪಣೆ ಮುಂದುವರೆಯುವುದಿಲ್ಲ ಎಂದು ಹೇಗೆ ಹೇಳಲು ಬಂದೀತು?

ಬರಹ ಇಷ್ಟವಾಯಿತೆ?

 • 31

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !