ಸದ್ಯಕ್ಕೆ ಮುಗಿಯದು ಮೋದಿ-ಕೇಜ್ರಿವಾಲ್‌ ಜಿದ್ದಾಜಿದ್ದಿ

7
2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆಯೇ ಆಮ್‌ ಆದ್ಮಿ ಪಾರ್ಟಿ?

ಸದ್ಯಕ್ಕೆ ಮುಗಿಯದು ಮೋದಿ-ಕೇಜ್ರಿವಾಲ್‌ ಜಿದ್ದಾಜಿದ್ದಿ

ಡಿ.ಉಮಾಪತಿ
Published:
Updated:

ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡೀತು. 2015ರಲ್ಲಿ ಪ್ರಚಂಡ ಬಹುಮತ ಗಳಿಸಿದ ಅರವಿಂದ ಕೇಜ್ರಿವಾಲ್‌ ಮತ್ತು ಸಂಗಾತಿಗಳ ಚುನಾವಣಾ ಯಶಸ್ಸಿನ ಕುರಿತ ಕುತೂಹಲ ದಶದಿಕ್ಕುಗಳಿಗೆ ಹಬ್ಬಿತ್ತು. ‘ಈ ಪಕ್ಷದ ಜನಪ್ರಿಯತೆಯು ದೆಹಲಿಯ ಗಡಿಗಳನ್ನು ದಾಟಿ ದೇಶದ ಉದ್ದಗಲಕ್ಕೆ ಹಬ್ಬಿದರೆ ಗತಿಯೇನು’ ಎಂದು ಮೋದಿ- ಅಮಿತ್ ಶಾ ಜೋಡಿ ಕೂಡ ಚಿಂತಾಕ್ರಾಂತವಾಗಿದ್ದ ದಿನಗಳೂ ಇದ್ದವು. ಕೇಜ್ರಿವಾಲ್‌ ಪಾರ್ಟಿಯ ರೆಕ್ಕೆ ಪುಕ್ಕಗಳನ್ನು ಮೋದಿ ನೇತೃತ್ವದ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ.

‘ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್‌’ ಎಂದು ಮತ ಚಲಾಯಿಸಿದ್ದ ಮೇಲ್ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ದಿಲ್ಲಿಗರ ಪೈಕಿ ಬಹುತೇಕರು ಇದೀಗ ಈ ಪಕ್ಷದಿಂದ ದೂರವಾಗಿದ್ದಾರೆ. ತಮ್ಮ ತೆರಿಗೆ ಹಣವನ್ನೆಲ್ಲ ಬಡವರ್ಗಗಳಿಗೆ ಧಾರೆ ಎರೆಯಲಾಗುತ್ತಿದೆ ಎಂಬುದು ಈ ವರ್ಗಗಳ ಸಿಟ್ಟು. ಈ ಬೆಳವಣಿಗೆಯ ಕಾರಣ ಮೋದಿಯವರ ಚಿಂತೆ ಬಹಳಷ್ಟು ನಿವಾರಣೆಯಾಗಿದೆ. ಆಮ್ ಆದ್ಮಿ ಪಾರ್ಟಿ ಕುರಿತು  ಆರಂಭದಲ್ಲಿ ಅವರನ್ನು ಕಾಡಿದ್ದ ಗಾಢ ಅಭದ್ರತೆ ಈಗ ಇಲ್ಲ. ಆದರೂ ತಮ್ಮ ಮುಂದೆ ಎದೆ ಸೆಟೆಸಿ ಮುಖಕ್ಕೆ ರಾಚುವಂತೆ ಮಾತಾಡುವ ಕೇಜ್ರಿವಾಲ್‌ ಕಂಡರೆ ಮೋದಿಯವರಿಗೆ ಆಗಿ ಬರುವುದಿಲ್ಲ. ಚಳವಳಿಯಿಂದ ನೇರವಾಗಿ ಚುನಾವಣಾ ರಾಜಕಾರಣಕ್ಕೆ ಧುಮುಕಿ ಮುಖ್ಯಮಂತ್ರಿಯೇ ಆಗಿ ಹೋದ ಈ ಅಸಾಂಪ್ರದಾಯಿಕ ತಲೆಯಾಳನ್ನು ಪಳಗಿಸುವ ಪ್ರಧಾನಿ ಪ್ರಯತ್ನ ಫಲ ನೀಡಿಲ್ಲ.

ಆಮ್ ಆದ್ಮಿ ಪಾರ್ಟಿ ದೆಹಲಿಯ ಕೆಳವರ್ಗ ಮತ್ತು ಬಡ ವರ್ಗಗಳ ಜನರ ನಡುವೆ ಈಗಲೂ ಜನಪ್ರಿಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಮಾಡಿರುವ ಸಾಧನೆ ಈ ಜನವರ್ಗಗಳ ಮನೆ– ಮನ ತಲುಪಿದೆ. ದೆಹಲಿ ಮತದಾರರ ಪೈಕಿ ಈ ವರ್ಗಗಳ ಪ್ರಮಾಣ ಶೇ 60ರಷ್ಟು ಎಂಬುದು ಗಮನಿಸಲೇಬೇಕಾದ ವಾಸ್ತವ.

ಕೇಂದ್ರ ಸರ್ಕಾರದ ಪ್ರತಿನಿಧಿ ಲೆಫ್ಟಿನಂಟ್‌ ಗವರ್ನರ್‌ ತನ್ನ ಜನಪರ ಕೆಲಸ ಕಾರ್ಯಗಳಿಗೆ ಹೆಜ್ಜೆ ಹೆಜ್ಜೆಗೆ ಅಡಚಣೆ ಒಡ್ಡುತ್ತಿದ್ದರು ಎಂಬುದು ಆಮ್ ಆದ್ಮಿ ಪಾರ್ಟಿಯ ಆಕ್ರೋಶವಾಗಿತ್ತು. ಕೆಳಮಧ್ಯಮವರ್ಗ ಮತ್ತು ಕೆಳವರ್ಗಗಳ ಮತದಾರರಿಗೂ ಈ ಭಾವನೆಯನ್ನು ಆಮ್ ಆದ್ಮಿ ಪಾರ್ಟಿ ಯಶಸ್ವಿಯಾಗಿ ದಾಟಿಸಿತ್ತು. ಇತ್ತೀಚೆಗೆ ಹೊರಬಿದ್ದ ಸುಪ್ರೀಂ ಕೋರ್ಟ್ ತೀರ್ಪು ಈ ಗ್ರಹಿಕೆಯನ್ನು ಇನ್ನಷ್ಟು ಗಟ್ಟಿ ಮಾಡಿದೆ. ಅರ್ಥಾತ್ ಕೇಜ್ರಿವಾಲ್‌ ನೇತೃತ್ವದ ಸರ್ಕಾರವನ್ನು 2020ರ ವಿಧಾನಸಭೆ ಚುನಾವಣೆಯಲ್ಲೂ ಚಿತ್ತು ಮಾಡುವುದು ಸುಲಭ ಅಲ್ಲ. ಮೋದಿ ಬ್ರಹ್ಮಾಸ್ತ್ರವು ‘ಆಪ್’ ಗುಬ್ಬಚ್ಚಿಗೆ ಇನ್ನಷ್ಟು ಶಕ್ತಿ ತುಂಬಿದೆ. ಸಂವಿಧಾನದ 230ನೆಯ ಕಲಮಿನ ಪ್ರಕಾರ  ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ಆಡಳಿತಾತ್ಮಕ ಮುಖ್ಯಸ್ಥರು ಲೆಫ್ಟಿನಂಟ್‌ ಗವರ್ನರ್‌ ಎಂದು ದೆಹಲಿ ಹೈಕೋರ್ಟ್ 2016ರ ಆಗಸ್ಟ್ ತಿಂಗಳಲ್ಲಿ ಸಾರಿತ್ತು. ಈ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್ ತಿರುವು ಮುರುವು ಮಾಡಿದೆ.

ಜನತಾಂತ್ರಿಕ ಸಂಸ್ಥೆಗಳನ್ನು ಬುಡಮೇಲು ಮಾಡುವ ಸಣ್ಣತನದ ರಾಜಕೀಯದಲ್ಲಿ ತೊಡಗಿದೆ ಕೇಂದ್ರ ಸರ್ಕಾರ. ದೆಹಲಿ ರಾಷ್ಟ್ರ ರಾಜಧಾನಿಯಾದ ಪ್ರಯುಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಅಧಿಕಾರಗಳ ಹಂಚಿಕೆಯಲ್ಲಿ ಅಷ್ಟಿಷ್ಟು ಗೊಂದಲ ಉಳಿದಿರುವುದು ಹೌದು. ಆದರೆ ಈ ಗೊಂದಲಗಳನ್ನೇ ಬಂಡವಾಳ ಮಾಡಿಕೊಂಡು ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರವನ್ನು ತುಳಿಯುವುದು ಅನ್ಯಾಯ. ಲೆಫ್ಟಿನಂಟ್‌ ಗವರ್ನರ್‌ ಅಂತೂ ಹಳೆಯ ಬ್ರಿಟಿಷ್ ಸರ್ಕಾರದ ಸರ್ವಾಧಿಕಾರಿ ಪ್ರತಿನಿಧಿಯಂತೆ ವರ್ತಿಸಿದ್ದಾರೆ. ದೆಹಲಿಯ ಜನ ಭಾರಿ ಬಹುಮತದಿಂದ (ಒಟ್ಟು 70 ಸ್ಥಾನಗಳಲ್ಲಿ ಆಪ್ ಗೆದ್ದದ್ದು 67) ಗೆಲ್ಲಿಸಿದ ಆಮ್ ಆದ್ಮಿ ಪಾರ್ಟಿ ಸರ್ಕಾರದ ಉಸಿರು ಕಟ್ಟಿಸಿದ್ದಾರೆ. ಚುನಾವಣಾ ಆಯೋಗ ಕೂಡ ಆಳುವ ಪಕ್ಷದ ಮರ್ಜಿಯನ್ನು ಅನುಸರಿಸಿ, ‘ಆಪ್’ನ 20 ಮಂದಿ ಶಾಸಕರನ್ನು ಅನರ್ಹಗೊಳಿಸಿತ್ತು. ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸದೆ ಹೋಗಿದ್ದರೆ ಈ ಅನ್ಯಾಯ ಮುಂದುವರೆಯುತ್ತಿತ್ತು. ಕೇಜ್ರಿವಾಲ್‌ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಆಳದ ಒಳಸಂಚು ಹೀಗೆ ನ್ಯಾಯಾಲಯದ ಕಾರಣ ಹಿಮ್ಮೆಟ್ಟಿತ್ತು. ಕೇಜ್ರಿವಾಲ್‌ ಪಕ್ಷದ ಎಲ್ಲ ಶಾಸಕರೂ ಅಮಾಯಕರೆಂದು ಯಾರೂ ಹೇಳುವುದಿಲ್ಲ. ಆದರೆ ಸಿಬಿಐ ಮತ್ತು ದೆಹಲಿ ಪೊಲೀಸರು (ಎರಡೂ ಕೇಂದ್ರ ಸರ್ಕಾರದ ಅಧೀನದಲ್ಲಿವೆ) ಸಾರಾಸಗಟಾಗಿ ಆಪ್ ಶಾಸಕರ ಹಿಂದೆ ಬಿದ್ದು ಕಾಡತೊಡಗಿರುವ ಪರಿ ಗುಮಾನಿ ಹುಟ್ಟಿಸುವಂತಹುದು. ಕಡೆಗೆ ದೆಹಲಿ ಸರ್ಕಾರದ ಆಡಳಿತಶಾಹಿಯನ್ನು ಕೂಡ ರಾಜಕೀಯಗೊಳಿಸಿ ಎತ್ತಿಕಟ್ಟಲಾಗಿದೆ. ಬಿಕ್ಕಟ್ಟನ್ನು ಬೇಕೆಂದೇ ಬಿಗಡಾಯಿಸಿದ್ದೂ ವಾಸ್ತವ. ದೆಹಲಿ ಸರ್ಕಾರದ ಅಧಿಕಾರಿಗಳನ್ನು ಯಾವ ಹುದ್ದೆಗಳಿಗೆ ನೇಮಕ ಮಾಡಬೇಕು ಮತ್ತು ವರ್ಗ ಮಾಡಬೇಕು ಎಂಬ ಅಧಿಕಾರವನ್ನು ಕೂಡ ಮೋದಿ ನೇತೃತ್ವದ ಸರ್ಕಾರ ಕೇಜ್ರಿವಾಲ್‌ ಕೈಯಿಂದ ಕಸಿದುಕೊಂಡಿತು. ಆಪ್ ಅಧಿಕಾರಕ್ಕೆ ಬರುವ ಮುನ್ನ ಈ ಅಧಿಕಾರ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿ ಇತ್ತು. ಈ ಅಧಿಕಾರವನ್ನು ಕಬಳಿಸಲು 2015ರಲ್ಲಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಆಪ್ ಸಲ್ಲಿಸಿರುವ ಅಹವಾಲು ಈಗಲೂ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ. ಅದು ಇತ್ಯರ್ಥ ಆಗುವ ತನಕ ಅಧಿಕಾರಿಗಳ ನಿಯುಕ್ತಿ ಮತ್ತು ವರ್ಗಾವಣೆಯ ಅಧಿಕಾರ ಲೆಫ್ಟಿನಂಟ್‌ ಗವರ್ನರ್‌ ಅವರದೇ ವಿನಾ ಮುಖ್ಯಮಂತ್ರಿಯದಲ್ಲ. ಮೊನ್ನೆಯ ತೀರ್ಪಿನಲ್ಲಿ ಈ ವಿಷಯ ಕುರಿತು ನಿಚ್ಚಳವಾಗಿ ಏನನ್ನೂ ಹೇಳಲಾಗಿಲ್ಲ ಎಂಬುದು ಕೇಂದ್ರ ಸರ್ಕಾರದ ವಾದ.

ನಿಜವಾದ ರಾಜ್ಯಾಧಿಕಾರ ಜನರೇ ಆರಿಸಿದ ಸರ್ಕಾರದ ಮಂತ್ರಿಮಂಡಲದ್ದೇ ವಿನಾ ಅದರ ಹಕ್ಕುದಾರರು ಲೆಫ್ಟಿನಂಟ್‌ ಗವರ್ನರ್‌ ಅಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಾರಿದೆ. ಜಗಳಕ್ಕೆ ಬಿದ್ದಿರುವ ಆಪ್ ಮತ್ತು ಬಿಜೆಪಿ ಈ ತೀರ್ಪನ್ನು ತಮಗೆ ದೊರೆತ ಗೆಲುವೆಂದೇ ಭಾವಿಸಿ ಬೀಗತೊಡಗಿವೆ. ವಾಸ್ತವವಾಗಿ ಜನತಂತ್ರಕ್ಕೆ ದೊರೆತ ಗೆಲುವಿದು.

ಅರಾಜಕತೆಗಾಗಲೀ ಅಥವಾ ತನಗೆ ಭಾರಿ ಬಹುಮತ ಬಂದಿದೆ ಎಂಬ ಕಾರಣಕ್ಕೆ ತಾನು ತುಳಿದದ್ದೇ ಹೆದ್ದಾರಿ ಎಂಬ ಮೂಲಭೂತವಾದಕ್ಕಾಗಲೀ ಜನತಂತ್ರದಲ್ಲಿ ಅವಕಾಶ ಇಲ್ಲ ಎಂಬ ತೀರ್ಪಿನ ಅಂಶ ಮೋದಿ ಮತ್ತು ಕೇಜ್ರಿವಾಲ್‌ ಇಬ್ಬರಿಗೂ ಅನ್ವಯ ಆಗಬಲ್ಲದು.

ಭಿನ್ನಾಭಿಪ್ರಾಯ ತಲೆದೋರಿದ ಸಂದರ್ಭಗಳಲ್ಲಿಲೆಫ್ಟಿನಂಟ್‌ ಗವರ್ನರ್‌ ಮತ್ತು ದೆಹಲಿ ಸರ್ಕಾರವು ಸಾಂವಿಧಾನಿಕ ನೈತಿಕತೆ ಮತ್ತು ಪರಸ್ಪರರಲ್ಲಿ ವಿಶ್ವಾಸ ಇರಿಸಿ ನಡೆದುಕೊಳ್ಳಬೇಕು. ಲೆಫ್ಟಿನಂಟ್‌ ಗವರ್ನರ್‌ ಹಿಂದೆ ಮುಂದೆ ಆಲೋಚಿಸದೆ ತಮ್ಮ ಮುಂದೆ ಬಂದ ದೆಹಲಿ ಸರ್ಕಾರದ ಎಲ್ಲ ನಿರ್ಧಾರಗಳನ್ನೂ ರಾಷ್ಟ್ರಪತಿಯವರ ಪರಿಶೀಲನೆಗೆ ಹೊತ್ತು ಹಾಕಕೂಡದು. ದೆಹಲಿ ಸರ್ಕಾರ ತಾನು ಚೆನ್ನಾಗಿ ಸಮಾಲೋಚಿಸಿ ಕೈಗೊಂಡ ನಿರ್ಧಾರಗಳನ್ನು ಲೆಫ್ಟಿನಂಟ್‌ ಗವರ್ನರ್‌ ಅವರಿಗೆ ತಿಳಿಸಿದರೆ ಸಾಕು. ದೈನಂದಿನ ಆಡಳಿತದ ಎಲ್ಲ ವಿಷಯಗಳಿಗೂ ಅವರ ಒಪ್ಪಿಗೆ ಪಡೆಯುವ ಅಗತ್ಯ ಇಲ್ಲ. ಸಂವಿಧಾನ ಕುರಿತ ಸಾಮೂಹಿಕ ಹೊಣೆಗಾರಿಕೆಯ ಭಾವವು ನಾಟಕೀಯತೆಯಲ್ಲಿ ಕಳೆದುಹೋಗಕೂಡದು ಎಂದು  ನ್ಯಾಯಾಲಯ ಇಬ್ಬರು ನಾಯಕರಿಗೂ ತಪರಾಕಿ ಹಾಕಿದೆ.

ಲೆಫ್ಟಿನಂಟ್‌ ಗವರ್ನರ್‌ ಪಾತ್ರವು ಚುನಾಯಿತ ಸರ್ಕಾರಕ್ಕೆ ಅಡ್ಡಿ ಆತಂಕಗಳನ್ನು ಒಡ್ಡುವುದಲ್ಲ. ಅವರು ಮಂತ್ರಿ ಮಂಡಲದ ಸಲಹೆ ಪಡೆದು ಮುಂದುವರೆಯಬೇಕೇ ವಿನಾ ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ಮಂತ್ರಿಮಂಡಲ ತನ್ನ ನಿರ್ಧಾರಗಳನ್ನು ಲೆಫ್ಟಿನಂಟ್‌ ಗವರ್ನರ್‌ಗೆ ತಿಳಿಯಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಆರೋಗ್ಯಕರ ಸಂಬಂಧ ಹೊಂದಬೇಕು. ಸಾಮರಸ್ಯದಿಂದ ನಡೆದುಕೊಳ್ಳಬೇಕು. ಲೆಫ್ಟಿನಂಟ್‌ ಗವರ್ನರ್‌ ಸ್ವತಂತ್ರರಲ್ಲ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಗಳು ಅವರಿಗೆ ಇಲ್ಲ. ರಾಜ್ಯ ಸರ್ಕಾರದ ಕೆಲಸ ಕಾರ್ಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಸಲ್ಲದು. ಮತ ನೀಡಿ ಸರ್ಕಾರ ಚುನಾಯಿಸಿದ ಜನಾದೇಶದ ಉದ್ದೇಶವನ್ನು ವಿಫಲಗೊಳಿಸುವುದು ಸರಿಯಲ್ಲ. ದೆಹಲಿ ಪೂರ್ಣ ಪ್ರಮಾಣದ ರಾಜ್ಯವಲ್ಲ. ಜಮೀನು, ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಮೂರು ವಿಷಯಗಳ ವಿನಾ ಉಳಿದೆಲ್ಲ ಸಂಗತಿಗಳ ಕುರಿತು ಕಾನೂನು ರೂಪಿಸಬಲ್ಲ ಅಧಿಕಾರ ರಾಜ್ಯ ಸರ್ಕಾರಕ್ಕೆ ಉಂಟು. ಉಳಿದಂತೆ ಕೇಂದ್ರ ಸರ್ಕಾರ ರೂಪಿಸುವ ಕಾಯ್ದೆ ಕಾನೂನುಗಳನ್ನು ರಾಜ್ಯ ಸರ್ಕಾರ ಪಾಲಿಸಲೇಬೇಕು ಎಂದಿದೆ.

ದೆಹಲಿಗೆ ಪೂರ್ಣರಾಜ್ಯದ ಸ್ಥಾನಮಾನದ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಮನ್ನಿಸಿಲ್ಲ. ಹಾಗೆಂದಾಕ್ಷಣ ಆಪ್ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಈ ಸಂಬಂಧ ಇತ್ತೀಚೆಗೆ ದೆಹಲಿಯಲ್ಲಿ ಭಾರಿ ರ‍್ಯಾಲಿಯನ್ನು ಸಂಘಟಿಸಿತ್ತು. 2019ರ ಲೋಕಸಭಾ ಚುನಾವಣೆಗಳು ಮತ್ತು 2020ರ ವಿಧಾನಸಭಾ ಚುನಾವಣೆಗಳಲ್ಲಿ ಪೂರ್ಣರಾಜ್ಯದ ಬೇಡಿಕೆಯನ್ನೇ ಚುನಾವಣಾ ವಿಷಯ ಮಾಡುವುದು ನಿಶ್ಚಿತ.

ಪ್ರಸ್ತುತ ದೆಹಲಿ ಒಂಬತ್ತು ಬೇರೆ ಬೇರೆ ಏಜೆನ್ಸಿಗಳ ಆಡಳಿತಕ್ಕೆ ಒಳಪಟ್ಟಿದೆ. ದೆಹಲಿಯ ಮತದಾರರು ಆರಿಸಿದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಲೆಫ್ಟಿನಂಟ್‌ ಗವರ್ನರ್‌, ಲೆಫ್ಟಿನಂಟ್‌ ಗವರ್ನರ್‌ ಅಧೀನದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸರ್ಕಾರದ ಅಧೀನದ ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ಎಸ್.ಡಿ.ಎಂ.ಸಿ.) ಆಳುತ್ತಿವೆ. ದೆಹಲಿಯ ಎಲ್ಲ ಜಮೀನಿನ ಮೇಲೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ್ದೇ ಅಧಿಕಾರ. ದೆಹಲಿ ಪೊಲೀಸ್ ಮತ್ತು ಎಲ್ಲ ಸರ್ಕಾರಿ ಸಿಬ್ಬಂದಿ ಕೂಡ ನೇರ ಕೇಂದ್ರ ಗೃಹಸಚಿವಾಲಯಕ್ಕೆ ಅಧೀನ. ದೆಹಲಿ ದಂಡುಪ್ರದೇಶದ ಮೇಲೆ ಕೇಂದ್ರ ರಕ್ಷಣಾ ಸಚಿವಾಲಯದ್ದೇ ಪಾರುಪತ್ಯ. ಇನ್ನು ಪೌರವ್ಯವಹಾರಗಳು ಮುನಿಸಿಪಲ್ ಕಾರ್ಪೊರೇಷನ್‌ಗಳ ನಿಯಂತ್ರಣದಲ್ಲಿವೆ. ಪರಿಣಾಮವಾಗಿ ದೆಹಲಿ ಆಡಳಿತವು ಗೊಂದಲ- ಅಸಹಕಾರ- ಅಹಮಿಕೆಯ ಮೇಲಾಟಗಳಿಗೆ ಬಲಿಪಶು ಆಗತೊಡಗಿದೆ.

ಆಪ್  ಪ್ರಕಾರ ರಾಷ್ಟ್ರೀಯ ರಾಜಧಾನಿ ದೆಹಲಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ರಾಷ್ಟ್ರಪತಿ, ಪ್ರಧಾನಿ ಹಾಗೂ ಮಂತ್ರಿಗಳ ಕಚೇರಿಗಳು- ನಿವಾಸಗಳು, ಸಂಸತ್ತು, ಸಂಸದರ ನಿವಾಸಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಸೇನಾ ಮುಖ್ಯಸ್ಥರ ನಿವಾಸಗಳು, ನಾನಾ ದೇಶಗಳ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿರುವ ಸೂಕ್ಷ್ಮಸ್ವರೂಪದ ಲುಟ್ಯನ್ಸ್ ದೆಹಲಿಯ ಆಡಳಿತ ಇದೀಗ ನವದೆಹಲಿ ಮುನಿಸಿಪಲ್ ನಿಗಮದಡಿ ನಡೆದಿದೆ. ಈ ಪ್ರದೇಶವನ್ನು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ತರಬೇಕು. ಉಳಿದ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು. ಈ ಸಂಬಂಧ 2003ರ ಆಗಸ್ಟ್ 18ರಂದು ಅಂದಿನ ಉಪಪ್ರಧಾನಮಂತ್ರಿ ಮತ್ತು ಗೃಹಮಂತ್ರಿಯಾಗಿದ್ದ ಎಲ್.ಕೆ. ಅಡ್ವಾಣಿ ಅವರು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದರು. ಒಳಾಡಳಿತ ವ್ಯವಹಾರಗಳ ಕುರಿತ ಪ್ರಣವ್‌ ಮುಖರ್ಜಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯೂ ಈ ಮಸೂದೆಗೆ ತನ್ನ ಸಂಪೂರ್ಣ ಸಮ್ಮತಿಯನ್ನು ನೀಡಿತ್ತು. ಈ ಮಸೂದೆಯೇ ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡುವ ದಿಸೆಯಲ್ಲಿ ದಾರಿದೀಪ ಆಗಬೇಕು ಎಂದು ಆಪ್ ವಿಧಾನಸಭೆಯಲ್ಲಿ ಕೈಗೊಂಡ ಗೊತ್ತುವಳಿಯಲ್ಲಿ ಹೇಳಲಾಗಿದೆ.

ಕೇಜ್ರಿವಾಲ್‌ ನೇತೃತ್ವದ ಸರ್ಕಾರದ ನಿರ್ಧಾರಗಳಿಗೆ ಲೆಫ್ಟಿನಂಟ್‌ ಗವರ್ನರ್‌ ಈಗಲೂ ತಡೆ ಒಡ್ಡಬಹುದು. ‘ಸರ್ಕಾರದ ನಿರ್ಧಾರಗಳನ್ನು ಯಾಂತ್ರಿಕವಾಗಿ ತಡೆದು ರಾಷ್ಟ್ರಪತಿಯವರ ಪರಿಶೀಲನೆಗೆ ಕಳಿಸುವುದು ಸಲ್ಲದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆಯೇ ವಿನಾ‘ತಡೆಯಲೇಬಾರದು’ ಎಂದು ಹೇಳಿಲ್ಲ. ತಡೆಯಬಹುದಾದ ಅಥವಾ ತಡೆಯಬಾರದ ವಿಷಯಗಳ ಪಟ್ಟಿಯನ್ನೇನೂ ಮಾಡಿಲ್ಲ. ಅದು ಕಾರ್ಯಸಾಧ್ಯವೂ ಅಲ್ಲ. ಹೀಗಾಗಿ ಕೇಜ್ರಿವಾಲ್‌- ಮೋದಿ ಘರ್ಷಣೆಗೆ ಮುಗಿತಾಯದ ತೆರೆ ಬಿದ್ದಿಲ್ಲ. ಕಾನೂನು ವ್ಯಾಜ್ಯದ ಹಾದಿ ಮುಚ್ಚಿಲ್ಲ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !